ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವೆದ ಹಾದಿಯಲ್ಲಿನ ಪಯಣ

ಒಡಲಾಳ
Last Updated 22 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸವೆಯುತ್ತಲೇ ನಡೆಯುತ್ತಿವೆ ಸವೆದ ಹಾದಿಯಲ್ಲಿ ಪ್ರತಿದಿನ. ಪ್ರತಿ ಮುಂಜಾನೆಯ ಬಿಸಿಉಸಿರಿನಲ್ಲ್ಲಿ ಅವಸರದ ನಡೆಯ ಜೊತೆಗೆ ಹೊಸಬಗೆಯ ಆಲೋಚನೆಯ ಬಿತ್ತಿ, ಎದೆಯೊಳಗೆ ಚಿಗುರಿದ ಎಳೆ ಸಸಿಯ ಹಚ್ಚ ಹಸುರಿನೊಂದಿಗೆ ಜೊತೆಯಾಗುತ್ತಾ... ಏನೋ ಹೇಳಲಾಗದ ಭಾವ ನಮ್ಮನ್ನೆಲ್ಲಾ ಸೆಳೆದು ಸಾಗಿಸುತ್ತಿದೆ ಪ್ರತಿ ಕ್ಷಣವೂ, ನಿರಾಕಾರಿ ಪ್ರಪಂಚದೊಳಗೆ. ನಾನು-ನೀನು, ಅವನು-ಅವಳು ಎಲ್ಲರೂ ಒಂದಿಲ್ಲೊಂದು ಬುದ್ಧಿವಂತಿಕೆಯ ಯಂತ್ರಗಳೇ. ಎಲ್ಲವೂ ಭಿನ್ನ ಭಿನ್ನ.

ನಾಳೆಗೆ ಹೊಸದೆಂಬ ಯಂತ್ರದ ಸಂಶೋಧನೆ. ಹಳೆ ಯಂತ್ರ ಹೊಸತಿಗೆ ಹಾದಿ. ಹಳೆಯದಾಗುತ್ತಾ ಬದುಕಿನ ಎಲ್ಲವನ್ನೂ ಸಹಿಸಿದ, ಅನುಭವಿಸಿದ, ಅರಗಿಸಿಕೊಂಡ ಅನುಭವಿಗಳಾಗುತ್ತಾ ಸಾಗುತ್ತೇವೆ. ಯಾತನೆ, ನಗು, ಅಳು, ದುಃಖ, ಸುಖದ ಪರಿಧಿಯೊಳಗೆ ಬಂಧಿಗಳಾಗಿ ಇನ್ನೆಷ್ಟು ದಿನ ಬದುಕು ಸವೆಸುವುದು? ಇರುವಷ್ಟು ದಿನ ಎಲ್ಲರೊಂದಿಗೆ ಖುಷಿಯಾಗಿ ಸ್ನೇಹದಿಂದ ಬಾಳೋಣ ಎನ್ನುವವರಿಗಿಂತ ಸಂಬಂಧಗಳಲ್ಲಿ ಹುಳುಕು ಹುಡುಕುವವರೇ ಹೆಚ್ಚು.

ಎಳ್ಳಷ್ಟಿನ ಮಾತಿಗೆ, ದ್ವೇಷ ಸಾಧಿಸುತ್ತಲೇ ಗೆಲುವು ಕಂಡೆವೆಂದು ಬೀಗುವ ನಾವು, ನಾವೇಕೆ ಬಗ್ಗಬೇಕೆನ್ನುವ ನಮ್ಮೊಳಗಿನ ಅಹಂನಿಂದ ಪ್ರತಿ ದಿನವೂ ಸೋಲನ್ನು ಹೆಗಲಿಗೇರಿಸಿಕೊಳ್ಳುತ್ತಲೇ ಸಾಗುತ್ತೇವೆ. ಒಳಗೊಂದು ಹೊರಗೊಂದು ಕೂಡಿಟ್ಟುಕೊಂಡ ಭಾವದೊಳಗೆ ಹುಡುಕಲೇನಿರು ವುದು? ಎಲ್ಲವೂ ಜೊಳ್ಳಿನ ಕಣಗಳೇ. ನಮ್ಮೊಳಗಿನ ಕಾಣದ ಅಮೂರ್ತದೊಳಗೆ ಬಾಚಿಕೊಳ್ಳುವುದೇನೂ ಸಿಗುವುದಿಲ್ಲ.

ಒಳಗೊಳಗೇ ನಮ್ಮನ್ನಿರಿದು ಚಿಂದಿಯಾಗಿಸುತ್ತಾ, ಕೆಲವೊಮ್ಮೆ ಅವರೇ ನಮ್ಮನ್ನೊಮ್ಮೆ ಮಾತಾಡಿಸಲಿ ಎಂಬ ಬಯಕೆ ಬೀಜವ ನಮ್ಮ ಮನಸ್ಸು ಬಿತ್ತುವುದಂತೂ ಸತ್ಯ. ಎಲ್ಲವೂ ಶೂನ್ಯ ಈ ಜಗದೊಳಗೆ ಎಂಬ ಸತ್ಯದ ಅರಿವಿದ್ದರೂ ಕೂಡಿಡುವವರೇ ಹೆಚ್ಚಾಗಿರುವಾಗ ಬೇರೆಯವರ ಮುಖದಲ್ಲಿ ಬೆಳಕ ಕಾಣುವುದ ಬಯಸುವವರ ಅರಸುವುದೇ ಕಷ್ಟ.
ಯಾಂತ್ರೀಕರಣಗೊಂಡ ಜೀವನದೊಳಗೆ ಭಾವನೆಗಳೊಂದಿಗೆ ಸಮಯ ಕಳೆಯಲು ಯಾರಿಗೂ ಪುರುಸೊತ್ತಿಲ್ಲ. ಈಗ ಭಾವನೆಗಳೂ ತೋರಿಕೆಯಾಗುವ ಸಮಯ.

ಎಲ್ಲವೂ ಬಿಕರಿಗೊಳ್ಳುವ ಪ್ರಪಂಚದೊಳಗೆ ಖಾಲಿತನದ ಬಟಾಬಯಲನ್ನು ಹುಡುಕುವುದೂ ಕಷ್ಟವೇ. ಖಾಲಿತನಕ್ಕೂ ಸಮಯವಿಲ್ಲದೇ ಖಯಾಲಿಯ ಕೈಗೆ ಮನಸ್ಸನ್ನು ನೀಡಿ ಪರಿತಪಿಸುತ್ತಿರುವ ಯಾಂತ್ರೀಕೃತ ದೇಹಗಳೇ ಎಲ್ಲ ಕಡೆ. ತಮ್ಮ ತಪ್ಪು ಒಪ್ಪುಗಳ ನಡುವೆ ತಮ್ಮತನವನ್ನು ಸಾಬೀತುಪಡಿಸಲು ಪ್ರಯತ್ನಿಸುವಲ್ಲೇ ಇಡೀ ಜೀವನ ಕಳೆದು ಹೋಗಿರುತ್ತದೆ.

ಯಾವುದನ್ನೂ ನಿರ್ದಿಷ್ಟವಾಗಿ ಸ್ಪಷ್ಟಪಡಿಸದ ನಾವು, ಬದುಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿಯೂ ಎಡತಾಕುತ್ತೇವೆ. ಆದರೆ ಇತರರ ಜೀವನದೊಳಗೆ ಇಣುಕಿ ಅವರನ್ನು ಶೋಧಿಸುವುದರಲ್ಲಿಯೇ ಖುಷಿ ಕಾಣುವುದುಂಟು. ಮನುಷ್ಯನೆನ್ನುವ ಪ್ರಾಣಿಯ ಗುಣಗಳೇ ಹಾಗೆ ಅನ್ನಿಸುತ್ತದೆ. ತಾವೂ ನೆಮ್ಮದಿಯಾಗಿರುವುದಿಲ್ಲ, ಇತರರ ನೆಮ್ಮದಿ ಯನ್ನೂ ಬಯಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT