ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಹೊರಿಸಿ; ಭರವಸೆ ಇರಿಸಿ

ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ ಸರಿಯೆ?
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ನಗರದ ಸರ್ಕಾರಿ ಶಾಲೆಗಳನ್ನು ಯಾರು ನಡೆಸಬೇಕು– ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯೇ ಅಥವಾ ಬಿಬಿಎಂಪಿಯೇ? ಸಾರ್ವಜನಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ನಡೆಸುವ ಹೊಣೆಗಾರಿಕೆ ಯಾರದು– ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯದೋ ಅಥವಾ ಬಿಬಿಎಂಪಿಯದೋ?

ಸಾಮಾನ್ಯವಾಗಿ ಇಂಥ ಪ್ರಶ್ನೆಗಳು ಎದುರಾದಾಗಲೆಲ್ಲ ಅದಕ್ಕೆ ದೊರೆಯುವುದು  ‘ಇಂಥ ಯಾವುದನ್ನೂ ನಡೆಸುವ ಸಾಮರ್ಥ್ಯ ಬಿಬಿಎಂಪಿಗಿಲ್ಲ. ಅಷ್ಟೇ ಅಲ್ಲ, ಅದಾಗಲೇ ಭಗ್ನಗೊಂಡಿರುವ ಒಂದು ವ್ಯವಸ್ಥೆ. ಶಾಲೆಗಳು ಮತ್ತು ಆಸ್ಪತ್ರೆಗಳ ಹೊಣೆಯನ್ನೂ ಅದಕ್ಕೆ ಹೊರಿಸಿದರೆ ಅವನ್ನೂ ಅಧೋಗತಿಗೆ ಇಳಿಸುತ್ತದೆ ಅಷ್ಟೆ’ ಎಂಬ ಸಿದ್ಧ ಉತ್ತರ. ಆದರೆ ಒಂದು ನಗರದ ಬಗ್ಗೆ ಈ ರೀತಿ ಯೋಚಿಸುವುದೇ ತಪ್ಪು.

ವಾಸ್ತವದಲ್ಲಿ, ಬಿಬಿಎಂಪಿಗೆ ಹೆಚ್ಚು ಹೊಣೆಗಾರಿಕೆ ವಹಿಸಬೇಕೇ ಹೊರತು ಎಲ್ಲರೂ ಅಂದುಕೊಂಡಿರುವಂತೆ ಈಗಿರುವ ಭಾರವನ್ನು ಇಳಿಸುವುದಲ್ಲ. ಹೀಗೆ ಹೆಚ್ಚು ಹೆಚ್ಚು ಜವಾಬ್ದಾರಿ ಹೊರಿಸುವುದರ ಮೂಲಕವಷ್ಟೇ ನಾವು ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಾಧ್ಯ.

ದೇಶ ಸ್ವತಂತ್ರಗೊಂಡಾಗ ಮೊದಲಿಗೆ ಕೇಂದ್ರ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಯಿತು. ನಂತರ ಅದು ಕೆಲವು ಕಾರ್ಯಗಳನ್ನು ನಿರ್ವಹಿಸಲಾರಂಭಿಸಿತು. ಬಳಿಕ ರಾಜ್ಯ ಸರ್ಕಾರಗಳನ್ನು ರಚಿಸಲಾಯಿತು ಮತ್ತವು ಇತರ ಕೆಲಸಗಳನ್ನು ನಿರ್ವಹಿಸಲು ಮುಂದಾದವು. ಸಂಸತ್ತು ಪಂಚಾಯತ್‌ ರಾಜ್‌ಗೆ 73ನೇ ತಿದ್ದುಪಡಿ ಮತ್ತು ನಗರಾಡಳಿತಕ್ಕೆ 74ನೇ ತಿದ್ದುಪಡಿಯನ್ನು ತಂದು ಅದನ್ನು ಅಂಗೀಕರಿಸುವವರೆಗೂ, ಅಂದರೆ 1990ರವರೆಗೂ ಸ್ಥಳೀಯ ಸರ್ಕಾರಗಳು ಸರಿಯಾಗಿ ರಚನೆಯಾಗಿರಲೇ ಇಲ್ಲ.

74ನೇ ತಿದ್ದುಪಡಿಯು ಕಾನೂನಾಗಿ 23 ವರ್ಷಗಳು ಸಂದಿರುವ ಇಂದಿಗೂ ದೇಶದ ಬಹುತೇಕ ಸ್ಥಳೀಯ ಸಂಸ್ಥೆಗಳು ದುರ್ಬಲವಾಗಿಯೇ ಉಳಿದಿವೆ. ಅಷ್ಟೇ ಅಲ್ಲ ಅಧಿಕಾರರಹಿತವಾಗಿಯೇ ಇವೆ. ದೇಶದಾದ್ಯಂತ ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ಸ್ಥಳೀಯ ಆಡಳಿತಗಳಿಗೆ ಹಸ್ತಾಂತರಿಸುವಲ್ಲಿ ನಕಾರಾತ್ಮಕ ಧೋರಣೆಯನ್ನೇ ಅನುಸರಿಸುತ್ತಾ ಬಂದಿವೆ. ಬಹುಶಃ ರಾಜಕೀಯವೇ ಇದಕ್ಕೆ ಕಾರಣ. ಪ್ರಸಕ್ತ ವ್ಯವಸ್ಥೆಯಲ್ಲಿ ಶಾಸಕರು ಮತ್ತು ಸಚಿವರು ತಾವು ಅನುಭವಿಸುತ್ತಿರುವ ಅಧಿಕಾರವನ್ನು ನಗರದ ಕಾರ್ಪೊರೇಟರ್‌ಗಳಿಗೆ ಹಾಗೂ ಮೇಯರ್‌ಗಳಿಗೆ ಹಸ್ತಾಂತರಿಸಲು ಸಿದ್ಧರಿಲ್ಲ.

ಆದರೆ ಪ್ರಪಂಚದ ಇತರೆಡೆ ನಗರಾಡಳಿತಗಳನ್ನು ನಡೆಸುತ್ತಿರುವ ಪರಿ ಹೀಗಿಲ್ಲ. ಬಹುತೇಕ ಸ್ಥಳಗಳಲ್ಲಿ ನಗರದ ಮೇಯರ್‌ಗಳು ನಮ್ಮ ಬಿಬಿಎಂಪಿಯಂತೆ ಕೇವಲ ರಸ್ತೆ, ಚರಂಡಿ, ತ್ಯಾಜ್ಯ ನಿರ್ವಹಣೆಯನ್ನಷ್ಟೇ ಮಾಡದೆ ಸ್ಥಳೀಯ ಶಾಲೆಗಳು, ಆರೋಗ್ಯ ಸೌಲಭ್ಯ, ಸಾರ್ವಜನಿಕ ಸಾರಿಗೆ, ಆರ್ಥಿಕ ಅಭಿವೃದ್ಧಿಯಂಥ ಬಹುತೇಕ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಹಲವಾರು ನಗರಗಳಲ್ಲಿ ಸ್ಥಳೀಯ ಸರ್ಕಾರಗಳು ಪ್ರಾದೇಶಿಕ ಅಪರಾಧಗಳ ನಿಯಂತ್ರಣಕ್ಕಾಗಿ ಸ್ವಂತ ಪೊಲೀಸ್‌ ಪಡೆಗಳನ್ನೇ ಹೊಂದಿವೆ. ಹೀಗೆ ಹೊರ ಜಗತ್ತಿಗೆ ಸರಿಸಮನಾಗಿ ನಮ್ಮ ನಗರಗಳು ಇಲ್ಲದಿರುವುದಕ್ಕೆ, ಇತರ ನಗರಗಳಂತೆ ತಮ್ಮ ಆಡಳಿತವನ್ನು ಸಮರ್ಥವಾಗಿ ಮುನ್ನಡೆಸಲು ನಾವು ಅವುಗಳಿಗೆ ಅವಕಾಶವನ್ನು ಮಾಡಿಕೊಡದಿರುವುದೇ ಕಾರಣ.‌

ಬೆಂಗಳೂರಿನಲ್ಲಿ ಬಿಬಿಎಂಪಿ ಕೆಲವು ಶಾಲೆಗಳನ್ನಷ್ಟೇ  ನಿರ್ವಹಿಸಿದರೆ, ರಾಜ್ಯ ಸರ್ಕಾರ ಸುಮಾರು 1800 ಶಾಲೆಗಳ ನಿರ್ವಹಣೆ ಹೊಣೆಯನ್ನು ಹೊತ್ತಿದೆ. ಬಹುತೇಕ ಆರೋಗ್ಯ ಸೌಲಭ್ಯಗಳೂ ರಾಜ್ಯ ಸರ್ಕಾರದ ಸುಪರ್ದಿಯಲ್ಲೇ ಇವೆ. ಅಷ್ಟೇನೂ ಪ್ರಮುಖವಲ್ಲದ ಕೇಂದ್ರಗಳನ್ನಷ್ಟೇ ಬಿಬಿಎಂಪಿ ನಿರ್ವಹಿಸುತ್ತದೆ ಮತ್ತು ರೋಗಗಳು, ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆ ನಡೆಸುತ್ತದೆ.

ಏನಾದರೂ ಹೆಚ್ಚೂಕಡಿಮೆಯಾದರೆ ಯಾರನ್ನು ಹೊಣೆ ಮಾಡಬೇಕು ಎಂಬುದೇ ಯಾರಿಗೂ ತಿಳಿಯದಿರುವುದು ಇಂಥ ವ್ಯವಸ್ಥೆಯಲ್ಲಿರುವ ದೋಷ. ಕೆಲ ತಿಂಗಳಿನಿಂದೀಚೆಗೆ ಬೆಂಗಳೂರಿನಲ್ಲಿ ಡೆಂಗಿ ವ್ಯಾಪಕವಾಗಿದೆ. ಆದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.

ಸರ್ಕಾರಿ ಶಾಲೆಗಳು ರಾಜ್ಯದಲ್ಲಿನ ಮೂವರು ಮಕ್ಕಳಲ್ಲಿ ಒಬ್ಬರನ್ನಷ್ಟೇ  ಪದವೀಧರರನ್ನಾಗಿ ಮಾಡುತ್ತವೆ. ಇತರ ಇಬ್ಬರು ವಿಫಲರಾಗುತ್ತಿದ್ದಾರೆ. ಇಂತಹ ಸ್ಥಿತಿಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಯಾರೂ ಕಾರ್ಯ ನಿರ್ವಹಿಸುತ್ತಿಲ್ಲ.

ಈ ಬಗೆಯ ವೈಫಲ್ಯಗಳಿಗೆಲ್ಲ ಯಾರನ್ನು ಹೊಣೆ ಮಾಡುವುದು ಎಂಬುದು ಸಹ ಸಾರ್ವಜನಿಕರಿಗೆ ತಿಳಿಯುವುದೇ ಇಲ್ಲ. ನಗರದ ಅಧಿಕಾರಿಗಳು ಮತ್ತು ಕಾರ್ಪೊರೇಟರ್‌ಗಳು ‘ಇದು ನಮ್ಮ ವ್ಯಾಪ್ತಿಗೆ ಬರದು’ ಎಂದು ಕೈಚೆಲ್ಲಿದರೆ, ಶಾಸಕರಿಗೆ ಸಚಿವಾಲಯಗಳ ಮೇಲೆ ಹೇಳಿಕೊಳ್ಳುವಂಥ ಪ್ರಭಾವವೇನೂ ಇರುವುದಿಲ್ಲ. ಇನ್ನು ಆರೋಗ್ಯ ಇಲಾಖೆ ಅಧಿಕಾರಿಗಳಂತೂ ನಗರದಲ್ಲಿ ಯಾರಿಗೂ ಬಾಧ್ಯಸ್ಥರಾಗಬೇಕಾದ ಅಗತ್ಯವೇ ಇರುವುದಿಲ್ಲ. ಇದೆಲ್ಲದರ ಪರಿಣಾಮವಾಗಿ ಜನ ಉತ್ತಮ ಗುಣಮಟ್ಟದ ಸೌಲಭ್ಯಗಳಿಗೆ ಸರ್ಕಾರವನ್ನು ಆಗ್ರಹಿಸುವ ಬದಲು, ಖಾಸಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದತ್ತ ಮುಖ ಮಾಡತೊಡಗುತ್ತಾರೆ.

ಇಂತಹ ತೊಡಕುಗಳನ್ನು ನಿವಾರಿಸಿ ಸ್ಥಿರೀಕೃತ ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತರಬೇಕಾದರೆ, ಈ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಗರ ಸ್ಥಳೀಯ ಆಡಳಿತಗಳಿಗೇ ವಹಿಸಬೇಕು. ಇದು ಬೆಂಗಳೂರಿನಲ್ಲಷ್ಟೇ ಅಲ್ಲ ರಾಜ್ಯದ ಎಲ್ಲ ನಗರಗಳಲ್ಲೂ ಆಗಬೇಕಾದ ಕಾರ್ಯ.
ಈ ಬಗೆಯ ಹಸ್ತಾಂತರ ಕಾರ್ಯ ಸಾಕಷ್ಟು ಸವಾಲುಗಳನ್ನು ಬೇಡುತ್ತದೆ. ಅಂತಹ ಸವಾಲುಗಳನ್ನು ಎದುರಿಸಲು ಸಾಧ್ಯವಾಗದಿದ್ದರೆ ಸ್ಥಳೀಯ ಸಂಸ್ಥೆಗಳನ್ನೇ ಅದಕ್ಕೆ ಹೊಣೆ ಮಾಡಬೇಕಾಗುತ್ತದೆ.

ನಮ್ಮ ನಗರಗಳು ಇನ್ನೂ ಉತ್ತಮವಾಗಿ ಬೆಳೆಯಬೇಕಾಗಿದೆ ಮತ್ತು ಹಲವು ಕ್ಷೇತ್ರಗಳಲ್ಲಿ ತಾವು ನಿರ್ವಹಿಸಬೇಕಾದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕಾಗಿದೆ. ಈ ಬಗೆ ಹೊಣೆಗಾರಿಕೆಯಲ್ಲಿ ಪ್ರಮುಖವಾದವು ಆರೋಗ್ಯ ಮತ್ತು ಶಿಕ್ಷಣ.

ಎಷ್ಟೋ ಕಾಲದಿಂದ ನಾವು ನಮ್ಮ ಆಡಳಿತ ವ್ಯವಸ್ಥೆ ಕುಸಿಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಈಗ ಇವು ನಿಜಕ್ಕೂ ಎಂದಾದರೂ ಪುನರುಜ್ಜೀವನಗೊಳ್ಳಲು ಸಾಧ್ಯವೇ ಎಂದು ಸ್ವತಃ ಅಚ್ಚರಿಪಡುತ್ತಿದ್ದೇವೆ. ಇದಕ್ಕೆ ಉತ್ತರ ‘ಖಂಡಿತವಾಗಿಯೂ ಸಾಧ್ಯ’. ಆದರೆ ಅದಕ್ಕೆ ಮುಂಚೆ, ನಮ್ಮ ನಗರಗಳು ಸರ್ಕಾರದ ಮೂರನೇ ಹಂತದ ಸ್ವತಂತ್ರ ಸಂಸ್ಥೆಗಳಾಗಿವೆ ಹಾಗೂ ಅವು ತಮ್ಮ ನಾಗರಿಕರಿಗೆ ಸಂಬಂಧಿಸಿದಂತೆ ತಮ್ಮದೇ ಆದ ಬಹುಮುಖ್ಯ ಹೊಣೆಗಾರಿಕೆಗಳನ್ನು ನಿಭಾಯಿಸಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ನಾವು ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ.                                       v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT