ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ಯಾಮಲಾ ಸೈಕಲ್ ಮೀಮಾಂಸೆ

Last Updated 19 ಫೆಬ್ರುವರಿ 2015, 4:52 IST
ಅಕ್ಷರ ಗಾತ್ರ

ಶ್ಯಾಮಲಾರ ಕೋಮಲ ಬೆರಳುಗಳು ಕಂಪ್ಯೂಟರ್ ಕೀಲಿಮಣೆಯ ಮೇಲೆ ನರ್ತಿಸುತ್ತಿರುವಾಗ ಅವರ ಮನಸ್ಸಿನೊಳಗೆ ನರ್ತಿಸುತ್ತಿದ್ದುದು ಕುಶಲಕರ್ಮಿಯಾಗುವ ಹಂಬಲ. ಇದು ಶುರುವಾಗಿದ್ದು ಸೈಕಲ್‌ನಿಂದ. ನಿತ್ಯ ಹತ್ತು ಕಿಲೋ ಮೀಟರ್‌ನಷ್ಟು ದೂರ ಸೈಕಲ್ ಸವಾರಿ ಮಾಡಿಕೊಂಡೇ ದೊಡ್ಡ ಸಂಬಳ ಬರುತ್ತಿದ್ದ ಅರಾಕ್ಲ್ ಕಾರ್ಪೊರೇಷನ್‌ನ ಕೆಲಸಕ್ಕೆ ಸೈಕಲ್‌ನಲ್ಲಿ ಹೋಗುವುದೇ ವಿಚಿತ್ರ. ಇಷ್ಟರ ಮೇಲೆ ಸೈಕಲ್ ಅವರನ್ನೆಷ್ಟು ಕಾಡಿತೆಂದರೆ ಅವರು ಆ ಕೆಲಸವನ್ನಷ್ಟೇ ಬಿಟ್ಟು ಸೈಕಲ್ ಮೆಕ್ಯಾನಿಕ್ ಆದರು.

ಕೀಲಿಮಣೆಯ ಮೇಲೆ ಬೆರಳೋಡಿಸುತ್ತಾ ಸೃಷ್ಟಿಸುವ ಉತ್ಪನ್ನಗಳಿಗಿಂತ ಕೈಯ ಕುಶಲತೆಯನ್ನು ಬೇರೆ ಬಗೆಯಲ್ಲಿ ಬಳಸುವ ಅವರ ಹಂಬಲದ ಮೊದಲ ಹೆಜ್ಜೆಗಳು ಮೂಡಿದ್ದು ಆನೇಕಲ್ ಬಳಿಯ ಕೃಷಿ ಭೂಮಿಯಲ್ಲಿ. ಗಾಂಧಿ ಮತ್ತು ಫುಕುವೋಕ ಇಬ್ಬರೂ ಅವರನ್ನು ಆಕರ್ಷಿಸಿದ್ದರಿಂದ ಸುಸ್ಥಿರ ಜೀವನ ಶೈಲಿಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದರು. ಹಲವು ತಿಂಗಳುಗಳ ಅವಧಿಯ ಕೃಷಿ ಕೆಲಸ ಸೈಕಲ್ ಸುಧಾರಣೆ ಕುರಿತಂತೆ ಹೆಚ್ಚು ಚಿಂತನೆಗೆ ಹಚ್ಚಿತು. ಇದರ ಕುರಿತು ಹೆಚ್ಚು ತಿಳಿಯಲು ರೋಹನ್ ಕಿಣಿಯವರ ನೂತನ ಸೈಕಲ್ ಅಂಗಡಿ ‘Bums on saddle’ಗೆ ಸೈಕಲ್ ಮೆಕ್ಯಾನಿಕ್ ಆಗಿ ಸೇರಿಕೊಂಡರು.

ಸೈಕಲ್ ಮೆಕ್ಯಾನಿಕ್ ಕೆಲಸದಲ್ಲಿ ತನ್ಮಯತೆ  ಪಡೆದ ಶ್ಯಾಮಲಾ ಅದರ ಸೂಕ್ಷ್ಮಗಳನ್ನು ಅರಿತರು. ಸೈಕಲ್ ವಿಜ್ಞಾನವೆಂದರೆ ಸಾಮಾನ್ಯವಲ್ಲ. ಒಂದು ಉತ್ತಮ ಗುಣಮಟ್ಟದ ಸೈಕಲ್ ಮಾಡುವುದಕ್ಕೆ ಕಂಪ್ಯೂಟರ್ ವಿಜ್ಞಾನದಷ್ಟೇ ಸೂಕ್ಷ್ಮವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಅವಶ್ಯ.  ಕಂಪೆನಿಯವರು ಮಾಡಿರುವ ಸೈಕಲ್ ರಿಪೇರಿ ಮಾಡುವುದಕ್ಕಿಂತಲೂ ತಾನೇ ಕೈಯಾರೆ ಸೈಕಲ್ ತಯಾರಿಸಿ ಅನುಭವ ಪಡೆಯಲು ಶ್ಯಾಮಲಾ ಮುಂದಾದರು. ಅಮೆರಿಕದಲ್ಲಿ ಸೈಕಲ್ ತಯಾರಿಸುವ ಕಲೆಯನ್ನು ಹೇಳಿಕೊಡುವ ಶಾಲೆಗೆ ಅರ್ಜಿ ಹಾಕಿದರು. ಆ ಸಂಸ್ಥೆಯನ್ನು ಕಟ್ಟಿದ ಮಹಾನುಭಾವರೆಲ್ಲಾ‌ ಮುಂಚೆ ಏರೋಪ್ಲೇನ್ ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ಮಿಸಿ  ಗಗನಗಾಮಿಗಳಾಗಿ ಅನುಭವ ಪಡೆದು ನೆಲಕ್ಕಿಳಿದವರು. ನೆಲದಲ್ಲಿ ಚಲಿಸುವ ಸೈಕಲ್‌ನಿಂದಲೆ ಮಾನವನ ಹಿತ ಎಂದು ಅರಿತು Center for appropriate transport ಪ್ರಾರಂಭಿಸಿದರು. ಈ ಕೇಂದ್ರದಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ ಪಾಠಗಳೇ ಹೆಚ್ಚು.

ಅಮೆರಿಕದ ಓರೆಗನ್ ರಾಜ್ಯದಲ್ಲಿರುವ ಈ ಕೇಂದ್ರ ನಿಜಕ್ಕೂ ವಿಶಿಷ್ಟವಾದದ್ದು. ಇಲ್ಲಿ ಸಾವಯವ ಕೃಷಿ ಜೊತೆಯಲ್ಲಿ ಸೈಕಲ್ ತಯಾರಿಸುವುದನ್ನು ಹೇಳಿಕೊಡುತ್ತಾರೆ. ಶ್ಯಾಮಲಾ ಮತ್ತು ಜೊತೆಗಿದ್ದ ಹತ್ತು ಜನ ಐವತ್ತು ಮಂದಿಗೆ ಅಗತ್ಯವಿರುವಷ್ಟು ಕೃಷಿ ಮಾಡಬೇಕಿತ್ತು. ಅಲ್ಲಿ ತರಕಾರಿಗಳನ್ನು ಬೆಳೆಯುತ್ತಾ ಪಡೆದ ಅನುಭವವನ್ನು ನೆನಪಿಸಿಕೊಳ್ಳುವ ಅವರು ‘ಹಳದಿ  ಕಲರ್, ಪರ್ಪಲ್ ಕಲರ್  ಟೋಮಾಟೋ ಬೆಳೆದೆ’ ಎಂದು  ಪುಳಕಿತರಾಗುತ್ತಾರೆ. ಸೈಕಲ್ ಒಂದನ್ನು ರೂಪಿಸಬೇಕಾದರೆ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ನಾನಾ ವಿಷಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಅದಲ್ಲದೆ ಲೋಹಶಾಸ್ತ್ರದ ಸ್ಪಷ್ಟ ಪರಿಕಲ್ಪನೆಯೂ ಅಗತ್ಯ. ಸೈಕಲ್‌ನ ಬಿಡಿಭಾಗಗಳಿಗೆ ಸಾಕಷ್ಟು ಗಣಿತ ಜ್ಞಾನ, ವಿನ್ಯಾಸಕ್ಕಾಗಿ CAD ತಂತ್ರಾಂಶವನ್ನು ಬಳಸುವ ಕೌಶಲಗಳೆಲ್ಲಾ ಅಗತ್ಯ.

ಅಮೆರಿಕದಲ್ಲಿದ್ದ ಆರು ತಿಂಗಳಲ್ಲಿ ಶ್ಯಾಮಲಾ ಇಷ್ಟೂ ವಿದ್ಯೆಗಳಲ್ಲಿ ಪರಿಣಿತಿ ಸಾಧಿಸಿದರು. ಇದಕ್ಕೆ ಅವರ ಕಂಪ್ಯೂಟರ್ ಶಿಕ್ಷಣ ಸ್ವಲ್ಪ ಮಟ್ಟಿಗೆ ಸಹಾಯವನ್ನೇನೋ ಮಾಡಿದೆ. ಅವರು ಹೇಳುವಂತೆ ‘ನಮ್ಮ ಕರ್ನಾಟಕದ ತಂತ್ರಜ್ಞಾನದ ಶಿಕ್ಷಣ ಪದ್ಧತಿಯಲ್ಲಿ ನಡೆಯುವ ಸೆಮಿಸ್ಟರ್ ಪರೀಕ್ಷೆಗಳು ಅಥವಾ ಡಿಗ್ರಿ ಕೇವಲ ಪದವಿಯನ್ನು ನೀಡುತ್ತವೆಯೇ ಹೊರತು ಜ್ಞಾನದ ಅನುಭೂತಿಯನ್ನು ನೀಡುವುದಿಲ್ಲ’.

ಯಂತ್ರವನ್ನು ತಂತ್ರದೊಂದಿಗೆ ಬೆಸೆಯುವ ಭಾಷೆಯನ್ನು ನಮ್ಮ ತಂತ್ರಜ್ಞಾನ ಶಿಕ್ಷಣ ತಜ್ಞರು ಕಂಡುಕೊಂಡಿಲ್ಲ ಎಂಬುದು ಅವರ ದೂರು. ಅವರದೇ ಮಾತುಗಳಲ್ಲಿ ಇದನ್ನು ಹೇಳುವುದಾದರೆ ‘‘ನಮ್ಮ ಶಿಕ್ಷಣ ಪದ್ಧತಿಯಲ್ಲಿ ಉಪನ್ಯಾಸಕರು ಕೇವಲ ಉಪನ್ಯಾಸ ನೀಡುತ್ತಾರೆ. ಅವರಿಗೆ  ಯಂತ್ರದೊಂದಿಗಾಗಲೀ ಕಲಿಸುವ ವಿಷಯದ ಮೇಲಾಗಲೀ ಹಿಡಿತವಿರುವು ದಿಲ್ಲ. ಈ  ಉಪನ್ಯಾಸಕರ ಬದಲಿಗೆ ತನ್ಮಯನಾಗಿ ಕೆಲಸ ಮಾಡುತ್ತಿರುವ ಅಲ್ಲಿಯ ಒಬ್ಬ ‘ಸೈಕಲ್ ಆಚಾರ್ಯ’ನನ್ನು ನೋಡಿ ಕಲಿವುದು ಬಹಳಷ್ಟಿದೆ”.

ಸೈಕಲ್ ಆಚಾರ್ಯ ಜಾನ್ ವಾಂಡರ್
ಸೆಂಟರ್ ಫಾರ್ ಅಪ್ರಾಪ್ರಿಯೇಟ್ ಟ್ರಾನ್ಸ್‌ಪೋರ್ಟ್‌ನ ಸೈಕಲ್ ಆಚಾರ್ಯ ಜಾನ್ ವಾಂಡರ್ ಹೇಳುವಂತೆ ‘ನಮ್ಮದು ಸಮುದಾಯದಿಂದ ಸೈಕಲ್ ಉತ್ಪಾದಿಸುವ, ಅದರ ಉಪಯುಕ್ತತೆಯನ್ನು ಪ್ರಸಾರ ಮಾಡುವ ಸಂಸ್ಥೆ. ಇಲ್ಲಿ ಕೈ ಮತ್ತು ಕಾಲಿನಿಂದ ಚಲಿಸುವ ಯಂತ್ರಗಳ ಮತ್ತು ಅವುಗಳಿಗೆ ಹೊಂದುವಂತೆ ನಗರಗಳನ್ನು ಕಟ್ಟುವ ಬಗ್ಗೆ ಸಂಶೋಧನೆ ಮತ್ತು ತರಬೇತಿಯನ್ನು ಕೊಡುತ್ತೇವೆ’. ಸ್ವತಃ ನೂರಾರು ಪ್ರಯೋಗಗಳನ್ನು ಮಾಡಿರುವ ಜಾನ್ ವಾಂಡರ್ ಕೃಷಿ ಮತ್ತು ಯುವ ಶಿಕ್ಷಣದಲ್ಲಿ ಯಶಸ್ಸುಗಳಿಸಿದ್ದಷ್ಟೇ ಅಲ್ಲದೇ ಯುವ ತಲೆಮಾರಿನ ಪ್ರೀತಿಯನ್ನೂ ಪಡೆದಿದ್ದಾರೆ.

ಈ ಸೈಕಲ್ ಆಚಾರ್ಯರ ಸಂಸ್ಥೆಯಲ್ಲಿ ತರಬೇತಿ ಪಡೆದು ಬಂದಿರುವ ಶ್ಯಾಮಲಾ ಕೂಡಾ ಇದೇ ಮಾತುಗಳನ್ನು ಭಾರತದ ಸಂದರ್ಭಕ್ಕೆ ಅನ್ವಯಿಸಿ ಹೇಳುತ್ತಾರೆ. ‘ನಮ್ಮಲ್ಲಿ ಹಿಂದೆ ಗುರು ಶಿಷ್ಯ ಪರಂಪರೆಯಿತ್ತು. ಈಗಿನ ತಂತ್ರಜ್ಞಾನ ಶಿಕ್ಷಣದಲ್ಲೂ ಇಂಥ ಪರ್ಯಾಯ ಮಾರ್ಗವನ್ನು ಶೋಧಿಸಿಕೊಳ್ಳುವ ಅಗತ್ಯವಿದೆ. ಈ ಶಿಕ್ಷಣದ ಅಂತಿಮ ಉದ್ದೇಶ ಸೈಕಲ್ ತಂತ್ರದ ಬಗ್ಗೆ ಜ್ಞಾನವನ್ನು ಕೊಡುವುದಷ್ಟೆ ಅಲ್ಲ. ಬದುಕಿನಲ್ಲಿ ವಿಶ್ವಾಸ ಮತ್ತು ಕೈಯಿಂದ ಕಲಿತ ವಿದ್ಯೆಯನ್ನು ಬಳಸಿ ಬದುಕುವ ದಾರಿಯ ಜೊತೆಗೆ ಪರಿಸರವನ್ನು ಆದರದಿಂದ ಕಾಣುವ ಸಂವೇದನೆ ತಾನಾಗಿ ಮೂಡುತ್ತದೆ’.

ಶ್ಯಾಮಲಾರ ಪ್ರಕಾರ ಈ ರೀತಿಯ ಜ್ಞಾನವನ್ನು ನಮ್ಮದಾಗಿಸಿಕೊಂಡರೆ ನಾವು ಮತ್ತೆ ಜ್ಞಾನ ವೃಕ್ಷಕ್ಕೆ ನೀರೆರೆದು ಅದು ಬೆಳೆಯುವುದಕ್ಕೆ ಕಾರಣರಾಗುತ್ತೇವೆ. ನಮ್ಮ ಶಿಕ್ಷಣದಲ್ಲಿ ಜ್ಞಾನವನ್ನು ನಮ್ಮದಾಗಿಸಿಕೊಳ್ಳುವುದ ಕ್ಕಿಂತ ಪರದೇಶ ಮತ್ತು ಪರದೇಶಿ ಕಂಪೆನಿಗಳ ಸ್ವತ್ತಾಗುತ್ತಿದ್ದಾಗ, ಜ್ಞಾನದ ಬೆಳೆವಣಿಗೆ ಕಷ್ಟ. ಬಹುಶಃ ಅದಕ್ಕೆ ನಮ್ಮ ದೇಶದಲ್ಲಿ ತಂತ್ರಜ್ಞಾನ ಆಧಾರಿತ ದೇಶಿ ಪುಸ್ತಕಗಳು ಇಲ್ಲಿಯವರೆಗೂ ಬಂದಿಲ್ಲ. ಅಷ್ಟೆ ಅಲ್ಲದೆ ಮಾನವ ಸಮಾಜಕ್ಕೆ ಬೇಕಾಗಿರುವ ಊಟ, ವಸತಿ, ಶಾಲೆ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ಸಮುದಾಯದ ಮೂಲಕ ಕಟ್ಟಬಹುದಾದ ಸಾಧ್ಯತೆಯನ್ನೇ ಮರೆತುಬಿಟ್ಟಿದ್ದೇವೆ.

ಕಾರ್ಗೋ ಸೈಕಲ್
ಸೈಕಲ್ ತಂತ್ರಜ್ಞಾನದ ಕಲಿಕೆಯ ಕೊನೆಯ ಹಂತದಲ್ಲಿ ಒಂದು ಪರೀಕ್ಷೆಯಿತ್ತು. ಇದರಲ್ಲಿ ಸುಲಭವಾಗಿ ತುಳಿಯಲು ಸಾಧ್ಯವಿರುವ ‘ಕಾರ್ಗೋ ಸೈಕಲ್’ ಅಥವಾ ಸರಕು ಸಾಗಾಣಿಕೆಯ ಸೈಕಲ್ ತಯಾರಿಸಿ ತನ್ನ ಕಲಿಕೆಯ ಮಟ್ಟವನ್ನು ತೋರಿಸಿಕೊಡಬೇಕಿತ್ತು. ಇದರಲ್ಲಿ ಯಶಸ್ಸು ಗಳಿಸಿರುವ ಶ್ಯಾಮಲಾ ತಾವೇ ತಯಾರಿಸಿದ ಸೈಕಲ್ ಅನ್ನು ಭಾರತಕ್ಕೂ ತಂದಿದ್ದಾರೆ. ಅದರ ಮೇಲೆ ಮಿತ್ರರನ್ನು ಕೂರಿಸಿ ತಿರುಗುವುದರಲ್ಲಿ ಸಂತೋಷ ಪಡುತ್ತಿದ್ದಾರೆ.

ಈ ಸೈಕಲ್‌ನಲ್ಲಿ ಸುಲಭವಾಗಿ ತುಳಿಯಲು ಸಾಧ್ಯವಾಗುವಂಥ ಗೇರ್ ವ್ಯವಸ್ಥೆಯಿದೆ. ಹ್ಯಾಂಡಲ್ ಮುಂದೆ ಇದ್ದರೂ ತಿರುಗಿಸುವುದು ಬಹಳ ಸುಲಭ. ನಮ್ಮ ದೇಶದಲ್ಲಿ ಸಾಗಿಸಲೆಂದೇ ರೂಪಿಸಲಾಗಿರುವ ದೊಡ್ಡ ದೊಡ್ದ ಸೈಕಲ್ಗಳಿಗಿಂತಲೂ ಕಡಿಮೆ ಸ್ಥಳದಲ್ಲಿ ಇದು ಸುಗಮವಾಗಿ ಚಲಿಸಬಹುದು. ಇದರೆ ಬೆಲೆ ಅಮೆರಿಕದಲ್ಲಿ ಬರೋಬ್ಬರಿ 2300 ಡಾಲರ್‌ಗಳು.  ಅಂದರೆ ಒಂದೂವರೆ ಲಕ್ಷ ರೂಪಾಯಿಗಳು. ಇದನ್ನು ಇಲ್ಲಿ ಮಾಡಿ ಅಮೆರಿಕಗೆ ರಫ್ತು ಮಾಡಿದರೆ ಉತ್ತಮ ಆದಾಯವಿದೆ ಎಂಬುದು ಶ್ಯಾಮಲಾರ ಅನಿಸಿಕೆ.

ಅಮೆರಿಕದ ಪೋರ್ಟ್ಲ್ಯಾಂಡ್ ನಗರವನ್ನೇ ಸೈಕಲ್ ಸವಾರಿಗೆ ಅನುಕೂಲ ವಾಗುವಂತೆ ರೂಪಿಸಲಾಗಿದೆ. ಇಲ್ಲಿರುವ ಹೊಸ ವಿನ್ಯಾಸಗಳನ್ನೊಳಗೊಂಡ ಸೈಕಲ್ ದಾರಿ, ಸೈಕಲ್ ನಿಲ್ದಾಣಗಳು ಅದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ಸೈಕಲ್‌ನಲ್ಲಿಯೇ ಹೋಗಲು ಅನುಕೂಲವಾಗುವಂಥ ಮಾರ್ಗಗಳನ್ನು ರೂಪಿಸಲಾಗಿದೆ. ಬಸ್ಸು ಹಾಗೂ ರೈಲುಗಳಲ್ಲಿಯೂ ಸೈಕಲ್ ತೆಗೆದುಕೊಂಡು ಹೋಗಲು ಬೇಕಾದ ಅನುಕೂಲ ಕಲ್ಪಿಸಲಾಗಿದೆ. ಈ ಯೋಜನೆಗಳನ್ನು ಜಾರಿಗೆ ತಂದುದಷ್ಟೇ ಅಲ್ಲದೇ ಅವುಗಳ ಪರಿಣಾಮದ ಕುರಿತ ಅಧ್ಯಯನಗಳೂ ಸಾಗುತ್ತಿವೆ.

ಈ ಸುಂದರ ನಗರದಲ್ಲಿ ಸೈಕಲ್ ಸವಾರಿ ನಡೆಸಿದ ಅನುಭವವನ್ನು ಹಂಚಿಕೊಳ್ಳುತ್ತಾ ಶ್ಯಾಮಲಾ ಭಾರತದ ನಗರಗಳ ಸ್ಥಿತಿಯನ್ನು ನೆನಪಿಸಿಕೊಂಡು ಮುಖ ಚಿಕ್ಕದಾಗಿಸಿಕೊಳ್ಳುತ್ತಾರೆ. ಭಾರತದ ಯಾವುದೇ ಊರಿನಲ್ಲಿ ಹೆಣ್ಣು ಮಕ್ಕಳು/ಮಕ್ಕಳು ಸಂತಸದಿಂದ ಹಾಗೂ ಸುರಕ್ಷಿತವಾಗಿ ಸೈಕಲ್ ಸವಾರಿ ಮಾಡಲಾಗದ ಸ್ಥಿತಿ ಇದೆ. ಭಾರತ ಸರ್ಕಾರ ಸೈಕಲ್ ಸ್ನೇಹಿ ನೀತಿಯೊಂದನ್ನು ಅಳವಡಿಸಿಕೊಂಡಿದ್ದರೂ ಕೇವಲ ಕಾರ್ ಮತ್ತು ಕಂಟ್ರಾಕ್ಟರ್ಗಳಿಗೆ ಅನುಕೂಲವಾಗುವಂತೆ ನಗರ ನಿರ್ಮಾಣವಾಗುತ್ತಿರು ವುದನ್ನು ಹೇಳುತ್ತಾ ವಿಷಾದ ಯೋಗಕ್ಕೆ ತೆರಳುತ್ತಾರೆ.

ಬನ್ನಿ ಸೈಕಲ್ ತಯಾರಿಸೋಣ
ಶ್ಯಾಮಲಾ ಈಗ ಸೈಕಲ್ ಗುರುವಾಗಲು ಸಿದ್ಧತೆ ನಡೆಸಿದ್ದಾರೆ. ತಾವು ಕಲಿತ ವಿದ್ಯೆಯನ್ನು ಭಾರತದಲ್ಲಿ ಆಸಕ್ತರಾದವರ ಜೊತೆಗೆ ಹಂಚಿಕೊಳ್ಳಲು Let us Make a Cycle In India ಎಂದು ಸೈಕಲ್ ಬೆಲ್ ಹೊಡೆದು ಘೋಷಿಸಿದ್ದಾರೆ.  ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪರದೇಶದತ್ತ ದೃಷ್ಠಿಯಿಟ್ಟು ಅಲ್ಲಿಯೆ ಕೇಂದ್ರೀಕರಣಗೊಂಡು ಇಲ್ಲಿನ ಸ್ಥಿತಿಯನ್ನು ಪರಿಪೂರ್ಣ ಅಸಡ್ಡೆಯಿಂದ ಕಂಡಿರುವ ಹಿನ್ನೆಲೆಯಲ್ಲಿ ನಮ್ಮ ನೆಲೆಗೆ ಸೂಕ್ತವಾದ ತಂತ್ರವನ್ನು ಹೊರದೇಶಕ್ಕೆ ಹೋಗಿ ಕಲಿತು ಅಲ್ಲಿಯೇ ಮಾಡಿ ಇಲ್ಲಿಗೆ ತಂದು ಖುಷಿಯಾಗಿ ಹಾರುವ ಈ ಸೈಕಲ್ ಹಕ್ಕಿಯನ್ನು ನೋಡಿ ನಮ್ಮ ವಿಜ್ಞಾನದ ಮತ್ತು ತಂತ್ರಜ್ಞಾನದ ಬಳಗದವರು ಸಾಕಷ್ಟು ಕಲಿಯಬೇಕಾಗಿದೆ. ಸೈಕಲ್ ಆವಿಷ್ಕಾರಕ್ಕೆ ಕೈಜೋಡಿಸುವ ಮನಸ್ಸು ನಿಮ್ಮದಾದರೆ ಈ ಕೆಳಗಿನ ವಿಳಾಸಗಳಿಗೆ ಒಂದು ಮೇಲ್ ಕಳುಹಿಸಿ. shamalakittane@gmail.com, murali@nammacycle.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT