ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ನಡೆ ಎಂದರೆ...

ಅಂತರ್ಯುದ್ಧ
Last Updated 15 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯನೊಬ್ಬ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಸ್ನೇಹಿತನ ಜೊತೆ ಸುತ್ತಾಡಲು ಹೊರಟ. ಬೆಂಗಳೂರು ನಿವಾಸಿ ಕಾರು ಓಡಿಸುತ್ತಿದ್ದ. ಅನಿವಾಸಿ ಭಾರತೀಯ ದಾರಿ­ಯುದ್ದಕ್ಕೂ ಭಾರತ­ವನ್ನು ಬೈಯುತ್ತಿದ್ದ ಮತ್ತು ಅಮೆರಿಕ­ವನ್ನು ಹೊಗಳು­ತ್ತಿದ್ದ. ಆದರೆ ಸ್ನೇಹಿತ ಯಾವುದೇ ಪ್ರತಿಕ್ರಿಯೆ ತೋರ­ಲಿಲ್ಲ. ದಾರಿಯಲ್ಲಿ ಕೆಂಪು ದೀಪ ಇದ್ದುದರಿಂದ ಕಾರು ನಿಲ್ಲಿಸಬೇಕಾ­ಯಿತು. ಅದರ ಬಗ್ಗೆಯೂ ಅಮೆರಿಕ ವಾಸಿ ದೂರ­ತೊಡ­ಗಿದ. ಆದರೂ ತನ್ನ ಸ್ನೇಹಿತನಿಂದ ಏನೂ ಪ್ರತಿಕ್ರಿಯೆ ಬಾರದ್ದನ್ನು  ಕಂಡು ಅವನು ಕೇಳಿದ `ನಾನು ಅಷ್ಟು ಹೊತ್ತಿನಿಂದ ಏನೇನೋ ಹೇಳುತ್ತಿ­ದ್ದೇನೆ.

ನೀನು ಸುಮ್ಮನಿದ್ದೀಯಲ್ಲ. ನಾನು ಹೇಳು­ವುದು ಕೇಳಿಸುತ್ತಿಲ್ಲವೇ?' ಸ್ನೇಹಿತ ಹೇಳಿದ `ನಾನೂ ಮಾತನಾಡುತ್ತಿದ್ದೆ. ನನಗೆ ನಿನ್ನ ಮಾತು ಕೇಳಿಸಲಿಲ್ಲ. ನಾನು ದೇವರ ಜೊತೆ ಮಾತನಾಡುತ್ತಿದ್ದೆ. ನೀನು ಯಾರ ಜೊತೆ ಮಾತನಾಡುತ್ತಿದ್ದೆ? ’

ಇವನು ಕೇಳಿದ `ಏನು ಮಾತನಾಡುತ್ತಿದ್ದೆ?' ಅದಕ್ಕೆ ಅವನು, `ನಾನು ಬೆಳಿಗ್ಗೆ ಪ್ರಾರ್ಥನೆ ಮಾಡಿರ­ಲಿಲ್ಲ. ಈಗ ಮಾಡುತ್ತಿದ್ದೇನೆ. ಪ್ರತಿದಿನ ನಾನು ಇಂತಹ ನಾಲ್ಕೈದು ಸಿಗ್ನಲ್‌ಗಳನ್ನು ಹಾದು ಹೋಗಬೇಕು. ಆಗ ಒಂದೊಂದು ಸಿಗ್ನಲ್‌ನಲ್ಲಿ ಒಂದೂವರೆ ಅಥವಾ ಎರಡು ನಿಮಿಷಗಳಂತೆ ನನಗೆ 7–- 8 ನಿಮಿಷ ದೊರೆಯುತ್ತದೆ. ಪ್ರತಿ ಸಲವೂ ಯಾರ­­ನ್ನಾದರೂ ಕಾಪಾಡುವಂತೆ ಪ್ರಾರ್ಥಿಸುತ್ತೇನೆ'.  ಹಾಗಿದ್ದರೆ `ಈಗ ಯಾರಿಗಾಗಿ ಪ್ರಾರ್ಥಿಸಿದೆ?'.  `ಕಳೆದ ತಿಂಗಳು ಬಾಂಬ್ ದಾಳಿಗೆ ಸಿಕ್ಕಿ ಸತ್ತವರ ಕುಟುಂಬದವರನ್ನು ಕಾಪಾಡುವಂತೆ ಪ್ರಾರ್ಥಿಸಿದೆ. ಇದಾದ ನಂತರ ಆ ಅಮೆರಿಕವಾಸಿ ಬೈಯುವುದನ್ನು ನಿಲ್ಲಿಸಿದ.

ಭಿನ್ನವಾಗಿ ನಡೆದುಕೊಳ್ಳುವುದು ಎಂದರೆ ಇದೇ. ಮಹಾನ್ ವ್ಯಕ್ತಿಗಳು ಹೀಗೆ ಭಿನ್ನವಾಗಿ ಮಾತನಾಡು­ತ್ತಾರೆ ಅಥವಾ ಭಿನ್ನವಾಗಿ ನಡೆದುಕೊಳ್ಳುವವರೇ ಮಹಾನ್ ವ್ಯಕ್ತಿಗಳಾಗುತ್ತಾರೆ. ಆದರೆ ಬಹುತೇಕರು ಭಿನ್ನವಾಗಿ ಯೋಚಿಸುವುದೂ ಇಲ್ಲ ಮಾಡುವುದೂ ಇಲ್ಲ. ಶೇ 5ರಷ್ಟು ಮಹಾನ್ ವ್ಯಕ್ತಿಗಳಲ್ಲಿ ನಾವೂ ಒಬ್ಬರಾಗಬೇಕು. ಆದರೆ ನಾವು ಬಹುತೇಕರು ಶೇ 95ರಷ್ಟು ಜನರಲ್ಲಿ ಒಬ್ಬರಾಗಿರಲು ಬಯಸುತ್ತೇವೆ.
***
ಪ್ರಪಂಚ ಹೇಗಿರಬೇಕೆಂದು ನಾವು ನಿರೀಕ್ಷೆ ಮಾಡುತ್ತೇವೋ ಆ ರೀತಿ ನಾವು ಇದ್ದೇವೆಯೇ,  ಆ ರೀತಿ ನಾವು ವರ್ತಿಸುತ್ತಿ­ದ್ದೇವೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಉದಾಹರಣೆಗೆ, ನಿಮ್ಮ ಕಚೇರಿಯಲ್ಲಿ ಎಲ್ಲರೂ ಸಮಯಕ್ಕೆ ಸರಿಯಾಗಿ ಬರಬೇಕು, ತಮ್ಮ ಗುರಿ ಸಾಧಿಸಬೇಕೆಂದು ನೀವು ಬಯಸುವಿರಾದರೆ, ಮೊದಲು ನೀವು ಅದರಂತೆ ನಡೆಯುತ್ತಿದ್ದೀರಾ? ನಿಮ್ಮ ಮಗ ಓದಿನಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂದು ಬಯಸುತ್ತೀರಾದರೆ, ನಿಮ್ಮ ವೃತ್ತಿಯಲ್ಲಿ ನೀವು ಪ್ರಥಮ ಸ್ಥಾನ ಗಳಿಸಿದ್ದೀರಾ? ಇಲ್ಲ ಎಂದಾದರೆ, ಅವರೆಲ್ಲ ಹಾಗಿರಬೇಕೆಂದು ಬಯಸಲು ನಿಮಗೆ ಯಾವ ಅರ್ಹತೆಯೂ ಇರುವುದಿಲ್ಲ.

ಯಾವುದೋ ಸಂಸ್ಥೆಯಲ್ಲಿ ವೃತ್ತಿನಿರತರಾಗಿದ್ದೀರಿ. ಆದರೆ ಅಲ್ಲಿಯ ಮುಖ್ಯಾಧಿಕಾರಿಯ ಕಾರ್ಯ ವಿಧಾನ ನಿಮಗೆ ಸ್ವಲ್ಪವೂ ಹಿಡಿಸುವುದಿಲ್ಲ. ಸದಾ ಕಾಲ ಅವರನ್ನು ದೂರುತ್ತಲೇ ಇರುತ್ತೀರಿ. ಅಲ್ಲೇ ಕಾರ್ಯ ಮುಂದುವರಿಸಲು ನೀವು ನಿರ್ಧರಿಸಿರುವಿ­ರಾದರೆ, ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರಬೇಕು, ಇಲ್ಲವಾದರೆ ಅಲ್ಲಿಂದ ಹೊರಬಂದು ಸ್ವಂತ ಉದ್ಯೋಗ ಪ್ರಾರಂಭಿಸಿ, ನಿಮಗೆ ಇಷ್ಟವಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು.

ಮೊದಲು ನಮ್ಮ ನಿರೀಕ್ಷೆಯಂತೆ ನಾವು ನಡೆದು ಸಾಧಿಸಬೇಕು, ಹೆಚ್ಚಿನ ಫಲಿತಾಂಶಗಳನ್ನು ಪಡೆಯಬೇಕು. ಆಗ ಇತರರ ಬಗ್ಗೆ ಮಾತನಾಡುವ ಅರ್ಹತೆ ನಮಗೆ ಬರುತ್ತದೆ.
***
ಒಂದು ಹಳ್ಳಿಯ ಪಕ್ಕದ ಕಾಡಿನಲ್ಲಿ ಒಂದು ಸರ್ಪ ವಾಸವಾಗಿತ್ತು. ಆ ದಾರಿಯಲ್ಲಿ ಓಡಾಡುವ ಜನರನ್ನು ಅದು ಕಚ್ಚುತ್ತಿತ್ತು. ಹಳ್ಳಿಯವರಿಗೆ ಇದೊಂದು ದೊಡ್ಡ ಸಮಸ್ಯೆಯಾಯಿತು. ಒಮ್ಮೆ ಆ ಹಳ್ಳಿಗೆ ಒಬ್ಬ ಸಂತರು ಬಂದು ಜನರಿಗೆ ಬೋಧನೆ ಮಾಡುತ್ತಿದ್ದರು. ಆಗ ಜನ ಹಾವಿನಿಂದ ತಮಗಾಗುತ್ತಿದ್ದ ತೊಂದರೆಯನ್ನು ವಿವರಿಸಿದರು. ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ಕೊಟ್ಟ ಸಂತರು, ಹುತ್ತದ ಸಮೀಪ ಹೋಗಿ, `ಓ! ಸರ್ಪವೇ ಇನ್ನು ಮೇಲೆ ಹಳ್ಳಿಯವರಿಗೆ ತೊಂದರೆ ಕೊಟ್ಟರೆ ನೀನು ಸುಟ್ಟು ಭಸ್ಮವಾಗುತ್ತೀ' ಎಂದು ಶಾಪ ಕೊಟ್ಟರು. ಅಂದಿನಿಂದ ಸರ್ಪ ಶಾಂತವಾಯಿತು. ಸಂತರು ಬೇರೊಂದು ಹಳ್ಳಿಗೆ ತೆರಳಿದರು.

ಸರ್ಪದ ಶಾಂತಿಯನ್ನು ಕಂಡು ಹಳ್ಳಿಗರು ಅದಕ್ಕೆ ತೊಂದರೆ ಕೊಡತೊಡಗಿದರು. ಮಕ್ಕಳು ಕಲ್ಲು ಎಸೆದರೆ, ದೊಡ್ಡವರು ಅದರ ಬಾಲ ಹಿಡಿದೆತ್ತಿ ತಿರುಗಿಸಿ ಬಿಸಾಡುತ್ತಿದ್ದರು. ಆಗ ಸರ್ಪದ ಸ್ಥಿತಿ ಬಹಳ ಚಿಂತಾಜನಕವಾಯಿತು. ಕೆಲ ದಿನಗಳ ನಂತರ ಸಂತರು ಆ ಹಳ್ಳಿಗೆ ಹಿಂತಿರುಗಿದರು. ಸರ್ಪ ಅವರನ್ನು ಕಂಡು ತನ್ನ ಸ್ಥಿತಿಯನ್ನು ಹೇಳಿಕೊಂಡಿತು. ಅದಕ್ಕೆ ಅವರು `ನಾನು ನಿನಗೆ ಹೇಳಿದ್ದು ಜನರನ್ನು ಕಚ್ಚಬೇಡ, ಅವರ ಮೇಲೆ ಕೋಪ ತೋರಿಸಬೇಡ ಎಂದು. ಆದರೆ ಕೋಪ ಬಂದಂತೆ ನೀನು ನಟಿಸಬಹುದಾಗಿತ್ತು! ಜನ ಹತ್ತಿರ ಬಂದಾಗ ಹೆಡೆ ಎತ್ತಿ ಭುಸ್ ಎಂದಿದ್ದರೂ ಸಾಕಿತ್ತು ಅವರು ನಿನಗೆ ತೊಂದರೆ ಕೊಡುತ್ತಿರಲಿಲ್ಲ' ಎಂದರು.

ಅಗತ್ಯ ಇದ್ದಾಗಲೂ ಕೋಪ ಬಂದಂತೆ ನಟಿಸಲು ಬರದಿದ್ದರೆ ಸಂತೋಷ ಇರುವುದಿಲ್ಲ. ಆಗ ನೆಮ್ಮದಿ ಹಾಳಾಗುತ್ತದೆ. ಕಡೆಗೆ ಶೀತಲ ಯುದ್ಧ ಆರಂಭವಾಗು­ತ್ತದೆ. ಇದರಿಂದ ಕೋಪ, ಕೋಪದಿಂದ ನೋವು ಉಂಟಾಗುತ್ತದೆ. 
ಅದೇ ರೀತಿ ನಮ್ಮ ಜೀವನದಲ್ಲೂ ನಡೆಯುತ್ತಿದೆ. ಸದಾ ಕಾಲ ಇತರರ ಮೇಲಿನ ದ್ವೇಷವನ್ನು ಹೊತ್ತುಕೊಂಡೇ ಸಾಗುತ್ತಿರುತ್ತೇವೆ. ನೋವು ಮಾಡಿದವರನ್ನೂ ಅಂತರಾಳದಿಂದ ಪ್ರೀತಿಸದಿದ್ದರೆ ಜೀವನದಲ್ಲಿ ಪ್ರಗತಿ ಸಾಧ್ಯವಿಲ್ಲ. ನಮ್ಮ ಬಗ್ಗೆ ಚಾಡಿ ಹೇಳಿದವರನ್ನು, ನಮ್ಮ ವಿಷಯದಲ್ಲಿ ತಪ್ಪು ಮಾಡಿದವರನ್ನು ಸಹ  ಕ್ಷಮಿಸಬೇಕು. ಏಕೆಂದರೆ ಬೆಳಕು- ಮತ್ತು ಕತ್ತಲೆ ಹೇಗೆ ಒಂದೇ ಕಡೆ ಇರುವುದಿಲ್ಲವೋ ಹಾಗೇ ಪ್ರೀತಿ ಮತ್ತು ದ್ವೇಷ ಸಹ ಒಟ್ಟಿಗೇ ಇರಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT