ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಹಾಲು ಹೆಚ್ಚಳಕ್ಕೆ ಹತ್ತಾರು ಆರೈಕೆ

ಟಿಪ್ಸ್‌ ಕಾರ್ನರ್
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಎದೆಹಾಲು ಮಗುವಿಗೆ ಅಮೃತಸಮಾನ. ಸಾಕಷ್ಟು ಪ್ರಮಾಣದಲ್ಲಿ ಎದೆಹಾಲು ಸಿಕ್ಕ ಮಗುವಿಗೆ ಭವಿಷ್ಯದಲ್ಲಿ ರಕ್ತದ ಒತ್ತಡ, ಕೊಲೆಸ್ಟ್ರಾಲ್‌  ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ. ನಿಯಮಿತವಾಗಿ ಎದೆಹಾಲು ಕುಡಿಸುವುದರಿಂದ ಮಗುವಿನ ಸಮಗ್ರ ಬೆಳವಣಿಗೆಯ ಜತೆಗೆ ಬುದ್ಧಿಮಟ್ಟವೂ ಹೆಚ್ಚಳವಾಗುತ್ತದೆ ಎಂಬುದೂ ಸಾಬೀತಾಗಿದೆ.

   ಇಷ್ಟೇ ಅಲ್ಲದೇ, ಸ್ತನ್ಯಪಾನ ಅಮ್ಮನ ಆರೋಗ್ಯಕ್ಕೂ ಅವಶ್ಯಕ. ಇದರಿಂದ ಆಕೆಗೆ ಸ್ತನ, ಅಂಡಾಶಯ ಹಾಗೂ ಗರ್ಭಕ್ಯಾನ್ಸರ್‌ನಂತಹ ಅಪಾಯದಿಂದ ಪಾರಾಗಲು ಸಾಧ್ಯವಿದೆ. ಅಲ್ಲದೇ, ಮಹಿಳೆಯರ ರೋಗನಿರೋಧ ಶಕ್ತಿಯೂ ಹೆಚ್ಚುತ್ತದೆ.ಆದರೆ ವಿವಿಧ ಕಾರಣಗಳಿಂದ ಇಂದು ಮಹಿಳೆಯರಲ್ಲಿ ಎದೆಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ.

   ಹಾಲಿನ ಹೆಚ್ಚಳಕ್ಕೆ ಯಾವ್ಯಾವುದೋ ಔಷಧಗಳ ಪ್ರಯೋಗ ಮಾಡುವ ಬದಲು ಮನೆಮದ್ದಿನಿಂದಲೇ ಇದನ್ನು ಹೆಚ್ಚಿಸಿಕೊಳ್ಳಲು ನಮ್ಮ ಹಿರಿಯರು ಕೆಲವು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅವುಗಳ ಪೈಕಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

*ಎದೆಹಾಲು ವೃದ್ಧಿ ಎಂದಾಕ್ಷಣ ಮೊದಲ ಹೆಸರು ಕೇಳಿಬರುವುದು ಮೆಂತ್ಯದ್ದು.  ಇದರಲ್ಲಿ ಕಬ್ಬಿಣದ ಅಂಶ, ವಿಟಮಿನ್ ಮತ್ತು ಖನಿಜದ ಅಂಶ ಹೇರಳವಾಗಿದೆ. ಇದರ ಅನ್ನ ಮಾಡಿ ತಿಂದರೆ ಒಳ್ಳೆಯದು. ಆದರೆ ಒಂದು ಎಚ್ಚರಿಕೆ. ಇದು ತುಂಬಾ ಒಳ್ಳೆಯದೆಂದು ಹೆಚ್ಚಿಗೆ ತಿನ್ನಲು ಹೋಗಬೇಡಿ. ಗ್ಯಾಸ್ ಅಥವಾ ಹೊಟ್ಟೆ ಉಬ್ಬರ ಆಗಬಹುದು. ಅಷ್ಟೇ ಅಲ್ಲದೇ ಮೆಂತ್ಯ ಸೇವನೆ ವೇಳೆ ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಿ. ಮೆಂತ್ಯ, ತಾಯಿಯ ದೇಹಕ್ಕೆ ಒಗ್ಗದಿದ್ದಲ್ಲಿ ಮಗುವಿಗೆ ಅತಿಸಾರ ಶುರುವಾಗಬಹುದು. ಅದರ ಮಲ ಹಸಿರು ಬಣ್ಣದಿಂದ ಕೂಡಿ ನೀರಿನಂತೆ ಹೋಗುತ್ತಿದ್ದರೆ ಇಲ್ಲವೇ  ತಾಯಿಯಲ್ಲಿ ಭೇದಿ ಕಾಣಿಸಿಕೊಂಡರೆ ತಕ್ಷಣ ಮೆಂತ್ಯದ ಸೇವನೆ ನಿಲ್ಲಿಸಿ.

*ಜೀರಿಗೆ ಕಷಾಯಕ್ಕೆ ಹಾಲು ಹಾಗೂ ಜೇನುತುಪ್ಪ ಸೇರಿಸಿ ಪ್ರತಿದಿನ ಸೇವಿಸಿದರೆ ಎದೆಹಾಲು ವೃದ್ಧಿಸುವುದು. ಜೀರಿಗೆಯನ್ನು ನುಣ್ಣಗೆ ಪುಡಿಮಾಡಿ ಸಿಹಿ ಹಾಲಿಗೆ ಸೇರಿಸಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿದರೂ ಒಳ್ಳೆಯದೇ.

*ಹತ್ತಿ ಕಾಳು ಕೂಡ ಹಾಲಿನ ವೃದ್ಧಿಗೆ ಸಹಕಾರಿ. ಈ ಕಾಳನ್ನು ನೆನೆಸಿ ಅರೆದು ಕುಡಿಯುತ್ತಿದ್ದರೆ ಹಾಲು ಹೆಚ್ಚಾಗುತ್ತದೆ.

*ಪಪ್ಪಾಯಿ ಕಾಯಿಯನ್ನು ಗರ್ಭಿಣಿಯಿರುವಾಗ ತಿಂದರೆ ಗರ್ಭಪಾತ ಆಗುವುದು ಎಷ್ಟು ನಿಜವೋ, ಚೆನ್ನಾಗಿ ಹಣ್ಣಾಗಿರುವ ಪಪ್ಪಾಯವನ್ನು ಮಗುವಿನ ಜನನದ ನಂತರ ತಿನ್ನುತ್ತಿದ್ದರೆ ಎದೆ ಹಾಲು ಹೆಚ್ಚಾಗುವುದೂ ಅಷ್ಟೇ ದಿಟ.

*ತುಳಸಿ ಎಲೆಗಳ ಸೇವನೆ ಕೂಡ ತಕ್ಕಮಟ್ಟಿಗೆ ಸಹಕಾರಿಯಾಗುತ್ತದೆ. ಇದರಲ್ಲಿ ವಿಟಮಿನ್‌ ‘ಕೆ’ ಹೆಚ್ಚಾಗಿದೆ. ಇದನ್ನು ಹಸಿಯಾಗಿ, ಸೂಪ್‌ ಜೊತೆ ಅಥವಾ ಜೇನುತುಪ್ಪದ ಜೊತೆ ಸೇವಿಸಬಹುದು.

*ಮಗು ಹುಟ್ಟಿದ ಬಳಿಕ ಸೋರೇಕಾಯಿ, ಹಾಗಲಕಾಯಿ, ಸಿಹಿಗೆಣಸು, ಪಾಲಾಕ್‌ ಸೊಪ್ಪು, ಬೀನ್ಸ್‌ ಇವುಗಳನ್ನು ಸೇವಿಸುವುದರಿಂದಲೂ ಹಾಲಿನ ವೃದ್ಧಿ ಮಾಡಿಕೊಳ್ಳಬಹುದು.

*ತುಪ್ಪ, ಬೆಣ್ಣೆ, ಹಾಲಿನ ಸೇವನೆ ಕೂಡ ಅಮ್ಮಂದಿರಿಗೆ ಒಳ್ಳೆಯದೇ ಎಂದಾದರೂ ಕೆಲವೊಮ್ಮೆ ಇವುಗಳಿಂದ ಮಗುವಿಗೆ ಅಲರ್ಜಿಯಾಗಬಹುದು. ಆದ್ದರಿಂದ ಸ್ವಲ್ಪ ಎಚ್ಚರ ವಹಿಸಿ ಇವುಗಳ ಸೇವನೆ ಮಾಡಬಹುದು.

******
ಸ್ತನ್ಯಪಾನ ಹೀಗಿರಲಿ
* ಮಗುವಿಗೆ ಹಾಲುಣಿಸುವಾಗ ಒಂದೇ ಸ್ತನದಿಂದ ಹಾಲುಣಿಸಬಾರದು. ಆಗಾಗ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಬದಲಾಯಿಸಿ ಎರಡೂ ಸ್ತನಗಳಿಂದ ಹಾಲು ಕುಡಿಸಿ. ಹಾಲುಣಿಸುವಾಗ ಕನಿಷ್ಠ ಎರಡರಿಂದ ಮೂರು ಬಾರಿ ಈ ರೀತಿ ಮಾಡಿದರೆ ಹಾಲು ಬತ್ತುವ ಸಮಸ್ಯೆ ಬರುವುದಿಲ್ಲ.

* ಶಿಶುವಿಗೆ ದಿನದಲ್ಲಿ 8ರಿಂದ 12  ಬಾರಿ ಎದೆಹಾಲು ನೀಡಬೇಕು. ಮಗು ನಿಯಮಿತವಾಗಿ ತೂಕ ಹೆಚ್ಚಿಸಿಕೊಳ್ಳುತ್ತಾ, ದಿನದಲ್ಲಿ 6 ರಿಂದ 8 ಬಾರಿ ಹಾಸಿಗೆ ಒದ್ದೆ ಮಾಡುತ್ತಿದ್ದರೆ, ಅದು ಸರಿಯಾದ ಪ್ರಮಾಣದಲ್ಲಿ ಹಾಲು ಸೇವಿಸುತ್ತದೆ ಎಂದು ಅರ್ಥ.

* ಎದೆಹಾಲು ಉಣಿಸಿದಂತೆಯೇ ಹಾಲು ನೀಡಿದ ಬಳಿಕ ಮಗುವಿಗೆ ತೇಗು ಬರಿಸಬೇಕು.

* ಮಗುವಿನಲ್ಲಿ ಅತಿಸಾರ ಕಂಡು ಬಂದಲ್ಲಿ, ಎದೆಹಾಲನ್ನು ನಿಲ್ಲಿಸಕೂಡದು.

* ಹಾಲುಣಿಸುವಾಗ ಸ್ತನವನ್ನು ಕೈಗಳಿಂದ ಒತ್ತಿ ಮಗುವು ಹಾಲು ಹೀರಲು ಅನುಕೂಲ ಆಗುವಂತೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT