ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿಯೇ ಉತ್ತರ

Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

ಮ್ಯಾಗಿ ನ್ಯೂಡಲ್ಸ್ ನಲ್ಲಿ ವಿಷಕಾರಿ ರಾಸಾಯನಿಕದ ಪ್ರಮಾಣ ಹೆಚ್ಚಾಗಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಪ್ರಯೋಗಾಲಯವೊಂದು ವರದಿ ನೀಡಿದ್ದರ ಹಿನ್ನೆಲೆಯಲ್ಲಿ ಮ್ಯಾಗಿ ಬಳಕೆಯನ್ನು ನಿಷೇಧಿಸಲಾಗಿದೆ.  ಆದರೂ ಈ ವರದಿ ಅಪೂರ್ಣ ಎಂದೇ ಹೇಳಬೇಕಾಗುತ್ತದೆ.  ಏಕೆಂದರೆ ನೂಡಲ್ಸ್ ಉತ್ಪಾದನೆಗೆ ಬಳಸುವ ಮೂಲ ವಸ್ತುವಾದ ಮೈದಾ ಹಿಟ್ಟಿನ ಪ್ರಸ್ತಾಪವೇ ಆ ವರದಿಯಲ್ಲಿ ಇಲ್ಲ. ಮೈದಾ ಹಿಟ್ಟಿನಲ್ಲಿರುವ ಅಲಾಕ್ಸಿನ್‌ ಎಂಬುದು ಒಂದು ವಿಷಪೂರಿತ ರಸಾಯನ.

ಗೋಧಿಯ ಮೇಲ್ಭಾಗದ ತೌಡಿನಿಂದ ಕೂಡಿದ ಹಿಟ್ಟು ಪೌಷ್ಟಿಕಾಂಶಗಳನ್ನು  ಹೊಂದಿರುತ್ತದೆ. ಅದನ್ನು ಬೇರ್ಪಡಿಸಿ ಉಳಿದ ಹಿಟ್ಟಿಗೆ ರಾಸಾಯನಿಕಗಳನ್ನು ಬೆರೆಸಿ ಬಿಳಿ ಮಾಡಿ ಮೈದಾ ಹೆಸರಿನಲ್ಲಿ ಬಳಸಲಾಗುತ್ತದೆ. ಇದರಲ್ಲಿ ಶೇ 83ರಷ್ಟು ಕಾರ್ಬೊಹೈಡ್ರೇಟ್‌ ಇರುತ್ತದೆ ಹೊರತು ನಾರಿನಂಶ ಹಾಗೂ ಇತರ ಪೌಷ್ಟಿಕಾಂಶಗಳು ಇರುವುದಿಲ್ಲ. ಅಲಾಕ್ಸಿನ್ ಚರ್ಮ ಮತ್ತು ಉಸಿರಾಟಕ್ಕೆ ತೊಂದರೆ ನೀಡುವ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ.

ಪ್ರಯೋಗಶಾಲೆಯಲ್ಲಿ ಮೈದಾದಲ್ಲಿರುವ ಅಲಾಕ್ಸಿನ್‌   ಅನ್ನು ಇಲಿಗಳಿಗೆ ಕೊಟ್ಟು ಅವುಗಳಿಗೆ ಸಕ್ಕರೆ ಕಾಯಿಲೆ ಬರಿಸಿ, ಆ ಕಾಯಿಲೆಗೆ ಔಷಧಿ ಕಂಡು ಹಿಡಿಯಲಾಗುತ್ತಿದೆ. ಅಲಾಕ್ಸಿನ್‌  ಮೇದೋಜೀರಕಾಂಗವನ್ನು ಸಂಪೂರ್ಣವಾಗಿ ಹಾಳು ಮಾಡಿ ಅದು ಇನ್ಸುಲಿನ್ ಹಾರ್ಮೋನ್‌ ಉತ್ಪಾದಿಸದಂತೆ ಮಾಡುತ್ತದೆ. ಮನುಷ್ಯರಲ್ಲಿಯೂ ಮೈದಾ ಹಿಟ್ಟಿನ ಬಳಕೆಯಿಂದಾಗಿ ಮೇದೋಜೀರಕಾಂಗದಲ್ಲಿಯ ಬೀಟಾ ಸೆಲ್‌ಗಳು ದುರ್ಬಲವಾಗುತ್ತವೆ. ಅದರಿಂದ ಇನ್ಸುಲಿನ್ ಹಾರ್ಮೋನ್‌ ಉತ್ಪಾದನೆಗೆ ತಡೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸಬೇಕಾದ ಇನ್ಸುಲಿನ್‌ನ ಕೊರತೆ ಆದಾಗ ಸಕ್ಕರೆ ಕಾಯಿಲೆ ಬರುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಮೈದಾ ಹಿಟ್ಟನ್ನು ಬಳಸಿ ಉತ್ಪಾದಿಸುವ ಚಾಟ್ಸ್, ನೂಡಲ್ಸ್, ಸಿಹಿ ತಿಂಡಿ, ಹೋಟೆಲ್ ಅಡುಗೆ, ಬೇಕರಿ ತಿನಿಸುಗಳು ಈಗ ಬಹುತೇಕರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಇವುಗಳ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಈವರೆಗೆ ಮಧ್ಯಮ ವರ್ಗದ ಶೇ 5ರಿಂದ 10ರಷ್ಟು ಗ್ರಾಹಕರಷ್ಟೇ ಜಾಗೃತಗೊಂಡಿದ್ದು, ಸಾವಯವ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿದ್ದಾರೆ. ಅಪಾಯಕಾರಿ ಅಂಶಗಳಿರುವ ಮೈದಾ ಹಿಟ್ಟು, ಸಕ್ಕರೆ, ಹಾಲು, ತುಪ್ಪ, ಅಡುಗೆ ಎಣ್ಣೆಯಂತಹ ಪದಾರ್ಥಗಳನ್ನು ಬಳಸುವಾಗ ಎಚ್ಚರಿಕೆ ವಹಿಸುತ್ತಿದ್ದಾರೆ.

ಬಹುಸಂಖ್ಯಾತ ಗ್ರಾಹಕರು ಆಹಾರ ಸುರಕ್ಷೆಯ ಬಗ್ಗೆ ಅರಿವು ಪಡೆಯಲು, ಅಸುರಕ್ಷಿತ ಆಹಾರ ಪದಾರ್ಥಗಳನ್ನು ತಿರಸ್ಕರಿಸಲು ಮುಂದಾಗುವಂತಹ ಜಾಗೃತಿ ಆಂದೋಲನದ ಅಗತ್ಯ ಬಹಳಷ್ಟಿದೆ. ಇದು ನಿಜಕ್ಕೂ ಸವಾಲಿನ ಕಾರ್ಯ. ಏಕೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಬದುಕುವುದೇ ಒಂದು ಸವಾಲಾಗಿರುತ್ತದೆ. ಹೀಗಾಗಿ ಇಂದು ಗ್ರಾಹಕ ಚಳವಳಿಯನ್ನು ಮುನ್ನಡೆಸಬೇಕಾಗಿರುವವರು ಮಧ್ಯಮವರ್ಗದವರು.

ದುರದೃಷ್ಟವಶಾತ್‌ ಪಾಶ್ಚಿಮಾತ್ಯ ಆಹಾರಗಳಿಗೆ ಪ್ರೋತ್ಸಾಹ ನೀಡುತ್ತಿರುವವರೇ ಮಧ್ಯಮ ವರ್ಗದ ಟೆಕ್ಕಿಗಳು. ವಿದೇಶಿ ಕಂಪೆನಿಗಳಲ್ಲಿ ಉದ್ಯೋಗ ಮಾಡುವುದರ ಜೊತೆಗೆ ಅವರು ವಿದೇಶಿ ಆಹಾರ ಸಂಸ್ಕೃತಿಯನ್ನೂ ಮೈಗೂಡಿಸಿಕೊಳ್ಳುತ್ತಿರುವುದರಿಂದ ದೇಸಿ ಆಹಾರ ಸಂಸ್ಕೃತಿಗೆ ತೀರಾ ಹಿನ್ನಡೆಯಾಗಿದೆ. ವಿದೇಶಿ ಆಹಾರ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುತ್ತಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಅದಕ್ಕೆ ಗ್ರಾಹಕರು ಬಲಿಪಶುಗಳಾಗುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡಾಗಷ್ಟೇ ಗ್ರಾಹಕ ಚಳವಳಿ ಮೈದಳೆಯಲು ಸಾಧ್ಯ.

ಆಹಾರ ಪದಾರ್ಥಗಳನ್ನು ನಿಯಂತ್ರಿಸುವ ಉದ್ದಿಮೆದಾರರು ದೇಸಿ ಆಹಾರ ಪದ್ಧತಿಯನ್ನು ಸದೆಬಡಿದು, ಕಂಪೆನಿಯಾಧಾರಿತ ಆಹಾರಕ್ಕೆ ನಮ್ಮನ್ನು ಒಗ್ಗಿಕೊಳ್ಳುವಂತೆ ವ್ಯಾಪಕವಾದ ಜಾಲ ಬೀಸಿದ್ದಾರೆ. ಇದರಲ್ಲಿ ಅಮೆರಿಕದ ಕಂಪೆನಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.  ಆದರೆ ಜಗತ್ತೇ ತನ್ನನ್ನು ಅನುಕರಣೆ ಮಾಡುವಂತೆ ಮಾಡಿದ್ದ ಅಮೆರಿಕದ ಆಹಾರ ನಿಯಂತ್ರಣವನ್ನು ನಾಲ್ಕೈದು ಕಂಪೆನಿಗಳು ನಿರ್ವಹಿಸುತ್ತವೆ. ಅಮೆರಿಕನ್ನರಲ್ಲಿ ಬಹುತೇಕರು ಮಾಂಸಾಹಾರಿಗಳು. ಅವರು ತಿನ್ನುವ ಮಾಂಸವನ್ನು ಪ್ಯಾಕೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಟೀರಾಯ್ಡ್ ಆಧಾರಿತ ಆಹಾರದ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಮಾಂಸ ಉತ್ಪಾದಿಸಿ ಕೆ.ಜಿ., ಐದು ಕೆ.ಜಿ.ಯ ಪ್ಯಾಕೆಟ್‌ಗಳಲ್ಲಿ  ಗ್ರಾಹಕರಿಗೆ ರವಾನಿಸಲಾಗುತ್ತದೆ. ಫ್ರೀಜರ್‌ಗಳಲ್ಲಿಟ್ಟು ಮೂಲ ಉತ್ಪಾದಕರಿಂದ ಮಾರಾಟ ಮಳಿಗೆಗಳಿಗೆ ಸಾಗಣೆ ಮಾಡಲಾಗುತ್ತದೆ. ಗ್ರಾಹಕರು ಅದನ್ನು ಖರೀದಿಸಿ 15ರಿಂದ 30 ದಿನ ತಮ್ಮ ಫ್ರಿಜ್‌ಗಳಲ್ಲಿ ಇಟ್ಟುಕೊಂಡು, ಬೇಕಾದಾಗ ಓವನ್‌ಗಳಲ್ಲಿ ಬಿಸಿ ಮಾಡಿ ತಿನ್ನುತ್ತಾರೆ.

ಮಾಂಸವನ್ನು ಪ್ರಾಣಿಯ ದೇಹದಿಂದ ಬೇರ್ಪಡಿಸಿದ ನಂತರ ಎಷ್ಟು ದಿನಗಳಲ್ಲಿ ಅದು ಗ್ರಾಹಕರ ಮನೆ ತಲುಪುತ್ತಿದೆ ಎಂಬುದು ಯಾರಿಗೂ ತಿಳಿಯಲಾರದು. ದೀರ್ಘಕಾಲ ಕೆಡದಂತೆ ಇರಲು ಪ್ರಿಸರ್ವೆಟಿವ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಅಮೆರಿಕನ್ನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗಿದ್ದು, ಅಲ್ಲಿನ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ. ನ್ಯಾಯಾಲಯಗಳು ತನಿಖೆಗೆ ಆದೇಶ ನೀಡಿವೆಯಾದರೂ, ಆಹಾರ ಉತ್ಪಾದನಾ ಕಂಪೆನಿಗಳು ತನಿಖಾಧಿಕಾರಿಗಳನ್ನು ತಮ್ಮ ಗೇಟಿನ ಒಳಗೂ ಬಿಟ್ಟುಕೊಳ್ಳುತ್ತಿಲ್ಲ. ಅದಕ್ಕಾಗಿ ಹತ್ತಾರುಸಾವಿರ ಡಾಲರ್‌ ದಂಡವನ್ನು ಮಾತ್ರ ಕಟ್ಟುತ್ತಿವೆ. ರಾಜಕೀಯ ಪಕ್ಷಗಳ ಮೇಲೆ ನಿಯಂತ್ರಣ ಸಾಧಿಸಿರುವ ಕಂಪೆನಿಗಳು ತಮ್ಮ ಲಾಭಕ್ಕಾಗಿ ದೇಶದ ಜನರ ಆರೋಗ್ಯವನ್ನೇ ಪಣಕ್ಕಿಟ್ಟಿವೆ.

ಇಂತಹುದೇ ಹಿತಾಸಕ್ತಿ ಹೊಂದಿರುವ ದೇಶಿ ಹಾಗೂ ವಿದೇಶಿ ಉದ್ದಿಮೆದಾರರು, ದೇಸಿ ಆಹಾರ ಪದ್ಧತಿ ನಾಶ ಮಾಡುವ ಮುಖಾಂತರ ನಮ್ಮ ಆಹಾರದ ಮೇಲೂ ನಿಯಂತ್ರಣ ಸಾಧಿಸಲು ಮುಂದಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ದೇಶದ ಮಧ್ಯಮ ವರ್ಗ ಗ್ರಾಹಕ ಚಳವಳಿಗೆ ಮುಂದಾಗಲೇಬೇಕಿದೆ. ಗ್ರಾಹಕರೇ ರೈತರನ್ನು ಆಹ್ವಾನಿಸಿ ಸಾವಯವ ಸಂತೆಗಳನ್ನು ಆಯೋಜಿಸಲು  ಮುಂದಾಗಬೇಕು. ಸಿರಿಧಾನ್ಯಗಳಾದ ನವಣೆ, ಸಾಮೆ, ಆರ್ಕ, ಊದಲು, ಬರಗು, ರಾಗಿ, ಸಜ್ಜೆ, ಜೋಳ, ಗೋವಿನ ಜೋಳ, ಜವೆ ಗೋಧಿ ಆಧಾರಿತ ಆಹಾರಗಳನ್ನು ಬಳಸಲು ಪ್ರಚಾರ ನಡೆಸಬೇಕಿದೆ. ಅಂತಹ ಆಹಾರ ಉತ್ಪಾದನಾ ವಿಧಾನಗಳ ಬಗ್ಗೆ  ಅಡುಗೆ ಸ್ಪರ್ಧೆ ಏರ್ಪಡಿಸಬೇಕು. ಈ ಬಗೆಯ ಪದಾರ್ಥಗಳಿಂದ ರೆಡಿ ಟು ಮಿಕ್ಸ್, ರೆಡಿ ಟು ಈಟ್ ಸಿದ್ಧ ಆಹಾರಗಳನ್ನು ತಯಾರಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದಕ್ಕೆ ಪ್ರೋತ್ಸಾಹ ನೀಡುವ ಮುಖಾಂತರ ದೇಸಿ ಆಹಾರ ಸಂಸ್ಕೃತಿಯನ್ನು ಮುನ್ನೆಲೆಗೆ ತರಬೇಕು. ಈ ಮೂಲಕ ಕೇಂದ್ರೀಕೃತವಾದ, ಪ್ಯಾಕೆಟ್ ಆಧಾರಿತ ಕಂಪೆನಿಗಳ ವಿದೇಶಿ ಆಹಾರ ಸಂಸ್ಕೃತಿಗೆ ತಿಲಾಂಜಲಿ ನೀಡುವಂಥ ಗ್ರಾಹಕ ಚಳವಳಿ ತೀವ್ರಗೊಳ್ಳಲು ಇದು ಸೂಕ್ತ ಸಮಯ.

(ಲೇಖಕ ಸಾವಯವ ಕೃಷಿ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT