ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಲ ಖಾಲಿ ಪುಟದೊಳಗೆ...

ಒಡಲಾಳ
Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಜಾನೆಯೇ ಮಂಕಾದ ಮನ, ಹುಸಿ ನಗೆಯ ಮುಖವಾಡ ಧರಿಸಿದೆ. ಸೂರ್ಯನ ಕಿರಣಗಳ ಇಣುಕುವಿಕೆ ಮನದಲ್ಲಿ ಬತ್ತಿದ ಜೀವ ಸೆಲೆಗೆ ನೀರೆರೆಯುತ್ತಿದೆ. ಮನಸ್ಸು ಹಸಿ ಬಿಸಿಲಿನೊಂದಿಗೆ ಬೆಚ್ಚಗಿನ ಭಾವವ ಹೊದ್ದು ನಗುತ್ತಿದೆ. ಮೊಗ್ಗಾಗಿರುವ ಭಾವದ ಕೂಸು ಬಿಸಿ ಉಸಿರಿನೊಂದಿಗೆ ನಲಿಯುತ ಅರಳುತ್ತಿದೆ. ಚುರುಗುಡುತ್ತಿರುವ ಬಿಸಿಲು ಹೊಸ ಕನಸನೆಣೆಯಲು ಭರವಸೆಯ ಕಿರಣಗಳನ್ನು ಸೂಸುತ್ತಿದೆ. ಎಲ್ಲವನ್ನೂ ತೊರೆದು ಮೌನಕ್ಕೆ ಶರಣಾಗಿದ್ದೇನೆ. ಕಣ್ಮುಚ್ಚಿದ ನನ್ನಲ್ಲಿ ಖಾಲಿ ಕೋಣೆಯ ನಿಶ್ಯಬ್ದತೆಯೊಂದಿಗೆ ಹಲವು ಚಿತ್ರಣಗಳ ಹರಿಹಾಯುವಿಕೆ.

ಮನದ ಪಟಲದ ಒಳಗೆ ಚಿತ್ರವಿಚಿತ್ರ ಸದ್ದುಗದ್ದಲಗಳ ಸಂತೆ. ನೀರವ ಮೌನ ತುಂಬಿದ ಒಡಲಿನಲಿ ಇಣುಕುತ್ತಿರುವ ನನ್ನ ಕನಸಿನ ಕಣ್ಣು, ಅನುಮಾನದ ಗೋಡೆಯ ಒಡೆದು ನಿನ್ನೊಂದಿಗೆ ನಾನಿರುವೆನೆಂಬ ಸತ್ಯವ ತೆರೆದಿಡುತ್ತಿದೆ. ಖಾಲಿ ಪುಟದೊಳಗೆ ನಿಂತಿರುವ ನಾನು, ನನ್ನ ಮನ ಬಿಚ್ಚಿಡುತ್ತಿರುವ ದೃಶ್ಯವನ್ನೇ ಬೆರಗು ಕಣ್ಣಿನಿಂದ ನೋಡುತ್ತಿದ್ದೇನೆ. ಕನಸಿನ ತಿಳಿ ಬಣ್ಣದ ಹಾಲ್ನೊರೆಯಲಿ ಕಡುಕಪ್ಪಿನ ಬಟ್ಟಲ ಕನಸು ನನ್ನ ಮುಂದೆ ನಿಂತು ನಸುನಗುತ್ತಿದೆ. ಕನಸು ಸುತ್ತಲೂ ಕಣ್ಣಾಡಿಸುತ್ತಿದೆ ನನ್ನನ್ನು ಹೊತ್ತೊಯ್ಯಲು ತನ್ನ ಸಾಮ್ರಾಜ್ಯದ ಕೋಟೆಯೊಳಗೆ.

ಇಣುಕಿದಷ್ಟೂ ಆಳವಾಗಿರುವ ಕನಸಿನ ಸಾಮ್ರಾಜ್ಯದ ಪೂರ್ಣ ರೂಪ ಕಾಣಲು ಮತ್ತಷ್ಟು ಇಣುಕಿದೆ. ಮುದ್ದು ಕನಸು ನಾಚಿ ನೀರಾಗಿ ಮುಸಿ ಮುಸಿ ನಗುತ್ತಿದೆ. ಬಣ್ಣದ ಓಕುಳಿಯ ಮೈಮೇಲೆ ಚೆಲ್ಲಿರುವಂತೆ ಹೊಳೆಯುತ್ತಿರುವ ಕನಸಿನ ಮನೆಯ ಹೊಸ್ತಿಲ ದಾಟಲು ಮನ ಅಂಜುತ್ತಿದೆ. ಏನೂ ತೋಚದೆ ಸುಮ್ಮನೆ ನಿಂತಿದ್ದೇನೆ ಅವುಗಳ ಮುಂದೆ, ಅಂಜಿಕೆಯನ್ನು ಅಂಗೈಯಲ್ಲಿಡಿದು ಒಡಲ ಉಸಿರ ಬಿಗಿ ಹಿಡಿದು ದಾರಿ ಕಾಣದೆ.

ಕನಸಿನ ಮನೆಯ ಹೊಸ್ತಿಲ ಬಳಿ ಸೇರಿನ ತುಂಬ ತುಂಬಿರುವ ಅಕ್ಕಿ, ಬೆಲ್ಲದ ವಾಸನೆ ಮೂಗಿಗೆ ಬಡಿಯುತ್ತಿದೆ. ಅದನ್ನು ಒದ್ದು ಒಳ ಹೋಗಲು ಮನ ಅಳುಕುತ್ತಿದೆ. ಧೈರ್ಯ ಮಾಡಿ ಒಳ ನುಗ್ಗಿದೆ. ಕನಸು ನಾಚಿದ ಮನದ ಮುಖವನ್ನೇ ದಿಟ್ಟಿಸುತ್ತಾ ತುಟಿಯಂಚಿನಲಿ ನಗುತ್ತಿದೆ, ನಾಚಿಕೆ ಭರಿತ ಅಂಜಿಕೆಯ ಕಂಡು. ಕೈ ಹಿಡಿದುಕೊಂಡು ನನ್ನ ಕನಸು ಮನದೊಂದಿಗೆ ರಾಜಿಯಾಗುತ್ತಾ ಮುನ್ನುಗ್ಗುತ್ತಿದೆ, ನಾನು ಕಾಣದ ಕನಸಿನ ಲೋಕಕ್ಕೆ ಕರೆದೊಯ್ಯಲು. ಕನಸಿನ ಲೋಕದ ಪರದೆಯ ಸರಿಸಿ ತೋರಲು ಉತ್ಸುಕವಾಗಿದೆ. ಮೌನ ತುಂಬಿದ ಕೋಣೆಯೊಳಗೆ ನಾವು ಮೂವರೇ ಜೊತೆಯಾಗಿ ಹರಟುತ್ತಿದ್ದೇವೆ.

ಬಾಹ್ಯ ಲೋಕದ ಜಂಜಾಟದ ಒಡನಾಟವಿಲ್ಲ. ಅದರ ಅವಶ್ಯಕತೆಯೂ ನಮಗೆ ಬೇಕಿಲ್ಲ. ಬೇಕಿರುವುದು ಮಾತಿನೊಂದಿಗೆ ಮೌನದ ರಾಜಿ. ಮೌನ ಮಾತಾದಾಗ ಮನಸ್ಸು ಮೂಕತೆಯ ಕೂಪದೊಳಗೆ ಕುಸಿಯುತ್ತ ತನ್ನ ಕಸುವೆಲ್ಲವನ್ನೂ ಹೊರಕ್ಕೆಸೆಯಲು ಧೈರ್ಯ ಮಾಡುತ್ತದೆ. ಕಂಡೂ ಕಾಣದ ಹಾಗಿರುವುದರ ಮೂಲವಾಗಿರುವ ಮೌನ ತನ್ನೆದುರಿರುವ ಕನ್ನಡಿಯೊಳಗೆ ಇಣುಕುವ ಪ್ರತಿಬಿಂಬವ ಎದುರಿಸಲಾರದೆ ತಲೆ ತಗ್ಗಿಸಿದೆ, ನನ್ನ ಮನದ ಬೇಗುದಿಯ ಅರಿತಂತೆ.

ಭಾವ ಹನಿಯೊಂದಿಗೆ ಮೌನ ಮಾತಿಗಿಳಿದಿದೆ. ಕನಸು ಮತ್ತು ಮನಸು ನನ್ನ ಆಲಂಗಿಸಿವೆ. ನಮ್ಮ ದೂರ ದೂಡದಿರೆಂದು. ಸುತ್ತಲೂ ಮೂಕರೋಧನೆ, ನೋವಿನ ಸೆಲೆಯೊಳಗೆ ನಮ್ಮ ಸಿಲುಕಿಸಿದೆ. ಮೂಕಳಾಗಿದ್ದೇನೆ ನಾನು ಕನಸಿನ, ನನ್ನ ಮನಸ್ಸಿನ ನಿಸ್ವಾರ್ಥ ಪ್ರೀತಿ ಎದುರು. ಆಸ್ವಾದಿಸುತ್ತಿದ್ದೇನೆ ಅವುಗಳ ಪ್ರೀತಿಯ ಸಿಂಚನವನ್ನು. ಎಲ್ಲೆಡೆ ಏಕಾಂತ. ನನಗೆ ತಿಳಿಯುತ್ತಿರುವುದು, ಕಾಣುತ್ತಿರುವುದು ಒಂದೇ. ಒಡಲ ಖಾಲಿ ಪುಟದೊಳಗೆ ನಮ್ಮ ಮಿಲನ. ಬೇಡವೆಂದರೂ ಬದುಕಿನ ಪಯಣದಲ್ಲಿ ಆಗಿ ಹೋದ ಎಷ್ಟೋ ಘಟನೆಗಳ ನೆನಪುಗಳು ಕ್ಷಣಕಾಲ ಹಾಗೆ ಕಣ್ಣೆದುರು ಹಾದು ಹೋಗುತ್ತಿವೆ. ಸಿಹಿ ನೆನಪುಗಳು ಬಂದಾಗ ಮನ ಹರ್ಷದಿ ಕುಣಿಯುತ್ತಿದೆ, ಕಹಿ ಘಟನೆಗಳ ಪುಟ ತಿರುವಿದಾಗ ಕಣ್ಣ ಹನಿಯೊಂದಿಗೆ ಮಂಕಾಗಿದೆ. ಕಹಿ ಚಿತ್ರಣ ಮೂಡಿದೊಡನೆ ಮೂಕವಾಗಿ ಬಿಕ್ಕುತ್ತಾ ಕುಳಿತ ನನ್ನಲ್ಲಿ, ಹೊಸ ಚಿಲುಮೆ ಹೊಮ್ಮಿಸಲು ಕನಸು ಮತ್ತು ಮನಸ್ಸು ಜೊತೆಯಾಗಿ ಕೈ ಹಿಡಿದು ನಿಂತಿವೆ. ಅವುಗಳ ಹಿಡಿತದೊಂದಿಗೆ ಮನದ ಭಾರ ಇಳಿಯುತ್ತಿದೆ.

ಮನದ ಮೂಲೆಯಲ್ಲಿರುವ ಬೇಡದ ನೆನಪುಗಳ ಅಳಿಸಿ ಕನಸು ಹೊಂಗನಸ ಹೆಣೆಯಲು ಅಣಿಯಾಗುತ್ತಿದೆ. ಮೌನ ಮತ್ತೂ ಮೌನವಾಗಿ ಎಲ್ಲರೆದುರು ಬಾಹುಬಂಧನದಲ್ಲಿ ಬಂಧಿಸಿದೆ. ಕನಸು ಮಾತ್ರ ತನ್ನ ಪಾಡಿಗೆ ತಾನು ಸರಿದಾಡುತ್ತಿದೆ, ಹೊಸ ಪುಟಗಳಲ್ಲಿ ಅಳಿಸಲಾಗದ ಸಿಹಿ ಕನಸುಗಳ ಚುಕ್ಕಿಯೊಂದಿಗೆ. ನನ್ನಲ್ಲಿ ನಂಬಿಕೆ ಮೂಲೆಗುಂಪಾಗಿದೆ. ಕನಸಿಗೆ ಮತ್ತು ಮನಸ್ಸಿಗೆ ಭರವಸೆ ಕಣ್ಣೆದುರಿಗಿದೆ. ನನ್ನ ತಲೆ ನೇವರಿಸುತ್ತಿದೆ ಕನಸು, ನಾನಿದ್ದೇನೆ ಚಿಂತಿಸಬೇಡವೆಂಬ ಮಮಕಾರದಲಿ. ಅದರ ಸಾಂತ್ವನದ ತೆಕ್ಕೆಯೊಳಗೆ ಮಗುವಾಗಿದ್ದೇನೆ. ಮನಸು ತನ್ನ ಮಡಿಲ ಒಡ್ಡಿದೆ. ನಾ ಹಾಗೆ ಕಣ್ಮುಚ್ಚುತ್ತಾ ಅದರ ಮಡಿಲಿಗೆ ತಲೆಯೊಡ್ಡಿದ್ದೇನೆ. ನನ್ನ ಜೊತೆ ಅವು ಇವೆ ಎಂಬ ಸಂಪೂರ್ಣ ಭರವಸೆಯೊಂದಿಗೆ. ಮನಸ್ಸು ಹಗುರವಾಗಿದೆ, ಕನಸು ಮಧುರವಾಗಿದೆ. ಒಡಲು ಸುಂದರ ಸ್ವಪ್ನದೊಂದಿಗೆ ಮಲಗಿರುವ ನನ್ನ ತುಟಿಯಂಚಿನಲ್ಲಿ ಕಿರುನಗೆಯ ಮೂಡಿಸುತ್ತಾ, ಹೊಸ ಕೂಸಿಗೆ ಬೆಳಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT