ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಹಣದಾಗ ಗರ್ಭಿಣಿ ಹೊರಗ ಬಂದ್ರ...’

Last Updated 27 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ 1947–48ರಷ್ಟು ಹಿಂದೆಯೇ ಹಮೀದ್‌ ದಳವಾಯಿ ಅವರು ‘ಸತ್ಯಶೋಧನ ಸಮಿತಿ’ ಪ್ರಾರಂಭಿಸಿ ಸಾಮಾಜಿಕ ಜಾಗೃತಿ ಸಲುವಾಗಿ ದೊಡ್ಡ ಕೆಲಸ ಮಾಡಿದರು. ಅವರಿಂದ ಪ್ರೇರಣೆ ಪಡೆದ ನರೇಂದ್ರ ದಾಭೋಲ್ಕರ 1989ರಲ್ಲಿ ‘ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನ ಸಮಿತಿ’ ಕಟ್ಟಿಕೊಂಡು 20 ವರ್ಷಗಳಿಗೂ ಅಧಿಕ ಕಾಲ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ಗಳಲ್ಲಿ 3000ಕ್ಕೂ ಅಧಿಕ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು.

ಈ ಮೌಢ್ಯ ನಿವಾರಿಸಲು ಒಂದು ಗಟ್ಟಿಯಾದ ಕಾನೂನು ಬರಬೇಕೆನ್ನುವುದು ಎರಡು ದಶಕದ ಕನಸಾಗಿತ್ತು. ವೈಚಾರಿಕತೆ ವಿರೋಧಿಸುವ ಜನ ತಮ್ಮ ಮಂತ್ರ, ತಂತ್ರಗಳಿಂದ ಸೋಲಿಸಲು ಆಗದೇ, ವಿಜ್ಞಾನದ್ದೇ ಒಂದು ಆವಿಷ್ಕಾರವಾದ ಬಂದೂಕಿನಿಂದ ಧಾಬೋಲ್ಕರ ಅವರನ್ನು ಕೊಂದದ್ದು ವಿಪರ್ಯಾಸವೇ ಹೌದು!

ಅವರ ಸಾವಿಗೆ ತಕ್ಷಣ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರ ಆ ಕಾನೂನು ತರಲು ಒಪ್ಪಿರುವುದು ಹಾಗೂ ಕರ್ನಾಟಕ ಸರ್ಕಾರವೂ ಕಾನೂನು ತರಲು ಮನಸ್ಸು ಮಾಡಿರುವುದು ಸ್ವಾಗತಾರ್ಹ. ಆದರೆ, ಈ ಸಂದರ್ಭದಲ್ಲಿ ಮೌಢ್ಯ ಅಥವಾ ಅಂಧಶ್ರದ್ಧೆಯ ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಕಾಡುವಂತಹ ಇನ್ನಿತರೆ ಅಂಧಶ್ರದ್ಧೆ ಮೌಢ್ಯಗಳ ಬಗ್ಗೆಯೂ ಚರ್ಚೆ ಅತ್ಯಗತ್ಯ. 

ಗ್ರಹಣಕ್ಕೆ ಸಂಬಂಧಿಸಿದ ಆಚರಣೆಗಳು. ಗ್ರಹಣಗಳ ಬಗ್ಗೆ ನಮ್ಮ ಪೂರ್ವಿಕರಿಗೆ ಇದ್ದಂತಹ ತಿಳಿವಳಿಕೆ, ನಂಬಿಕೆ ಹಾಗೂ ಅವರು ಪಾಲಿಸುತ್ತಿದ್ದಂತಹ ಆಚರಣೆಗಳಿಗೆ ಏನೋ ಕಾರಣ ಇರಬಹುದು. ಆದರೆ ಇಂದು ವಿಜ್ಞಾನ ಮುಂದುವರೆದಿದ್ದು, ಗ್ರಹಣ ಹೇಗೆ ಏಕೆ ಘಟಿಸುತ್ತದೆ ಹಾಗೂ ಅದರಿಂದ ಉಂಟಾಗುವ ಪರಿಣಾಮ ಏನು ಅನ್ನೋದರ ಬಗ್ಗೆ ಬಹಳ ವ್ಯಾಪಕ ಜ್ಞಾನ ದೊರೆತಿದೆ.

ಗ್ರಹಣವನ್ನು ನೇರವಾಗಿ ಕಣ್ಣುಗಳಿಂದ ನೋಡಿದಾಗ ಉಂಟಾಗಬಹುದಾದ ದುಷ್ಪರಿಣಾಮ ಹೊರತು­ಪಡಿಸಿದರೆ ಸೂರ್ಯ ಗ್ರಹಣ, ಚಂದ್ರಗ್ರಹಣ­ದಿಂದಾಗಲೀ, ಖಗ್ರಾಸ, ಖಂಡಗ್ರಾಸ ಗ್ರಹಣದಿಂದಾಗಲೀ ಮನುಷ್ಯರ, ಇನ್ನಿತರ ಜೀವಿಗಳ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಅನ್ನೋದನ್ನು ವಿಜ್ಞಾನ ಸ್ಪಷ್ಟವಾಗಿ ತೋರಿಸಿದೆ.

ಒಬ್ಬ ಸ್ತ್ರೀ ಆರೋಗ್ಯ ತಜ್ಞನಾಗಿ ನಾನು ಮೇಲಿಂದ ಮೇಲೆ ಎದುರಿಸುವಂತಹ ಈ ಸನ್ನಿವೇಶವನ್ನು ವಿವರಿಸುವುದು ಉತ್ತಮ.
ಗ್ರಹಣದ ದಿನ ಯಾವ ಗರ್ಭಿಣಿಯೂ ತಪಾಸಣೆಗೆಂದು ಆಸ್ಪತ್ರೆಗೆ ಬರಲು ಒಪ್ಪುವುದಿಲ್ಲ. ಇಂಥ ಸಂದರ್ಭದಲ್ಲಿ ನಾನು ಅವರ ಜೊತೆ ಚರ್ಚೆ ಮಾಡಲಿಕ್ಕೆ ಪ್ರಯತ್ನ ಮಾಡ್ತೀನಿ.

‘ನೀವ್ಯಾಕೆ ತಪಾಸಣೆಗೆ ಬರೋದಿಲ್ಲ’ ಅಂತ ಕೇಳಿದರೆ, ‘ಗ್ರಹಣ ಇದ್ದಾಗ ಹೊರಗಬಂದರ ಅಂಗವಿಕಲ ಮಕ್ಕಳು ಹುಟ್ಟತಾವಂತಲ್ರಿ’ ಎಂಬುದು ಸಾಮಾನ್ಯ ಉತ್ತರ.

ಜಗತ್ತಿನೊಳಗ ಮನುಷ್ಯರನ್ನು ಹೊರತುಪಡಿಸಿ ಇತರೆ ಸಾವಿರಾರು ಜಾತಿಯ ಪ್ರಾಣಿಗಳಿವೆ. ಗರ್ಭಿಣಿ­ಯಾಗಿರುವ ಆಕಳು, ಎಮ್ಮೆ, ನಾಯಿ ಸೇರಿದಂತೆ ಯಾವುವೂ ಗ್ರಹಣದ ಸಂದರ್ಭದಲ್ಲಿ ಅಡಗಿ ಕುಳಿತುಕೊಳ್ಳೋದಿಲ್ಲ. ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತವೆ. ಆದರೂ ಗ್ರಹಣದಿಂದಾಗಿ ಪ್ರಾಣಿಗಳಲ್ಲಿ ಅಂಗವಿಕಲ ಮರಿಗಳು ಹುಟ್ಟೋದರ ಬಗ್ಗೆ ಯಾವುದೇ ಪುರಾವೆಗಳಿಲ್ಲ.

ನಮ್ಮಲ್ಲಿ ಗ್ರಹಣ ಘಟಿಸುವ ವೇಳೆಯಲ್ಲಿಯೇ ಬೇರೆ ಬೇರೆ ದೇಶದ ಮಹಿಳೆಯರು (ಉದಾ–ಚೀನಾ, ಪಾಕಿಸ್ತಾನ, ಫ್ರಾನ್ಸ್‌, ಜರ್ಮನಿ) ಗರ್ಭಿಣಿ ಇರುವಾಗ ಗ್ರಹಣಗಳನ್ನು ಮುಕ್ತವಾಗಿಯೇ ನೋಡ್ತಾರ. ಆದರೂ ಅವರಿಗೆ ಅಂಗವಿಕಲ ಮಕ್ಕಳು ಹುಟ್ಟಿದ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಹೋಗಲಿ, ಬೇರೆ ದೇಶದ ಮಾತೂ ಬ್ಯಾಡ. ನಮ್ಮ ದೇಶದಲ್ಲಿಯೇ, ನಮ್ಮ ಊರಿನಲ್ಲಿಯೇ ಬೇರೆ ಜಾತಿಯ, ಮತಗಳ ಗರ್ಭಿಣಿಯರು (ಮುಸ್ಲಿಮರು, ಕ್ರಿಶ್ಚಿಯ ನ್ನರು, ಬುಡಕಟ್ಟು ಸಮು ದಾಯ­ದವರು ಇತ್ಯಾದಿ) ಯಾವುದೇ ನಿರ್ಬಂಧ ಗಳನ್ನು ಪಾಲಿಸುವುದಿಲ್ಲ. ಆದರೆ ಅವರಿಗೆ ಅಂಗವಿಕಲ ಕೂಸುಗಳು ಹುಟ್ಟಿದ್ದರ ಬಗ್ಗೆ ಯಾವ ವೈಜ್ಞಾನಿಕ ಪುರಾವೆಗಳೂ ಇಲ್ಲ.

ಯಾವ ಹೆರಿಗೆ ಶಾಸ್ತ್ರದ ಪುಸ್ತಕದಲ್ಲಿಯೂ ಗ್ರಹಣ ದೋಷದಿಂದ ಹುಟ್ಟುವ ಮಗುವಿಗೆ ಅಂಗವೈಕಲ್ಯ ಉಂಟಾಗಿದೆ ಎನ್ನುವುದರ ಬಗ್ಗೆ ಒಂದೇ ಒಂದು ವಾಕ್ಯವೂ ಸಿಗುವುದಿಲ್ಲ.

ಇಷ್ಟೆಲ್ಲ ವಿವರಣೆ ಕೊಟ್ಟ ಬಳಿಕವೂ ಗರ್ಭಿಣಿ ಮಹಿಳೆ ಕೊಡುವ ಉತ್ತರವೇನೆಂದರೆ, ‘ನೀವು ಹೇಳಿದ್ದೆಲ್ಲ ಖರೇ ಅದರಿ ಡಾಕ್ಟರ... ಆದರ, ನಮ್ಮ ಹಿರಿಯರ ಸಲುವಾಗಿ ಇದನ್ನೆಲ್ಲ ಪಾಲಿಸಬೇಕು. ಅವರ ಮಾತು ಕೇಳಬೇಕಾಗ್ತದ.’

ನಾವು ಸೂಕ್ಷ್ಮವಾಗಿ ವಿಶ್ಲೇಷಿಸಬೇಕಾದಂತಹ ಅಂಶ ಇಲ್ಲಿದೆ. ಯಾಕೆ ನಮ್ಮ ಶಿಕ್ಷಣ ನಮಗೆ ಪರಂಪರಾನುಗತವಾಗಿ ಬಂದಂತಹ ಆಚರಣೆಗಳು ತಪ್ಪು, ಅವೈಜ್ಞಾನಿಕ ಅನ್ನೋದನ್ನ ತಿಳಿಸಿಕೊಡಲಿಲ್ಲ. ಅದನ್ನು ಬದಲಾಯಿಸುವಂತಹ ವೈಜ್ಞಾನಿಕ ಮನೋಭಾವವನ್ನು, ಅದಕ್ಕೆ ಬೇಕಾಗುವಂತಹ ಧೈರ್ಯವನ್ನು ನಾವು ತುಂಬುವುದಿಲ್ಲ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಅಧ್ಯಕ್ಷರಾಗಿದ್ದ ಪ್ರೊ.ಕೃಷ್ಣ ಕುಮಾರ್‌ ಅವರು ಈ ಬಗ್ಗೆ ಮಾರ್ಮಿಕವಾಗಿ ವಿವರಿಸುತ್ತಾರೆ. ‘ನಮ್ಮ ಶಿಕ್ಷಣ ಇಂದಿಗೂ ಕೇವಲ ನೌಕರಿ ಕೊಡುವಂತಹ ಹುದ್ದೆಯನ್ನು ಖಾತ್ರಿ ಮಾಡುವ ಸಾಧನವಾಗಿದೆಯೇ ಹೊರತು, ವೈಜ್ಞಾನಿಕ ಮನೋಭಾವ ಬೆಳೆಸುವಂತಹ ಸಾಧನವಾಗಲಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರು ಕಾಲೇಜಿನಲ್ಲಿ ಗ್ರಹಣದ ಕುರಿತು ಉಪನ್ಯಾಸ ಮಾಡಿ ಮನೆಗೆ ಹೋದ ತಕ್ಷಣ ಕಂದಾಚಾರಗಳನ್ನು ಪಾಲಿಸುವ ಮೌಢ್ಯದ ಮೂರ್ತಿಗಳಾಗುತ್ತಾರೆ’.

ಮುಟ್ಟು ಎನ್ನುವುದು ಮಹಿಳೆಯ ಬದುಕಿನ ಅವಿಭಾಜ್ಯ ಅಂಗ. ಅದು ಅವಳ ಬದುಕಿನ ಸಹಜ ಸ್ವಾಭಾವಿಕ ವಿದ್ಯಮಾನ. ಪ್ರತಿ ತಿಂಗಳೂ ಗರ್ಭಾಶಯದ ಒಳಪದರು ಕರಗಿ ರಕ್ತ ಸ್ರಾವವಾಗಿ ಹೊರ ಬರುವುದೇ ಮುಟ್ಟು. ಈ ವೈಜ್ಞಾನಿಕ ಮಾಹಿತಿ ಗೊತ್ತಿದ್ದೂ ನಮ್ಮ ಸಮಾಜದ ಅನೇಕ ಜಾತಿ ಗಳಲ್ಲಿ ಮುಟ್ಟಿನ ಬಗೆಗಿನ ಆಚರಣೆಗಳಲ್ಲಿ ಬದ ಲಾವಣೆಗಳು ಆಗಿಲ್ಲ.

ಇಂದಿನ ಯುವತಿ ಯರು ಮೊದಲಿನವರಂತೆ ಮುಟ್ಟಾ­ದಾಗ ಹೊರಗೆ ಕೂಡದೇ ಇರಬಹುದು. ಆದರೆ ಇವತ್ತಿಗೂ ಮುಟ್ಟಾದಾಗ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬಾರದು, ಪೂಜಾಸ್ಥಳ­ಗಳಿಗೆ ಹೋಗಬಾರದು. ಹಾಗೆ ಮಾಡಿದ್ದರೆ ತಮಗೆ ಅಹಿತಕರವಾದದ್ದೇನೋ ಆಗುತ್ತದೆ ಎನ್ನವ ನಂಬಿಕೆಗಳು ಬೇರೂರಿವೆ. ಹಾಗಾಗಿಯೇ ಅನೇಕ ಮಹಿಳೆಯರು ವೈದ್ಯರ ಬಳಿಗೆ ಬಂದು, ‘ಮುಂದಿನವಾರ ನಮ್ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆ. ಅದೇ ದಿನಗಳಲ್ಲಿ ನನಗೆ ಮುಟ್ಟಾಗುವ ಸಂಭವವಿದೆ. ಮುಟ್ಟು ಮುಂದೆ ಹಾಕುವ ಗುಳಿಗೆ ಬರೆದುಕೊಡ್ರಿ’ ಅಂತಾರೆ!

ಮುಟ್ಟುದೋಷ ಎಂಬುದು ಇವತ್ತಿಗೂ ಬಹಳಷ್ಟು ಜನರು ನಂಬಿಕೊಂಡು ಬಂದಿರುವಂತಹ ಮೌಢ್ಯ. ಆದ್ದರಿಂದಲೇ ಮುಟ್ಟಾದ ಮಹಿಳೆ ದ್ರಾಕ್ಷಿ ತೋಟ, ಬಾಳೆಯ ಬನದಲ್ಲಿ ಪ್ರವೇಶಿಸಿದರೆ ಇಳುವರಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಾಗೂ ಆತಂಕ ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಅದೆಷ್ಟು ರೀತಿಯಲ್ಲಿ ಚರ್ಚಿಸಿದರೂ ಮಹಿಳೆ ತನ್ನ ಮನೋಭಾವದಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳಲು ಒಪ್ಪುವುದಿಲ್ಲ. ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಹೇಳ­ಬಹುದು. ಮೊದಲನೆಯದು, ಮೇಲೆ ವಿವರಿಸಿದಂತೆ ಶಿಕ್ಷಣದ ದಯನೀಯ ಸೋಲು. ಎರಡನೆಯದು ಜನಮಾನಸದ ಮೇಲೆ ಇವತ್ತಿಗೂ ದೊಡ್ಡ ಹಿಡಿತ ಇಟ್ಟುಕೊಂಡಿರುವಂತಹ ಧರ್ಮ ಗುರುಗಳು, ಮಠಾಧಿಪತಿಗಳು ಸ್ವತಃ ತಾವೇ ಈ ಮೌಢ್ಯಗಳಲ್ಲಿ ಮುಳುಗಿರುವುದು!

ಒಂದು ಕಡೆ ಹಿಂದಿನಿಂದ ನಡೆದು ಬಂದಿರುವಂತಹ ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ನಾವು ಸತತವಾಗಿ ಹೆಣಗಾಡಬೇಕು ಎಂಬುದು ನಿಜ. ಆದರೆ ಇನ್ನೊಂದು ಕಡೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕೂಡ ಸಂಪೂರ್ಣವಾಗಿ ಕಳಂಕರಹಿತವಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು.

ವಿಜ್ಞಾನದ ಹೆಸರಿನಲ್ಲಿಯೇ ಅನೇಕ ಮೌಢ್ಯಗಳು ಬೆಳೆದು ಬಂದಿರುವುದನ್ನು ಹಾಗೂ ನಮ್ಮ ಬದುಕಿನಲ್ಲಿ ಬಹಳಷ್ಟು ಅನಾಹುತಗಳನ್ನು ಮಾಡಿರೋದನ್ನು ನಾವು ನೋಡ್ತೀವಿ.

ತಾಯಿಯ ಎದೆಹಾಲಿಗಿಂತ ಪೌಡರ್‌ ಹಾಲು ಅಥವಾ ಬಾಟಲಿ ಹಾಲು ಮಗುವಿಗೆ ಹೆಚ್ಚು ಒಳ್ಳೆಯದು. ತಾಯಿ ತನ್ನ ಮಗುವಿಗೆ ಮೊಲೆ ಹಾಲು ಕುಡಿಸಬೇಕಾಗಿಲ್ಲ. ಬದಲಾಗಿ ಪೌಡರ್‌ ಹಾಲಿನ ಮೇಲೆಯೇ ಮಗುವನ್ನು ಬೆಳೆಸಬಹುದು ಅನ್ನುವ ಒಂದು ವಿಚಾರ ವಿಜ್ಞಾನದ ಬೆಂಬಲದೊಂದಿಗೇ ಪ್ರಚಲಿತ­ವಾಯಿತು. ಇದರ ಪರಿಣಾಮವಾಗಿ ಜಗತ್ತಿನಾದ್ಯಂತ ಲಕ್ಷಾಂತರ ಹಸುಗೂಸುಗಳು ಸಾವಿಗೀಡಾಗಬೇಕಾಯಿತು.

ವಿಜ್ಞಾನವನ್ನು ಮುಂದಿಟ್ಟುಕೊಂಡು ವ್ಯಾಪಾರ, ಮಾರುಕಟ್ಟೆ ಲಾಭಗಳೇ ಮುಖ್ಯವಾದಾಗ ಏನು ಪ್ರಮಾದವಾಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.

ಸಮಾಜದ ಲೇಸನ್ನು ಬಯಸುವವರು, ಅರ್ಥ­ಪೂರ್ಣ­ವಾದ, ಸುಖಕರವಾದ ಬಾಳು ಬಾಳಬೇಕು ಅನ್ನುವವರು ಈ ಮೌಢ್ಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವುಗಳನ್ನು ಗಟ್ಟಿಯಾಗಿ ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

(ಲೇಖಕರು ಸ್ತ್ರೀರೋಗ ತಜ್ಞರು ಹಾಗೂ ಮೌಢ್ಯವಿರೋಧಿ ಆಂದೋಲನದ ಮುಂದಾಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT