ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಬಳಕೆಗೆ ಸಿಗಲಿ ಆದ್ಯತೆ

Last Updated 7 ಜೂನ್ 2013, 19:59 IST
ಅಕ್ಷರ ಗಾತ್ರ

ಮಳೆಯಿಂದಾಗಿ ವಿದ್ಯುತ್ ಬೇಡಿಕೆ ಕೊಂಚ ಮಟ್ಟಿಗೆ ತಗ್ಗಿದೆ. ವಿದ್ಯುತ್ ಕೊರತೆ ತೀವ್ರವಾಗುವ ನಿರೀಕ್ಷೆಯಿತ್ತು. ಆದರೆ ಈಗ ಸುರಿಯುತ್ತಿರುವ ಮಳೆಯಿಂದಾಗಿ, ಕೃಷಿ ಪಂಪ್‌ಸೆಟ್‌ಗಳ ಬಳಕೆ ಕಡಿಮೆಯಾಗಿದೆ. ಈ ತಿಂಗಳಿಂದ ಎದುರಿಸಬೇಕಿದ್ದ ವಿದ್ಯುತ್ ಕೊರತೆ ಕಳವಳ ಸದ್ಯಕ್ಕಂತೂ ದೂರವಾಗಿದೆ.

ರಾಜ್ಯದಲ್ಲಿ ವಿದ್ಯುತ್ ನಿರ್ವಹಣೆ ತೀರಾ ಆತಂಕಕಾರಿ ಎಂಬಂತೇನೂ ಇಲ್ಲ. ಬಿಕ್ಕಟ್ಟು ಉಲ್ಬಣವಾಗದಂತೆ ಹಲವು ಬಗೆಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಹೇಳದೇ ಕೇಳದೇ ದಿಢೀರ್ ಆಗಿ `ಕಣ್ಮರೆ'ಯಾಗುವ ವಿದ್ಯುತ್, ಹತ್ತಾರು ಗಂಟೆ ಬಾರದೇ ಇರುವ ಪರಿಸ್ಥಿತಿ ಇಲ್ಲ. ಆಗಾಗ ಅಲ್ಪ ಸಮಯದ ಲೋಡ್ ಶೆಡ್ಡಿಂಗ್ ಇದೆಯಷ್ಟೇ. ಇದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳ (ಎಸ್ಕಾಂ) ನಿರ್ವಹಣೆ ತಕ್ಕಮಟ್ಟಿಗೆ ಸಮಾಧಾನಕರವಾಗಿಯೇ ಇದೆ. ಆದರೆ ಗ್ರಾಮೀಣ ಭಾಗದ ಸ್ಥಿತಿ ಹೀಗಿಲ್ಲ. ಪಟ್ಟಣಗಳಿಗೆ ಸಿಗುವಷ್ಟು ಆದ್ಯತೆ ಹಳ್ಳಿಗಳಿಗೆ ಸಿಗುತ್ತಿಲ್ಲ ಎಂಬುದು ನಿಜ.

ಸಾಮಾಜಿಕ ನ್ಯಾಯದ ಪ್ರಕಾರ, ಎಲ್ಲರಿಗೂ ಸಮಾನ ಸೌಲಭ್ಯ ಸಿಗಬೇಕು. ಆದರೆ ಕೆಲವೊಂದು ಸಲ ಅದು ಸಾಧ್ಯವಾಗುವುದಿಲ್ಲ. ದರ ಪಾವತಿಸುವ ವರ್ಗಕ್ಕೆ ವಿದ್ಯುತ್ ಸರಬರಾಜು ಸಮರ್ಪಕವಾಗಿರುತ್ತದೆ; ಆ ವರ್ಗಕ್ಕೆ ಅಗತ್ಯ ಪ್ರಮಾಣದಷ್ಟು ವಿದ್ಯುತ್ ಪೂರೈಸಲೇಬೇಕು. ಇನ್ನೊಂದು ಕಡೆ, ಸಬ್ಸಿಡಿ ಪಡೆಯುವ ವರ್ಗಕ್ಕೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು ಸಹಜ. ಆದರೆ ಇದನ್ನು ಸರಿಪಡಿಸುವುದು ಸರ್ಕಾರಕ್ಕೆ ಅಸಾಧ್ಯವೇನೂ ಅಲ್ಲ. ಅದಕ್ಕೆ ಬೇಕಿರುವುದು ಬಲವಾದ ಇಚ್ಛಾಶಕ್ತಿ.

ನನ್ನ ಅಭಿಪ್ರಾಯದ ಪ್ರಕಾರ, ವಿದ್ಯುತ್ ಕೊರತೆಗೆ ಕಾರಣವೆಂದರೆ- ಹೆಚ್ಚಿದ ಬಳಕೆ. ಅದರಲ್ಲೂ ನಗರ-ಪಟ್ಟಣ ಪ್ರದೇಶದಲ್ಲಿ ವಿದ್ಯುತ್ ಬಳಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಐ.ಟಿ, ಬಿ.ಟಿ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಡೀ ಕಚೇರಿಗೇ ಎ.ಸಿ ವ್ಯವಸ್ಥೆ ಅಳವಡಿಸಬೇಕಾಗುತ್ತದೆ. ಜತೆಗೆ, ಹೆಚ್ಚುತ್ತಿರುವ ತಾಪಮಾನ ತಾಳದೇ ಸಾವಿರಾರು ಜನರು ತಮ್ಮ ಮನೆಗಳಲ್ಲಿ ಎ.ಸಿ ಅಳವಡಿಸಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ಪಂಪ್‌ಸೆಟ್‌ಗಳ ಸಂಖ್ಯೆಯೂ ಅಧಿಕವಾಗುತ್ತಲೇ ಇದೆ. ಆದರೆ ಕ್ರಮೇಣ ಏರುತ್ತಿರುವ ವಿದ್ಯುತ್ ಬೇಡಿಕೆಗೆ ಪೂರಕವಾಗಿ ಉತ್ಪಾದನೆಯಾಗುತ್ತಿಲ್ಲ. ಬೇರೆ ಕಡೆಯಿಂದ ಖರೀದಿಸಬೇಕು ಎಂದರೂ ಬೇಕಾದಷ್ಟು ವಿದ್ಯುತ್ ಸಿಗುವ ಸಾಧ್ಯತೆ ಕಡಿಮೆ. ಅಕಸ್ಮಾತ್ ಸಿಕ್ಕರೂ ಅಲ್ಲಿಂದ ಇಲ್ಲಿಗೆ ತರಲು ಸೂಕ್ತ ಸಾಗಾಣಿಕೆ ಮಾರ್ಗಗಳಿಲ್ಲ. ಹೀಗಾಗಿ ವಿದ್ಯುತ್ ಕೊರತೆ ಎಂಬುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಹಾಗಾದರೆ ಸುಧಾರಣೆ ಹೇಗೆ? ಸರಿಯಾದ ಯೋಜನೆಗಳನ್ನು ರೂಪಿಸಿ, ನಿಗದಿತ ಕಾಲಮಿತಿಯೊಳಗೆ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಂಡಿತ ಸಾಧ್ಯವಿದೆ. ಅವುಗಳಲ್ಲಿ ಪ್ರಮುಖವಾದುವು ಹೀಗಿವೆ:

1. ಸಾಗಣೆ ಹಾಗೂ ವಿತರಣೆ ನಷ್ಟ ಕಡಿಮೆ: ಉತ್ಪಾದನೆಯಾಗುವ ವಿದ್ಯುತ್ ಪೈಕಿ ಸಾಕಷ್ಟು ಪ್ರಮಾಣ ಸಾಗಣೆ ಹಾಗೂ ವಿತರಣೆಯಲ್ಲಿಯೇ ನಷ್ಟವಾಗಿರುತ್ತದೆ. ಈ ನಷ್ಟ ಕಡಿಮೆಗೊಳಿಸಲು ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಆದ್ಯತೆ ಮೇರೆಗೆ ಕ್ರಮ ಜರುಗಿಸಬೇಕು. ಅತ್ಯಾಧುನಿಕ ತಂತ್ರಜ್ಞಾನ ಕೈಗೆಟುಕುವಂತಿದ್ದು, ಎಸ್ಕಾಂಗಳು ದೃಢ ನಿರ್ಧಾರ ತಳೆದರೆ ಇದು ಅಸಾಧ್ಯವೇನೂ ಅಲ್ಲ.

2. ೀರಾವರಿ ಪಂಪ್‌ಸೆಟ್‌ಗಳ ಬದಲಾವಣೆ: ರಾಜ್ಯದಲ್ಲಿ 22 ಲಕ್ಷ ಪಂಪ್‌ಸೆಟ್‌ಗಳನ್ನು ರೈತರು ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಇವುಗಳ ದಕ್ಷತೆ ಶೇ 30ರಿಂದ 40ರಷ್ಟು ಮಾತ್ರ ಇದೆ. ಒಂದು ವೇಳೆ ಈ ದಕ್ಷತೆಯನ್ನು ಶೇ 60ಕ್ಕೆ ಏರಿಸಿದರೂ, ಲಕ್ಷಾಂತರ ಯೂನಿಟ್‌ಗಳಷ್ಟು ವಿದ್ಯುತ್ ಉಳಿತಾಯವಾಗಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಟೆಂಡರ್ ಕರೆದು ಸಂಸ್ಥೆಯೊಂದಕ್ಕೆ ಪಂಪ್‌ಸೆಟ್ ಬದಲಾವಣೆ ಕೆಲಸ ವಹಿಸಬೇಕು.

ಕಾರ್ಯ ಪೂರ್ಣಗೊಂಡ ಮೇಲೆ ಉಳಿತಾಯವಾಗುವ ವಿದ್ಯುತ್‌ನ ಆದಾಯ ಲೆಕ್ಕ ಹಾಕಿ, ಆ ಪೈಕಿ ನಿಗದಿತ ಪಾಲನ್ನು ಆ ಸಂಸ್ಥೆಗೆ ಪಾವತಿಸುವ ಒಪ್ಪಂದ ರೂಪಿಸಬೇಕು. ಇದರಿಂದ ಸರ್ಕಾರಕ್ಕೆ ಹಣಕಾಸು ಹೊರೆ ಇರುವುದಿಲ್ಲ; ರೈತರಿಗೂ ಯಾವುದೇ ಹೊರೆಯಾಗುವುದಿಲ್ಲ. ವಿದ್ಯುತ್ ಉತ್ಪಾದನೆಯೇನೋ ಮುಖ್ಯ; ಅದಕ್ಕಿಂತಲೂ ವಿದ್ಯುತ್ ಉಳಿತಾಯ ಮುಖ್ಯ ಎಂಬುದನ್ನು ಗಮನಿಸಬೇಕು.

3. ಸೌರಶಕ್ತಿಗೆ ಆದ್ಯತೆ: ಇವೆಲ್ಲಕ್ಕಿಂತ ತುರ್ತಾಗಿ ಮಾಡಬೇಕಾದ ಕೆಲಸವೆಂದರೆ, ಸೌರಶಕ್ತಿ ಬಳಕೆಗೆ ಮೊದಲ ಆದ್ಯತೆ ಕೊಡುವುದು. ಇದಕ್ಕಾಗಿ ಕರಾರುವಾಕ್ಕಾದ ಅವಧಿಯ ಯೋಜನೆ ರೂಪಿಸಬೇಕು. ಪ್ರತಿ ಜಿಲ್ಲೆಯಲ್ಲೂ 5 ಮೆಗಾ ವಾಟ್ ಸಾಮರ್ಥ್ಯದ ಸೌರವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬೇಕು. ಅಂದರೆ ಒಂದು ವರ್ಷದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ 150 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯಾಗಲು ಸಾಧ್ಯವಿದೆ.

ಹೀಗೆ ಮಾಡಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸುಮಾರು 500 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಬಿಸಿಲಿನ ಪ್ರಮಾಣ ಅಧಿಕವಾಗಿರುವ ಉತ್ತರ ಕರ್ನಾಟಕದಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಬಹುದು. ವರ್ಷಕ್ಕೆ ಸಾವಿರ ಕೋಟಿ ರೂಪಾಯಿ ಬಂಡವಾಳ ಹಾಕಿದರೆ, ಈ ಯೋಜನೆ ಜಾರಿ ಸುಲಭವಾದೀತು.

ಒಮ್ಮೆ ಸ್ಥಾಪನೆಯಾದ ಸೌರವಿದ್ಯುತ್ ಉತ್ಪಾದನಾ ಘಟಕಗಳು ನಿರ್ವಹಣೆ ಸಮಸ್ಯೆಯಿಲ್ಲದೇ 20-25 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಜಲ, ಉಷ್ಣ ವಿದ್ಯುತ್ ಉತ್ಪಾದನೆಗೆ ಎದುರಾಗುವ ಪರಿಸರ ನಾಶ, ಕಲ್ಲಿದ್ದಲು ಕೊರತೆಯಂಥ ಸಮಸ್ಯೆಗಳು ಸೌರವಿದ್ಯುತ್ ಉತ್ಪಾದನೆಯಲ್ಲಿ ಇರುವುದಿಲ್ಲ. ಕೇಂದ್ರ ಸರ್ಕಾರದ ನೆರವು ಅಥವಾ ಬೇರಾವುದೇ ಮೂಲದಿಂದ ಹಣ ತಂದು ಸರ್ಕಾರ ಈ ಯೋಜನೆ ಅನುಷ್ಠಾನ ಮಾಡಬೇಕು.

ನಿರೂಪಣೆ: ಆನಂದತೀರ್ಥ ಪ್ಯಾಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT