ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯ ಗೋಜಲು

Last Updated 5 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಮಾನವ ಊಟಕ್ಕಾಗಿ ಬದುಕಬಾರದು, ಬದುಕುವ ಸಲುವಾಗಿ ಊಟ ಮಾಡಬೇಕು’ ಎಂಬುದು ಪ್ರತೀತಿ. ಹಸಿವು ಒಂದು ಪ್ರಬಲ ಶಕ್ತಿ.

ಅದು ವ್ಯಕ್ತಿ­ಯನ್ನು ಅಸಹಾಯಕನನ್ನಾಗಿ ಮಾಡುವುದಷ್ಟೇ ಅಲ್ಲ ಆತನನ್ನು ರೊಚ್ಚಿಗೆಬ್ಬಿಸಿ ಆಕ್ರಮಣಶೀಲನನ್ನಾಗಿಯೂ ಮಾಡುತ್ತದೆ. ಆಹಾರಕ್ಕಾಗಿ ಹೋರಾಟ ಪ್ರಾಣಿಗಳಲ್ಲಿ ಸಾಮಾನ್ಯ ನಡವಳಿಕೆ.

ಸಮುದಾಯ ಜೀವನದಲ್ಲಿ ನಂಬಿಕೆ ಇರುವ ನಾವು ಆಹಾರಕ್ಕಾಗಿ ನೇರ ಹೋರಾಟ ಮಾಡ­ಬೇಕಾಗಿಲ್ಲ. ಹಸಿವು ಇದ್ದಾಗ ಬೇರೆಲ್ಲವೂ ಗೌಣವಾಗಿ ಆಹಾರ ಸಂಪಾದನೆಗೇ ಪ್ರಥಮ ಆದ್ಯತೆ ಸಲ್ಲುತ್ತದೆ. ದೇಹಕ್ಕೆ ಅಗತ್ಯವಿರುವ ಆಹಾರಾಂಶವನ್ನು ಒದಗಿಸುವ ಕಾರ್ಯವನ್ನು ಜೀರ್ಣಾಂಗ ವ್ಯವಸ್ಥೆ ನಿರ್ವಹಿಸುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳನ್ನು ಪರಿಷ್ಕರಿಸಿ ಜೀರ್ಣಿಸಿ ರಕ್ತಗತಗೊಳಿಸುವುದು ಈ ವ್ಯವಸ್ಥೆಯ ಪ್ರಮುಖ ಕಾರ್ಯ.

ಆಹಾರದ ಬೇಡಿಕೆಯು ವಯಸ್ಸು, ಲಿಂಗ, ವ್ಯಕ್ತಿ, ಹವಾಮಾನ, ಗರ್ಭಧಾರಣೆ, ಆಟ, ವ್ಯಾಯಾಮ ಮೊದಲಾದವುಗಳಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಹೀಗಾಗಿ ಅವರವರ ದೇಹಕ್ಕೆ ಅಗತ್ಯವಿರುವ ಆಹಾರಾಂಶಗಳ ಪ್ರಮಾಣವನ್ನು ನಿರ್ಧರಿಸಿಕೊಂಡು ಆಹಾರ ಸೇವನೆ ಮಾಡಬೇಕು.

ಮಾಂಸಾಹಾರವನ್ನು ಮಿತಗೊಳಿಸುವ ಪದ್ಧತಿ ನಮ್ಮ ಪೂರ್ವಿಕರಲ್ಲಿ ಇತ್ತು. ಧಾರ್ಮಿಕ ನಂಬಿಕೆಗಳನ್ನು ಆಧರಿಸಿ ವಾರದಲ್ಲಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸಾ­ಹಾರವನ್ನು ನಿಷೇಧಿಸಲಾಗುತ್ತಿತ್ತು. ಆದರೆ ಈ ಪದ್ಧತಿ ಈಗ ಸಡಿಲಗೊಂಡಿದೆ. ಹೋಟೆಲ್‌ಗಳಲ್ಲಿ ಆಹಾರ ಸೇವಿಸುವ ಅಭ್ಯಾಸ ಇಂದಿನ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಲ್ಲಿ ತಯಾರಿಸುವ ಆಹಾರ ಪದಾರ್ಥಗಳಿಗೆ ಬಳಸುವ ಅತಿಯಾದ ಎಣ್ಣೆ ಮತ್ತು ಕೆಲವು ಕೃತಕ ಬಣ್ಣಗಳು ಬೊಜ್ಜಿಗೆ ತನ್ನದೇ ಆದ ಕೊಡುಗೆ ನೀಡುತ್ತವೆ.

ದೇಹದ ತೂಕ ಏರುವಿಕೆಗೆ ಪ್ರಮುಖ ಕಾರಣಗಳು      
1. ವಂಶವಾಹಿ
2. ಅತಿಯಾದ ಆಹಾರ ಸೇವನೆ
3. ದೈಹಿಕ ಶ್ರಮರಹಿತ ಬದುಕು
4. ಕಾಯಿಲೆಗಳು: -ಪಿಟ್ಯುಟರಿ ಮತ್ತು ಥೈರಾಯ್‌್ಡ ಗ್ರಂಥಿಗಳ ಹಾರ್ಮೋನ್‌ ಏರುಪೇರು, ಮೂತ್ರಪಿಂಡದ ತೊಂದರೆ, ಹೃದಯ ವೈಫಲ್ಯ, ಮಾನಸಿಕ ತೊಂದರೆ ಇತ್ಯಾದಿ.

ಹೊಟ್ಟೆ ಮತ್ತು ಪೃಷ್ಟ ಭಾಗದಲ್ಲಿ ಶೇಖರಣೆಯಾಗುವ ಬೊಜ್ಜು ಹೆಚ್ಚು ಹಾನಿಕರ. ಈ ಭಾಗದಲ್ಲಿನ ಕೊಬ್ಬಿನ ಪ್ರಮಾಣವನ್ನು ಆಧರಿಸಿ ಸ್ಥೂಲಕಾಯದ ತೀವ್ರತೆಯನ್ನು ಅಳೆಯಲಾಗುತ್ತದೆ. ಹೊಕ್ಕುಳ ಹಂತದಲ್ಲಿನ ಹೊಟ್ಟೆಯ ಸುತ್ತಳತೆ ಮತ್ತು ಪೃಷ್ಟದ ಸುತ್ತಳತೆಯನ್ನು ಅಳತೆ ಮಾಡಿ ಅವುಗಳ ಅನುಪಾತವನ್ನು ಕಂಡುಕೊಳ್ಳಬೇಕು. ಈ ಅನುಪಾತ ಹೆಚ್ಚಾಗಿದ್ದಲ್ಲಿ ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಸಹಜ ಅನುಪಾತ ಮಹಿಳೆಯರಲ್ಲಿ 0.8 ಮತ್ತು ಗಂಡಸರಲ್ಲಿ 0.9 ಇರಬೇಕು.

ಬೊಜ್ಜಿನಿಂದ ದುಷ್ಪರಿಣಾಮ: ಸ್ಥೂಲಕಾಯದಿಂದ ದೇಹದ ಪರಿಸರ, ಮೂಳೆ ಕೀಲು­ಗಳು ಮತ್ತು ಹೃದಯ ರಕ್ತನಾಳ ವ್ಯವಸ್ಥೆಯ ಮೇಲೆ ಗಂಭೀರ ಪ್ರಮಾಣದಲ್ಲಿ ದುಷ್ಪರಿ­ಣಾಮ ಉಂಟಾಗುತ್ತದೆ.
1. ರಕ್ತದೊತ್ತಡ ಹೆಚ್ಚಾಗಿ ಹೃದಯ ರೋಗಕ್ಕೆ ನಾಂದಿಯಾಗುತ್ತದೆ.
2. ಇನ್ಸುಲಿನ್‌ನ ಕ್ರಿಯಾಶೀಲತೆ ಮಂದಗೊಳ್ಳುವುದರಿಂದ ಸಕ್ಕರೆ ಕಾಯಿಲೆ ಉಂಟಾಗುತ್ತದೆ.
3. ಅತಿಯಾದ ದೇಹ ತೂಕ ಮೂಳೆ ಮತ್ತು ಕೀಲುಗಳನ್ನು ಜಖಂಗೊಳಿಸುತ್ತದೆ.
4. ಉದರದಲ್ಲಿ ಶೇಖರಣೆಯಾಗುವ ಕೊಬ್ಬು ಸರಾಗ ಉಸಿರಾಟಕ್ಕೆ ಅಡಚಣೆ­ಯನ್ನು ಉಂಟು ಮಾಡುತ್ತದೆ.
5. ಗಂಡಸರಲ್ಲಿ ಲೈಂಗಿಕಾಸಕ್ತಿ ಕುಂದುತ್ತದೆ. ಹೆಂಗಸರಲ್ಲಿ ಬಂಜೆತನ ಉಂಟಾಗ­ಬಹುದು.
6. ಕ್ರಿಯಾಶೀಲತೆ ಕುಂದುತ್ತದೆ.

ಹೀಗಿರಲಿ ಆಹಾರಾಭ್ಯಾಸ: ಆಹಾರ ಸೇವಿಸುವುದು ಸಂತೋಷಕ್ಕಾಗಿ ಎಂದುಕೊಳ್ಳದೆ ದೇಹದ ಬೆಳವಣಿಗೆಗಾಗಿ ಎಂಬುದನ್ನು ಅರ್ಥ ಮಾಡಿಕೊಂಡು, ಅಗತ್ಯವಿರುವಷ್ಟೇ ಸಮತೋಲನ ಆಹಾರ ಪ್ರಮಾಣವನ್ನು ನಿಗದಿಪಡಿಸಿಕೊಳ್ಳಬೇಕು. ಉಪ್ಪು ಮತ್ತು ಜಿಡ್ಡನ್ನು ಒಳಗೊಂಡ ಆಹಾರ ಪದಾರ್ಥವನ್ನು ಮಿತವಾಗಿ ಸೇವಿಸಬೇಕು. ವಿಭಿನ್ನ ಸಸ್ಯಾಹಾರದ ಜೊತೆಗೆ ಪ್ರತಿನಿತ್ಯ ಯಾವುದಾದರೊಂದು ಹಣ್ಣನ್ನು ತಿನ್ನಬೇಕು.

ಬುಲೀಮಿಯಾ ಎಂಬ ತಿನ್ನುವ ಕಾಯಿಲೆ
ವಿಪರೀತ ತಿನ್ನುವುದು, ಹೊತ್ತುಗೊತ್ತಿಲ್ಲದೆ ಆಹಾರ ಸೇವನೆ, ಅತಿಯಾದ ಕ್ಯಾಲೊರಿ ಇರುವ ತಿನಿಸುಗಳನ್ನು (ಕೋಕ್‌, ಪೇಸ್ಟ್ರಿ, ಚಾಕೊಲೆಟ್‌, ಐಸ್‌ಕ್ರೀಂ, ಸಿಹಿ ತಿಂಡಿ, ಕರಿದ ಪದಾರ್ಥ ಇತ್ಯಾದಿ) ಇತಿಮಿತಿಯಿಲ್ಲದೇ ತಿನ್ನುವುದು ಈ ಕಾಯಿಲೆಯ ಲಕ್ಷಣ. ಇದರಿಂದ ಸಹಜವಾಗಿ ತೂಕ ಹೆಚ್ಚಿ ಬೊಜ್ಜು ಬರುತ್ತದೆ.

ಅಸುರಕ್ಷಿತ ಭಾವನೆ, ಅತಿಯಾದ ಭಾವೋದ್ವೇಗ, ಪಾಲಕರಿಂದ ತೀವ್ರ ನಿರ್ಲಕ್ಷ್ಯ ಅಥವಾ ಶಿಕ್ಷೆಗೆ ಗುರಿಯಾಗುವುದು, ಮಾನಸಿಕ ಒತ್ತಡಗಳಿಂದ ಬುಲೀಮಿಯಾ ಬರುತ್ತದೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಈ ಕಾಯಿಲೆಗೆ ತುತ್ತಾಗು­ತ್ತಾರೆ. ದುಃಖ, ಆತಂಕ, ಒತ್ತಡ, ಏಕಾಂಗಿತನ, ಹತಾಶೆಗೆ ಒಳಗಾದಾಗ ಅಂತಹ ಸಂದ­ರ್ಭ­ಗಳನ್ನು ಎದುರಿಸುವ ದಾರಿ ಕಾಣದೆ ಕೆಲವರು ಹೆಚ್ಚು ತಿನ್ನುವುದರ ಮೊರೆ ಹೋಗು­ತ್ತಾರೆ. ಜೀವನಶೈಲಿಯಲ್ಲಿ ಬದಲಾವಣೆ, ನಡವಳಿಕೆ ಸಮಸ್ಯೆಗಳಿಗೆ ಚಿಕಿತ್ಸೆ ಪಡೆ­ಯುವುದು, ಒತ್ತಡ ನಿವಾರಣೆಯಂತಹ ಕ್ರಮಗಳ ಮೂಲಕ ಈ ಸಮಸ್ಯೆ­ಯನ್ನು ಹತೋಟಿಗೆ ತರಬೇಕಾಗುತ್ತದೆ.
(ಲೇಖಕರು ಮೈಸೂರು ಮೆಡಿಕಲ್‌ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರು)

ಮಕ್ಕಳಲ್ಲಿ ಸ್ಥೂಲಕಾಯ: ಅಮ್ಮಂದಿರೇ ಕಾರಣ!
ಭಾರತದ ಮಕ್ಕಳಲ್ಲಿ ಬೊಜ್ಜು ಬೆಳೆಯಲು ತಾಯಂದಿರೇ ಪ್ರಮುಖ ಕಾರಣ ಎನ್ನುತ್ತದೆ ಸಮೀಕ್ಷೆಯೊಂದು. ಸ್ವತಃ ಸ್ಥೂಲಕಾಯದವರಾದ ಬಹಳಷ್ಟು ಮಹಿಳೆಯರು, ತಮ್ಮ ಮಕ್ಕಳ ಬೊಜ್ಜಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಲ್ಲದೆ, ದುಂಡುದುಂಡಗೆ ಮೈ ತುಂಬಿ­ಕೊಂಡಿರುವ ಮಕ್ಕಳ ಬಗ್ಗೆ ಅವರು ಹೆಮ್ಮೆಪಡುತ್ತಾರೆ  ಎಂಬ ಸಂಗತಿ ಆರೋಗ್ಯ ಕ್ಷೇತ್ರವನ್ನು ಕಳವಳಕ್ಕೆ ಈಡು ಮಾಡಿದೆ.

ನಾಲ್ಕು ನಗರಗಳಲ್ಲಿ ನಡೆಸಿರುವ ಸಮೀಕ್ಷೆಯಿಂದ, ಮಹಿಳೆಯರಲ್ಲಿ ಬೊಜ್ಜು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವುದು, ದಪ್ಪಗಿರುವ ಮಕ್ಕಳೇ ಆರೋಗ್ಯವಂತರು ಎಂಬ ತಪ್ಪು ಕಲ್ಪನೆ ತಲೆತಲಾಂತರದಿಂದ ಬೇರೂರಿರುವುದು ಕಂಡುಬಂದಿದೆ.
ಭಾರತ ರಾಷ್ಟ್ರೀಯ ಮಧುಮೇಹ ಸಂಸ್ಥೆ ಹಾಗೂ ಸ್ಥೂಲಕಾಯ ಮತ್ತು ಕೊಲೆ­ಸ್ಟ್ರಾಲ್‌ ಪ್ರತಿಷ್ಠಾನದ ವೈದ್ಯರು ನಡೆಸಿರುವ ಈ ಸಮೀಕ್ಷೆಯು, ಡಯಟ್‌ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪೋಷಕರ ದೃಷ್ಟಿಕೋನದ ಬಗ್ಗೆ ಬೆಳಕು ಚೆಲ್ಲುತ್ತದೆ.

ಸಮೀಕ್ಷೆಗೆ ಒಳಗಾದ ಶೇ 64.8ರಷ್ಟು ತಾಯಂದಿರು ಸ್ಥೂಲಕಾಯದವರಾ ಗಿದ್ದು, ಅವರ ಮಕ್ಕಳಲ್ಲಿ ಶೇ 19.2ರಷ್ಟು ಗಂಡು ಮಕ್ಕಳು ಹಾಗೂ ಶೇ 18.1ರಷ್ಟು ಹೆಣ್ಣು ಮಕ್ಕಳು ಸಹ ಬೊಜ್ಜು ದೇಹಿಗಳಾಗಿದ್ದಾರೆ. ಆದರೆ ಇದು ಮುಂದೆ ತಮ್ಮ ಮಕ್ಕಳಿಗೆ ತಂದೊಡ್ಡಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಅಮ್ಮಂದಿರು  ಹೆಚ್ಚು ತಲೆಕೆಡಿಸಿಕೊಂಡಿಯೇ ಎಲ್ಲ ಎನ್ನುತ್ತಾರೆ ಈ ವರದಿ ಸಿದ್ಧ­ಪಡಿ­ಸಿದ­ವರಲ್ಲಿ ಒಬ್ಬರಾದ ಡಾ. ಅನೂಪ್‌ ಮಿಶ್ರ.

ಸಣ್ಣಗಿರುವ ಮಕ್ಕಳು ಸರಿಯಾಗಿ ತಿನ್ನದೆ ಸೊರಗುತ್ತಿದ್ದಾರೆ ಎಂಬ ಕಳವಳ ಅಜ್ಜಿ­ಯಂದಿರ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತಿದೆ. ಮನೆಯಲ್ಲಿ ತಯಾ­ರಿಸುವ ಆಹಾರ ಏನಿದ್ದರೂ ಈಗ ಹಳೆಯ ಫ್ಯಾಷನ್‌ ಎಂದೇ ಬಹುತೇಕರು ಪರಿಗಣಿಸಿದ್ದು, ಸಿದ್ಧ ಅಥವಾ ಸಂಸ್ಕರಿತ ಆಹಾರಕ್ಕೇ ಹೆಚ್ಚು ಮಹತ್ವ ದೊರೆಯು­ತ್ತಿದೆ.

ಅಲ್ಲದೆ, ಮೊದಲು ಸಣ್ಣಗಿದ್ದ ಮಕ್ಕಳು ಬಳಿಕ ಹೆಚ್ಚು ದಷ್ಟಪುಷ್ಟರಾಗಿ ಕಂಡು­ಬಂದರೆ, ನಿಶ್ಶಕ್ತರಾಗಿದ್ದವರ ಆರೋಗ್ಯ ಈಗ ಸುಧಾರಿಸಿದೆ ಎಂಬ ಭಾವನೆಯೇ ಸಾರ್ವತ್ರಿಕವಾಗಿದೆ. ದೇಶದಲ್ಲಿ ಪೊಲೀಸರು, ಸೈನಿಕರು ಮತ್ತು ಕೆಲವು ಪ್ರಮುಖ ರಾಜಕಾರಣಿ­ಗಳೂ ಸ್ಥೂಲದೇಹಿಗಳಾಗಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದನ್ನು ವರದಿ ಎತ್ತಿ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT