ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಕೋಗಿಲೆಯ ‘ಕೊನೆಯ ಭೇಟಿ’

Last Updated 6 ಜುಲೈ 2016, 19:30 IST
ಅಕ್ಷರ ಗಾತ್ರ

ಕಾಲೇಜು ಬಿಟ್ಟ ಮೇಲೆ ಸಹಪಾಠಿಗಳಲ್ಲಿ ಒಬ್ಬಳನ್ನುಳಿದು ಯಾರದ್ದೂ ಸಂಪರ್ಕವಿರಲಿಲ್ಲ. ಈಗಿನಂತೆ ಫೋನ್ ಇರದ ಕಾಲ. ಒಂದಿಬ್ಬರು ನನ್ನ ಸಂಬಂಧಿಗಳೇ ಆದ್ದರಿಂದ ಮದುವೆಗಳಲ್ಲಿ, ಎಲ್ಲಾದರಲ್ಲೋ ಸಂಪರ್ಕಿಸುತ್ತಿದ್ದೆ. ಇದ್ದಕ್ಕಿದ್ದಂತೆ ಸುಮಾರು ವರ್ಷಗಳ ನಂತರ ತಲೆ ಹರಟೆಯಾಗಿದ್ದ ಕೈಲಾಂಬಾಳ ಎಂಬ ಸಹಪಾಠಿ ಇಂದ ಫೋನ್ ಬಂತು.

ತುಂಬಾ ಆಶ್ಚರ್ಯವಾಗಿತ್ತು. ಎಲ್ಲಿ ಸಿಕ್ಕಿತೋ ನನ್ನ ನಂಬರ್ ಗೊತ್ತಿಲ್ಲ. ಒಂದಷ್ಟು ಸಹಪಾಠಿಗಳು ಒಂದೆಡೆ ಸೇರಲು ನಿಶ್ಚಯಿಸಿಕೊಂಡೆವು. ನಾನು ಹೋಗುವುದು ತಡವಾದ್ದರಿಂದ ಎಲ್ಲರೂ ಆಗಲೇ ಬಂದು ಸೇರಿದ್ದರು. ನನಗೆ ಎಷ್ಟೋ ಮಂದಿ ಮರೆತೇ ಹೋಗಿದ್ದರು. ಅದರಲ್ಲೊಬ್ಬಳು ‘ನನ್ನ ಹೆಸರು ಪದ್ಮಾ’ ಎಂದಳು. ಅವಳ ನೆನಪು ನನಗೆ ತುಂಬಾ ಚೆನ್ನಾಗಿತ್ತು. ಅವಳು ತುಂಬಾ ಚೆನ್ನಾಗಿ ಹಾಡುತ್ತಿದ್ದಳು. ಅದೇ ಕಾರಣದಲ್ಲಿ ನಮ್ಮ ಕಾಲೇಜಿನಲ್ಲಿ ಗಾನ ಕೋಗಿಲೆ ಆಗಿದ್ದಳು.

ಬೀಳ್ಕೊಡುಗೆ ಸಮಾರಂಭದಲ್ಲಿ ಅವಳು ‘ಇಷ್ಟು ಕಾಲ ನಕ್ಕು ನಲಿದಾಡಿದೆವು’ ಹಾಡನ್ನು ಹೇಳಿ ನಮ್ಮನ್ನೆಲ್ಲಾ ಭಾವುಕರಾಗುವಂತೆ ಮಾಡಿದ್ದು ಮರೆಯಲಾಗದ್ದು. ಈ ಎಲ್ಲಾ ನೆನಪಿನಲ್ಲಿ ಅವಳನ್ನು ಕೇಳಿದೆ ‘ಈಗಲೂ ಹಾಡುತ್ತೀಯಾ’ ಎಂದು. ಹೂ ಈಗಲೂ ಮುಂದುವರೆಸಿದ್ದೇನೆ ಎಂದು ತಾನು ತಂದಿದ್ದ ಕಡುಬನ್ನು ಎಲ್ಲರಿಗೂ ಹಂಚಿದಳು.

ಊಟಕ್ಕೂ ಪಕ್ಕದಲ್ಲೇ ಕುಳಿತೆವು. ಬೇರೆಯವರನ್ನೆಲ್ಲಾ ಮಾತನಾಡಿಸಬೇಕಲ್ಲ, ಸ್ವಲ್ಪ ಸ್ವಲ್ಪ ಮಾತನಾಡಿ, ಮತ್ತೆ ಭೇಟಿಯಾಗೋಣ ಎಂದು ಎಲ್ಲರೂ ಕದಲಿದೆವು. ಮತ್ತೆ ಎಲ್ಲರದ್ದೂ ಮೌನ. ಜೂನ್‌ನಲ್ಲಿ ಕೈಲಾಂಬಾಳ್‌ನಿಂದ ಫೋನು. ಸುಮ್ಮನೆ ಮಾಡಿರಬಹುದು ಎಂದುಕೊಂಡೆ. ಆದರೆ ಅದು ಪದ್ಮಳ ಸಾವಿನ ಸುದ್ದಿ. 50 ವರ್ಷದ ನಂತರ ಒಂದೇ ಒಂದು ಭೇಟಿ. ಇದಕ್ಕಾಗಿಯೇ ಭೇಟಿಯಾದೆವೇ? ಆ ಕಡುಬು ಹೇಗೆ ಮಾಡಿದೆ ಎಂದು ಕೇಳಲಿಲ್ಲ. ಒಂದು ಹಾಡನ್ನಾದರೂ ಕೇಳಲಿಲ್ಲ. ಹೋಗಲಿ, ಮನೆಗೆ ಬಾ ಎಂದೂ ಕರೆಯಲಿಲ್ಲ. ಭೇಟಿ ಕೊನೆಯಾಗಿಯೇ ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT