ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಕತೆ

ಅಕ್ರಮ ಸಕ್ರಮ ವಿವಾದ
Last Updated 18 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಇದು ನ್ಯಾಯದ ಅಣಕ ಮತ್ತು ಕಾನೂನಿಗೆ ‘ಗುಡ್‌ ಬೈ’ ಹೇಳಿದಂತೆ. ಕಾನೂನು  ಹಾಗೂ ಯೋಜನೆ ರೂಪಿಸುವ ವರು ನಗರದ ಯೋಜಿತ ಅಭಿವೃದ್ಧಿಗಾಗಿ ಕಾನೂನು  ಹಾಗೂ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರಚಿಸಲು ವರ್ಷಾನು ಗಟ್ಟಲೆ ಸಮಯ ವ್ಯಯಿಸಿರುತ್ತಾರೆ. ಇದು ಈಗ ನಿರರ್ಥಕ ಅನಿಸುತ್ತದೆ.

ಅಕ್ರಮ– ಸಕ್ರಮ ಯೋಜನೆ ಎಂದು ಹೆಸರಾಗಿರುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಕಾಯಿದೆಯು ಅಕ್ರಮ ಕಟ್ಟಡಗಳ ಸಕ್ರಮಗೊಳಿಸುವ ಹೊಸ ಕಾನೂನಿನ ಆರಂಭ ಮಾತ್ರವಲ್ಲ, ಇದೊಂದು ಸಾಂಸ್ಕೃತಿಕ ಬದಲಾವಣೆ. ಕಾನೂನು ಉಲ್ಲಂಘಿಸುವ ತಪ್ಪಿತಸ್ಥ ಭಾವನೆ ಯನ್ನೇ ನಮ್ಮಲ್ಲಿ  ಇಲ್ಲದಂತಾಗಿಸುತ್ತದೆ. ಇದು ಕಾನೂನು ಉಲ್ಲಂಘಿಸುವವರಲ್ಲಿ  ನಿರ್ಲಜ್ಜತನ, ಶಿಕ್ಷಾಭಯ ರಹಿತವಾದ, ನಾಚಿಕೆ ಇಲ್ಲದ ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ.

ರಾಜ್ಯದಲ್ಲಿ 2007ರಿಂದಲೂ ಆಡಳಿತ ನಡೆಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು ‘ಅಕ್ರಮ–ಸಕ್ರಮ’ ಯೋಜನೆ ಯನ್ನು ಜಾರಿಗೆ ತರಲು ಕಾತರದಿಂದ ಪ್ರಯತ್ನ ನಡೆಸುತ್ತಲೇ ಬಂದಿವೆ ಎಂಬುದು ಗಮನಾರ್ಹ. ಈ ಯೋಜನೆಯಿಂದ ₨5,000 ಕೋಟಿ ಆದಾಯ ಸಂಗ್ರಹಿಸು ವುದು ಸರ್ಕಾರದ ಗುರಿ. ಇದು ನಿಜಕ್ಕೂ ಆಡಳಿತ ನಡೆಸುವವರ ವಿಲಕ್ಷಣ ಹಾಗೂ ಕೆಟ್ಟ ಮಾದರಿ. ತಪ್ಪು ಮಾಡಿದವರನ್ನು ಶಿಕ್ಷಿಸುವ ಬದಲು ಆಡಳಿತ ನಡೆಸುವವರು ಕಣ್ಣು ಮುಚ್ಚಿ ತಪ್ಪೆಸಗಿದ ನಾಗರಿಕರಿಂದ ದಂಡನಾ ಶುಲ್ಕ ಸಂಗ್ರಹಿಸಿ ಸರ್ಕಾರ ನಡೆಸಲು ಮುಂದಾಗಿದ್ದಾರೆ.

ಕಾನೂನು ಉಲ್ಲಂಘನೆ ಆಗಿ ಹೋದ ಪ್ರಕ್ರಿಯೆ; ಕಟ್ಟಡ ನೆಲಸಮ ಮಾಡುವುದು  ಇನ್ನೂ ಕಷ್ಟದ ಕೆಲಸ ಎಂಬುದು ಅಕ್ರಮ– ಸಕ್ರಮ ಕಾನೂನು ತರಲು ಮುಂದಾಗಿ ರುವವರ ತರ್ಕ. ಆದರೆ, ಸಂವಿಧಾನ ಹಾಗೂ ನಗರ ಯೋಜನಾ ಕಾಯ್ದೆಗಳಿಗೆ ವಿರುದ್ಧವಾಗಿರುವ  ಇಂಥಹ  ವಿವಿಧ ರಾಜ್ಯಗಳ ಕ್ರಮಗಳನ್ನು   ನ್ಯಾಯಾಲಯ ಗಳು ರದ್ದು ಮಾಡಿದ ನಿದರ್ಶನಗಳು ನಮ್ಮ ಮುಂದಿವೆ.

‘ಕಾಯ್ದೆಯ ಅಡಿಯಲ್ಲಿ ಆಡಳಿತ ನಡೆಸುವವರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗುತ್ತಿರುವುದ ರಿಂದ, ಕಠಿಣ ಕ್ರಮದ ಕೊರತೆಯಿಂದ ಈ ಅವ್ಯವಸ್ಥೆ ಸೃಷ್ಟಿಯಾಗಿದೆ. ಕಾಯ್ದೆ ಹಾಗೂ ನಿಯಮಗಳನ್ನು ಸ್ಪಷ್ಟವಾಗಿ ರೂಪಿಸದೆ ಇದ್ದಲ್ಲಿ ಯಾವ ನಿರ್ಮಾಣ ಕಾನೂ ನುಬದ್ಧ, ಯಾವುದು ಅಲ್ಲ ಎನ್ನುವುದು ಗೊತ್ತಾಗುವುದು ಹೇಗೆ ? ನಗರದ ಜನರ ಹಿತದೃಷ್ಟಿಯಿಂದ   ನಗರದ ನಿಯಂತ್ರಿತ ಅಭಿವೃದ್ಧಿಗೆ ಕಾನೂನು ರೂಪಿಸಬೇಕಲ್ಲವೇ? ಯಾಕೆ ಈ ನಿಷ್ಕ್ರಿಯತೆ?  ಇದರಿಂದ ಸರ್ಕಾರದ ಖಜಾನೆ ತುಂಬಬ ಹುದು, ಆದರೆ, ಸಾರ್ವಜನಿಕ ಹಿತವನ್ನು ಗಮನಿಸಿದರೆ ಇದು (ದಂಡಶುಲ್ಕದಿಂದ ಖಜಾನೆಗೆ ಹಣ ಹರಿದು ಬರುವುದು) ಅಮುಖ್ಯ’ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದನ್ನು ಗಮನಿಸಬಹುದು.

ಈ ಯೋಜನೆ (ಸಕ್ರಮಗೊಳಿಸುವುದು)  ಒಮ್ಮೆ ಮಾತ್ರ ಅನ್ವಯಿಸುತ್ತದೆ. 2009ರ ಡಿಸೆಂಬರ್‌ ವರೆಗಿನ ಅಕ್ರಮ ಕಟ್ಟಡ ನಿರ್ಮಾಣವನ್ನು ಮಾತ್ರ ಸಕ್ರಮಗೊಳಿಸು ವುದಕ್ಕೆ ಅವಕಾಶವಿತ್ತು. ಆದರೆ, ಈಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಸಕ್ರಮಗೊಳಿಸುವ ದಿನಾಂಕವನ್ನು ಸುಗ್ರೀ ವಾಜ್ಞೆ ಜಾರಿ ದಿನಾಂಕದವರೆಗೆ ವಿಸ್ತರಿಸಲು ಆಸಕ್ತಿ ತೋರಿದೆ. ಇದರ ಅರ್ಥ ಸರ್ಕಾರ 2009ರ ನಂತರದ ಅಕ್ರಮ ನಿರ್ಮಾಣ ಗಳನ್ನೂ   ಸಕ್ರಮಗೊಳಿ ಸುವುದಕ್ಕೆ ಅವ ಕಾಶ ಕಲ್ಪಿಸುತ್ತದೆ. ಈ ಮೂಲಕ ಅಕ್ರಮ ನಿರ್ಮಾಣ ಹಾಗೂ ಅವನ್ನು ಸಕ್ರಮಗೊಳಿ ಸುವುದು ನಿರಂತರ ಪ್ರಕ್ರಿಯೆ ಆಗಲಿದೆ. ಸರ್ಕಾರದ ವೈಫಲ್ಯ ಎಂದಿಗೂ ಮುಗಿಯದ ಕತೆಯಾಗಿ ಮುಂದುವರಿಯಲಿದೆ.

ಕಾನೂನು ಉಲ್ಲಂಘಿಸಿ ಒಂದಷ್ಟು ದಂಡ ಕಟ್ಟಿದ ಮಾತ್ರಕ್ಕೆ ಉಲ್ಲಂಘನೆಯ ಫಲ ಉಣ್ಣುವ ಅವಕಾಶ ಕಲ್ಪಿಸಬಾರದು ಎಂಬುದು ಕಾನೂನಿನ ಮೂಲ ತತ್ವ. ಇದು ಒಂದು ರೀತಿ ಕಳ್ಳನು ಕದ್ದ ಮಾಲಿನ ಒಂದಷ್ಟು ಪ್ರತಿಶತ ಮೊತ್ತವನ್ನು ದಂಡ ರೂಪದಲ್ಲಿ ತೆತ್ತು ಕದ್ದ ಮಾಲನ್ನು ತನ್ನಲ್ಲೇ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಿದಂತೆ. ಉಲ್ಲಂಘನೆಯ ಭಾಗಕ್ಕೆ ಬೀಗ ಜಡಿದು ನಿಯಮ ಉಲ್ಲಂಘಿಸುವ ಪ್ರಯೋಜನ ಪಡೆದವರಿಗೆ ಕನಿಷ್ಠ 25 ವರ್ಷ ಅನುಭವಿಸದಂತೆ ತಡೆಯುವುದೇ ಇದಕ್ಕೆಲ್ಲ ಪರಿಹಾರ.

ಇಂತಹ ಉಲ್ಲಂಘನೆಗಳಿಗೆ ಅನುವು ಮಾಡಿ ಕೊಟ್ಟ ಅಧಿಕಾರಿ ಗಳು ಹಾಗೂ ಇತರರು ಸಹ ದಂಡ ನಾರ್ಹರು ಎಂಬ ಬಗ್ಗೆ ಪತ್ರಿಕಾ ವರದಿಗಳಲ್ಲಿ ಉಲ್ಲೇಖ ಇಲ್ಲ. ಹಾಗಾದರೆ, ಇಂತಹ  ಉಲ್ಲಂಘನೆ ಗಳಿಗೆ ಕುಮ್ಮಕ್ಕು ನೀಡಿ ಹಣ ಮಾಡಿಕೊಂ ಡವರು ದಂಡನೆಯಿಂದ ಬಚಾವಾಗುವುದು ಸರಿಯೇ?

ಕಾನೂನು ಉಲ್ಲಂಘಿಸಲು ಕುಮ್ಮಕ್ಕು ಕೊಟ್ಟು ಹಣ ಗಳಿಸಿದ ಅಧಿಕಾರಿಗಳು ಹಾಗೂ ಇತರರ ಆಸ್ತಿಗಳನ್ನು ನೆಲಸಮ ಮಾಡುವುದು ಅಥವಾ ವಶಪಡಿಸಿ ಕೊಳ್ಳುವುದೇ ಭವಿಷ್ಯ ದಲ್ಲಿ ಕಾನೂನಿನ ಉಲ್ಲಂಘನೆಗಳನ್ನು ತಡೆಯಲು ಅತ್ಯುತ್ತಮ ಕ್ರಮ.

ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟ ಹಾಗೆ, ‘ಇಂತಹ ಮಾದರಿಗಳು ಕ್ಯಾನ್ಸರ್‌ ರೂಪ ತಾಳುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದು ಸೂಕ್ತ ಸಮಯ’.
(ಲೇಖಕಿ ‘ಸಿವಿಕ್‌ ಬೆಂಗಳೂರ್’ನ ಕಾರ್ಯನಿರ್ವಾಹಕ ಟ್ರಸ್ಟಿ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT