ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟ: ಭವಿಷ್ಯದ ಆಹಾರ!

Last Updated 19 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಅದೊಂದು ಚಲನಚಿತ್ರದ ಸನ್ನಿವೇಶ. ಸೊಕ್ಕಿನ, ಸಿರಿವಂತ ಧಡೂತಿ ಹೆಂಗಸೊಬ್ಬಳು ಅನ್ನದ ತಟ್ಟೆಯನ್ನು ಒದ್ದು ಚೆಲ್ಲಾಡುತ್ತಾಳೆ... ಅದನ್ನು ತುಳಿದು ಅಟ್ಟಹಾಸಗೈಯುತ್ತಾಳೆ. ನೆರೆಯವರ ತಿರಸ್ಕಾರಕ್ಕೆ ಈಡಾಗುತ್ತಾಳೆ. ಕೊನೆಗೆ ತಾನು ಮಾಡಿದ್ದು ತಪ್ಪು ಎಂಬ ಪಾಪಪ್ರಜ್ಞೆಯಿಂದ ಬಳಲುತ್ತಾಳೆ. ಮುಂದೆ ಅವಳು ಊಟಮಾಡುವುದೇ ಕಷ್ಟವಾಗುತ್ತದೆ. ಅವಳ ತಟ್ಟೆಯಲ್ಲಿರುವ ಅನ್ನದ ಅಗಳುಗಳು ಹುಳದಂತೆ ಕಾಣತೊಡಗುತ್ತವೆ. ಅವಳ ಜೀವನವೇ ಅಸಹ್ಯವಾಗುತ್ತದೆ. ಪಾಪ ಅವಳಿಗೆ ಗೊತ್ತಿಲ್ಲ, ಹುಳಗಳನ್ನು ತಿಂದೂ ಜೀವಿಸಬಹುದು ಎಂದು. ಅಷ್ಟೇ ಅಲ್ಲ ಕೆಲವು ಕೀಟಗಳಲ್ಲಿ ಜೀವಪೋಷಕ ಪ್ರೋಟೀನು ಹೇರಳವಾಗಿರುತ್ತದೆ. ಪ್ರೋಟೀನ್ ಎಂದರೆ ಅಮಿನೋ ಆಮ್ಲಯುಕ್ತ ಸಾರಜನಕ. ಅದು ನಮ್ಮ ಅಂಗಾಂಶಗಳ ಬೆಳವಣಿಗೆಗೆ ಹಾಗೂ ನಶಿಸಿಹೋದ ಅಂಗಗಳ ದುರಸ್ತಿಗೆ ಅತ್ಯವಶ್ಯ. ಆ ಅವಶ್ಯಕತೆಯನ್ನು, ನಿತ್ಯ ನಾವು ಸೇವಿಸುವ ಮಾಂಸ, ಮೊಟ್ಟೆ, ಹಾಲು ಮುಂತಾದವುಗಳಿಂದ ಪಡೆಯುತ್ತೇವೆ. ಕೀಟಗಳಲ್ಲಿ ಆ ಪ್ರಮಾಣ ಸ್ವಲ್ಪ ಹೆಚ್ಚೇ ಇರುತ್ತದೆ ಎಂಬುದು ಗಮನಾರ್ಹ.

ನಮ್ಮ ಈ ಭೂಮಿಯಲ್ಲಿರುವ ಜೀವಿಗಳಲ್ಲಿ ಕೀಟಗಳ ಪ್ರಮಾಣವೇ ಅತ್ಯಧಿಕ. ಸಂಖ್ಯಾ ಪ್ರಮಾಣವನ್ನು ಗಮನಿಸಿ ಹೇಳುವುದಾದರೆ ಈ ಭೂಮಿ ಕೀಟಗಳ ಭೂಮಿ! ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿದೆಯಾದರೂ ಕೀಟಗಳ ಸಂಖ್ಯೆಯ ಮುಂದೆ ಅದು ತೀರಾ ನಗಣ್ಯ. ಮಾನವ ಹಾಗು ಕೀಟಗಳ ಪ್ರಮಾಣ ನೋಡಿದರೆ ನಿಜಕ್ಕೂ ನಮಗೆ ಆಶ್ಚರ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಪ್ರತಿಯಾಗಿ 20 ಕೋಟಿ ಕೀಟಗಳಿವೆಯಂತೆ. ಅಂದರೆ ಕೀಟಗಳ ಸಂಖ್ಯೆ ಮನುಷ್ಯರ ಸಂಖ್ಯೆಗಿಂತ 20 ಕೋಟಿ ಪಟ್ಟು ಹೆಚ್ಚು. ಅವುಗಳಲ್ಲಿ 1900 ಪ್ರಕಾರದ ಕೀಟಗಳನ್ನು ಮನುಷ್ಯ ಆಹಾರವಾಗಿ ಸೇವಿಸಬಹುದು. ಇದೇನು ಹೊಸ ಸಂಶೋಧನೆಯಲ್ಲ! ಆಗಲೇ ಜಗತ್ತಿನ ಸುಮಾರು 200 ಕೋಟಿ ಜನ ಕೀಟಗಳನ್ನು ಆಹಾರವಾಗಿ ಸೇವಿಸುತ್ತಿದ್ದಾರೆ. ಕಾಂಬೋಡಿಯಾದ ಜನ ದೊಡ್ಡ ಗಾತ್ರದ ಜೇಡರ ಹುಳುವನ್ನು ತಿನ್ನುತ್ತಾರೆ. ವಿಷಯುಕ್ತ ಜೇಡವೂ ಅವರಿಗೆ ಆಹಾರವಾಗುತ್ತದೆ. ದಕ್ಷಿಣ ಆಫ್ರಿಕಾದ ಮೊಪೆನ್ ಎಂಬ ಕೀಟದ ವಾರ್ಷಿಕ ವ್ಯವಹಾರ 8.5 ಕೋಟಿ ಡಾಲರ್‌ನಷ್ಟಿದೆಯಂತೆ.

ನಾವು ಸಿಹಿಯಾದ ಜೇನುತುಪ್ಪವನ್ನು ಬಯಸುತ್ತೇವೆ. ನಮ್ಮನ್ನು ಕಚ್ಚಿ ನೋಯಿಸುವ ಜೇನು ಹುಳುಗಳನ್ನು ದ್ವೇಷಿಸುತ್ತೇವೆ. ಅವುಗಳನ್ನು ತಿಂದು ಖುಷಿ ಪಡುವ ಜನ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಮೆಕ್ಸಿಕೊ ಹಾಗೂ ಆಸ್ಟ್ರೇಲಿಯಾದ ಕೆಲವು ಪ್ರದೇಶಗಳಲ್ಲಿ ಇದ್ದಾರೆ. ಕಚ್ಚುವ ಬಲಿತ ಜೇನುಗಳನ್ನು ಅವರು ಬಯಸುವುದಿಲ್ಲ. ಜೇನು ಹುಳಗಳ ಮೊಟ್ಟೆ, ಲಾರ್ವಾ ಹಾಗು ಪ್ಯುಪಾಗಳನ್ನು ಸೇವಿಸುತ್ತಾರೆ. ಜೇನು ಪೂರ್ಣ ಪ್ರಮಾಣದ ಕೀಟವಾಗುವ ಮೊದಲಿನ ಅವಸ್ಥೆಗಳಲ್ಲಿಯೇ ಅವು ಜನರ ಹೊಟ್ಟೆ ಸೇರುತ್ತವೆ.

ಬೈಬಲ್‍ನಲ್ಲೂ ಕೀಟಾಹಾರದ ಪ್ರಸ್ತಾಪವಿದೆ. ದಕ್ಷಿಣ ಅಮೆರಿಕ, ರೋಮ್, ಗ್ರೀಸ್ ದೇಶಗಳ ಜೊತೆಗೆ ಭಾರತದಲ್ಲೂ ಕೀಟಗಳನ್ನು ಸೇವಿಸುವ ಜನರಿದ್ದಾರೆ. ತಮಿಳುನಾಡು ಹಾಗೂ ಛತ್ತೀಸಗಡದ ಕೆಲವು ಪರಿಶಿಷ್ಟ ಪಂಗಡಗಳ ಜನ ಕೆಂಪು ಇರುವೆಗಳನ್ನು ಚಟ್ನಿ ಮಾಡಿ ತಿನ್ನುತ್ತಾರೆ. ಭಾರತದ ಈಶಾನ್ಯ ಭಾಗದ ರಾಜ್ಯಗಳಲ್ಲಿ; ಕಂಬಳಿ ಹುಳು, ಚಿಟ್ಟೆ, ಗೆದ್ದಲು ಮುಂತಾದವು ಆ ಜನರ ಆಹಾರದ ಮುಖ್ಯ ಭಾಗ.

ಅಂಕೆ ಮೀರಿ ಬೆಳೆಯುತ್ತಿರುವ ಜನಸಂಖ್ಯೆಯ ಹಸಿವು ನೀಗಿಸಲು, ಕೀಟಾಹಾರವನ್ನು ಪ್ರೋತ್ಸಾಹಿಸುವುದು ಅತ್ಯವಶ್ಯಕ ಎಂದು ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ವಿಭಾಗ ಹೇಳಿದೆ. 2050ರ ವೇಳೆಗೆ ಜಗತ್ತಿನ ಜನಸಂಖ್ಯೆ 900 ಕೋಟಿ ತಲುಪಲಿದೆ. ಅವರೆಲ್ಲರ ದಿನನಿತ್ಯದ ಆಹಾರ ಹಾಗೂ ಜೈವಿಕ ಶಕ್ತಿಯನ್ನು ಪೂರೈಸಲು ಕೀಟಾಹಾರವನ್ನು ಅಭಿವೃದ್ಧಿಪಡಿಸಲೇಬೇಕಿದೆ. ಅದು ಪರಿಸರಸ್ನೇಹಿ ಆಹಾರವೂ ಆಗಿರುತ್ತದೆ ಎಂಬುದು ಆಹಾರ ಹಾಗೂ ಕೃಷಿ ವಿಭಾಗದ ಅಭಿಪ್ರಾಯ.

ನೀರಿನ ಕೊರತೆಯು ಈಗ ಎಲ್ಲೆಡೆ ಎದ್ದು ಕಾಣುತ್ತಿದೆ. ಮುಂದೆ ಯುದ್ಧಗಳೇನಾದರೂ ಆದರೆ ಅವು ಭೂಮಿಗಾಗಿ ಆಗುವುದಿಲ್ಲ, ನೀರಿಗಾಗಿ ನಡೆಯತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ. ಕೀಟಾಹಾರ ಅಭಿವೃದ್ಧಿಪಡಿಸುವುದರಿಂದ ನೀರಿನ ಕೊರತೆಗೂ ಪರಿಹಾರ ಕಂಡುಕೊಳ್ಳಬಹುದಂತೆ. ಒಂದು ಕಿಲೋ ದನದ ಮಾಂಸವನ್ನು ಉತ್ಪಾದಿಸಲು 15 ಸಾವಿರ ಲೀಟರ್ ನೀರು ಬೇಕಾಗುತ್ತದೆ. ಅದೇ ಒಂದು ಕಿಲೋ ಮಿಡತೆಯ ಆಹಾರ ಉತ್ಪಾದಿಸಲು 8 ಲೀಟರ್ ನೀರು ಸಾಕು. 4 ಜನರ ಒಂದು ಕುಟುಂಬ, ವಾರಕ್ಕೆ ಒಂದು ಬಾರಿ ಕೀಟಾಹಾರ ಸೇವಿಸಿದರೆ; ಒಂದು ವರ್ಷಕ್ಕೆ 6 ಲಕ್ಷದ 50 ಸಾವಿರ ಲೀಟರ್ ನೀರನ್ನು ಉಳಿಸಿದಂತಾಗುತ್ತದೆ. ಅದೇನೂ ಸಣ್ಣ ಪ್ರಮಾಣದ ಉಳಿತಾಯವಲ್ಲ. ಅದು ಒಂದು ಸಾಮನ್ಯ ಗಾತ್ರದ ಸರೋವರದ ನೀರಿಗ ಸಮ.

ಮಾಂಸಕ್ಕಿಂತ ಕೀಟಾಹಾರ ಹೆಚ್ಚು ಸತ್ವಯುತವೂ ಕೂಡ. ಕೀಟಗಳಲ್ಲಿ ಪ್ರೋಟೀನ್ ಅಂಶ ಇತರ ಮಾಂಸಾಹಾರಕ್ಕಿಂತ ಹೆಚ್ಚಿರುತ್ತದೆ. ಅನಾರೋಗ್ಯಕ್ಕೆ ಕಾರಣವಾಗುವ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಕೀಟಾಹಾರದಲ್ಲಿ ಒಮೆಗಾ3 ಹಾಗೂ ನಾರಿನ ಅಂಶ ಹೆಚ್ಚಿದ್ದು ಅವು ಆರೋಗ್ಯಾಭಿವೃದ್ಧಿಗೆ ತುಂಬಾ ಸಹಾಯಕ.

ಎಲ್ಲಾ ಆಯ್ತು, ಕೀಟಾಹಾರ ರುಚಿಕರವಾಗಿರುತ್ತದೆಯೇ ಎಂದು ಪ್ರಶ್ನಿಸಬಹುದು. ಅದಕ್ಕೆ ಕೀಟಾಹಾರ ಪ್ರೇರಕರು ಹೇಳುವ ಉತ್ತರ: ಅದು ಅಡುಗೆ ಮಾಡುವವರ ನಿಪುಣತೆಯನ್ನು ಅವಲಂಬಿಸಿದೆ ಎಂಬುದು. ಅಕ್ಕಿ, ಗೋಧಿ ಮುಂತಾದ ಧಾನ್ಯಗಳಿಂದ ಏನೆಲ್ಲ ಮಾಡಬಹುದೋ ಅವನ್ನೆಲ್ಲ ಕೀಟಾಹಾರದಿಂದಲೂ ತಯಾರಿಸಬಹುದಂತೆ.

ಕೀಟ ಕೃಷಿ ಆಗಲೇ ಪ್ರವರ್ಧಮಾನಕ್ಕೆ ಬರುತ್ತಿದೆ. ಥೈಲ್ಯಾಂಡ್ ದೇಶದಲ್ಲಿ ಈಗ ಅದು ಕೋಟ್ಯಂತರ ಡಾಲರ್ ಗಳಿಸುವ ಉದ್ಯಮವಾಗಿದೆ. ಅಲ್ಲಿನ ಸುಮಾರು 20 ಸಾವಿರ ರೈತರು ತಾವು ಉತ್ಪಾದಿಸಿದ ಕೀಟಗಳನ್ನು ಯುರೋಪ್, ಅಮೆರಿಕ ದೇಶಗಳಿಗೆ ರಪ್ತು ಮಾಡುತ್ತಿದ್ದಾರೆ.

ಕೀಟಗಳ ಸಂಖ್ಯೆ ತುಂಬ ದೊಡ್ಡದಿರಬಹುದು. ಹಾಗೆಂದು ಅದೇನು ಅಕ್ಷಯ ಭಂಡಾರವಲ್ಲ. ಕೀಟಗಳ ಕೃಷಿ ಹಾಗು ಬಳಕೆ ವೈಜ್ಞಾನಿಕವಾಗಿ ನಡೆಯಬೇಕು. ಇಲ್ಲವಾದರೆ ಅಲ್ಲೂ ಕೊರತೆ ಉಂಟಾಗಬಹುದು. ಅತಿ ಬಳಕೆಯಾದ ಕೆಲವು ಕೀಟ ಪ್ರಕಾರಗಳು ಶಾಶ್ವತವಾಗಿ ನಶಿಸಿಹೋಗುವ ಸಾಧ್ಯತೆಯೂ ಉಂಟು.

ಅಸ್ಸಾಮಿನಲ್ಲಿರುವ ಕೆಲವು ಕೀಟಗಳ ಸಂಖ್ಯೆ ಕುಸಿಯುತ್ತಿದೆ ಎಂಬ ವರದಿ ಬರುತ್ತಿದೆ. ಅಲ್ಲಿನ ಕೆಂಪು ಇರುವೆಯ ಮೊಟ್ಟೆಗಳು, ವರ್ಷದ 10-15 ದಿನಗಳ ಮಟ್ಟಿಗೆ ಮಾತ್ರ ದೊರೆಯುತ್ತಿವೆಯಂತೆ. ಹೀಗಾಗಿ ಅವುಗಳ ಬೆಲೆಯೂ ಗಗನಮುಖಿಯಾಗಿದೆ. ಒಂದು ಕಿಲೋ ಮೊಟ್ಟೆಗಳಿಗೆ ಒಂದು ಸಾವಿರ ರೂಪಾಯಿ ತೆರಬೇಕಾಗುತ್ತದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಮುಂದಿನ ಐದು ವರ್ಷಗಳಲ್ಲಿ, ಅಲ್ಲಿನ ಕೆಂಪು ಇರುವೆ ಹಾಗು ಅವುಗಳ ಮೊಟ್ಟೆಗಳು ನಶಿಸಿ ಹೋಗುತ್ತವೆ ಎಂಬ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT