ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸವೇ `ಕಾಮಧೇನು' ಆದಾಗ...

Last Updated 4 ಜನವರಿ 2013, 19:59 IST
ಅಕ್ಷರ ಗಾತ್ರ

ಬಜೆಟ್ ರೂಪಿಸುವುದಕ್ಕೆ ಬಿಬಿಎಂಪಿಗೆ ಯಾವುದೇ ಕಾನೂನು ಕಟ್ಟಳೆ, ನೀತಿ ನಿಯಮ, ಚೌಕಟ್ಟುಗಳೇ ಇಲ್ಲ ಎಂಬಂತಾಗಿದೆ. ಕೈಯಲ್ಲಿ 3 ಸಾವಿರ ಕೋಟಿ ರೂಪಾಯಿ ಇಟ್ಟುಕೊಂಡು 10 ಸಾವಿರ ಕೋಟಿ ರೂಪಾಯಿಗಳ  ಕನಸಿನ ಬಜೆಟ್ ರೂಪಿಸುವ ಈ ಜಾಣರಿಗೆ ಏನು ಹೇಗಿರಬೇಕೆಂಬ ಪರಿಕಲ್ಪನೆಯೇ ಇಲ್ಲವಾಗಿದೆ. ನಿತ್ಯವೂ ಮಹಾನಗರದ ಜನತೆಗೆ ಪೊಳ್ಳು ಭರವಸೆಗಳನ್ನು ನೀಡುತ್ತಾ ಮೋಸ ಮಾಡುತ್ತಲೇ ಇದ್ದಾರೆ.

ಬಿಬಿಎಂಪಿಯ ಹಣಕಾಸಿನ ದುರ್ಭರ ಸ್ಥಿತಿಗೆ ಕಾರಣ, ಸಂಗ್ರಹವಾಗಬೇಕಾದಷ್ಟು ತೆರಿಗೆ ಹಣ ಸಂಗ್ರಹವಾಗದಿರುವುದು. ಜೊತೆಗೆ ಇದು ಭಾರಿ ಪ್ರಮಾಣದ ಅವ್ಯವಹಾರ ಹಾಗೂ ದುರುಪಯೋಗಗಳ ಆಗರವೂ ಆಗಿದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಸ್ವತ್ತು ಗುರುತಿಸುವಿಕೆಯ ಅನುಸಾರ ನಗರದಲ್ಲಿ 16 ಲಕ್ಷ ಸ್ವತ್ತುಗಳನ್ನು ಗುರುತಿಸಲಾಗಿದ್ದರೂ, ಅನೇಕ ಲಕ್ಷ ಆಸ್ತಿದಾರರು ಆಸ್ತಿ ತೆರಿಗೆ ತಪ್ಪಿಸುವುದಕ್ಕೆ ಈಗಲೂ ತಡೆ ಬಿದ್ದಿಲ್ಲ. 

ಬಹುತೇಕ ವ್ಯಾಪಾರಸ್ಥರದ್ದು ರಾಮನ ಲೆಕ್ಕ, ಕೃಷ್ಣನ ಲೆಕ್ಕ. ಪರವಾನಗಿ ಶುಲ್ಕ ನೀಡದಿರುವ ವ್ಯಾಪಾರಸ್ಥರ ನಿಯಂತ್ರಣಕ್ಕಾಗಿ ರೂಪಿಸಲಾಗಿರುವ `ಸುವರ್ಣ ಪರವಾನಗಿ' ಹೆಸರಿಗಷ್ಟೇ. ಶೇಕಡ 90ರಷ್ಟು ಕಟ್ಟಡಗಳು ಕಟ್ಟಡ ಬೈಲಾಗಳನ್ನು ಉಲ್ಲಂಘಿಸಿ ತಲೆ ಎತ್ತಿ ನಿಂತಿದ್ದರೂ ದಂಡ ಪಾವತಿಸುವುದನ್ನು ತಪ್ಪಿಸಿಕೊಂಡಿವೆ. ಕಟ್ಟಡ ನಿಯಮಾವಳಿಗಳ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಬಿಬಿಎಂಪಿ ಎಂಜಿನಿಯರ್‌ಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು  ಹೊರಡಿಸಿದ ಬಿಎಂಟಿಎಫ್ ಮುಖ್ಯಸ್ಥರಿಗೇ ಕಿರುಕುಳಗಳನ್ನು ನೀಡಿ ಅವರ ವಿರುದ್ಧ ಪ್ರತಿ ಆರೋಪಗಳನ್ನೂ ಹೊರಿಸಲಾಯಿತು.

ಈ ಎಲ್ಲ ಸಂಗತಿಗಳಿಗೆ ಮುಕುಟವಿಟ್ಟಂತೆ ನಗರದ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳ ಹಾವಳಿ. ಇದು ನಗರದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡಿದೆ. ಯಾವುದೇ ಗಲ್ಲಿ ಅಥವಾ ರಸ್ತೆಯ ಮೂಲೆಗೆ ಹೋದರೂ ಅಲ್ಲೊಂದು  ಫ್ಲೆಕ್ಸ್ ನಮ್ಮ ಕಣ್ಣು ಕುಕ್ಕದೇ ಬಿಡುವುದಿಲ್ಲ. ಆ ಗಲ್ಲಿ, ರಸ್ತೆಯ ರಾಜಕಾರಣಿಗಳು,  ಭವಿಷ್ಯದ ರಾಜಕಾರಣಿಗಳಾಗಬಯಸುವ ಯುವ ಪುಢಾರಿಗಳು, ದೊಡ್ಡ ದೊಡ್ಡ ಫ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿರುತ್ತಾರೆ. ಯಾವುದಾದರೂ ಹಬ್ಬಕ್ಕೋ, ಯಾರದೋ ಜನ್ಮದಿನಕ್ಕೋ ಶುಭಾಶಯ ಕೋರುವ ಇವರ ಚಾಳಿ ಹದ್ದು ಮೀರಿ ಹೋಗಿದೆ. ಪೊಲೀಸರಿಗೆ ಬೇಕಾದ ಆರೋಪಿಗಳ ಚಿತ್ರಗಳನ್ನು ಪ್ರದರ್ಶಿಸುವಂತಹ  ಪೊಲೀಸ್ ಠಾಣೆಗಳಲ್ಲಿರುವ ಪೋಸ್ಟರ್‌ಗಳಂತೆ ಇವು ಕಾಣಿಸುತ್ತವೆ. ಹೀಗಿದ್ದೂ ಬಿಬಿಎಂಪಿಗೆ ಜಾಹೀರಾತುಗಳಿಂದ ಬರುವ ಆದಾಯ ಅಷ್ಟಕ್ಕಷ್ಟೆ ಎಂಬುದು ನಿಗೂಢ.

ಬಿಬಿಎಂಪಿ ಕಸ ಸುರಿಯುವ ವಾಹನಗಳಿಗೆ ಈಗ ಜಿಪಿಎಸ್ ಬೇರೆ ಅಳವಡಿಸಲಾಗಿದೆ. ಕಸ ಸಾಗಣೆಯ ವೆಚ್ಚವೂ ಏರುತ್ತಲೇ ಇದೆ. ಹೀಗಿದ್ದೂ ನಗರದಲ್ಲಿ ಕಸದ ರಾಶಿ ಕಡಿಮೆಯಾಗಲಿಲ್ಲ. ಹಸಿ, ಒಣ ತ್ಯಾಜ್ಯಗಳನ್ನು ಬೇರ್ಪಡಿಸದೆ ಅವೈಜ್ಞಾನಿಕವಾಗಿ ನರದ ಹೊರವಲಯಗಳಲ್ಲಿ ಕಸ ಸುರಿಯುವಿಕೆಯೂ ನಿಲ್ಲಲಿಲ್ಲ. ಕಸ ವಿಂಗಡಣೆ, ಸ್ಥಳೀಯವಾಗಿ ಮಿಶ್ರ ಗೊಬ್ಬರ ತಯಾರಿಸುವಿಕೆ, ಒಣ ತ್ಯಾಜ್ಯ ಮರು ಬಳಕೆ ಹಾಗೂ ಇತರ ತ್ಯಾಜ್ಯಗಳ ವೈಜ್ಞಾನಿಕ ಸುರಿಯುವಿಕೆ ಬಗೆಗಿನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಯಾರೂ ಬಯಸುತ್ತಿಲ್ಲ.

ಬದಲಾಗಿ ವಿಂಗಡಣೆಯಾಗದ  ಕಸ ಸುರಿಯಲು ಮತ್ತಷ್ಟು ಭೂಮಿ ಖರೀದಿಸುವತ್ತಲೇ ಆಡಳಿತಗಾರರ ಆಸಕ್ತಿ. ಹೊರವಲಯದ ಹಳ್ಳಿಗಳಲ್ಲಿ, `ನಮ್ಮ ಗ್ರಾಮಗಳಲ್ಲಿ ಕಸ ಸುರಿಯಬೇಡಿ' ಎಂದು ಪ್ರತಿಭಟಿಸುವ ನೊಂದ ಗ್ರಾಮಸ್ಥರ ವಿರುದ್ಧ ಪೊಲೀಸ್ ಕ್ರಮದ ಬೆದರಿಕೆ. ಏಕೆಂದರೆ ಸಾವಿರಾರು ಟನ್ ಕಸವನ್ನು ದೂರ ದೂರಕ್ಕೆ ಸಾಗಿಸುವುದೂ ಹಣ ಗಳಿಕೆಯ ದಾರಿಯಾಗಿದೆ. ಎಲ್ಲ ವಾರ್ಡುಗಳೂ ಕಸ ಮುಕ್ತಿಯಾಗಬೇಕು ಎಂಬ ಅಭಿಲಾಷೆ ಯಾರಿಗೂ ಇದ್ದಂತಿಲ್ಲ. ವಾರ್ಡುಗಳಲ್ಲಿ ಕಸವೇ ಇಲ್ಲವೆಂದಾದಲ್ಲಿ ಸಾಗಿಸುವುದಾದರೂ ಏನನ್ನು?

ಸುಗಮ ಆಡಳಿತ ನಿರ್ವಹಣೆಗಾಗಿ ಜಾರಿಗೆ ತರಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಇದ್ದರೂ ಅದು ಕೆಲಸಕ್ಕೆ ಬಾರದಂತಾಗಿದೆ. ಇ-ಟೆಂಡರಿಂಗ್, ಇ-ಪ್ರೊಕ್ಯೂರ್‌ಮೆಂಟ್, ಅಂತರ್ಜಾಲ ಆಧಾರಿತ ಯೋಜನಾ ನಿರ್ವಹಣಾ ಪದ್ಧತಿ,  ನಿಧಿ ಆಧಾರಿತ ಲೆಕ್ಕಪತ್ರ ವ್ಯವಸ್ಥೆಗಳು  ಬಿಬಿಎಂಪಿಯ  ದಿನನಿತ್ಯದ  ಭಾರಿ ಹಗರಣಗಳನ್ನು ತಪ್ಪಿಸುವಲ್ಲಿ ವಿಫಲವಾಗಿವೆ. ಪ್ರತಿನಿತ್ಯ ದಿನಪತ್ರಿಕೆಗಳ ಮೂರನೇ ಪುಟಗಳಲ್ಲಿ ಬಿಬಿಎಂಪಿಯ  ಹಗರಣಗಳ ಸುದ್ದಿಗಳಿಗೇ ಅಗ್ರಸ್ಥಾನ. ಖೋಟಾ ವರ್ಕ್ ಕೋಡ್‌ಗಳು ಹಾಗೂ ಖೋಟಾ ಅಂಗೀಕಾರಗಳನ್ನು ಬಳಸಿದ ಖೋಟಾ ಕೆಲಸಗಳಿಗೆ ಬಿಲ್‌ಗಳು ಅಂಗೀಕಾರವಾಗಿ ಹಣ ನೀಡಲಾಗಿದೆ. `ಜೆಎನ್‌ಎನ್‌ಯುಆರ್‌ಎಂ' ಅಡಿ ಬೃಹತ್ ಮೂಲ ಸೌಕರ್ಯ ಯೋಜನೆಗಳ ಅನುಷ್ಠಾನ ಹಾಗೂ ಬಿಬಿಎಂಪಿ ಲೆಕ್ಕಪತ್ರಗಳಲ್ಲಿನ ಅವ್ಯವಹಾರ, ಅಕ್ರಮಗಳನ್ನು  ಮಹಾಲೇಖಪಾಲರು ಬಯಲಿಗೆಳೆದಿದ್ದಾರೆ.

ಪಾಲಿಕೆ ಸದಸ್ಯರೊಬ್ಬರ ಮನೆಯಲ್ಲಿ ಲೆಕ್ಕವಿಲ್ಲದ ಹಣದ ರಾಶಿ,  ಅನೇಕ  ಸದಸ್ಯರ ವಿರುದ್ಧ ಇರುವ  ಲಂಚ, ಮೋಸ, ವಂಚನೆ ಅಷ್ಟೇಕೆ ಕೊಲೆ ಆರೋಪಗಳು ಹಾಗೂ ಸದಸ್ಯರೊಬ್ಬರು ಕೊಲೆಯೇ ಆಗಿಹೋಗಿರುವುದು ಬಿಬಿಎಂಪಿ ವ್ಯವಹಾರಗಳು ತಲುಪಿರುವ ಅಧೋಗತಿಗೆ ಸಾಕ್ಷಿ. ಬಿಬಿಎಂಪಿಯನ್ನು ಕೊಳ್ಳೆ ಹೊಡೆಯಲು ನಡೆಸುತ್ತಿರುವಂತಹ  ಅಕ್ಷರಶಃ  ಕತ್ತು ಕೊಯ್ಯುವ ರಾಜಕಾರಣಕ್ಕೆ ಇದು ದ್ಯೋತಕವಾಗಿದೆ. ಇದು ಬೆಂಗಳೂರಿನ ಕೀರ್ತಿಗೆ ಮತ್ತಷ್ಟು ಮಸಿ ಬಳಿದಿದೆ. ನಗರದ ಮೂಲೆಮೂಲೆಗಳಲ್ಲಿ ಹರಡಿ ಬಿದ್ದಿರುವ ಕಸಕ್ಕಿಂತಲೂ ಹೆಚ್ಚಿನ ಕಳಂಕ ಹಚ್ಚಿದೆ ಇದು.  ಬೆಂಗಳೂರಿಗೆ `ಕಸದ ನಗರ' ಎಂಬ ಬಿರುದು ಒಂದಕ್ಕಿಂತ ಹೆಚ್ಚಿನ ಅರ್ಥಗಳನ್ನು ಧ್ವನಿಸುತ್ತದೆ. 
(ಲೇಖಕಿ: ಸಿವಿಕ್ ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT