ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರೋಪನಿಷತ್ತು

Last Updated 15 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಡಿಜಿಟಲ್ ಸಿಗ್ನೇಚರ್
ಒಂದು ದಾಖಲೆ ಪತ್ರ ಅಥವಾ ಅರ್ಜಿ ದೃಢೀಕರಿಸಲು ಅಥವಾ ಅಧಿಕೃತ ಎನಿಸಿಕೊಳ್ಳಲು ಸಂಬಂಧಪಟ್ಟವರ ಹಸ್ತಾಕ್ಷರ (ಸಹಿ) ಇರಲೇಬೇಕು. ಬರೀ ಖಾಲಿ ಕಾಗದದ ಮೇಲೆ ಒಂದು ಸಹಿ ಬಿದ್ದರೂ ಅದಕ್ಕೆ ಕೋಟಿಗೂ ಮೀರಿದ ಬೆಲೆ ಬಂದುಬಿಡುತ್ತದೆ. ಹೆಬ್ಬೆಟ್ಟು, ಸಹಿ ಇಲ್ಲವೇ ಸೀಲು ಯಾವುದಾದರೂ ಒಂದು ಇರಲೇಬೇಕು.


ತಾಂತ್ರಿಕ ಜಗತ್ತಿನಲ್ಲಿ ಈ ಜಾಗವನ್ನು ಡಿಜಿಟಲ್ ಸಿಗ್ನೇಚರ್ ಆವರಿಸಿಕೊಂಡಿದೆ. ಡಿಜಿಟಲ್ ಸಂದೇಶ ಅಥವಾ ದಾಖಲೆಗಳನ್ನು ದೃಢೀಕರಿಸಲು ‘ಡಿಜಿಟಲ್ ಸಿಗ್ನೇಚರ್ (ಸಹಿ) ಬಳಸಲಾಗುತ್ತದೆ. ಹೀಗೆ ಡಿಜಿಟಲ್ ಸಹಿ ಮಾಡಿರುವ ದಾಖಲೆ ಕಳುಹಿಸಿದವರು ಅದನ್ನು ಅಲ್ಲಗಳೆಯುವಂತಿಲ್ಲ. ಜತೆಗೆ ಇದನ್ನು ಬದಲಾಯಿಸುವಂತೆಯೂ ಇಲ್ಲ. ಸಾಫ್ಟ್ ವೇರ್ ವಿತರಣೆ, ಹಣಕಾಸು ವಹಿವಾಟು ನಡೆಸಲು ಮತ್ತು ಸುಳ್ಳುಪತ್ರ ಸೃಷ್ಟಿಸಿರುವುದನ್ನು ಪತ್ತೆ ಮಾಡಲು ಇದನ್ನು ಬಳಸಲಾಗುತ್ತದೆ. ಹಾಗಂತ ಎಲ್ಲಾ ಎಲೆಕ್ಟ್ರಾನಿಕ್ ಸಹಿ ಡಿಜಿಟಲ್ ಸಿಗ್ನೇಚರ್ ಎಂದಲ್ಲ. ಭಾರತ, ಅಮೆರಿಕ, ಬ್ರೆಜಿಲ್, ಯೂರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮಾತ್ರವೇ ಈ ಡಿಜಿಟಲ್ ಸಹಿಗೆ ಕಾನೂನಿನ ಮನ್ನಣೆ ನೀಡಿವೆ.

ಡಿಜಿಟಲ್ ಸಹಿ ಎನ್ನುವುದು ಕಣ್ಣಿಗೆ ಕಾಣುವಂತೆ ಹೆಸರನ್ನು ಬರೆಯುವುದಲ್ಲ. ತಂತ್ರಾಂಶ ರೂಪಿತ ದೃಢೀಕರಣ ವಿಧಾನ. ಇದು ಕೈಯಲ್ಲಿ ಬರೆದ ಸಹಿ ಮತ್ತು ಸೀಲ್‌ಗೆ ಸಮನಾಗಿರುತ್ತದೆ. ಆದರೆ ಇವನ್ನು ಕೈಯಲ್ಲಿ ಬರೆದ ಸಹಿಯಷ್ಟು ಸುಲಭಕ್ಕೆ ನಕಲು ಮಾಡುವುದು ಸಾಧ್ಯವಿಲ್ಲ.

ಹಿನ್ನೆಲೆ: 1976ರಲ್ಲಿ ವೈಟ್‌ಫೀಲ್ಡ್ ಡಿಫಿ ಮತ್ತು ಮಾರ್ಟಿನ್ ಹೆಲ್ಮನ್ ಎಂಬುವವರು ಮೊಟ್ಟ ಮೊದಲಿಗೆ ಡಿಜಿಟಲ್ ಸಿಗ್ನೇಚರ್ ಪರಿಕಲ್ಪನೆ ಪರಿಚಯಿಸಿದರು. ನಂತರ ರೊನಾಲ್ಡ್ ರಿವಿಸ್ಟ್, ಅಡಿ ಶಮಿರ್ ಮತ್ತು ಲೆನ್ ಅಡ್ಲ್ ಮನ್ ಅವರು ಗೂಢಲಿಪಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯೊಂದನ್ನು ಸೃಷ್ಟಿಸಿದರು.

ಅದಕ್ಕೆ RSA ಎಂದು ಅವರ ಹೆಸರನ್ನೇ ಇಟ್ಟರು. ನಂತರದಲ್ಲಿ ಅದು RSA Algoritham ಎಂದೇ ಜನಪ್ರಿಯವಾಯಿತು. ಇದರಿಂದಾಗಿಯೇ ಪ್ರಾಚೀನ ಡಿಜಿಟಲ್ ಸಹಿ ನಿರ್ಮಿಸಲು ಸಾಧ್ಯವಾಯಿತು. ಆರ್ ಎಸ್ಎ ಅಲ್ಗಾರಿದಂ ಬಳಸಿಕೊಂಡ Lotus Notes 1.0 ಎಂಬ ತಂತ್ರಾಂಶ 1989 ರಲ್ಲಿ ಮೊದಲಿಗೆ ಮಾರುಕಟ್ಟೆ ಪ್ರವೇಶಿಸಿತು.

ಹೇಗೆ ಕೆಲಸ ಮಾಡುತ್ತದೆ: ಈ ಡಿಜಿಟಲ್ ಸಿಗ್ನೇಚರ್ ಗೂಢಲಿಪೀಕರಣದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದನ್ನು ಅಸಮಾನ ಗೂಢಲಿಪೀಕರಣ (asymmetric cryptography) ಎಂದೂ ಕರೆಯಲಾಗುತ್ತದೆ. ಯಾವುದೇ ಬರಹವನ್ನು ಗೂಢ ಲಿಪೀಕರಿಸಲು ಮತ್ತು ಅದನ್ನು ಮತ್ತೆ ಬರಹ ರೂಪಕ್ಕೆ ತರಲು ಬೇರೆ ಬೇರೆ ಕೀಲಿಗಳನ್ನು ಬಳಸಲಾಗುತ್ತದೆ. ಸಹಿ ಮಾಡಲು ರಹಸ್ಯ ಕೀಲಿ, ಸಹಿ ಪರೀಕ್ಷಿಸಲು ಸಾರ್ವಜನಿಕ ಕೀಲಿ ಬಳಸಲಾಗುತ್ತದೆ.  ಡಿಜಿಟಲ್ ಸಹಿ ಮಾಡುವವರು ಪತ್ರದ ಸಂಕೀರ್ಣ ಒಕ್ಕಣೆ ಹ್ಯಾಷಿಂಗ್ ಸೂತ್ರದ ಬಳಕೆಯಿಂದ ಮಾಡಿ, ಅದನ್ನು ತಮ್ಮ ವಿಶಿಷ್ಟ ರಹಸ್ಯ ಕೀಲಿಯಿಂದ ಗೂಢ ಲಿಪೀಕರಣ ಮಾಡುತ್ತಾರೆ. ಹಲವು ಸಂಸ್ಥೆಗಳು ಈ ವ್ಯವಸ್ಥೆ ಕಲ್ಪಿಸುತ್ತವೆ. ಈ ಡಿಜಿಟಲ್ ಸಹಿ ಕೂಡ ಅಪಾಯದಿಂದ ಹೊರತಾಗಿಲ್ಲ. ಇದನ್ನೂ ನಕಲು ಮಾಡುವ ಚೋರರಿದ್ದಾರೆ. ಹೆಚ್ಚು ಎಚ್ಚರಿಕೆಯಿಂದ ಬಳಕೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT