ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದ ಹುಡುಗ

Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

 ಸ್ಪ್ರಿಂಗ್‌ನಂತೆ ಬಾಗುವ ದೇಹ, ಮೈ ಜುಮ್ಮೆನ್ನಿಸುವ ಯೋಗ ಭಂಗಿಗಳು, ಮೈನವಿರೇಳಿಸುವ ಸ್ಟಂಟ್‌ಗಳು, ವಿವಿಧ ಕರಾಟೆ ಪಟ್ಟುಗಳು. ಆತನಿಗೆ ಇವೆಲ್ಲಾ ಹಾಲು ಕುಡಿದಷ್ಟೇ ಸುಲಭ. ಅತ್ಯಂತ ಕಷ್ಟಕರವಾದ ನೂರಕ್ಕೂ ಹೆಚ್ಚು ಯೋಗಾಸನಗಳು ಈತನಿಗೆ ಗೊತ್ತು. ಕರಾಟೆ, ಜಿಮ್ನಾಸ್ಟಿಕ್‌ನಲ್ಲೂ ಪರಿಣತ. ಅವರೇ ಹುಬ್ಬಳ್ಳಿಯ ಬಾಷಾ ಒಂಬಳಿ.

ಅಣ್ಣ ಹೇಳಿದ ಎಂಬ ಏಕೈಕ ಕಾರಣಕ್ಕೆ ಯಾವುದೇ ಸೌಕರ್ಯ, ನೆರವೂ ಇಲ್ಲದೇ ಬಾಷಾ ಹಲವಾರು ಯೋಗಾಸನ, ಕರಾಟೆ ಮತ್ತು ಜಿಮ್ನಾಸ್ಟಿಕ್‌ ಪಟ್ಟುಗಳನ್ನು ಕಲಿತಿದ್ದಾರೆ. ತಮ್ಮ ಕಲೆಯಿಂದಲೇ ಉಳಿದವರನ್ನು ಸೆಳೆಯುವ ಬಾಷಾ, ಮನೆಯವರ ಕಣ್ಣಲ್ಲಿ ಹಟಮಾರಿ.

ನಾಚಿಕೆ ಸ್ವಭಾವದ ಬಾಷಾ ನಾಲ್ಕು ವರ್ಷಗಳ ಹಿಂದಷ್ಟೇ ಯೋಗಾಭ್ಯಾಸ ಆರಂಭಿಸಿದವರು. 24 ವರ್ಷದ ಈ ಹುಡುಗನಿಗೆ ಯೋಗ, ಕರಾಟೆ ಮತ್ತು ಜಿಮ್ನಾಸ್ಟಿಕ್‌ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದ್ದು ಅಣ್ಣ ಮೆಹಬೂಬ್‌. ಎಲ್ಲೋ ಒಮ್ಮೆ ಕರಾಟೆ ನೋಡಿ ಪ್ರೇರಿತರಾದ ಮೆಹಬೂಬ್‌, ಅದನ್ನು ಕಲಿತೇ ತೀರುವ ಹಟ ತೊಟ್ಟರು. ಆದರೆ ಬದುಕಿನ ಅನಿವಾರ್ಯತೆಯಿಂದ ದುಡಿಮೆಗೆ ಇಳಿಯಬೇಕಾಯಿತು. ಅದಕ್ಕಾಗಿ ಸಹೋದರ ಬಾಷಾ ಅವರನ್ನು ಕೋಚ್‌ ಶಿವಕುಮಾರ ತಲವಾಯಿ ಅವರಿಗೆ ಭೇಟಿ ಮಾಡಿಸಿ ಯೋಗ, ಕರಾಟೆ ಮತ್ತು ಜಿಮ್ನಾಸ್ಟಿಕ್‌ ಕಲಿಯಲು ಅನುವು ಮಾಡಿಕೊಟ್ಟರು.

ಅಣ್ಣನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿರುವ ಬಾಷಾ ಇಂದು ನಾನಾ ಯೋಗಾಸನಗಳು, ಕರಾಟೆ ಮತ್ತು ಜಿಮ್ನಾಸ್ಟಿಕ್‌ ಪಟ್ಟುಗಳನ್ನು ಲೀಲಾಜಾಲವಾಗಿ ಮಾಡಿ ನೋಡಿದವರು ಬೆರಗಾಗುವಂತೆ ಮಾಡುತ್ತಾರೆ. ಶಿವಕುಮಾರ ಅವರ ಇಂಟರ್‌ನ್ಯಾಷನಲ್‌ ಷೋಟಾಕಾನ್‌ ಕರಾಟೆ, ಯೋಗ ಮತ್ತು ಜಿಮ್ನಾಸ್ಟಿಕ್‌ ಕೋಚಿಂಗ್‌ ಸೆಂಟರ್‌ನಲ್ಲಿ ಅಭ್ಯಾಸದೊಂದಿಗೆ ಟ್ರೈನರ್‌ ಸಹ ಆಗಿರುವ ಬಾಷಾ, ‘ಈ ಭಾಗದಲ್ಲಿ ಯೋಗ, ಕರಾಟೆ ಮತ್ತು ಜಿಮ್ನಾಸ್ಟಿಕ್‌ಗೆ ಅಷ್ಟೊಂದು ಬೇಡಿಕೆ ಇಲ್ಲ. ಬಂದ ಅಷ್ಟಿಷ್ಟು ಮಂದಿ ಮತ್ತು ಇಲ್ಲಿಯೇ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಯೋಗ ಮತ್ತು ಕರಾಟೆ ಹೇಳಿಕೊಡುತ್ತಿದ್ದೇನೆ’ ಎನ್ನುತ್ತಾರೆ.

ಬಾಷಾಗೆ ಈಚೆಗಷ್ಟೆ ತೀರಿಕೊಂಡ ಯೋಗ ಗುರು ಬಿಕೆಎಸ್‌ ಅಯ್ಯಂಗಾರ್‌ ಎಂದರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿ. ಬಿಕೆಎಸ್ ಅವರ ವಿವಿಧ ಯೋಗ ಭಂಗಿಗಳ ಚಿತ್ರಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಅವರು ಅವುಗಳನ್ನು ನೋಡುತ್ತಲೇ ಅದರ ಮಹತ್ವ ಮತ್ತು ಅದನ್ನು ಕಲಿಯಲು ಬೇಕಿರುವ ಧನ್ಯತೆಯನ್ನು ತಲ್ಲೀನತೆಯಿಂದ ವಿವರಿಸುತ್ತಾರೆ. ಅಲ್ಲದೇ ಅದರಿಂದ ತಾವೂ ಕಲಿಯಲು ಪ್ರಯತ್ನಿಸುತ್ತಿದ್ದಾರೆ.
ಹಪ್ಪಳ, ಉಪ್ಪಿನಕಾಯಿ, ಶೇಂಗಾ ಮಾರಾಟ ಮಾಡಿ ಬದುಕು ದೂಡುತ್ತಿರುವ ತಂದೆ ಅಲ್ಲಾವುದ್ದೀನ್‌ ಸಾಬ್‌ ಮತ್ತು ಸಕೀರಾ ಬೀ ಅವರಿಗೆ ಮಗ ದುಡಿದು ಕುಟುಂಬಕ್ಕೆ ನೆರವಾಗಲಿ ಎಂಬ ಬಯಕೆ. ಆದರೆ ಬಾಷಾಗೆ ಯೋಗದ ಮೇಲೆ ಅತೀವ ಪ್ರೀತಿ.

ಬಾಷಾ ಮೇನಿಯಾ
ಮದುವೆ, ನಾಮಕರಣ ಅಥವಾ ಮತ್ತ್ಯಾವುದೇ ಸಮಾರಂಭದಲ್ಲಾದರೂ ಬಾಷಾ ತಮ್ಮ ಕಲೆ ಪ್ರದರ್ಶಿಸುತ್ತಾರೆ. ಅಲ್ಲಿ ಪ್ರಚಾರ ಪಡೆಯುವುದಕ್ಕಿಂತ ತನಗೆ ತಿಳಿದಿರುವುದನ್ನು ಆಸಕ್ತಿ ಇದ್ದವರು ಕಲಿಯಬೇಕು ಎಂಬುದು ಅವರ ಆಸೆ. ತನ್ನ ಅಕ್ಕನ ಮದುವೆಯಲ್ಲಿ ಇದೇ ಸಾಹಸಕ್ಕಿಳಿದಿದ್ದ ಬಾಷಾ ಅವರನ್ನು ಕಂಡು ಮದುವೆಗೆ ಬಂದಿದ್ದವರೆಲ್ಲಾ ಚಕಿತರಾಗಿದ್ದರಂತೆ.

‘ಗೋವಾಗೆ ಬಾಷಾ ಜೊತೆ ತೆರಳಿದ್ದಾಗ ಸಮುದ್ರ ತಟದಲ್ಲಿ ಯೋಗ ಕೈಗೊಂಡಿದ್ದ ಬಾಷಾ ಅವರನ್ನು ಕಂಡು ವಿದೇಶಿಯರು ತಮಗೂ ಯೋಗ ಹೇಳಿಕೊಡುವಂತೆ ಬೆನ್ನುಬಿದ್ದಿದ್ದರು’ ಎಂದು ನೆನಪಿಸಿಕೊಂಡರು ಬಾಷಾ ಸ್ನೇಹಿತ ಮೌಲಾನಿ ಒಂಬಳಿ.

ಆರು ಅಡಿ ಜಾಗದಲ್ಲಿ ಅಭ್ಯಾಸ
ಪ್ರತಿದಿನ 5 ಗಂಟೆಗೆ ದಿನಚರಿ ಆರಂಭಿಸುವ ಬಾಷಾ, ಮನೆಯ 6 ಅಡಿ ಜಾಗದಲ್ಲಿ ಹಳೆಯ ಸೀರೆ, ಪಂಚೆಗಳಿಂದ ಸುತ್ತುವರಿದ ಒಂದು ಕೋಣೆ ನಿರ್ಮಿಸಿಕೊಂಡಿದ್ದಾರೆ. ಅಲ್ಲೇ  ಯೋಗಾಭ್ಯಾಸ ಆರಂಭಿಸುತ್ತಾರೆ. ತಂದೆ ತಾಯಿ ಬಾಷಾ ಮಾಡುವ ಯೋಗಾಸನಗಳನ್ನು ಕಂಡು ಅದೆಷ್ಟೋ ಬಾರಿ ಬೆಚ್ಚಿ ಬಿದ್ದಿದ್ದೂ ಇದೆಯಂತೆ. ಮಗ ಏನಾದರೂ ಮಾಡಿ ಕೊಂಡಾನು ಎಂಬುದು ಅವರ ಆತಂಕಕ್ಕೆ ಕಾರಣ.

ಸ್ನೇಹಿತರಿಗೆ ಸವಾಲು
ಪಿಯುಸಿಗೆ ಓದು ನಿಲ್ಲಿಸಿರುವ ಬಾಷಾ, ಸಾವಿರಾರು ರೂಪಾಯಿ ತೆತ್ತು ಜಿಮ್‌ಗೆ ಸೇರಿರುವ ಸ್ನೇಹಿತರನ್ನು ಮೀರಿಸುವಂತಿದ್ದಾರೆ. ಮಂತ್ರಮುಗ್ಧವಾಗಿಸುವ ಅವರ ಯೋಗಾಸನಗಳು ಮತ್ತು ಕರಾಟೆ ಪಟ್ಟುಗಳನ್ನು ಕಂಡು ಅವರ ಸ್ನೇಹಿತರು ಮತ್ತು ಅಕ್ಕಪಕ್ಕದ ಮಂದಿ ಬೆರಗಾಗಿದ್ದಾರೆ. ತಾನು ಕಲಿತಿರುವ ಕರಾಟೆ ಮತ್ತು ಯೋಗಾಸನಗಳಿಂದ ಸ್ನೇಹಿತರಿಗೆ ಸವಾಲು ಹಾಕುತ್ತಾರೆ. ಎಷ್ಟೋ ಬಾರಿ ತಮಗೂ ಕಲಿಸುವಂತೆ ಸ್ನೇಹಿತರು, ಹುಡುಗಿಯರು ಬಾಷಾ ಅವರನ್ನು ಕೇಳಿ ಕೊಂಡಿದ್ದೂ ಇದೆ. ಮನೆಯಲ್ಲಿ ಬಿಡುವಿದ್ದಾಗ ಪುಟ್ಟ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಸಹೋದರನ ಮಗಳನ್ನು ಅತ್ಯುತ್ತಮ ಯೋಗ ಪಟು ಮಾಡುವುದೇ ಅವರ ಮುಂದಿನ ಗುರಿ.

ಕಷ್ಟದಲ್ಲಿ ಅರಳಿದ ಕಲೆ
‘ಇಷ್ಟೆಲ್ಲಾ ಗೊತ್ತಿದ್ದರೂ ಇಂದಿಗೂ ಯೋಗ ಮಾಡಲು ನನಗೆ ಒಂದು ಮ್ಯಾಟ್‌, ಅತ್ಯಂತ ಕಷ್ಟಕರವಾದ ಜಿಮ್ನಾಸ್ಟಿಕ್‌ನ ವಿವಿಧ ಪಟ್ಟುಗಳನ್ನು ಕಲಿಯಲು ಉತ್ತಮ ಸೌಕರ್ಯವಿಲ್ಲ. ಇಷ್ಟಾದರೂ ಹುಬ್ಬಳ್ಳಿಯ ಗ್ಲಾಸ್‌ಹೌಸ್‌ನ ಹುಲ್ಲುಹಾಸಿನ ಮೇಲೆ ಯಾರೂ ಇಲ್ಲದ ಸಮಯದಲ್ಲಿ ಅಭ್ಯಾಸ ಮಾಡುತ್ತೇನೆ. ಒಮ್ಮೆ ಅಲ್ಲಿ ಅಭ್ಯಾಸ ಮಾಡುತ್ತಿರಬೇಕಾದರೆ ಕಾವಲುಗಾರ ಬೆದರಿಸಿದ. ತುಂಬಾ ಬೇಜಾರಾದ ಹಲವು ಸಂಗತಿಗಳೂ ಸಾಕಷ್ಟಿವೆ. ನಾನು ಕಲಿತ ಯೋಗ, ಕರಾಟೆ ಮತ್ತು ಜಿಮ್ನಾಸ್ಟಿಕ್‌ನಲ್ಲಿಯೇ ಏನಾದರೂ ಸಾಧನೆ ಮಾಡಬೇಕು. ದೇಶ ಪ್ರತಿನಿಧಿಸುವ ಮಹತ್ವಾಕಾಂಕ್ಷೆ ನನಗಿದೆ. ಹಣ ಗಳಿಸುವ ಉದ್ದೇಶ ನನದಲ್ಲ’ ಎಂದು ನೇರವಾಗಿ ನುಡಿಯುತ್ತಾರೆ ಬಾಷಾ.

ಉತ್ಸಾಹದ ಚಿಲುಮೆ ಬಾಷಾ
‘ಬಾಷಾನಲ್ಲಿ ಅದಮ್ಯ ಉತ್ಸಾಹವಿದ್ದು, ಕಲಿಯುವ ದಾಹ ಇಂಗಿಲ್ಲ. ದೊಡ್ಡ ಸಾಧನೆ ಮಾಡುವ ಆಸೆಯಿದೆ. ಆದರೆ ಪ್ರೋತ್ಸಾಹವಿಲ್ಲ’ ಎನ್ನುತ್ತಾರೆ ಕೋಚ್‌ ಶಿವಾನಂದ ತಲವಾಯಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿವಕುಮಾರ, ಕರಾಟೆಯಲ್ಲಿ 5ನೇ ಡಾನ್‌ ಬೆಲ್ಟ್‌ ಪೂರೈಸಿದ್ದಾರೆ.

ಕ್ಲಿಷ್ಟ ಯೋಗಾಭ್ಯಾಸ
ಪಾದ ಶಿರಾಸನ, ಉತ್ತಿತ ಏಕಪಾದ ಶಿರಾಸನ, ಟಿಟಿಬಾಸನ, ಉತ್ತಿತ ಏಕಪಾದ ಪಾರ್ಶ್ವಕೋನಾಸನ, ಅಧೋಮುಖ ಟಿಟಿಬಾಸನ, ಅಕರ್ಣ ಧನುರಾಸನ, ಉತ್ತಿತ ದ್ವಿಪಾದಾಸನ, ವೃಕ್ಷಾಸನ, ದುರ್ವಾಸಾನ, ಯೋಗ ನಿದ್ರಾಸನ, ರಾಜಕಪೋತಾಸನ, ಏಕಪಾದ ಏಕಹಸ್ತ ಚಕ್ರಾಸನ, ಓಂಕಾರಾಸನ, ಪಾರ್ಶ್ವ ಕೌಂಡಿನ್ಯಾಸನ, ಸ್ಕಂದಾಸನ, ಏಕಪಾದ ಪಾರ್ಶ್ವ ಶಿರಾಸನ, ಬಕಾಸನ, ಪದ್ಮಬಕಾಸನ, ಅಷ್ಟವಕ್ರಾಸನ, ಉತ್ತಿತ ಏಕಪಾದ
ಬುಜಾಸನ, ಬದ್ಧ ಪದ್ಮ ಮತ್ಸ್ಯಾಸನ, ಪದ್ಮ ಶಿರ್ಸಾಸನ, ಗರ್ಭಪಿಂಡಾಸನ, ಪಾರ್ಶ್ವ ಏಕಪಾದ ಏಕಹಸ್ತ ಕೋನಾಸನ, ನಟರಾಜಾಸನ, ಉತ್ತಿತ ಏಕಪಾದ ಏಕಹಸ್ತ ತ್ರಿಕೋನಾಸನ ಮತ್ತು ಹನುಮಾನಾಸನ ಹೀಗೆ ಅತ್ಯಂತ ಕ್ಲಿಷ್ಟವಾದ ಯೋಗಾಸನಗಳನ್ನು ಬಾಷಾ ನಿರರ್ಗಳವಾಗಿ ಮಾಡಿ ತೋರಿಸುತ್ತಾರೆ.

ಕರಾಟೆಯಲ್ಲಿ, ದೋಬಿ ಯೋಕೋಗೆರಿ ಕಾಟಾಸ್‌, ಕುಮಟೆ, ಜಿಯು ಕುಮಟೆ, ದೋಬಿಗಿರಿ ಕಿಕ್ಸ್‌ ಕಲಿತಿದ್ದಾರೆ. ಇನ್ನು ಜಿಮ್ನಾಸ್ಟಿಕ್ಸ್‌ನಲ್ಲಿ ಫಾರ್ವರ್ಡ್‌ ರೋಲ್‌, ಬ್ಯಾಕ್‌ ರೋಲ್‌, ಕಾರ್ಟ್‌ ವೀಲ್‌, ಒನ್‌ ಹ್ಯಾಂಡ್‌ ಕಾರ್ಟ್‌, ಏರ್‌ ಕಾರ್ಟ್‌ವೀಲ್‌, ಬ್ಯಾಕ್‌ ಫ್ಲಿಫ್ಟ್‌, ನೆಕ್‌ ಸ್ಪ್ರಿಂಗ್‌, ಹ್ಯಾಂಡ್‌ ಸ್ಟ್ರಿಂಗ್‌, ಹೆಡ್‌ ಸ್ಪ್ರಿಂಗ್‌, ಬ್ಯಾಕ್‌ ಸಮ್ಮರ್‌ ಶಾಟ್‌, ಫ್ರಂಟ್‌ ಸಮ್ಮರ್‌ ಶಾಟ್‌, ಡೈ ರೋಲ್‌ ಹೀಗೆ ಹತ್ತಾರೂ ಜಿಮ್ನಾಸ್ಟಿಕ್‌ ಸ್ಪರ್ಧೆಯಲ್ಲೂ ಬಾಷಾ ಎತ್ತಿದ ಕೈ. ಯೋಗ, ಕರಾಟೆ ಮತ್ತು ಜಿಮ್ನಾಸ್ಟಿಕ್‌ನಲ್ಲಿ ಅವರು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಅವರ ಸಂಪರ್ಕಕ್ಕೆ: 9611478704.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT