ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯದಲ್ಲಿ ಅಡಗಿದೆ ಸಮಸ್ತರ ಹಿತಾಸಕ್ತಿ!

ಸ್ವಚ್ಛತೆ ಆದ್ಯತೆ
Last Updated 10 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಗರ ಪ್ರದೇಶಗಳಲ್ಲಿನ ಘನ ತ್ಯಾಜ್ಯ ನಿರ್ವಹಣೆ ಅಥವಾ ಕಸ ವಿಲೇವಾರಿ ಇಂದು ಕೇವಲ ಸ್ಥಳೀಯ ಸಮಸ್ಯೆ­­­­ಯಾಗಷ್ಟೇ ಉಳಿಯದೆ, ವಿಶ್ವದ ಸಮಸ್ಯೆಯಾಗಿ ಪರಿಣ­ಮಿ­ಸಿದೆ. ಪ್ರತಿಯೊಬ್ಬ ನಗರವಾಸಿ ತಲಾ 250ರಿಂದ 500 ಗ್ರಾಮ್‌ನಷ್ಟು ಕಸವನ್ನು ಪ್ರತಿ ದಿನವೂ ಹೊರ­ಹಾಕುತ್ತಾನೆ. ಇದ­ರಿಂದ ಎಲ್ಲ ನಗರಗಳಲ್ಲೂ ದಿನನಿತ್ಯ  ಸಾವಿರಾರು ಟನ್‌­ಗಳಷ್ಟು ಕಸ ಸಂಗ್ರಹವಾಗುತ್ತಿದ್ದು, ದಿನೇದಿನೇ ನಿರ್ವಹಣೆಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇದರ ದುಷ್ಪರಿಣಾಮಗಳು ಒಂದೆಡೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾ ಆತಂಕಗಳನ್ನು ತಂದೊ­ಡ್ಡುತ್ತಿ­ದ್ದರೆ, ಇನ್ನೊಂದೆಡೆ ಕಸದ ರಾಶಿಯಿಂದ ಹೊರ­ಡುವ ಮೀಥೇನ್‌ ಅನಿಲ ವಾಯುಮಾಲಿನ್ಯಕ್ಕೆ ಕಾರಣ­ವಾಗು­ತ್ತಿದೆ.   ಕೊಳೆಯುವ ವಸ್ತುಗಳಿಂದ ಉತ್ಪಾದನೆ­ಯಾಗುವ ಲೀಚಟ್ (ವಿಷಕಾರಿ ದ್ರವ) ಅಂತರ್ಜಲ ಹಾಗೂ ಹರಿಯುವ ನೀರಿನಲ್ಲಿ ಸೇರಿಕೊಂಡು ಹಳ್ಳ, ಕೆರೆ, ನದಿ, ಸಮುದ್ರದ ನೀರನ್ನು ಕಲುಷಿತ­ಗೊಳಿಸು­ತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ತ್ಯಾಜ್ಯ ನಿರ್ವಹ­ಣೆಯ ವೈಫಲ್ಯಗಳು ಭೂ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತಿವೆ.

ಹೀಗೆ ಇದೊಂದು ಜಾಗತಿಕ ಸಮಸ್ಯೆಯಾಗಿ ಪರಿ­ವರ್ತನೆಗೊಂಡಿರುವ ಹಿನ್ನೆಲೆಯಲ್ಲಿ, ಕಸ ನಿರ್ವ­ಹಣೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸ­ಬೇಕಾಗಿದೆ. ಸಮಸ್ತ ಜನರ ಹಿತಾಸಕ್ತಿ ದೃಷ್ಟಿಯಿಂದ ಸಮಗ್ರವಾಗಿ ಅದನ್ನು ನಿರ್ವಹಿಸಲು ವಿನೂತನವಾದ, ಸಂಶೋ­ಧನಾ­ತ್ಮಕ ಮಾರ್ಗಗಳನ್ನು ಅನುಸರಿಸ­ಬೇಕಾ­ಗಿದೆ. ಇದಕ್ಕೆ ಸ್ಥಳೀಯ ಆಡಳಿತ ಹಾಗೂ ಜನತೆ ಮುಂದಾ­ಗ­ಬೇಕು ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯ ಸಹ.

ಪ್ರಸ್ತುತ ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯ ನಿರ್ವ­ಹಣೆ ವ್ಯವಸ್ಥೆಯು ಕೇಂದ್ರೀಕೃತವಾಗಿದೆ. ಇದನ್ನು ವಿಕೇಂದ್ರೀ­ಕೃತವಾಗಿ ಮಾಡುವುದು  ಸಮರ್ಪಕ ತ್ಯಾಜ್ಯ ನಿರ್ವಹಣೆ ದೃಷ್ಟಿಯಿಂದ ಸಾಕಷ್ಟು ಸಹಕಾರಿ. ಕಸ ವಿಲೇವಾರಿಯಲ್ಲಿ ಸಾರ್ವಜನಿಕರು, ಕಸ ಸಂಗ್ರ­ಹಣೆ ಹಾಗೂ ನಿರ್ವಹಣೆ ಮಾಡುವ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಈ ಎರಡೂ ವಿಭಾಗಗಳು ಜಾಗೃತಗೊಂಡು ತಮ್ಮನ್ನು ಈ ಕಾರ್ಯ­­ದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ, ನಗರಗಳ ತ್ಯಾಜ್ಯ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯಲು ಸಾಧ್ಯ.
ಸಾರ್ವಜನಿಕರಿಗೆ ತಮ್ಮ ಮನೆಯ ಕಸ ತಮ್ಮ ಮಕ್ಕಳ ಭವಿಷ್ಯಕ್ಕೆ ಮಾರ­ಕ­ವಾಗುತ್ತಿದೆ ಎಂಬ ಅರಿವಿರ­ಬೇಕು. ಕಸ ವಿಲೇ­ವಾರಿ ಕಾರ್ಯವು ಕಾರ್ಮಿಕರಿಗೆ ಒಂದು ಸಮಾಜ ಸೇವೆಯಾಗಿ  ಹಾಗೂ ಲಾಭದಾ­ಯಕ ವೃತ್ತಿಯಾಗಿ ಪರಿವರ್ತನೆಗೊಳ್ಳಬೇಕಿದೆ.

ಬೇಕು ಎಲ್ಲರ ಸಹಭಾಗಿತ್ವ: ನಗರ ಪ್ರದೇಶದ ಒಂದು ವಾರ್ಡ್‌ ಇಲ್ಲವೇ 10 ಸಾವಿರ ಜನಸಂಖ್ಯೆಯನ್ನು ಒಂದು ಘಟಕವೆಂದು

ಪರಿಗಣಿಸುವುದು,  ಸಾರ್ವಜನಿ­ಕರು ಕೊಳೆಯುವ ಮತ್ತು ಕೊಳೆಯದೇ ಇರುವ ಕಸವನ್ನು  ಪ್ರತ್ಯೇಕವಾಗಿ ನೀಡು­ವಂತೆ ಮಾಡು­ವುದು, ಪ್ರತಿ ನೂರು ಮನೆಗೆ ಒಬ್ಬರಂತೆ ಹಿರಿಯ ನಾಗರಿಕ­ರನ್ನು ಗುರುತಿಸಿ ಒಂದು ಉಸ್ತುವಾರಿ ಸಮಿತಿ ರಚಿಸುವುದು, ಆ ಪ್ರದೇಶದಲ್ಲಿ ಕ್ರಿಯಾಶೀಲ­ವಾಗಿ­ರುವ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿ ಹಾಗೂ ಕಸ ಸಂಗ್ರಹಿಸುವವರ ಪ್ರತಿನಿಧಿ, ಸ್ಥಳೀಯ ಚುನಾಯಿತ ಪ್ರತಿನಿಧಿ ಹಾಗೂ ವಾರ್ಡ್‌ನ ಉಸ್ತುವಾರಿ ಹೊತ್ತಿ­ರುವ  ಅಧಿಕಾರಿ­ಯನ್ನು ಸಮಿತಿಯ ಸದಸ್ಯರನ್ನಾಗಿ ಮಾಡುವುದು, ಸಮಿತಿಯ ಮುಂದಾಳತ್ವವನ್ನು ಬಹು­ಸಂಖ್ಯೆಯ ಸಾರ್ವಜನಿಕರ ಒಪ್ಪಿಗೆಯನ್ನು ಆಧ­ರಿಸಿ ನೀಡುವುದು ಈ ಕಾರ್ಯದಲ್ಲಿ ನೆರವಾಗುತ್ತದೆ.

ಪ್ರತಿ ಕುಟುಂಬದಿಂದ ದಿನಕ್ಕೆ 1 ರೂಪಾಯಿ­ಯನ್ನು ಕಸ ಸಂಗ್ರ­ಹಿಸುವ ಕಾರ್ಮಿ­ಕರಿಗೆ ನೀಡಬೇಕು. ಕಸ ಸಂಗ್ರಹಿಸದ ದಿನ ಹಣ ನೀಡಬಾರದು. ಇದ­ರಿಂದ ಅನಿವಾರ್ಯ­ವಾಗಿ ಕಾರ್ಮಿ­ಕರು ಕಸ ಸಂಗ್ರಹಣೆ ಮಾಡು­ವಂತಹ ಒತ್ತ­ಡಕ್ಕೆ ಒಳಗಾಗುತ್ತಾರೆ. ಒಬ್ಬ ಕಾರ್ಮಿಕನಿಗೆ ಕನಿಷ್ಠ 100-ರಿಂದ 200 ಮನೆಗಳ  ಉಸ್ತು­ವಾರಿ­ಯನ್ನು ನೀಡ­ಬೇಕು. ಇದು ಪ್ರತಿ ಕಾರ್ಮಿಕ­ನಿಗೆ ತಿಂಗಳಿಗೆ ಕನಿಷ್ಠ ₨ 5,000 ಆದಾಯದ ಮೂಲ ಆಗುತ್ತದೆ.

ಸಾರ್ವಜ­ನಿಕರು ಹಾಗೂ ಕಾರ್ಮಿಕ­ರಲ್ಲಿ ಜಾಗೃತಿ ಮೂಡಿ­ಸಲು ಉಸ್ತುವಾರಿ ಸಮಿತಿಯು ಕಾರ್ಯ­ಕ್ರಮಗಳನ್ನು ಹಮ್ಮಿ­ಕೊಳ್ಳಬೇಕು.   ಕಾರ್ಮಿ­ಕರ ಸಹಕಾರಿ ಸಂಘ­ಗ­ಳನ್ನು ರಚಿಸಿ ಉಳಿ­­ತಾಯ ಯೋಜ­ನೆಗೆ, ಅವರ ಆರೋಗ್ಯ ರಕ್ಷಣೆಗೆ ಮುಂದಾದರೆ ಕಸ ವಿಲೇವಾರಿಯನ್ನು ಅವರು ಸಂಪೂರ್ಣ ವೃತ್ತಿಯನ್ನಾಗಿ ಸ್ವೀಕರಿಸಲು ಸಹ ಸಾಧ್ಯವಾಗುತ್ತದೆ.

ಕಸದಿಂದ ರಸ: ಕಸವನ್ನು ಲಾಭದಾಯಕ ರಸವನ್ನಾಗಿ ಮಾಡುವುದು ಅತ್ಯಂತ ಮುಖ್ಯವಾದ ಕಾರ್ಯ. ಕೊಳೆಯುುವಂತಹ ಕಸವನ್ನು ಆಯಾ ದಿನವೇ ನಿರ್ವ­ಹಣೆ ಮಾಡುವುದರಿಂದ ಕಾರ್ಮಿ­ಕರಿಗೆ ಆದಾಯ ಮೂಲವಾಗಿ, ರೈತರಿಗೆ ಸಾವಯವ ಗೊಬ್ಬರವಾಗಿ, ಮಣ್ಣಿಗೆ ಸಾವಯವ ಶಕ್ತಿ­ಯಾಗಿ ಅದನ್ನು ಪರಿವರ್ತಿ­ಸ ಬಹುದು. ಶ್ರೆಡ್ಡರ್‌ಗಳ ಮುಖಾಂತರ (₨ 50 ಸಾವಿರದಿಂದ ಒಂದು ಲಕ್ಷ ಬೆಲೆ­ಯುಳ್ಳ ಈ ಯಂತ್ರ ಎಲ್ಲ ಕೊಳೆಯುವ ವಸ್ತು­ಗ­ಳನ್ನೂ ಪುಡಿ ಮಾಡು­ತ್ತದೆ) ಕೊಳೆಯುವ ಪದಾರ್ಥ­ಗಳನ್ನು ಮಿಶ್ರ ಮಾಡಿ ಪುಡಿ ಮಾಡಿಕೊಳ್ಳಬೇಕು.

ತರ­ಕಾರಿ ತ್ಯಾಜ್ಯ, ಅಡುಗೆ ಪದಾರ್ಥ, ಗಿಡ ಮರಗಳ ಎಲೆ­ಗಳು, ರದ್ದಿ ಪೇಪರ್‌, ಮರಗಳ ಚೆಕ್ಕೆ ಇನ್ನಿತರ ಕೊಳೆಯುವ ಪದಾರ್ಥ­ಗಳನ್ನು ದ್ರವ ಪದಾರ್ಥಗಳಿಂದ ಬೇರ್ಪಡಿಸಿ ಶ್ರೆಡ್ಡರ್ ಬಾಯಿಗೆ ನೀಡು­ವಂತಾದರೆ ಎಲ್ಲವೂ ಮಿಶ್ರಣ­ಗೊಂಡು ಪೌಡರ್ ರೂಪದ ಗೊಬ್ಬರ ತಯಾರಾ­ಗುತ್ತದೆ. ಒಂದು ಕೆ.ಜಿ ತ್ಯಾಜ್ಯ ರೂಪಾಂತರಗೊಂಡು 300 ಗ್ರಾಮ್‌ ಗೊಬ್ಬರವಾಗುತ್ತದೆ. ಕಸವನ್ನು ಕೊಳೆ­ಯುವ ಮುಂಚೆಯೇ ಶ್ರೆಡ್ಡರ್‌ಗೆ ಅಳವಡಿಸುವು­ದ­ರಿಂದ ದುರ್ವಾಸನೆ ಇರಲಾರದು. ಒಂದು ವಾರದಲ್ಲಿ ಅದು ಗಾಳಿಗೆ ಒಣಗಿ ಸತ್ವಪೂರ್ಣ ಗೊಬ್ಬರವಾಗಿ ಕೃಷಿ ಭೂಮಿಗೆ, ತೋಟಗಾರಿಕೆ ಹಾಗೂ ನಗರದ ತೋಟ­ಗಳಿಗೆ, ಮನೆಗಳ ಕೈ ತೋಟಗಳಿಗೆ ಬಳಸುವಂತೆ ಆಗು­ತ್ತದೆ. ಸಾರಜನಕ ಹಾಗೂ ಕಾರ್ಬನ್‌ಗಳ ಈ ಮಿಶ್ರಣ  ಸತ್ವಪೂರ್ಣ­ವಾದ ಸಾವಯವ ಗೊಬ್ಬರ­ವಾಗು­ತ್ತದೆ.

ಈ ಗೊಬ್ಬರವನ್ನು ಮಾರಾಟ ಮಾಡಿ ಲಾಭ ಮಾಡಿ­­ಕೊಳ್ಳುವ ಹಕ್ಕನ್ನು ಕಾರ್ಮಿಕರಿಗೆ ನೀಡಬೇಕು. 200 ಕುಟುಂಬಗಳಿಂದ ಪ್ರತಿ ತಿಂಗಳಿಗೆ 500 ಕೆ.ಜಿ.ಯಷ್ಟು ಸಾವಯವ ಗೊಬ್ಬರ­ವನ್ನು ಉತ್ಪಾದಿ­ಸುವ ಸಾಧ್ಯತೆ ಇರು­ತ್ತದೆ. ಅದರಿಂದ ಪ್ರತಿ ಕಾರ್ಮಿಕ ₨ 2,000­ದಿಂದ 5,000ದ­ವರೆಗೆ ಆದಾಯ ಪಡೆ­ಯಲು ಸಾಧ್ಯವಾ­ಗು­ತ್ತದೆ.   ಪ್ಲಾಸ್ಟಿಕ್, ಕಬ್ಬಿಣ, ಕಲ್ಲು ಹಾಗೂ ಇತರ ಒಣ ತ್ಯಾಜ್ಯ­ ಬೇರ್ಪ­ಡಿಸಿ, ಮರು­ಬಳಕೆ ಮುಖಾಂ­ತರ ಬರುವ ಆದಾಯ­ವನ್ನೂ ಕಾರ್ಮಿಕರೇ ಪಡೆ­ಯು­ವಂತೆ ಆಗಬೇಕು.

ಬೇಕು ಸೂಕ್ಷ್ಮಾಣು ಜೀವಿ­ಗಳು: ಕಸ ನಿರ್ವಹ­ಣೆ­ಯಲ್ಲಿ ಸೂಕ್ಷ್ಮಾಣು ಜೀವಿ­ಗಳನ್ನು ಹೆಚ್ಚು ಬಳಕೆ ಮಾಡ­ಬೇಕಾಗಿ­ರು­ವುದು ಅನಿವಾ­ರ್ಯ­­ವಾಗಿದೆ. ಆಧುನಿಕ ಜೀವನ ಕ್ರಮದಲ್ಲಿ ಪ್ರತಿ ಕ್ಷಣವೂ ರಾಸಾ­ಯನಿಕ ಬಳಸಲಾ­ಗುತ್ತಿದೆ. ಇದರಿಂದ ಮಣ್ಣು, ನೀರು, ಗಾಳಿಯ­ಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾಶ­ವಾಗು­ತ್ತಿವೆ. ಹೀಗಾಗ­ದಂತೆ ಪರಿಸರವನ್ನು ರಕ್ಷಿಸಲು ತ್ಯಾಜ್ಯದಿಂದ ತಯಾರಿ­ಸುವ ಗೊಬ್ಬರಕ್ಕೆ ಸೂಕ್ಷ್ಮಾಣು ಜೀವಿಗಳನ್ನು ಸಿಂಪಡಣೆ ಮಾಡಬೇಕು (ಇಫೆರ್ದೆಮ್ ಮೈಕ್ರೊ ಆರ್ಗ್ಯಾನಿಸಂ ತಂತ್ರಜ್ಞಾನ) ಇದರಿಂದ ಕಸದ ದುರ್ವಾಸನೆ ತಡೆಯುವುದರ ಜೊತೆಗೆ ಕಡಿಮೆ ಸಮಯದಲ್ಲಿ ಗೊಬ್ಬರ ತಯಾರಿಸ­ಬಹುದು. 

ಇಂತಹ ವಿಕೇಂದ್ರೀಕೃತ ಕಸ ವಿಲೇವಾರಿಯಿಂದ ಸಾರಿಗೆ ವೆಚ್ಚ ಕಡಿತಗೊಳಿಸುವುದು, ಕಡಿಮೆ ಭೂಮಿಯನ್ನು ಬಳಕೆ ಮಾಡುವುದು ಮಾತ್ರವಲ್ಲ ಸಮಸ್ತ ಜನರ ಹಿತಾಸಕ್ತಿಯನ್ನು ಕಾಪಾಡುವಂತಹ ಸಮಗ್ರ ಕಸ ನಿರ್ವಹಣಾ ವ್ಯವಸ್ಥೆಯನ್ನು ಹುಟ್ಟು ಹಾಕಲು ಸಹ ಸಾಧ್ಯವಾಗುತ್ತದೆ.
(ಲೇಖಕರು ಸಾವಯವ ಕೃಷಿ ಕಾರ್ಯಕರ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT