ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು ಎಂಬ ಕಾಯಿಲೆಗಳ ಬಾಸ್ಕೆಟ್‌

ಕೊಬ್ಬು ಕರಗಿಸುವ ಸಮಯ
ಅಕ್ಷರ ಗಾತ್ರ

ಬೊಜ್ಜು ಇಲ್ಲವೇ ಅಧಿಕ ತೂಕ ಮೂಲತಃ ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯಾಪಿಸಿ­ರುವ ಬಹುದೊಡ್ಡ ಆರೋಗ್ಯ ಸಮಸ್ಯೆ. ಅದೀಗ ಪೂರ್ವದ

ದೇಶಗಳಲ್ಲೂ ಬೆಳೆದಿದ್ದು, ಇಲ್ಲಿನ ಆರೋಗ್ಯ ಕ್ಷೇತ್ರಕ್ಕೂ ಬಿಸಿ ಮುಟ್ಟಿಸುತ್ತಿದೆ. ಪಾಶ್ಚಿಮಾ­ತ್ಯರ ಜೀವನ ಶೈಲಿ, ಸಿದ್ಧ ಆಹಾರದ ಮೇಲಿನ ಜಿಹ್ವಾ ಚಪಲ, ನಿಷ್ಕ್ರಿಯ ದಿನಚರಿ– ಹೀಗೆ ಯೂರೋಪ್‌ ಸಮುದಾಯವನ್ನು ಯಥಾವತ್ತಾಗಿ ಅಂಧಾ­ನು­ಕರಣೆ ಮಾಡುತ್ತಿರುವ ಭಾರತೀಯರು ಕೂಡ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ಬೊಜ್ಜು ಒಂದು ಸಿರಿವಂತಿಕೆಯ ಸಂಕೇತ ಎನ್ನು­ವಂತೆ ಸಂಭ್ರಮಿಸು­ವವರೂ ಇದ್ದಾರೆ. ವಾಸ್ತವ­ವಾಗಿ ಅದು ಆರೋಗ್ಯಕ್ಕೆ ಮೆತ್ತಿಕೊಂಡ ಬಡತನದ ದ್ಯೋತಕ. ವೈದ್ಯಕೀಯ ಲೋಕ, ಈ ಬೊಜ್ಜು ಅಥವಾ ಅಧಿಕ ತೂಕವನ್ನು ಒಂದು ಕಾಯಿಲೆಯನ್ನಾಗಿಯೇ ಗುರುತಿಸಿದೆ. ಅದು ಕಾಯಿಲೆಯಾಗಷ್ಟೇ ಉಳಿದಿಲ್ಲ; ಈಗೀಗ ‘ಕಾಯಿಲೆಗಳ ಬಾಸ್ಕೆಟ್‌’ ಆಗಿಬಿಟ್ಟಿದೆ!

ವ್ಯಕ್ತಿಯೊಬ್ಬ ಆಹಾರದ ಮೂಲಕ ಪಡೆಯುವ ಕ್ಯಾಲೊರಿ ಮತ್ತು ಬಳಿಕ ಮಾಡುವ ಶಕ್ತಿಯ ವ್ಯಯವು ಆತನ ದೇಹದ ತೂಕವನ್ನು ನಿರ್ಧ­ರಿಸುತ್ತದೆ. ಹೆಚ್ಚಿನ ಕ್ಯಾಲೊರಿಯನ್ನು ದೇಹಕ್ಕೆ ಕಳುಹಿಸಿ ಕಡಿಮೆ ಪ್ರಮಾ­ಣದಲ್ಲಿ ವ್ಯಯಿಸಿದರೆ ಆಗ ದೇಹದ ತೂಕ ಹೆಚ್ಚುತ್ತದೆ. ಏಕೆಂದರೆ ಬಳಕೆಯಾಗದ ಹೆಚ್ಚಿನ ಶಕ್ತಿಯನ್ನು ದೇಹವು ಕೊಬ್ಬಿನ ರೂಪದಲ್ಲಿ ಸಂಗ್ರಹಿಸುತ್ತಾ ಹೋಗುತ್ತದೆ. ಬೊಜ್ಜು ಬೆಳೆಯುವ ಕ್ರಮವೇ ಹೀಗೆ.

ಮಾನವನ ದೇಹದಲ್ಲಿ ‘ಲೆಪ್ಟಿನ್‌’ ಎಂಬ ಹಾರ್ಮೋನು ಇದೆ. ಅದು ಮೆದುಳಿಗೆ ಯಾವಾ­ಗಲೂ ಕಡಿಮೆ ತಿನ್ನುವಂತೆ ಸಂದೇಶ ಕಳುಹಿ­ಸು­ತ್ತದೆ. ವಂಶವಾಹಿನಿ ಸಮಸ್ಯೆಯಿಂದ ‘ಲೆಪ್ಟಿನ್‌’ ಹಾರ್ಮೋನುಗಳ ಉತ್ಪತ್ತಿ ಕಡಿಮೆಯಾದರೆ ತಿನ್ನುವ ಕ್ರಿಯೆಯ ಮೇಲೆ ಅಂಕುಶ ಹಾಕುವವರೇ ಇಲ್ಲ­ದಂತಾಗುತ್ತದೆ. ‘ಲೆಪ್ಟಿನ್‌’ ಅನುಪಸ್ಥಿತಿ ಅಧಿಕ ತೂಕದ ಉಪಸ್ಥಿತಿಗೆ ದಾರಿ ಮಾಡಿಕೊಡುತ್ತದೆ.

ಹಾಗೆಯೇ ‘ಗೆರುಲಿನ್‌’ ಎಂಬ ಮತ್ತೊಂದು ಹಾರ್ಮೋನು ಸಹ ಇದೆ. ಅದು ತಿನ್ನುಬಾಕ ಸಂಸ್ಕೃತಿಗೆ ಪೂರಕವಾದ ಹಾರ್ಮೋನು. ಎಷ್ಟು ತಿಂದರೂ ಇನ್ನಷ್ಟು ತಿನ್ನಲು ಅದು ಪ್ರೇರೇಪಿಸುತ್ತದೆ. ವೈದ್ಯ ಜಗತ್ತು ಈ ಹಾರ್ಮೋನನ್ನು ಆರೋಗ್ಯಘಾತುಕ (ಬ್ಯಾಡ್‌ ಎಲಿಮೆಂಟ್‌) ಎಂದು ವ್ಯಾಖ್ಯಾನಿಸುತ್ತದೆ. ತಿನ್ನುವ ಹಪಾಪಿತನ ಉಂಟಾಗುತ್ತಿದ್ದರೆ ಆ ಹಾರ್ಮೋನು ಉದರದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂತಲೇ ಲೆಕ್ಕ. 

ಕೊಬ್ಬು ಹಾಗೂ ಸಕ್ಕರೆ ಅಂಶವನ್ನು ಹೆಚ್ಚಾಗಿ ಹೊಂದಿರುವ ಆಹಾರ ಪದಾರ್ಥಗಳು ಅತ್ಯಧಿಕ ಪ್ರಮಾಣದ ಕ್ಯಾಲೊರಿಯನ್ನು ಹೊತ್ತು ತಂದಿರುತ್ತವೆ. ವಿಶೇಷವಾಗಿ ಕುರುಕಲು ತಿಂಡಿಗಳು (ಫಾಸ್ಟ್‌­/­ಫ್ರೈಡ್‌ ಫುಡ್‌) ಮತ್ತು ಸಿಹಿ ತಿನಿಸುಗಳು ಹೆಚ್ಚಿನ ಪ್ರಮಾಣದ ಶಕ್ತಿಯ ಸಾಂದ್ರತೆಯನ್ನು ಹೊಂದಿ­ರು­ತ್ತವೆ. ಉದಾಹರಣೆಗೆ ಒಂದು ಸಣ್ಣ ಜಿಲೇಬಿಯೂ 200 ಕ್ಯಾಲೊರಿಯನ್ನು ದೇಹಕ್ಕೆ ಸೇರ್ಪಡೆ ಮಾಡು­ತ್ತದೆ. ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 1,000­ದಿಂದ 1,200 ಕ್ಯಾಲೊರಿ ಪೂರೈಕೆ ಮಾಡುವ ಆಹಾರ ಬೇಕು. 4–5 ಜಿಲೇಬಿ ತಿಂದವರು ಕ್ಯಾಲೊರಿ ಪ್ರಮಾಣವನ್ನು ಸರಿದೂಗಿಸಲು ಮತ್ತೆ ಇಡೀ ದಿನ ಏನೂ ತಿನ್ನುವಂತಿಲ್ಲ.

ದೇಹದಲ್ಲಿರುವ ಸ್ನಾಯುಗಳು ಕ್ಯಾಲೊರಿಯನ್ನು ಹೆಚ್ಚಾಗಿ ಕರಗಿಸುತ್ತವೆ. ಆದರೆ, ಪುರುಷರಿಗೆ ಹೋಲಿ­ಸಿ­ದರೆ ಮಹಿಳೆಯರಲ್ಲಿ ಇರುವ ಸ್ನಾಯುಗಳ ಪ್ರಮಾಣ ಕಡಿಮೆ. ಇದೇ ಕಾರಣದಿಂದ ಮಹಿಳೆಯರಲ್ಲಿ ಪಚನ ಶಕ್ತಿ ಕಡಿಮೆ ಇದ್ದು, ಬೊಜ್ಜಿನ ಸಮಸ್ಯೆ ಹೆಚ್ಚಾಗಿದೆ. ನಿಷ್ಕ್ರಿಯ ಇಲ್ಲವೇ ಕ್ರಿಯಾಶೀಲತೆ ಇಲ್ಲದಂತಹ ದಿನ­ಚರಿಯಿಂದ ಕ್ಯಾಲೊರಿ ಸಹ ಕೊಬ್ಬಿನ ರೂಪದಲ್ಲಿ ಬೆಳೆ­ಯುತ್ತಾ ಹೋಗುತ್ತದೆ. ಜಂಕ್‌ ಫುಡ್‌ಗಳಲ್ಲಿ ಕ್ಯಾಲೊರಿ ಪ್ರಮಾಣ ಅತ್ಯಧಿಕವಾಗಿದ್ದು, ಅಷ್ಟೊಂದು ಶಕ್ತಿಯು ನಮ್ಮ ದೇಹಕ್ಕೆ ಬೇಕಿಲ್ಲ.

ದೇಹತೂಕದ ಸೂಚ್ಯಂಕ: ದೇಹದ ತೂಕ ಸರಿ­ಯಾಗಿದೆಯೋ ಇಲ್ಲವೇ ಏರುಪೇರಾಗಿದೆಯೋ ಎನ್ನುವು­ದನ್ನು ದೇಹತೂಕ ಸೂಚ್ಯಂಕ (ಬಾಡಿ ಮಾಸ್‌ ಇಂಡೆಕ್ಸ್‌– ಬಿಎಂಐ) ತಿಳಿಸುತ್ತದೆ. ಈ ಸೂಚ್ಯಂಕವನ್ನು ತೂಕ ಹಾಗೂ ಎತ್ತರದ ಆಧಾರದ ಮೂಲಕ ಲೆಕ್ಕ ಹಾಕಲಾಗುತ್ತದೆ. ಬಿಎಂಐ 27.5ಕ್ಕಿಂತ ಹೆಚ್ಚು ಹೊಂದಿ­ರುವ ವ್ಯಕ್ತಿಗೆ ಬೊಜ್ಜಿನ ಸಮಸ್ಯೆ ಇದೆ ಎನ್ನುತ್ತದೆ ಲೆಕ್ಕಾಚಾರ.

ಬಹುತೇಕ ಕಾಯಿಲೆಗಳ ಮೂಲವೇ ಈ ಬೊಜ್ಜು. ಆದ್ದರಿಂದಲೇ ಇದನ್ನು ‘ಕಾಯಿಲೆಗಳ ಬಾಸ್ಕೆಟ್‌’ ಎಂದು ಕರೆಯಲಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತ­ದೊತ್ತಡ, ನಿದ್ರಾಹೀನತೆ, ಕೀಲುನೋವು, ಮೂತ್ರ­ಪಿಂಡ ವೈಫಲ್ಯ, ಹೃದಯಬೇನೆ, ಕ್ಯಾನ್ಸರ್‌... ಹೀಗೆ ಅಧಿಕ ತೂಕವು ತರುವ ರೋಗಗಳಿಗೆ ಲೆಕ್ಕವೇ ಇಲ್ಲ. ದೇಹದಿಂದ ಈ ‘ಕಾಯಿಲೆಗಳ ಬಾಸ್ಕೆಟ್‌’­ನ್ನು ತೆಗೆದುಹಾಕಿದರೆ ಎಲ್ಲ ಆರೋಗ್ಯ ಸಮಸ್ಯೆ­ಗಳನ್ನೂ ಒಂದೇ ಏಟಿಗೆ ಹೊಡೆದು ಹಾಕಲು ಸಾಧ್ಯವಿದೆ.

ಸಮಸ್ಯೆಯ ಮೂಲವನ್ನು ಬಿಟ್ಟು­ಬಿಡುವ ಜನ ರಕ್ತದೊತ್ತಡಕ್ಕೆ, ಸಕ್ಕರೆ ಕಾಯಿಲೆಗೆ, ಕೀಲುನೋವಿಗೆ, ಹೃದಯಬೇನೆಗೆ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಾ ಹೋಗು­ತ್ತಾರೆ. ಇದರಿಂದ ರೋಗದ ಮೂಲ ಹಾಗೇ ಉಳಿಯುವುದಲ್ಲದೆ ಕಾಯಿಲೆಯಿಂದ ಪೂರ್ಣಮುಕ್ತಿ ಸಿಗದೆ ಚಿಕಿತ್ಸಾ ವೆಚ್ಚ ಹೆಚ್ಚುತ್ತಾ ಹೋಗುತ್ತದೆ. ಜೀವನಪರ್ಯಂತ ಸಮ­ಸ್ಯೆಯ ಜತೆಗೇ ಬದುಕ­ಬೇಕಾ­ಗು­ತ್ತದೆ. ಬೊಜ್ಜಿನ ತೊಂದರೆ ಎದುರಿ­ಸು­ತ್ತಿರುವ ಮಹಿಳೆಯರು ಗರ್ಭ ಧರಿಸುವುದು ಕೂಡ ಕಷ್ಟ. ಅಧಿಕ ತೂಕದ ಪರಿಣಾಮವಾಗಿ ಸಾವಿರಾರು ಮಹಿಳೆ­ಯರು ಬಂಜೆತನ ಅನುಭವಿಸಬೇಕಾದ ಅನಿವಾರ್ಯ ಒದಗಿದೆ.

ನಮ್ಮ ದೇಶದ ಮಕ್ಕಳು ಹಿಂದೆ ಸದಾ ಕ್ರಿಯಾ­ಶೀಲವಾಗಿ ಇರುತ್ತಿ­ದ್ದರು. ಆಟದ ಅಂಗಳವೇ ಅವರ ನೆಚ್ಚಿನ ತಾಣವಾಗಿತ್ತು. ಈಗ ಕಂಪ್ಯೂ­ಟರ್‌ ಪರದೆ ಮುಂದೆ ಹೆಚ್ಚಿನ ಸಮಯವನ್ನು ಕಳೆ­ಯಲು ಆರಂಭಿಸಿ­ದ್ದಾರೆ. ಅದರ ಪರಿ­ಣಾಮ, ಮಕ್ಕಳಲ್ಲೂ ‘ಡುಮ್ಮಣ್ಣ’ರು ಹೆಚ್ಚಾಗಿ­ದ್ದಾರೆ. ಬಲು ಆತಂಕಕಾರಿ ವಿದ್ಯಮಾನ ಇದು. ನಾಲ್ಕು ವರ್ಷದ ಬಾಲಕ­ನೊಬ್ಬ ಇತ್ತೀಚೆಗೆ ಬೊಜ್ಜಿನ ಶಸ್ತ್ರಚಿಕಿತ್ಸೆಗೆ ಒಳಗಾದ ಎಂಬ ಸಂಗತಿಯೊಂದೇ ಸಾಕು, ಸಮಸ್ಯೆ ಎಷ್ಟೊಂದು ಬಿಗಡಾಯಿಸಿದೆ ಎನ್ನುವುದನ್ನು ಬಿಂಬಿ­ಸಲು. ಬೊಜ್ಜಿನಿಂದ ಕರ್ತೃತ್ವ ಶಕ್ತಿ ಕೂಡ ಕುಂಠಿತ­ವಾಗುತ್ತದೆ ಎನ್ನುವುದು ರುಜುವಾತಾಗಿದೆ.

ತೂಕ ಕರಗಿಸುವ ಬಲೂನ್‌: ದೇಹದ ತೂಕವನ್ನು ಕಡಿಮೆ ಮಾಡುವ ಕ್ಲಿನಿಕ್‌ಗಳು ಗಲ್ಲಿ–ಗಲ್ಲಿಗಳಲ್ಲೂ ತಲೆ ಎತ್ತಿವೆ. ತೂಕವನ್ನು ಕಡಿಮೆ ಮಾಡಲು ಅವು ಅನುಸರಿಸುವ ವಿಧಾನ ಹಾಗೂ ನೀಡುವ ಚಿಕಿತ್ಸೆಗೆ ಯಾವುದೇ ವೈದ್ಯಕೀಯ ಮಾನ್ಯತೆ ಇಲ್ಲ. ದೇಹದ ತೂಕ ಏಕಾಏಕಿ ಇಳಿಯುವುದು ಅಪಾಯಕಾರಿ. ಅದರಿಂದ ಅಡ್ಡ ಪರಿಣಾಮಗಳೂ ಹೆಚ್ಚು. ಸಮಸ್ಯೆ ಮರುಕಳಿಸುವ ಸಾಧ್ಯತೆಯೂ ಇರುತ್ತದೆ. ಬೊಜ್ಜು ನಿಧಾನವಾಗಿ ಕರಗುತ್ತಾ ಹೋಗಬೇಕು. ಇಂತಹ ಕ್ಲಿನಿಕ್‌ಗಳು ಬೊಜ್ಜಿನ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಿಲ್ಲ.

ಆಯುರ್ವೇದ ಚಿಕಿತ್ಸೆಯನ್ನೂ ಈ ಕಾಯಿಲೆಗೆ ನೀಡಲಾಗುತ್ತಿದೆ. ಕೆಲವೊಂದು ಪದ್ಧತಿಯಲ್ಲಿ ಪರಿಹಾರ ಇರಬಹುದೇನೋ. ಆದರೆ, ಎಲ್ಲ ‘ಸ್ಪಾ’­ಗಳಲ್ಲೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಹೇಳುವುದು ಕಷ್ಟ. ಅಲೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದೆ. ಬಿಎಂಐ 30ಕ್ಕಿಂತ ಹೆಚ್ಚಿ­ದ್ದ­ವರಿಗೆ ಉದರದಲ್ಲಿ ಬಲೂನ್‌ ಬಿಟ್ಟು ತೂಕವನ್ನು ನಿಯಂತ್ರ­ಣಕ್ಕೆ ತರ­ಲಾಗುತ್ತದೆ. ಬಿಎಂಐ 37ಕ್ಕಿಂತ ಹೆಚ್ಚಾಗಿರುವ­ವರಿಗೆ ಶಸ್ತ್ರ­ಚಿಕಿತ್ಸೆ ಅನಿವಾರ್ಯ.

ಸ್ಲೀವ್‌ ಗ್ಯಾಸ್ಟ್ರೊಕ್ಟಮಿ ಮತ್ತು ಗ್ಯಾಸ್ಟ್ರಿಕ್‌ ಬೈಪಾಸ್‌ ಎಂಬ ಎರಡು ಶಸ್ತ್ರ ಚಿಕಿತ್ಸೆಗಳು ಉಂಟು. ಉದರದಲ್ಲಿ ಒಂದು ಪುಟ್ಟ ರಂಧ್ರವನ್ನು ಕೊರೆಯುವ ಮೂಲಕ ಈ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಚಿಕಿತ್ಸೆಗೆ ಒಳಗಾದ 5–6 ಗಂಟೆಗಳಲ್ಲಿ ರೋಗಿ ಎದ್ದು ಓಡಾಡಲು ಸಾಧ್ಯ. ಒಂದು ವಾರದಲ್ಲಿ ಕೆಲಸಕ್ಕೆ ಕೂಡ ಹಾಜರಾಗ­ಬಹುದು.

ಗ್ಯಾಸ್ಟ್ರಿಕ್‌ ಬೈಪಾಸ್‌ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯ­ವಾಗಿ ಸಕ್ಕರೆ ಕಾಯಿಲೆ­ಯನ್ನೂ ಹೊಂದಿದ ಅಧಿಕ ತೂಕದ ವ್ಯಕ್ತಿಗಳಿಗೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಮೂಲಕ 150 ಕೆ.ಜಿ.ಯಷ್ಟು ತೂಕವನ್ನೂ ಕಡಿಮೆ ಮಾಡಲಾಗಿದೆ. ಈ ತೂಕ ಹಂತ–ಹಂತವಾಗಿ ಇಳಿಯುತ್ತಾ ಹೋಗುತ್ತದೆ.

ಸುಮಾರು 2–3 ವರ್ಷಗಳ ಕಾಲಾ­ವ­ಕಾಶ ಅಗತ್ಯ. ಬೊಜ್ಜಿನ ಸಮಸ್ಯೆ ಉಂಟಾಗದಂತೆ ತಡೆಯಲು ನಿತ್ಯ ವ್ಯಾಯಾಮ, ಹಿತಮಿತ

ಆಹಾರ ಸೇವನೆ, ಕ್ರಿಯಾಶೀಲ ದಿನಚರಿ ಹೊಂದುವುದು ಅತ್ಯಗತ್ಯ. ಅದೊಂದೇ ಸಹಜ ಹಾಗೂ ಪ್ರಕೃತಿ­ದತ್ತ­ವಾದ ಪರಿಹಾರ. ಆದರೆ, ಬಹುತೇಕರು ಬೊಜ್ಜನ್ನು ಒಂದು ಕಾಯಿಲೆ ಎಂದು ಭಾವಿಸಿಯೇ ಇಲ್ಲ. ಸುಶಿಕ್ಷಿತರಲ್ಲೂ ಈ ಅಜ್ಞಾನ ವ್ಯಾಪಕ­ವಾಗಿದೆ.

ದೇಹತೂಕ ಸೂಚ್ಯಂಕದ (ಬಿಎಂಐ)  ಲೆಕ್ಕಾಚಾರ
ಬಿಎಂಐ= ದೇಹದ ತೂಕ (ಕೆ.ಜಿ.ಗಳಲ್ಲಿ)/ ದೇಹದ ಎತ್ತರದ ವರ್ಗ (ಮೀಟರ್‌ಗಳಲ್ಲಿ)
ಉದಾಹರಣೆಗೆ ಒಬ್ಬ ವ್ಯಕ್ತಿಯ ತೂಕ 80 ಕೆ.ಜಿ ಹಾಗೂ ಎತ್ತರ 1.8 ಮೀಟರ್‌ ಇದೆ ಎಂದಿಟ್ಟುಕೊಳ್ಳಿ.
ಆಗ ಆ ವ್ಯಕ್ತಿಯ ಬಿಎಂಐ: 80/1.8x1.8
80/3.6
ಬಿಎಂಐ = 22.22

ಬೊಜ್ಜು: ಕೆಲ ಅಂಕಿ–ಅಂಶ
* ದೇಶದಲ್ಲಿ ಶೇ 30ರಷ್ಟು ಜನ ಅಧಿಕ ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲಿ ಶೇ 12ರಷ್ಟು ಮಕ್ಕಳು
* ಜಗತ್ತಿನ ಶೇ 15ರಷ್ಟು ಬೊಜ್ಜಿನ ವ್ಯಕ್ತಿಗಳು ಭಾರತ ಮತ್ತು ಚೀನಾದಲ್ಲಿದ್ದಾರೆ
* ಜಗತ್ತಿನ ಅತೀ ಹೆಚ್ಚಿನ ‘ತೂಕ’ದ ವ್ಯಕ್ತಿಗಳ ನಗರ ಇಂಗ್ಲೆಂಡ್‌ನ ಗ್ಲಾಸ್ಗೊ
* ಬೊಜ್ಜು ಹೊಂದಿರುವ ಮಗುವೊಂದು ಒಂದು ವಾರ ಟಿ.ವಿ ವೀಕ್ಷಣೆ ನಿಲ್ಲಿಸಿದರೆ ಅದರ ದೇಹದ ಸುತ್ತಳತೆ 2.3 ಸೆಂ.ಮೀ.ನಷ್ಟು ಇಳಿಯಬಲ್ಲದು ಎಂದು ವೈದ್ಯಕೀಯ ಸಮೀಕ್ಷೆಯೊಂದು ವರದಿ ಮಾಡಿದೆ
* ಅಮೆರಿಕದಲ್ಲಿ ಸಾಕುನಾಯಿಗಳ ಬೊಜ್ಜು ಕರಗಿಸಲೂ ಕ್ಲಿನಿಕ್‌ಗಳು ಶುರುವಾಗಿವೆ
* ಜಗತ್ತಿನಲ್ಲಿ ಪ್ರತಿದಿನ 85 ಕೋಟಿಯಷ್ಟು ಜನ ಹಸಿದ ಹೊಟ್ಟೆಯಿಂದ ಬಳಲುತ್ತಿದ್ದರೆ, 75 ಕೋಟಿ ಜನ ಅತಿಯಾದ ತಿನ್ನುವಿಕೆಯಿಂದ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ
* ವಾರ್ಷಿಕ ಸರಾಸರಿ 35 ಲಕ್ಷದಷ್ಟು ಜನ ಬೊಜ್ಜಿನಿಂದಾಗಿ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ
* ಜಗತ್ತಿನ ಶೇ 37ರಷ್ಟು ಪುರುಷರು ಮತ್ತು ಶೇ 38ರಷ್ಟು ಮಹಿಳೆಯರು ಅಧಿಕ ತೂಕದ ಸಮಸ್ಯೆ ಎದುರಿಸುತ್ತಿದ್ದಾರೆ

(ಲೇಖಕರು: ಫೋರ್ಟಿಸ್‌ ಆಸ್ಪತ್ರೆಯ ಬೊಜ್ಜು ನಿವಾರಣೆ ಶಸ್ತ್ರಚಿಕಿತ್ಸಾ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT