ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹತೆಯ ಪಕ್ಷಪಾತಿ ಡಾ. ಸ್ವಾಮಿ

ವ್ಯಕ್ತಿ/ ಸ್ಮರಣೆ
Last Updated 23 ಜನವರಿ 2016, 19:56 IST
ಅಕ್ಷರ ಗಾತ್ರ

ಡಾ. ಷಡಕ್ಷರ ಸ್ವಾಮಿ ಬೆಂಗಳೂರು ವಿಶ್ವವಿದ್ಯಾಲಯದ ಎರಡು ಮೂರು ತಲೆಮಾರಿನವರೆಲ್ಲರಿಗೂ (1950–77) ಸೆಂಟ್ರಲ್‌ ಕಾಲೇಜಿನ ಪ್ರಿನ್ಸಿಪಾಲರೆಂದೇ ಪರಿಚಿತರು. ಶಿಸ್ತಿಗೆ ಇನ್ನೊಂದು ಹೆಸರೆಂದರೆ ಷಡಕ್ಷರ ಸ್ವಾಮಿ ಎಂದರೂ ನಡೆದೀತು. ಇತ್ತೀಚೆಗೆ ನಮ್ಮನ್ನು ಅಗಲಿದ ಅವರ ಬಗ್ಗೆ ಎಲ್ಲರಿಗೂ ಭಯಮಿಶ್ರಿತ ಗೌರವ. ಸತತ 18 ವರ್ಷಗಳ ಕಾಲ ಪ್ರಿನ್ಸಿಪಾಲರಾಗಿದ್ದ ಶ್ರೀಯುತರು ಸೆಂಟ್ರಲ್‌ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಕಟ್ಟಿ ಬೆಳೆಸಿದವರಲ್ಲಿ ಮೊದಲಿಗರು.

ಬೆಂಗಳೂರು ವಿಶ್ವವಿದ್ಯಾಲಯವನ್ನು 1964ರಲ್ಲಿ ಸ್ಥಾಪಿಸಿದ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ಸಚಿವರಾಗಿದ್ದವರು ಎಸ್‌.ಆರ್‌.ಕಂಠಿ. ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಶಿಕ್ಷಣ ಸಚಿವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು, ಆ ಬಗ್ಗೆ ಎಲ್ಲ ರೀತಿಯಲ್ಲೂ ಸಹಕಾರ, ಸಹಾಯ ಮಾಡಿದವರು ಡಾ. ಸ್ವಾಮಿ. ಹಾಗೆಯೇ ನೂತನ ವಿಶ್ವವಿದ್ಯಾಲಯದ ಮೊದಲ ಪೂರ್ಣಾವಧಿ ಕುಲಪತಿಯಾಗಿದ್ದ ಪ್ರೊ. ವಿ.ಕೆ.ಗೋಕಾಕ್ ಅವರಿಗೂ ಷಡಕ್ಷರ ಸ್ವಾಮಿಯವರಲ್ಲಿ ಅಪಾರ ನಂಬುಗೆ. ಹೀಗಾಗಿ ನಗರ ವಿಶ್ವವಿದ್ಯಾಲಯದ ರೂಪುರೇಷೆಯನ್ನು ರೂಪಿಸುವಲ್ಲಿ ಅವರ ಪಾತ್ರ ನಿರ್ಣಾಯಕವೆನ್ನಲಾಗುತ್ತದೆ.

ನಾಯಕರಾದವರು ಮಾದರಿಯಾಗಿರಬೇಕೆಂಬ ನಾಣ್ಣುಡಿಯಂತೆ ಡಾ. ಸ್ವಾಮಿಯವರು ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದವರು. ಸಹೋದ್ಯೋಗಿಗಳೂ ಸೇರಿದಂತೆ ಯಾರ ಜೊತೆಯಲ್ಲಿಯೂ ಅವರು ಸಲುಗೆಯಿಂದ ಇರುತ್ತಿರಲಿಲ್ಲ. ಬಹಳ ಗಂಭೀರ ಸ್ವಭಾವದ, ಕಟ್ಟುನಿಟ್ಟಿನ ಶೈಕ್ಷಣಿಕ ಆಡಳಿತಗಾರರಾಗಿದ್ದ ಪ್ರಿನ್ಸಿಪಾಲರೆಂದರೆ ಕೆಲವು ಅಧ್ಯಾಪಕರಿಗೆ ಇರಿಸುಮುರಿಸು.

ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ನಾನು ಕಂಡಂತೆ, ಬಹುತೇಕ ಎಲ್ಲ ಪ್ರಾಧ್ಯಾಪಕರೂ ಡಾ. ಸ್ವಾಮಿಯವರನ್ನು ಕಾಣಲು ಹೋಗುವುದೆಂದರೆ ‘ಏನು ಕಾದಿದೆಯೋ’ ಎಂದು ಹೆದರಿ ಹಿಂಜರಿಯುತ್ತಿದ್ದರು. ಅವರು ಯಾವುದೇ ತರಗತಿಗಾಗಲಿ, ಸಭೆ–ಸಮಾರಂಭಗಳಿಗಾಗಲಿ ತಡವಾಗಿ ಹೋದವರಲ್ಲ. ಅಶಿಸ್ತನ್ನು ಸಹಿಸುತ್ತಿರಲಿಲ್ಲ. ನೇರವಾಗಿಯೇ ಬಿಸಿ ಮುಟ್ಟಿಸುತ್ತಿದ್ದರು. ಆದ್ದರಿಂದಲೇ ಇರಬೇಕು ಅವರ ಬಗ್ಗೆ ಪ್ರೀತಿಗಿಂತ ಭಯವೇ ಹೆಚ್ಚಾಗಿತ್ತು.

 ಅವರು ಪ್ರಿನ್ಸಿಪಾಲರಾಗಿದ್ದ ಸಂದರ್ಭದಲ್ಲಿ ನಡೆದ ದೊಡ್ಡ ಮಟ್ಟದ ವಿದ್ಯಾರ್ಥಿ ಚಳವಳಿಗಳೆಂದರೆ ಎಕ್‌್ಸಪೋ ಸೆವೆಂಟಿ, ಹಿಂದಿ ವಿರೋಧಿ ಚಳವಳಿ ಮತ್ತು ಬೂಸಾ ಚಳವಳಿ. ಎಕ್‌್ಸಪೋ ಸೆವೆಂಟಿ ಬಹುತೇಕ ಎಲ್ಲ ಚಳವಳಿಗಳಂತೆ ರಾಜಕೀಯ ಪ್ರೇರಿತ. ಸರ್ಕಾರದ ವಿರುದ್ಧದ ಈ ಚಳವಳಿ ಸೆಂಟ್ರಲ್‌ ಕಾಲೇಜಿನ ಪ್ರಯೋಗಾಲಯಗಳಿಗೆ ಅಪಾರ ಹಾನಿಯನ್ನುಂಟುಮಾಡಿತು.

ದಶಕಗಳ ನಂತರವೂ ಈ ಬಗ್ಗೆ ಮಾತನಾಡುವಾಗ ಡಾ. ಸ್ವಾಮಿಯವರು ಖಿನ್ನರಾಗುತ್ತಿದ್ದುದುಂಟು. ‘ಬೂಸಾ ಚಳವಳಿ’ಯ ಬಗ್ಗೆಯೂ ಅವರಿಗೆ ಆತಂಕವಿತ್ತು. ಆಗ ವಿದೇಶದಲ್ಲಿದ್ದರೂ ಸಮಸ್ಯೆಯ ಪರಿಹಾರಕ್ಕಾಗಿ ಶ್ರಮಿಸಿ, ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಬಿ.ಸಿ.ವೆಸ್ಲಿಯವರ ಸಹಾಯ ಪಡೆದು ಎರಡೂ ಬಣಗಳ ವಿದ್ಯಾರ್ಥಿ ನಾಯಕರನ್ನು ಕರೆಸಿ ಗದ್ದಲ ನಿಲ್ಲಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದು ನನ್ನ ನೆನಪಿನಲ್ಲಿದೆ.

ಡಾ. ಸ್ವಾಮಿಯವರು ನನ್ನ ಸೀಮಿತ ತಿಳಿವಳಿಕೆಯಂತೆ ‘ಅರ್ಹತೆ’ಯ ಪಕ್ಷಪಾತಿ. ಜಾತಿ, ಮತಗಳನ್ನು ಮೀರಿ ನಿಲ್ಲುತ್ತಿದ್ದ ಆಡಳಿತಗಾರರು. ಆದ್ದರಿಂದಲೇ ಇರಬೇಕು ಎಲ್ಲ ಜಾತಿವಾದಿಗಳೂ ಅವರನ್ನು ಟೀಕಿಸುತ್ತಿದ್ದರು. ವಶೀಲಿಬಾಜಿ ಕಂಡರೆ ಸಿಡಿದು ನಿಲ್ಲುತ್ತಿದ್ದ ಡಾ. ಸ್ವಾಮಿ ನಿಷ್ಠುರವಾದಿಯಾಗಿದ್ದರು. ಆದ್ದರಿಂದಲೇ ಅವರು ಎಲ್ಲ ಅರ್ಹತೆಯಿದ್ದೂ ಕುಲಪತಿಯಾಗಿ ನೇಮಕವಾಗಲಿಲ್ಲವೆಂದರೆ ಯಾರೂ ತಗಾದೆ ಮಾಡಲಾರರು. ಅವರು ಪ್ರಿನ್ಸಿಪಾಲರಾಗಿದ್ದ ಅವಧಿಯಲ್ಲಿ ನಾನು ವಿದ್ಯಾರ್ಥಿಯಾಗಿ, ಸಂಶೋಧನಾ ಸಹಾಯಕನಾಗಿ ಕೆಲಸ ನಿರ್ವಹಿಸಿದ್ದನ್ನು ಮತ್ತು ನನಗಾದ ಅನುಭವಗಳನ್ನು ನಾನು, ನನ್ನಂಥವರು ಮರೆಯಲು ಸಾಧ್ಯವಿಲ್ಲ.

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸ್ವಾಮಿಯವರು ಶ್ರೀಮಂತ ಹಿನ್ನೆಲೆಯಿಂದ ಬಂದವರು. ಆದರೂ ಮಹಾನ್‌ ಸ್ವಾಭಿಮಾನಿ. ತುಂಬಾ ಕಷ್ಟಪಟ್ಟು ಅಧ್ಯಾಪಕ ವೃತ್ತಿ ಮಾಡುತ್ತಲೇ ಒಂದಷ್ಟು ಹಣ ಉಳಿಸಿ ಎಡಿನ್‌ಬರೊ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಕೈಗೊಂಡು ಪಿಎಚ್‌.ಡಿ ಪಡೆದವರು. ಹಲವಾರು ಅಂತರರಾಷ್ಟ್ರೀಯ ಸಂಶೋಧನಾ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಪ್ರಕಟಿಸಿದವರು. ಜೊತೆಗೆ  ಜೀವರಸಾಯನ ಶಾಸ್ತ್ರವನ್ನು ವಿಶೇಷ ಅಧ್ಯಯನವನ್ನಾಗಿ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾರಂಭಿಸಿದವರು.

ಪೂರ್ವ ತಯಾರಿಯಿಲ್ಲದೇ ಏನನ್ನೂ ಮಾಡಲು ಅವರು ಒಪ್ಪುತ್ತಿರಲಿಲ್ಲ. ಕುಲಪತಿಯಾಗಿದ್ದ ಡಾ. ಎಚ್‌.ನರಸಿಂಹಯ್ಯ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವಾರು ಹೊಸ ಅಧ್ಯಯನ ವಿಭಾಗಗಳನ್ನು ಪ್ರಾರಂಭಿಸಲು ಮುಂದಾದಾಗ ಬಹಿರಂಗವಾಗಿಯೇ ಅದನ್ನು ವಿರೋಧಿಸಿದ್ದರು. ಪೂರ್ವ ತಯಾರಿ, ನಿಪುಣತೆಯಿಲ್ಲದೆ ಪ್ರಾರಂಭಿಸುವ ಅಧ್ಯಯನ ವಿಭಾಗಗಳು ಸೊರಗುತ್ತಿರುವುದನ್ನು, ಕಣ್ಮುಚ್ಚುತ್ತಿರುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ.

ವಿಶ್ವವಿದ್ಯಾಲಯದ ಸೇವೆಯಿಂದ 1977 ರಲ್ಲಿ ಡಾ. ಸ್ವಾಮಿ ನಿವೃತ್ತರಾದರು. ಆದರೂ ವಿಶ್ವವಿದ್ಯಾಲಯ ಮತ್ತು ರಸಾಯನ ಶಾಸ್ತ್ರ ವಿಭಾಗ ಅವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಸಂದರ್ಶಕ ಪ್ರಾಧ್ಯಾಪಕರಾಗಿ ಅವರ ಸೇವೆಯನ್ನು ಬಳಸಿಕೊಳ್ಳಲಾಯಿತು. 1970–77ರ ಅವಧಿ ಇಡೀ ದೇಶ ಅಪಾರ ರಾಜಕೀಯ ಕ್ಷೋಭೆಯನ್ನು ಕಂಡಿತು.

ಕಾಂಗ್ರೆಸ್‌ ಇಬ್ಭಾಗ, ತುರ್ತು ಪರಿಸ್ಥಿತಿ, ಕಾಂಗ್ರೆಸ್‌ ಸೋಲು, ಜನತಾ ಸರ್ಕಾರ ಹೀಗೆ ಹಲವಾರು ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳನ್ನು ಕಂಡ ಕಾಲವದು. ಪ್ರೊ. ಸ್ವಾಮಿಯವರು ಈ ಎಲ್ಲಕ್ಕೂ ಉನ್ನತ ಶಿಕ್ಷಣ ಕ್ಷೇತ್ರದ ಸಾಕ್ಷಿ ಪ್ರಜ್ಞೆಯಾಗಿದ್ದರು. ಆ ಕ್ಷೇತ್ರದ ಬಹುಮುಖ್ಯ ಕೇಂದ್ರದಲ್ಲಿ ಒಂದಾದ ಸೆಂಟ್ರಲ್‌ ಕಾಲೇಜಿನ ಪ್ರಾಂಶುಪಾಲರಾಗಿ ತಮ್ಮದೇ ರೀತಿಯಲ್ಲಿ ಇವೆಲ್ಲವನ್ನೂ ನಿಭಾಯಿಸಿದರು. ಬೇರೆ ಬೇರೆ ಕಾರಣಗಳಿಗಾಗಿ ಅವರನ್ನು ಟೀಕಿಸಿದವರು ಇರಬಹುದು. ಆದರೆ ಅವರ ಶಿಸ್ತು, ಪ್ರಾಮಾಣಿಕತೆ ಮತ್ತು ಜಾತ್ಯತೀತ ಮನೋಭಾವದ ಬಗ್ಗೆ ಟೀಕಿಸುವವರನ್ನು ನಾನು ಕಂಡಿಲ್ಲ, ಕೇಳಿಲ್ಲ.

ಹೌದು, ಪ್ರೊ. ಸ್ವಾಮಿಯವರು ಕೆಲವು ವಿಚಾರಗಳಲ್ಲಿ ಸಂಪ್ರದಾಯಸ್ಥರಾಗಿದ್ದರು. ಆದರೆ ಅದು ಅತ್ಯಂತ ಒಳ್ಳೆಯ ಇತ್ಯಾತ್ಮಕ ಅರ್ಥದಲ್ಲಿ. ನೈತಿಕತೆ, ಸನ್ನಡತೆಯ ವಿಚಾರಗಳಲ್ಲಿ ಅವರು ಕಟ್ಟುನಿಟ್ಟಿನ ಸಂಪ್ರದಾಯಸ್ಥರು. ಆದರೆ ಅಪಾರ ಮಾನವೀಯ ಅನುಕಂಪ ಉಳ್ಳವರಾಗಿದ್ದರು. ಕಾಲೇಜಿನ ಆವರಣದಲ್ಲಿ ಎಷ್ಟೇ ಪ್ರಕ್ಷುಬ್ಧತೆಯಿರಲಿ ಅವರ ಅನುಮತಿ ಇಲ್ಲದೆ ಪೊಲೀಸರು ಪ್ರವೇಶಿಸುವಂತಿರಲಿಲ್ಲ.

ಒಮ್ಮೆ ಹೀಗಾಯಿತು. ಹಾಸ್ಟೆಲಿನ ವಿದ್ಯಾರ್ಥಿಯೊಬ್ಬನಿಗೆ ಯಾವುದೋ ಕಾರಣಕ್ಕಾಗಿ ಊಟ ನಿಲ್ಲಿಸಲಾಗಿತ್ತು. ಸ್ವಾಮಿಯವರಿಗೆ ವಿಚಾರ ತಿಳಿಯಿತು. ಕೂಡಲೇ ಅವರು ವಾರ್ಡನ್‌ರನ್ನು ಕರೆಸಿದರು. ಕಾರಣ ಕೇಳಿದರು. ಆ ಸಂದರ್ಭದಲ್ಲಿ ಕಾರಣಾಂತರದಿಂದ ನಾನು ಅಲ್ಲಿದ್ದೆ. ಆ ವಿದ್ಯಾರ್ಥಿಯ ವಿಚಾರವನ್ನು ಕಚೇರಿಯಲ್ಲೇ ತಿಳಿದುಕೊಂಡಿದ್ದ ಅವರು, ಯಾವುದೇ ಕಾರಣವಿರಲಿ ಪ್ರಾಂಶುಪಾಲರ ಅನುಮತಿ ಪಡೆದೇ ಇಂಥ ನಿರ್ಧಾರಗಳನ್ನು ಕೈಗೊಳ್ಳಬೇಕೆಂದೂ, ಕೂಡಲೇ ಸದರಿ ವಿದ್ಯಾರ್ಥಿಗೆ ಊಟದ ವ್ಯವಸ್ಥೆ ಮುಂದುವರಿಸಬೇಕೆಂದೂ ತಾಕೀತು ಮಾಡಿದರು.

ಸೆಂಟ್ರಲ್‌ ಕಾಲೇಜಿನಿಂದ ಪ್ರೊ. ಸ್ವಾಮಿಯವರನ್ನು ಸ್ವಾಗತಿಸಿ, ಬರಮಾಡಿ ಕೊಂಡಿದ್ದು ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆ. ಆ ಹೊತ್ತಿಗೆ ಸುಮಾರು 40 ವರ್ಷಗಳ ಇತಿಹಾಸವಿದ್ದ ಆ ಸಂಸ್ಥೆ ಹಲವಾರು ಕಾರಣಗಳಿಂದ ಗೊಂದಲದ ಗೂಡಾಗಿತ್ತು. ಹಲವಾರು ಪ್ರಶ್ನಾರ್ಹ ಚಟುವಟಿಕೆಗಳ ಕೇಂದ್ರವಾಗಿತ್ತು. ಅದಕ್ಕೆ ಕಾಯಕಲ್ಪದ ಅವಶ್ಯಕತೆ ಇತ್ತು. ಸಂಸ್ಥೆಯ ಕೆಲವು ಹಿರಿಯರು ಡಾ. ಷಡಕ್ಷರ ಸ್ವಾಮಿಯವರೇ ಅದಕ್ಕೆ ಸೂಕ್ತ ವ್ಯಕ್ತಿಯೆಂದು ಭಾವಿಸಿ ಅವರನ್ನು ಪ್ರಯಾಸಪಟ್ಟು ಒಪ್ಪಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕಾರ ರಾಜಕಾರಣ, ರಾಜಕೀಯ ಪಕ್ಷಗಳು ಮತ್ತು  ಆ ಪಕ್ಷಗಳು ನಿಯಂತ್ರಿಸುತ್ತಿದ್ದ ವಿದ್ಯಾರ್ಥಿ ನಾಯಕರು, ಆಗ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆಗಳು ನಡೆಯುತ್ತಿದ್ದ ರೀತಿ ಯಾರಿಗಾದರೂ ಬೇಸರ ಮೂಡಿಸುವಂತಿದ್ದವು. ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ರಾಜಕೀಯ ಪಕ್ಷಗಳ ಪುಢಾರಿಗಳು ಅಪಾರ ಹಣ ವ್ಯಯಿಸಿ ಗೂಂಡಾಗಳನ್ನು ಬಳಸಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಇದನ್ನೆಲ್ಲ ಕಂಡು ಅನುಭವಿಸಿದ್ದ ಪ್ರೊ. ಸ್ವಾಮಿ, ರೇಣುಕಾಚಾರ್ಯ ಸಂಸ್ಥೆಯಲ್ಲಿ ಶಿಸ್ತನ್ನು ಮೂಡಿಸಲು ಇಡೀ ಕ್ಯಾಂಪಸ್ಸಿನಲ್ಲಿ ಎರಡು ವಾರ ಎಲ್ಲ ತರಗತಿ ಚಟುವಟಿಕೆಗಳಿಗೆ ವಿರಾಮ ಘೋಷಿಸಿದರು. ಗೂಂಡಾಗಳ ಗೂಡಾಗಿದ್ದ ಲಾ ಕಾಲೇಜ್‌ ಹಾಸ್ಟೆಲ್‌ ಅನ್ನು ಮುಚ್ಚಿದರು. ಸಂಬಂಧಪಟ್ಟವರ ಜೊತೆ ಮಾತನಾಡಿ, ಅವರನ್ನು ಒಪ್ಪಿಸಿ ತಾತ್ಕಾಲಿಕವಾಗಿಯಾದರೂ ವಿದ್ಯಾರ್ಥಿ ಸಂಘಗಳ ನೇರ ಚುನಾವಣೆಗಳನ್ನು ನಿಲ್ಲಿಸುವಂತೆ ನೋಡಿಕೊಂಡರು. ಆನಂತರವಷ್ಟೇ ಕಾಲೇಜುಗಳಲ್ಲಿ ನಡೆಯುತ್ತಿದ್ದ ಗೂಂಡಾಗಿರಿ, ಹಿಂಸೆ ನಿಯಂತ್ರಣಕ್ಕೆ ಬಂದದ್ದು. 

ಸೆಂಟ್ರಲ್‌ ಕಾಲೇಜು, ರೇಣುಕಾಚಾರ್ಯ ಸಂಸ್ಥೆಯ  ಅಭಿವೃದ್ಧಿ ಪರ್ವದಲ್ಲಿ ಡಾ. ಸ್ವಾಮಿಯವರ ಪಾತ್ರ ಬಹಳ ಮುಖ್ಯವಾದುದು. ಸಂಸ್ಥೆಗಳ ಬೆಳವಣಿಗೆಗೆ ಕೇವಲ ಹಿಗ್ಗದೆ, ವಿಮರ್ಶಾತ್ಮಕವಾಗಿದ್ದುಕೊಂಡೇ ಅವುಗಳ ನೇತೃತ್ವ ವಹಿಸಿದ ಮುತ್ಸದ್ದಿ ಡಾ. ಸ್ವಾಮಿ. ಅವರು ತಮ್ಮಂತೆಯೇ ಅರ್ಹರಾದವರು ಹಾಗೂ ಗುಣ ಪಕ್ಷಪಾತಿಗಳನ್ನೇ ಹುಡುಕಿ ತಮ್ಮ ನೇತೃತ್ವದಲ್ಲಿ ಎಲ್ಲ ಸಂಸ್ಥೆಗಳಲ್ಲಿ ದುಡಿಸಿಕೊಂಡರು. ಶಿಕ್ಷಣ ಖಾಸಗೀಕರಣದ ಬಗ್ಗೆ ಅವರಿಗೆ ತಕರಾರು ಇರಲಿಲ್ಲ. ಆದರೆ ವಾಣಿಜ್ಯೀಕರಣದ ಬಗ್ಗೆ ತೀವ್ರ ವಿರೋಧವಿತ್ತು. ಶಿಕ್ಷಣದಲ್ಲಿ ಸರ್ಕಾರದ ಪಾತ್ರವಿರಲಿ, ಆದರೆ ನಿಯಂತ್ರಣ ಇರಕೂಡದೆಂಬ ಅಭಿಪ್ರಾಯ ಅವರದಾಗಿತ್ತು.

ಶಿಕ್ಷಣ ಎಲ್ಲರಿಗೂ ನಿಲುಕಬೇಕೆಂಬ ನಿಟ್ಟಿನಲ್ಲಿ ಶ್ರಮಿಸಿದ ಡಾ. ಸ್ವಾಮಿ ತಾಂತ್ರಿಕ, ವೈದ್ಯಕೀಯ ಮತ್ತು ಸ್ನಾತಕೋತ್ತರ ಶಿಕ್ಷಣ  ಕೋರ್ಸುಗಳನ್ನು ಖಾಸಗಿ ಕಾಲೇಜುಗಳು ನಡೆಸುವುದರ ಬಗ್ಗೆ, ಅವುಗಳ ಪ್ರವೇಶಾತಿಯಲ್ಲಿ ನಡೆಯುವ ಅಪರಾ ತಪರಾಗಳ ಬಗ್ಗೆ ಸಾತ್ವಿಕ ಸಿಟ್ಟನ್ನು ವ್ಯಕ್ತಪಡಿಸುತ್ತಿದ್ದರು. ಆದ್ದರಿಂದಲೇ ಅವರು 30 ವರ್ಷಗಳಿಗೂ ಮೀರಿ ಅಧ್ಯಕ್ಷರಾಗಿದ್ದ ರೇಣುಕಾಚಾರ್ಯ ಸಂಸ್ಥೆ ಎಷ್ಟೇ ಆಂತರಿಕ, ಬಾಹ್ಯ ಒತ್ತಡವಿರಲಿ ಈ ಕೋರ್ಸುಗಳನ್ನು, ಕಾಲೇಜುಗಳನ್ನು ಪ್ರಾರಂಭಿಸಿ ವಾಣಿಜ್ಯೀಕರಣಗೊಳ್ಳಲು ಬಿಡಲಿಲ್ಲ. ಎಲ್ಲೂ ಪಟ್ಟಭದ್ರ ಹಿತಾಸಕ್ತಿಗಳನ್ನು, ಅಪ್ರಾಮಾಣಿಕತೆಯನ್ನು, ಅಶಿಸ್ತನ್ನು ಸಹಿಸದ ಸ್ವಾಮಿ ಅವರ ನೇರ, ನಿಷ್ಠುರ ನಿಲುವು ಅವರ ಕುಲಪತಿ ಸ್ಥಾನಕ್ಕೆ ನೆರವಾದುದಷ್ಟೇ ಅಲ್ಲ, ನಂತರದ ಅವರ ಸಂಘ ಸಂಸ್ಥೆಗಳ ಅಧಿಕಾರ ಸ್ಥಾನಗಳಿಗೂ ಕುತ್ತು ತಂದಿದ್ದು ಇತಿಹಾಸದ ವ್ಯಂಗ್ಯವೆನ್ನದೆ ವಿಧಿಯಿಲ್ಲ.

ಲೇಖಕ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಬೆಂಗಳೂರು ವಿ.ವಿ.,
ನಿವೃತ್ತ ಕುಲಪತಿ, ಕೇಂದ್ರೀಯ ವಿ.ವಿ., ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT