ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದ ಕೂದಲಿನ ಒಡತಿ

Last Updated 22 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಈ ಮಹಿಳೆಯ ಕೂದಲೆಂದರೆ ಮುಂಜಾವಿನ ಮಂಜು ರಾಶಿ ಹಾಕಿದಂತೆ, ಕೂದಲು ಹರಡಿದರೆ ಕಪ್ಪಗಿನ ಪರ್ವತದಂತೆ ಎಂದು ಕಂಡವರು ಹೊಗಳುತ್ತಾರೆ. ಆಕೆ ನಿಂತರೆ ನೆಲದ ಮೇಲೂ ಎರಡು ಅಡಿ ಅಗಲ ಚಾಚುವ ಹೆರಳು. ಬಾಸ್ಕೆಟ್‌ಬಾಲ್ ಆಟದ ಬಾಸ್ಕೆಟ್ ಏಳಡಿ ಎತ್ತರವಿರುವುದಾದರೆ ಇವರ ಜಡೆ ಇನ್ನೂ ಮೂರು ಇಂಚು ಉದ್ದವಿದೆ ಎಂದು ಮಾಧ್ಯಮಗಳು ಬಣ್ಣಿಸಿವೆ.

ಈ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ಮಿತಾ ಶ್ರೀವಾಸ್ತವ. ಅವರ ಕೂದಲು ಏಳು ಅಡಿ ಮೂರು ಇಂಚು ಉದ್ದವಿದ್ದು ಇನ್ನೂ ಬೆಳೆಯುತ್ತಲೇ ಇದೆ. ಮೂರು ವರ್ಷಗಳ ಹಿಂದೆ ಆಕೆಯ ಈ ಕೂದಲಿನ ಉದ್ದ ಲಿಮ್ಕಾ ದಾಖಲೆಯಲ್ಲಿ ಸ್ಥಾನ ಪಡೆಯಿತು. ಆಗ ಅದು ಆರು ಅಡಿ ಮಾತ್ರ ಉದ್ದ ಇತ್ತು.

37 ವರ್ಷದ ಸ್ಮಿತಾ ಉತ್ತರ ಪ್ರದೇಶದ ಅಲಹಾಬಾದಿನವರು. ಕೂದಲಿನ ಬೆಳವಣಿಗೆ ದೈವದತ್ತ ಕೊಡುಗೆ ಎನ್ನುವ ಅವರು ಅದರ ಪ್ರಗತಿಗಾಗಿ ಯಾವುದೇ ಬಗೆಯ ವಿಶೇಷ ಉಪಚಾರಗಳನ್ನು ಮಾಡಿಲ್ಲ. ಆದರೂ ನನಗಿದರ ಮೇಲೆ ಅಭಿಮಾನವಿದೆ, ಇದು ನನ್ನ ಜೀವನದ ಸಂಗಾತಿ ಎಂದು ಸಂತಸ ಹಂಚಿಕೊಳ್ಳುತ್ತಾರೆ. ಷಾಪಿಂಗ್ ಅವರಿಗೆ ತುಂಬ ಇಷ್ಟವಂತೆ. ಮಾರುಕಟ್ಟೆಗೆ ಹೋದಾಗ ಅಲ್ಲಿದ್ದವರು, ‘ಇಷ್ಟು ಉದ್ದದ ಕೂದಲೇ?’ ಎಂದು ಅಚ್ಚರಿಪಡುತ್ತಾರೆ. ಇದು ವಾಸ್ತವ ಎಂದು ಅರಿತಾಗ ತುಂಬ ಗೌರವ ಕೊಡುತ್ತಾರಂತೆ. ಹೆಂಗಸರು, ಮಕ್ಕಳು ಜಡೆಯನ್ನು ಎಳೆದು ನೋಡಿ ಇದು ಕೃತಕವೆ? ಎಂದು ಪರೀಕ್ಷೆ ಮಾಡುತ್ತಾರೆ. ಅಲ್ಲವೆಂದು ಖಚಿತವಾದಾಗ, ‘ನೀವು ತುಂಬ ಅದೃಷ್ಟವಂತರು’ ಎಂದು ಹೊಗಳುವರಂತೆ.

ಸ್ಥಳೀಯ ತೈಲ ಉತ್ಪನ್ನಗಳ ಜಾಹೀರಾತುಗಳಿಗೆ ಸ್ಮಿತಾ ರೂಪದರ್ಶಿ ಮಾತ್ರವಲ್ಲ, ಪ್ರಚಾರಕಿಯೂ ಆಗಿದ್ದಾರೆ. ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರೂ ಆಗಿರುತ್ತಾರೆ. ಅವರಿಗೆ ಒಂದು ಮಗುವಿದೆ. ಕೇಶ ಸೌಭಾಗ್ಯ ವರ್ಧನೆಗೆ ಕುಟುಂಬದವರ ಅಪಾರ ಬೆಂಬಲ ಅವರಿಗಿದೆ. ಎಂದಾದರೂ ಒಂದು ದಿನ ಗಿನ್ನಿಸ್‌ ದಾಖಲೆಯಲ್ಲಿ ಸೇರಿಕೊಳ್ಳುವ ಹಂಬಲ ಅವರಿಗಿದೆ. ಆದರೆ ಅದು ಸದ್ಯಕ್ಕೆ ನೆರವೇರದು. ಯಾಕೆಂದರೆ ಗಿನ್ನಿಸ್‌ ದಾಖಲೆಗೆ ಚೀನಾದ ಮಹಿಳೆ ಎಕ್ವಿಸ್ ಕ್ವಿಪಾಂಗ್ ಹೆಸರು 2004ರಲ್ಲಿ ಸೇರಿದೆ. ಈ ದಾಖಲೆಯನ್ನು ಈಗ ಯಾರೂ ಮುರಿಯುವಂತಿಲ್ಲ. ಅವರ ಕೂದಲಿನ ಉದ್ದ ಹದಿನೆಂಟು ಅಡಿ ದಾಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT