ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಸಿರಿ ಪಡೆದ ಆಯಾಮ

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನವೆಂಬ ಪರಿಕಲ್ಪನೆಗೆ ಎಂಟು ದಶಕಗಳ ಪಳಮೆಯಿರುತ್ತಲೂ ಪ್ರತಿ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಪೀಠಿಕೆಯೋ ಎಂಬಂತೆ ನಾಡಿನುದ್ದಗಲದ ಪತ್ರಿಕೆಗಳಲ್ಲಿ ಆ ಕುರಿತ ಚರ್ಚೆ ಮೊಳಗುತ್ತದೆ. ಪ್ರತಿವರ್ಷ, ಎರಡು-ಮೂರು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸುವುದರ ಬಗ್ಗೆ, ಸಮ್ಮೇಳನವನ್ನು ನಡೆಸುವುದರ ಲಾಭ-ನಷ್ಟಗಳ ಬಗ್ಗೆ, ಅದರ ಸೋಲು ಗೆಲುವುಗಳ ಬಗ್ಗೆ ಅನೇಕ ಬಗೆಯ ಅಭಿಪ್ರಾಯಗಳು ಬಿಂಬಿತವಾಗುತ್ತವೆ. ಎಷ್ಟು ಚರ್ಚೆಗಳು ನಡೆದರೂ ಯಾವುದಕ್ಕೂ ಕಿವಿಗೊಡದೆ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇರುತ್ತವೆ. ಸರಿತಪ್ಪುಗಳು ಆವರ್ತನೆಗೊಳ್ಳುತ್ತಲೇ ಇರುತ್ತವೆ.

ಇವೆಲ್ಲ ಸರಿತಪ್ಪುಗಳ ಮಧ್ಯದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ನಡೆದು ಬರುತ್ತಿರುವ `ಆಳ್ವಾಸ್ ನುಡಿಸಿರಿ' ಇದೀಗ ವಿರಾಟ್‌ರೂಪ ತಾಳಿ ವಿಶ್ವಕನ್ನಡ ಸಮ್ಮೇಳನದ ಕಡೆಗೆ ಮುನ್ನುಗ್ಗುತ್ತಿದೆ. ಇದಕ್ಕೂ ಒಂದು ಹಿನ್ನೆಲೆಯಿದೆ. ಹತ್ತು ವರ್ಷಗಳ ಹಿಂದೆ ಮೂಡುಬಿದಿರೆಯಲ್ಲಿ ಡಾ. ಎಂ.ಮೋಹನ ಆಳ್ವಾ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಅಂತಿಮ ಕ್ಷಣದವರೆಗೂ ನಿಗದಿತ ಅಲ್ಪ ಮೊತ್ತವೂ ಕೈಸೇರದ ಕಠಿಣ ಪರಿಸ್ಥಿತಿಯಲ್ಲಿ ಡಾ. ಆಳ್ವರ ಕತೃತ್ವ ಶಕ್ತಿ ಅದನ್ನೊಂದು ಸವಾಲಾಗಿ ಸ್ವೀಕರಿಸಿತು. ಸೋಲಿನ ದವಡೆಯಿಂದ ಮೇಲೆದ್ದ ಅವರು ಆ ಸಮ್ಮೇಳನವನ್ನು ತಮ್ಮದೇ ಸಮ್ಮೇಳನವೆಂಬಂತೆ ಆಯೋಜಿಸಿ, ಇನ್ನಿಲ್ಲದ ಯಶಸ್ಸು ಕಂಡರು.

ಆದರೂ ಡಾ. ಆಳ್ವ ತೃಪ್ತರಾಗಲಿಲ್ಲ. ಅವರಿಗೆ ಅಲ್ಲೂ ಹಲವಾರು ಲೋಪಗಳು ಕಾಣಿಸಿಕೊಂಡವು. ಎಲ್ಲ ಲೋಪವನ್ನು ಮೀರಿ ನಿಲ್ಲುವ ಛಾತಿ ಅವರದು. ಮರುವರ್ಷವೇ ಕರಾವಳಿ ಜಿಲ್ಲೆಯಾದ್ಯಂತ ನುಡಿಸಿರಿಯ ಅಲೆಯೆಬ್ಬಿಸಿದರು. ಗೆಳೆಯರನ್ನು, ಅಭಿಮಾನಿಗಳನ್ನು, ಸಮಾನ ಮನಸ್ಕರನ್ನು ಜೊತೆ ಸೇರಿಸಿಕೊಂಡರು.'ನುಡಿಸಿರಿ'  ಕಟ್ಟುವ ಕ್ರಿಯೆಯಲ್ಲಿ ಪ್ರಜಾಪ್ರಭುತ್ವದ ತಳಪಾಯವಿಕ್ಕಿದರು. ಒಳ್ಳೆಯ ಅಂಶಗಳನ್ನು ಎಲ್ಲೆಡೆಯಿಂದಲೂ ಸ್ವೀಕರಿಸಿದರು.  ನೋಡುನೋಡುತ್ತಿರುವಂತೆಯೇ  `ನುಡಿಸಿರಿ' ಯು ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾಗಿ ರೂಪುಗೊಂಡಿತು.

ನುಡಿಸಿರಿಯೆಂಬುದು ರಾತ್ರೋರಾತ್ರಿ ನಿರ್ಮಾಣಗೊಂಡದ್ದಲ್ಲ. ಅದೊಂದು ಜಾತ್ರೆಯೂ ಅಲ್ಲ. ಬುದ್ಧಿಜೀವಿಗಳೆನಿಸಿಕೊಂಡವರ ಗುಪ್ತ ಸಮಾಲೋಚನಾ ತಾಣವೂ ಅಲ್ಲ. ಅದಕ್ಕೊಂದು ನಿರ್ದಿಷ್ಟ ಚೌಕಟ್ಟಿದೆ. ಸಮ್ಮೇಳನದ ಹೊತ್ತಿಗೆ ಮೂಡುಬಿದಿರೆಯ ವಿದ್ಯಾಗಿರಿಯೆಂಬ ಕಾಲೇಜು ಪರಿಸರವನ್ನು ವಿದ್ಯಾರ್ಥಿ ವಿಮುಕ್ತ ಮಾಡಲಾಗುತ್ತೆ. ವಿದ್ಯಾರ್ಥಿನಿಲಯಗಳು ಸಮ್ಮೇಳನಾರ್ಥಿಗಳ ವಾಸಕೇಂದ್ರಗಳಾಗುತ್ತವೆ. 

ಸಮ್ಮೇಳನದ ಯಶಸ್ಸಿನಲ್ಲಿ ಊಟಕ್ಕೂ ಬಹುದೊಡ್ಡ ಪಾಲಿದೆ. ನುಡಿಸಿರಿಯಲ್ಲಿ ಊಟಮಾಡುವುದೇ  ಒಂದು ಸಂಭ್ರಮ. ಎಲ್ಲೂ ಗೊಂದಲಗಳಿಲ್ಲ; ಸತ್ಕರಿಸುವುದಕ್ಕೆ  ಸ್ವಯಂಸೇವಕರು ಸದಾ ಮುಂದು. ಅಲ್ಲಿ ಯಾವುದಕ್ಕೂ ಕೊರತೆಯೆಂಬುದಿಲ್ಲ. ಎಲ್ಲವನ್ನೂ ಮುಂಗಾಣುವ ಚೈತನ್ಯ ಡಾ. ಆಳ್ವ ಹಾಗೂ ಅವರ ತಂಡಕ್ಕಿದೆ. ಅನೇಕ ಸಣ್ಣ ಪುಟ್ಟ ವಿಚಾರಗಳನ್ನು ಸರಿದೂಗಿಸುವುದಕ್ಕೆ ಸಾವಿರದಷ್ಟಿರುವ ಆಳ್ವಾಸ್ ಕಾಲೇಜಿನ ಅಧ್ಯಾಕರೂ ಅಷ್ಟೇ ಸಂಖ್ಯೆಯ ವಿದ್ಯಾರ್ಥಿಗಳೂ ಸ್ವಯಂಸನ್ನದ್ಧರಾಗಿ ನಿಂತು ಕೆಲಸಕ್ಕಾಗಿ ಕಾಯುತ್ತಾರೆ.

ಸಮಯಪ್ರಜ್ಞೆ ಎಂಬುದು ನುಡಿಸಿರಿಯ ಅವಿಭಾಜ್ಯ ಅಂಗ. ಅತಿಥಿಗಳು ತಮ್ಮ ಎಂದಿನ ಗತ್ತಿನಲ್ಲಿ ತಡವಾಗಿ ಬಂದು ಭಾಷಣಕ್ಕೆ ಅವಕಾಶ ಸಿಗದೆ ಹಿಂದಿರುಗಿದ್ದೂ ಇದೆ. ಇನ್ನು ಕೆಲವರು ನಲವತ್ತು ನಿಮಿಷದ ಭಾಷಣಕಾರರು ತಡವಾಗಿ ಬಂದ ನಿಮಿತ್ತವಾಗಿ ತಮ್ಮ ಭಾಷಣವನ್ನು ಉಳಿದ ನಿಮಿಷಗಳಿಗಷ್ಟೆ ಸೀಮಿತಗೊಳಿಸಿ ತೆಪ್ಪಗೆ ಕುಳಿತದ್ದೂ ಇದೆ. ಇದು ನುಡಿಸಿರಿಯ ಅಹಂಕಾರವಲ್ಲ. ಶಿಸ್ತು.

ಸಮ್ಮೇಳನ ನಡೆಸಲು ದೂರದರ್ಶಿತ್ವ, ಅನುಭವ, ಆರ್ಥಿಕ ನಿರಂಕುಶತ್ವ, ಮುನ್ನುಗ್ಗುವ ಛಲ-ಇವೆಲ್ಲ ಇರಬೇಕು. ಸಮ್ಮೇಳನ ಹೇಗಿರಬೇಕು ಮತ್ತು ಹೇಗಿರುತ್ತದೆ ಎಂಬುದನ್ನು ನೋಡುವುದಕ್ಕೆ ಬೇರೆ ಎಲ್ಲಿಗೂ ಹೋಗಬೇಕಾಗಿಲ್ಲ; ಮೂಡುಬಿದಿರೆಗೆ ಹೋದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT