ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಲ್ಲದವನ ನೆರಳು ಬೆಳಕಿನಾಟ

Last Updated 11 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಲಕ್ಸ್‌ ಜಾಹೀರಾತು ನೋಡಿದ್ದೀರಾ? ಕತ್ರಿನಾ ಕೈಫ್‌ ತನ್ನೆಲ್ಲ ಚರ್ಮದ ನುಣುಪನ್ನು ಹೊಳಪನ್ನೂ ಪ್ರತಿಬಿಂಬಿಸುವ ಈ ಜಾಹೀರಾತಿಗಾಗಿ ಚಿತ್ರ ತೆಗೆದಿದ್ದು ಭಾವೀಶ್‌ ಪಟೇಲ್‌. ಹುಟ್ಟು ಅಂಧ!... ಈಗ ಕಣ್ಮುಂದೆ ಇನ್ನೊಮ್ಮೆ ಆ ಜಾಹೀರಾತು ಬಂದಿರಬೇಕಲ್ಲ... ಅರೆರೆ.. ಹೌದೆ? ಅಂಧನೊಬ್ಬ ಚಿತ್ರ ತೆಗೆಯಬಲ್ಲನೆ? ಇದೆಂಥದ್ದೋ ತಂತ್ರಜ್ಞಾನದ ಚಮತ್ಕಾರವಿರಬಹುದು ಎಂದು ಸುಮ್ಮನಾಗ ಬೇಡಿ... ಇಲ್ಲಿದೆ ಓದಿ ಭಾವೀಶನ ಅಂತರಂಗ.

ಶಾಲಾದಿನಗಳಲ್ಲಿ ಅಂಧರ ಹಾಸ್ಟೆಲ್‌ನಲ್ಲಿದ್ದು ಕಲಿತರು. ವಾರಾಂತ್ಯದಲ್ಲಿ ಅವರ ಅಂಕಲ್‌ ಬಂದು ಹಾಸ್ಟೆಲ್‌ನಿಂದ ಮನೆಗೆ ಕರೆದೊಯ್ಯುತ್ತಿದ್ದರು. ಸೋಮವಾರ ಮರಳಿ ಶಾಲೆಗೆ ಹೋಗ ಬೇಕಾದಾಗಲೆಲ್ಲ ಒಂದು ಆರ್ಟ್‌ ಗ್ಯಾಲರಿಗೆ ಕರೆದೊಯ್ಯುತ್ತಿದ್ದರು. ಅಲ್ಲಿರುವ ಕಲಾಕೃತಿಗಳಿಗೆಲ್ಲ ಅವರು ಸಂಜಯನಂತೆ ನಿರಂತರವಾಗಿ ವಿವರ ನೀಡುತ್ತಿದ್ದರು. ಅರ್ಧ ವೈರಾಗ್ಯ, ಅರ್ಧ ಅನಾಸಕ್ತಿ ಆದರೆ ಅನಿವಾರ್ಯವಾದ ಮನಸ್ಥಿತಿಯ ಈ ಧೃತರಾಷ್ಟ್ರ ಸುಮ್ಮನೆ ಹೂಂಗುಡುತ್ತಿದ್ದರು. ಅಂಧನಿಗೆ ಚಿತ್ರ ಅರ್ಥೈಸುವ ಈ ಪ್ರಯತ್ನವೇ ಸೋಜಿಗವೆನಿಸಿತ್ತು. ಮಾತಿನ ಮಂಟಪದೊಂದಿಗೆ ಭಾವೀಶ್‌ ಚಿತ್ರಲಹರಿಯು ಒಂದು ಲಯ ಸಾಧಿಸತೊಡಗಿತು. ಆಗ ಕಲೆಯತ್ತ ಅವರ ಗಮನ ಹೆಚ್ಚು ಹೆಚ್ಚು ಸೆಳೆಯತೊಡಗಿತು. ಚಿತ್ರ ವಿವರಣೆಯಿಂದಲೇ ಕಲಾಕೃತಿ ಅರ್ಥವಾಗತೊಡಗಿತು.

ಕಲೆಯು ಇನ್ನೊಬ್ಬರನ್ನು ಸ್ವತಂತ್ರವಾಗಿ ಯೋಚಿಸುವಂತೆ ಮಾಡಿದ್ದಲ್ಲಿ, ಅದು ಕಾರ್ಯ ರೂಪಕ್ಕೆ ಬರುವಂತೆ ಆದಲ್ಲಿ ಸೃಜನಶೀಲ ಕಲೆಯ ಯಶಸ್ಸು ಎಂದೇ ಹೇಳಬಹುದು. ಸದಾ ಹೊಸತನಕ್ಕೆ ತುಡಿಯುತ್ತಿದ್ದ ಭಾವೀಶ್‌ಗೆ ಪಾರ್ಥೋ ಭೌಮಿಕ್‌ ಎಂಬುವವರು ಅಂಧರಿಗಾಗಿ ಮಾಡುವ ಬ್ಲೈಂಡ್‌ ವೀವ್‌ ತರಬೇತಿ ನೀಡಿದರು. ಕ್ಯಾಮೆರಾ ಅರಿಯುತ್ತಲೇ ತಮ್ಮ ಒಳಗಣ್ಣಿಗೊಂದು ಮಸೂರ ದೊರೆತಂತಾಯಿತು. ಒಂದೂವರೆ ತಿಂಗಳ ಈ ತರಬೇತಿ ಅವರ ಬದುಕಿಗೆ ಹೊಸ ತಿರುವು ನೀಡಿದು.

‘‘ತರಬೇತಿ ಸಂದರ್ಭದಲ್ಲಿ ನಾವು ತೆಗೆದ ಯಾವುದೇ ಚಿತ್ರಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿರಲಿಲ್ಲ.  ನಮ್ಮ ಚಿತ್ರ ಫಲಿತಾಂಶವೂ ನಮಗೆ ಗೊತ್ತಾಗುತ್ತಿರಲಿಲ್ಲ. ಕಬೂತರ್‌ ಖಾನದ ಫೊಟೋ ನಾನು ತೆಗೆದಿದ್ದೆ.  ಅದನ್ನು ಸರ್ ನನಗೆ ಕೊಟ್ಟರು. ಅದು ನನಗೇನೋ ರೋಮಾಂಚನ ನೀಡಿತು. ಫೊಟೋಗ್ರಫಿಯನ್ನು ನನ್ನ ಹವ್ಯಾಸವಾಗಿ ಮುಂದುವರೆಸಬೇಕೆಂದು ನನಗೆ ಅಂದೇ ಅನಿಸಿತು. ಹೊಸ ಬದುಕು ಸಿಕ್ಕಿತು’’ ಎನ್ನುತ್ತಾರೆ ಭಾವೀಶ್ ಪಟೇಲ್ .

ನಂತರ ಪಾರ್ಥೋ ಭೋಮಿಕ್‌ ಅವರ ಬಿಯಾಂಡ್ ಸೈಟ್ ಫೌಂಡೇಶನ್ ಬ್ಲೈಂಡ್‌ ವೀವ್ ಬಗ್ಗೆ ತಿಳಿದುಕೊಂಡ ಲಕ್ಸ್‌ ಕಂಪೆನಿ, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಕತ್ರಿನಾ ಕೈಫ್‌ ಜಾಹಿರಾತು ಶೂಟ್‌ ಮಾಡಲು ಅಂಧರೊಬ್ಬರಿಗೆ ಅವಕಾಶ ನೀಡುವ ರಿಸ್ಕ್‌ ತೆಗೆದುಕೊಂಡಿತು. ಭಾವೀಶ್ ಪಟೇಲ್‌ ಅವರನ್ನು ಆರಿಸಲಾಯಿತು. ಭಾವೀಶ್‌, ಕತ್ರೀನಾ ಫೊಟೋ ಶೂಟ್‌ ಮುಗಿಸಿದ ಬಳಿಕ ಯಾರೊಬ್ಬರಿಗೂ ಅದೊಬ್ಬ ಅಂಧ ತೆಗೆದ ಚಿತ್ರ ಎಂಬ ನಂಬಿಕೆಯೇ ಬರಲಿಲ್ಲ. ಅಷ್ಟರ ಮಟ್ಟಗೆ ವೃತ್ತಪರತೆ ಆ ಚಿತ್ರದಲ್ಲಿ ಎದ್ದು ಕಾಣುತ್ತಿತ್ತು. ಕತ್ರೀನಾ ಕೈಫ್‌ ಚಿತ್ರ ನೋಡಿ, ‘ಭಾವೀಶ್‌ ನಿಮಗೆ ಕಣ್ಣಿಲ್ಲ ಎಂಬುದು ನಂಬಲಾಸಾಧ್ಯ’ ಎಂದಿದ್ದರು. ಲಕ್ಸ್ ನನ್ನ ಲಕ್‌ ಬದಲಿಸಿತು’ ಎಂದು ನಕ್ಕರು ಭಾವೀಶ್.

ಅಂಧಮಕ್ಕಳೆಂದೊಡನೆ ಹಿಂಜರಿಯಬೇಕಿಲ್ಲ. ಧೃತಿಗೆಡಬೇಕಾಗಿಲ್ಲ. ಎಲ್ಲದರ ಆಚೆಗೆ ಒಂದು ಅಗೋಚರ ಶಕ್ತಿಯಿದೆ. ನಾವದಕ್ಕೆ ದೇವರು ಎಂಬ ಹೆಸರು ಕೊಟ್ಟಿದ್ದೇವೆ.  ಭರವಸೆ ತುಂಬುವ ಮೂಲಕ ಕೈಹಿಡಿದು ಅವರನ್ನು ಮುನ್ನಡೆ ಸಬಹುದು. ಆತ್ಮವಿಶ್ವಾಸ ತುಂಬಬಹುದು. ಅವರಿಗೂ ಬದುಕಲು ಕಲಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT