ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಲ್ಲದ ಇವರು- ವಕೀಲರಿಗೇ ಪಂಗನಾಮ!

Last Updated 10 ಏಪ್ರಿಲ್ 2016, 7:13 IST
ಅಕ್ಷರ ಗಾತ್ರ

ಈ ಕಥೆ ಶುರುವಾಗುವುದು 1998ರಿಂದ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಸುನಂದಾ, ಶಾರದಾ ಹಾಗೂ ಇತರರಿಗೆ ಸೇರಿದ ಜಮೀನಿನ ಮೇಲೆ ಚಿದಂಬರ  ಅವರ ಕಣ್ಣು ನೆಟ್ಟಿತ್ತು. ಆ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಸಂಬಂಧ ಎಲ್ಲಾ ಶಿಫಾರಸು ಬಳಸಿ ಅದರಲ್ಲಿ ಯಶಸ್ವಿಯೂ ಆದರು ಚಿದಂಬರ. ಜಮೀನಿನ ದಾಖಲೆಗಳೆಲ್ಲಾ ಅವರ ಹೆಸರಿಗೆ ಆದವು. ಆ ದಾಖಲೆಗಳ ಆಧಾರದ ಮೇಲೆ ಭೂನ್ಯಾಯಮಂಡಳಿ ಕೂಡ ಜಮೀನು ಚಿದಂಬರ ಅವರದ್ದೇ ಎಂದು ಆದೇಶಿಸಿತು.

ತಮಗೆ ಸೇರಿದ ಜಮೀನು ಬೇರೊಬ್ಬರ ಪಾಲಾಗಿದ್ದನ್ನು ಕಂಡು ಅಸಮಾಧಾನಗೊಂಡ ಸುನಂದಾ, ಶಾರದಾ ಹಾಗೂ ಇತರರು ಭೂನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ನ್ಯಾಯಮಂಡಳಿ ಆದೇಶ ರದ್ದು ಮಾಡಿ, ಜಮೀನು ತಮಗೇ ಸೇರಿದ್ದು ಎಂದು ಆದೇಶಿಸುವಂತೆ ಕೋರ್ಟ್ ಅನ್ನು ಅವರು ಕೋರಿದರು. 1999ರಲ್ಲಿ ಹೈಕೋರ್ಟ್‌ ಏಕಸದಸ್ಯ ಪೀಠವು ಈ ಅರ್ಜಿಯನ್ನು ಮಾನ್ಯ ಮಾಡಿ, ಆ ಜಮೀನು ಸುನಂದಾ ಶಾರದಾ ಹಾಗೂ ಇತರರಿಗೆ ಸೇರಿದ್ದು ಎಂದು ಆದೇಶಿಸಿತು. ಭೂನ್ಯಾಯಮಂಡಳಿಯಲ್ಲಿ  ತಮ್ಮ ಪರ ಆದೇಶ ಆಗಿದ್ದಾಗ ಹಿಗ್ಗಿದ್ದ ಚಿದಂಬರ ಅವರು, ಹೈಕೋರ್ಟ್‌ ಆದೇಶದಿಂದ ಕಂಗಾಲಾಗಿ ಹೋದರು. ಏಕಸದಸ್ಯ ಪೀಠದ ಆದೇಶದ ರದ್ದತಿಗೆ ಕೋರಿ ಅವರು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತಾರೆ.

ಆ ಮೇಲ್ಮನವಿಯಲ್ಲಿ ಪ್ರತಿವಾದಿಗಳಾಗಿ ಸುನಂದಾ, ಶಾರದಾ ಹಾಗೂ ಇತರರೂ ಇರುತ್ತಾರೆ.  ಮೇಲ್ಮನವಿ ಇನ್ನೂ ವಿಚಾರಣಾ ಹಂತದಲ್ಲಿ ಇದ್ದಾಗಲೇ ವಿಚಿತ್ರ ಎಂಬಂತೆ ಸುನಂದಾ ಅವರು ತಮ್ಮ ವಕೀಲರನ್ನು ಏಕಾಏಕಿಯಾಗಿ ಬದಲಿಸುತ್ತಾರೆ. ಆ ವಕೀಲರ ಮೂಲಕ ಹೈಕೋರ್ಟ್‌ಗೆ ‘ಕೇವಿಯೆಟ್’ ಸಲ್ಲಿಸುತ್ತಾರೆ (ಚಿದಂಬರ ಅವರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಆಲಿಸಿದ ನಂತರವೇ ಆದೇಶ ಹೊರಡಿಸಬೇಕು, ಅಲ್ಲಿಯವರೆಗೆ ಏಕಸದಸ್ಯಪೀಠದ ಆದೇಶಕ್ಕೆ ತಡೆ ನೀಡಬಾರದು ಅಥವಾ ಬೇರೆ ರೀತಿಯ ಆದೇಶ ಹೊರಡಿಸಬಾರದು ಎಂಬ ವಿನಂತಿಯುಳ್ಳ ಕೇವಿಯೆಟ್ ಇದು).  ಕೇವಿಯೆಟ್‌ ಹಿನ್ನೆಲೆಯಲ್ಲಿ ಪ್ರಕರಣವಿನ್ನೂ ವಿಚಾರಣೆ ಬಂದಿರುವುದಿಲ್ಲ.

ಆದರೆ ಈ ಮಧ್ಯೆಯೇ, ಚಿದಂಬರ ಹಾಗೂ ಸುನಂದಾ ಕಡೆಯವರು ಸೇರಿ ಒಂದು ಪ್ರಮಾಣಪತ್ರವನ್ನು ಕೋರ್ಟ್‌ಗೆ ಸಲ್ಲಿಸುತ್ತಾರೆ. ಅದರಲ್ಲಿ ‘ಈ ಜಮೀನಿನ ವಿಚಾರದಲ್ಲಿ ನಾವೆಲ್ಲರೂ ಒಪ್ಪಂದ ಮಾಡಿಕೊಂಡಿದ್ದೇವೆ. ಸಂಧಾನದ ಮೂಲಕ ಪರಸ್ಪರ ಈ ವಿವಾದವನ್ನು ಬಗೆಹರಿಸಿಕೊಳ್ಳುತ್ತೇವೆ. ಆದ್ದರಿಂದ ಚಿದಂಬರ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ವಾಪಸ್ ಪಡೆಯಲು ಅವಕಾಶ ನೀಡಬೇಕು’ ಎಂದು ಇರುತ್ತದೆ.  ಈ ಲಿಖಿತ ಒಪ್ಪಂದದಲ್ಲಿ ಇರುವ ಸಹಿಗಳೆಲ್ಲವೂ ಸುನಂದಾ, ಶಾರದಾ ಹಾಗೂ ಇತರ ಪ್ರತಿವಾದಿಗಳದ್ದೇ ಎಂದು ನೋಟರಿಯವರೂ ದೃಢೀಕರಿಸುತ್ತಾರೆ. ಈ ಒಪ್ಪಂದದ ಸತ್ಯಾಸತ್ಯತೆಯನ್ನು ತಿಳಿಯಲು ಹಾಗೂ ಕೇವಿಯೆಟ್‌ ಸಲ್ಲಿಕೆ ಹಿನ್ನೆಲೆಯಲ್ಲಿ ಕೋರ್ಟ್, ವಿಚಾರಣೆಯನ್ನು ಮುಂದೂಡಿ ಸುನಂದಾ, ಶಾರದಾ ಹಾಗೂ ಇತರ ಪ್ರತಿವಾದಿಗಳನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ವಕೀಲರಿಗೆ ಆದೇಶಿಸುತ್ತದೆ. ಮುಂದಿನ ವಿಚಾರಣೆ ವೇಳೆ ಎಲ್ಲರೂ ಕೋರ್ಟ್‌ಗೆ ಹಾಜರು ಆಗುತ್ತಾರೆ.

ಎಲ್ಲ ಪ್ರತಿವಾದಿಗಳು ಕೋರ್ಟ್‌ಗೆ ಹಾಜರಾಗಿದ್ದನ್ನು, ಎಲ್ಲರ ಸಹಿ ಇರುವುದನ್ನು ಹಾಗೂ ಕೋರ್ಟ್‌ನಲ್ಲಿ ಎಲ್ಲರೂ ರಾಜಿಗೆ ಒಪ್ಪಿಕೊಂಡಿರುವುದನ್ನು, ನೋಟರಿಯವರು  ಸಹಿ ದೃಢೀಕರಿಸಿರುವುದನ್ನು... ಹೀಗೆ ಎಲ್ಲವನ್ನೂ ಪರಿಶೀಲಿಸಿದ ಹೈಕೋರ್ಟ್, ಸಂಧಾನಕ್ಕೆ ಒಪ್ಪಿಗೆ ಸೂಚಿಸಿ ಮೇಲ್ಮನವಿಯನ್ನು ವಾಪಸ್ ಪಡೆದುಕೊಳ್ಳಲು ಅನುಮತಿ ನೀಡುತ್ತದೆ.

ಅಲ್ಲಿಯವರೆಗೆ ಎಲ್ಲವೂ ಚಿದಂಬರ ಅಂದುಕೊಂಡಂತೆಯೇ ನಡೆಯಿತು. ನಂತರ ಆದದ್ದು ಎಡವಟ್ಟು!
ಸಂಧಾನಕ್ಕೆ ಅನುಮತಿ ನೀಡಿದ್ದ ಹೈಕೋರ್ಟ್‌ ಆದೇಶದ ಪ್ರತಿಯನ್ನು ಭೂನ್ಯಾಯಮಂಡಳಿಗೆ ಚಿದಂಬರ ಸಲ್ಲಿಸಬೇಕಿತ್ತು. ಅಲ್ಲಿ ಆದೇಶದ ಪ್ರತಿ ಸಲ್ಲಿಕೆಯಾದ ನಂತರ ಯಾರ್‍ಯಾರ ಪಾಲಿಗೆ ಎಷ್ಟು ಜಮೀನು ಎಂಬುದನ್ನು ಎರಡೂ ಕಡೆಯವರು ತೀರ್ಮಾನಿಸಬೇಕಿತ್ತು. ಅದರಂತೆಯೇ ಚಿದಂಬರ ಅವರು ಹೈಕೋರ್ಟ್‌ ಆದೇಶದ ಪ್ರತಿಯನ್ನು ಭೂನ್ಯಾಯಮಂಡಳಿಗೆ ನೀಡಿದರು. ಮುಂದಿನ ಪ್ರಕ್ರಿಯೆಗಾಗಿ ಸುನಂದಾ, ಶಾರದಾ ಹಾಗೂ ಇತರರಿಗೆ
ನ್ಯಾಯಮಂಡಳಿಯು ನೋಟಿಸ್‌ ಜಾರಿಗೊಳಿಸಿ ಹಾಜರಾಗುವಂತೆ ಸೂಚಿಸುತ್ತದೆ.

ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ ಕೋರ್ಟ್ ಆದೇಶ ನೋಡಿದ ಸುನಂದಾ, ಶಾರದಾ ಹಾಗೂ ಇತರರು ಹೌಹಾರಿ ಹೋದರು. ಏಕೆಂದರೆ ಸಂಧಾನಕ್ಕೆ ಕೋರಿ ಅವರ್‍ಯಾರೂ ಕೋರ್ಟ್‌ಗೆ ಒಪ್ಪಂದದ ಅರ್ಜಿ ಸಲ್ಲಿಸಿಯೇ ಇರಲಿಲ್ಲ! ಅಂದರೆ, ಸುನಂದಾ, ಶಾರದಾ ಹಾಗೂ ಇತರರು ಎಂದುಕೊಂಡು ಚಿದಂಬರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದ ವ್ಯಕ್ತಿಗಳೆಲ್ಲಾ ನಕಲಿಯವರು! ಸಂಧಾನದ ಸಂಬಂಧ ಸಲ್ಲಿಸಿದ್ದ ಅರ್ಜಿಯಲ್ಲಿ ಹಾಕಿದ್ದ ಸಹಿ ಕೂಡ ನಕಲಿಯೇ.  ಸುನಂದಾ, ಶಾರದಾ  ಹಾಗೂ ಇತರರು ತಮ್ಮ ವಕೀಲರನ್ನು ಬದಲಿಸಿರಲಿಲ್ಲ, ಬದಲಾಗಿ ಚಿದಂಬರ ಅವರೇ ವಕೀಲರನ್ನು ಬದಲಿಸಿ ಅವರಿಗೂ ಸತ್ಯ ವಿಷಯವನ್ನು ತಿಳಿಸದೇ ಕೇವಿಯೆಟ್‌ ಹಾಕಿಸುವ ಮೂಲಕ ಪಂಗನಾಮ ಹಾಕಿದ್ದರು. ಅಷ್ಟೇ ಅಲ್ಲದೆ ಕೋರ್ಟ್‌ಗೂ ಸತ್ಯಾಂಶ ತಿಳಿಯದಂತೆ ಮಾಡಿದ್ದರು! ಒಪ್ಪಂದದಲ್ಲಿ ಹಾಕಿರುವ ಸಹಿಗಳೆಲ್ಲಾ ಅಸಲಿಯವೇ ಎಂದು ನೋಟರಿಯವರನ್ನೂ ನಂಬಿಸಿಬಿಟ್ಟಿದ್ದರು!

ಕೋರ್ಟ್‌ ಆದೇಶ ಕಂಡ ಸುನಂದಾ ಅವರು ತಮಗೆ ಅನ್ಯಾಯ ಆಗಿದ್ದು, ಚಿದಂಬರ ಅವರು ಮೋಸ ಮಾಡಿದ್ದಾರೆ ಎಂದು ಹೇಳಿ ಪುನಃ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಕೋರ್ಟ್ ಹೊರಡಿಸಿದ್ದ ಸಂಧಾನ ಆದೇಶವನ್ನು ರದ್ದು ಮಾಡುವಂತೆ ಅವರು ಕೋರಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಚಿದಂಬರ ಅವರನ್ನು ಹಾಜರು ಪಡಿಸುವಂತೆ ಅವರ ವಕೀಲರಿಗೆ ಸೂಚಿಸಿತು. ನ್ಯಾಯಾಲಯಕ್ಕೆ ಹಾಜರಾಗುವಂತೆ ಚಿದಂಬರ ಅವರಿಗೆ ವಕೀಲರು ನೋಟಿಸ್ ಕಳುಹಿಸಿದರು. ಆದರೆ ಚಿದಂಬರ ಹಾಜರು ಆಗಲೇ ಇಲ್ಲ. ಹೀಗೆ ಮೂರ್ನಾಲ್ಕು ಬಾರಿ ನೋಟಿಸ್ ಕಳುಹಿಸಿದರೂ ಚಿದಂಬರ ಹಾಜರಾಗದ ಕಾರಣ, ಕೋರ್ಟ್ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಿ,  45 ದಿನಗಳ ಕಾಲ ಬಂಧನಕ್ಕೆ ಆದೇಶಿಸಿತು.

ಈ ಆದೇಶದಂತೆಯೇ ಪೊಲೀಸರು ಚಿದಂಬರ ಅವರನ್ನು ಕೋರ್ಟ್‌ಗೆ ಕರೆತಂದರು. ಬೆಳಿಗ್ಗೆ ವಿಚಾರಣೆ ಆರಂಭಗೊಂಡಾಗ ತಾವು ನಿರಪರಾಧಿ ಎಂದು ಚಿದಂಬರ ಹೇಳುತ್ತಲೇ ಬಂದರು. ನಂತರ ವಿಚಾರಣೆಯನ್ನು ಮಧ್ಯಾಹ್ನ ಒಂದು ಗಂಟೆಗೆ ಮುಂದೂಡಿದಾಗ, ಚಿದಂಬರ ನಾಪತ್ತೆಯಾಗಿಬಿಟ್ಟರು! ಮಧ್ಯಾಹ್ನ ಊಟದ ಬಳಿಕ ಅವರನ್ನು ಹಾಜರುಪಡಿಸುವಂತೆ ವಕೀಲರಿಗೆ ಕೋರ್ಟ್ ಸೂಚಿಸಿತು. ವಕೀಲರು ಎಲ್ಲೆಡೆ ಹುಡುಕಿದರೂ ಚಿದಂಬರ ಸಿಗಲೇ ಇಲ್ಲ. ಕೋರ್ಟ್ ಪುನಃ ವಾರಂಟ್ ಜಾರಿ ಮಾಡಿದಾಗ ಪೊಲೀಸರು ಅವರನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಪ್ರಕರಣದಲ್ಲಿ ಚಿದಂಬರ ಮಾತ್ರವಲ್ಲದೆ, ಅವರ ಪರ ವಕೀಲರು ಹಾಗೂ ನಕಲಿ ಸುನಂದಾ, ಶಾರದಾ ಹಾಗೂ ಇತರರ ಪರವಾಗಿ ಕೇವಿಯೆಟ್ ಹಾಕಿದಂಥ ವಕೀಲರು ಕೂಡ ಕೋರ್ಟ್‌ಗೆ ಮೋಸ ಮಾಡಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.

ಈ ಸಂದರ್ಭದಲ್ಲಿ ಚಿದಂಬರ ನನ್ನನ್ನು ವಕೀಲರನ್ನಾಗಿ ನೇಮಕ ಮಾಡಿಕೊಂಡರು. ಎಳ್ಳಷ್ಟೂ ಸುಳ್ಳು ಹೇಳದೆ ಸಂಪೂರ್ಣ ಸತ್ಯ ನುಡಿಯುವಂತೆ ಅವರಿಗೆ ನಾನು ಹೇಳಿದೆ. ಎಲ್ಲಾ ವಿಷಯಗಳನ್ನೂ  ಅವರು ಹೇಳಿದರು. ಅದನ್ನು ಕೇಳಿದ ನಂತರ ನನಗೆ ಚಿದಂಬರ ದೊಡ್ಡ ತಪ್ಪು ಮಾಡಿದ್ದಾರೆ ಎಂದು ತಿಳಿಯಿತು. ನ್ಯಾಯಾಲಯಕ್ಕೆ ಮೋಸ ಮಾಡಿ ಆದೇಶ ಪಡೆದುಕೊಂಡಿರುವುದು ಸಾಧಾರಣ ತಪ್ಪಲ್ಲ. ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭ ಆಗಿಲ್ಲದ ಕಾರಣ, ನಡೆದದ್ದನ್ನೆಲ್ಲಾ ಲಿಖಿತ ರೂಪದಲ್ಲಿ ಕೋರ್ಟ್‌ಗೆ ಕೊಟ್ಟು ಕ್ಷಮೆ ಕೋರುವಂತೆ ಹೇಳಿದೆ. ಹೀಗೆ ಮಾಡಿದರೆ ಕೊನೆಯಪಕ್ಷ ಶಿಕ್ಷೆಯಾದರೂ ಕಮ್ಮಿಯಾದೀತು ಎಂದು ತಿಳಿಹೇಳಿದೆ. ‘ಇದರಲ್ಲಿ ವಕೀಲರ ಹಾಗೂ ನೋಟರಿಯವರ ತಪ್ಪು ಇಲ್ಲ, ಅವರಿಗೆ ವಿಷಯ ಗೊತ್ತೇ ಇರಲಿಲ್ಲ’ ಎಂದು ಚಿದಂಬರ ಹೇಳಿದರು. ಅವರ ತಪ್ಪಿಲ್ಲದಿದ್ದರೂ ಅನ್ಯಾಯವಾಗಿ ಅವರು ಕೂಡ ಸಿಕ್ಕಿಕೊಳ್ಳುತ್ತಿದ್ದಾರೆ ಎಂದು ನನಗೆ ಅನ್ನಿಸಿತು. ನಡೆದದ್ದನ್ನೆಲ್ಲಾ ಲಿಖಿತ ರೂಪದಲ್ಲಿ ಬರೆದು ಚಿದಾನಂದ ಅವರು ಪ್ರಮಾಣಪತ್ರದ ಮೂಲಕ ಕೋರ್ಟ್‌ಗೆ ನೀಡಿದರು.  ಇಷ್ಟೇ ಆಗಿದ್ದರೆ ಬಹುಶಃ ಶಿಕ್ಷೆ ಕಡಿಮೆಯಾಗುತ್ತಿತ್ತೋ ಗೊತ್ತಿಲ್ಲ.

ಆದರೆ ಸತ್ಯ ಒಪ್ಪಿಕೊಂಡು ಪ್ರಮಾಣಪತ್ರ ಸಲ್ಲಿಸಿದ ನಂತರ ವಿಚಾರಣೆ ವೇಳೆ ಚಿದಂಬರ, ನ್ಯಾಯಮೂರ್ತಿಗಳ ಎದುರು ಹೇಳಿಕೆ ನೀಡುವಾಗ ಮತ್ತೆ ಬಣ್ಣ ಬದಲಿಸಿಬಿಟ್ಟರು! ತಾವು ತಪ್ಪೇ ಮಾಡಲಿಲ್ಲ ಎಂದು ಹೇಳತೊಡಗಿದರು. ಆದರೆ ಪ್ರಮಾಣಪತ್ರವನ್ನು ಗಮನಿಸಿದ್ದ ಹಾಗೂ ನನ್ನ ವಾದವನ್ನು ಆಲಿಸಿದ್ದ ನ್ಯಾಯಮೂರ್ತಿಗಳಿಗೆ ಇವರು ಹೇಳುತ್ತಿರುವುದು ಸುಳ್ಳು ಎಂದು ತಿಳಿಯಿತು. ಆದ್ದರಿಂದ ಚಿದಂಬರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆಯನ್ನು ಸ್ವಯಂ ಪ್ರೇರಿತವಾಗಿ ದಾಖಲು ಮಾಡಿದರು. ಕೋರ್ಟ್ ಅನ್ನು ತಪ್ಪು ದಾರಿಗೆ ಎಳೆದಿದ್ದ ಕಾರಣ ಆರು ತಿಂಗಳ ಶಿಕ್ಷೆಯನ್ನು ಅವರಿಗೆ ವಿಧಿಸಲಾಯಿತು.

ಇದರಲ್ಲಿ ನಕಲಿ ಸುನಂದಾ, ಶಾರದಾ ಮುಂತಾದವರ ಪರವಾಗಿ ಬಂದಿದ್ದ ವಕೀಲರು ಹಾಗೂ ನೋಟರಿಯವರ  ತಪ್ಪಿಲ್ಲ ಎಂಬ ನನ್ನ ವಾದವನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ (ತಪ್ಪು ಒಪ್ಪಿಕೊಳ್ಳುವಂತೆ ಚಿದಂಬರ ಮೂಲಕ ನಾನೇನಾದರೂ ಪ್ರಮಾಣಪತ್ರ ಸಲ್ಲಿಸದೇ ಹೋಗಿದ್ದರೆ ಬಹುಶಃ ಅವರು ಕೂಡ ಈ ಪ್ರಕರಣದಲ್ಲಿ ಸಿಲುಕುವ ಸಾಧ್ಯತೆ ಇತ್ತು).

ನ್ಯಾಯಾಲಯಕ್ಕೆ ಆರಂಭದಿಂದಲೂ ಮೋಸ ಮಾಡುತ್ತ ಬಂದಿದ್ದ ಚಿದಂಬರ ಅವರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು  ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನಿರ್ದೇಶಿಸಿದರು.

ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ತಪ್ಪನ್ನು ಗಂಭೀರವಾಗಿ ಪರಿಗಣಿಸಿ ಏಳು ವರ್ಷಗಳ ಶಿಕ್ಷೆ ನೀಡಿತು. ಈ ಆದೇಶವನ್ನು ಸೆಷನ್ಸ್ ಕೋರ್ಟ್ ಕೂಡ ಎತ್ತಿಹಿಡಿಯಿತು. ಸೆಷನ್ಸ್ ಕೋರ್ಟ್ ಆದೇಶದ ರದ್ದತಿಗೆ ಕೋರಿ ಚಿದಂಬರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಅವರ ಪರವಾಗಿ ಪುನಃ ನಾನೇ ವಕಾಲತ್ತು ವಹಿಸಿದೆ.

‘ಕೋರ್ಟ್‌ ಅನ್ನು ತಪ್ಪು ದಾರಿಗೆ ಎಳೆದಿರುವ ಸಂಬಂಧ ಆರಂಭದಲ್ಲಿ 45 ದಿವಸ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಆರು ತಿಂಗಳು ಶಿಕ್ಷೆಯನ್ನು ಚಿದಂಬರ ಈಗಾಗಲೇ ಅನುಭವಿಸಿದ್ದಾರೆ. ಅದೇ ಅಪರಾಧಕ್ಕೆ ಪುನಃ ಶಿಕ್ಷೆ ನೀಡಿರುವುದು ಸರಿಯಲ್ಲ. ಒಂದೇ ಅಪರಾಧಕ್ಕೆ ಈ ರೀತಿ ಬೇರೆಬೇರೆ ಶಿಕ್ಷೆ ನೀಡುವ ಅವಕಾಶ ಇಲ್ಲ’ ಎಂದು ವಾದಿಸಿದೆ. ತಮ್ಮ ತಪ್ಪನ್ನು ಚಿದಂಬರ ಹಿಂದೆಯೇ ಒಪ್ಪಿಕೊಂಡಿದ್ದರ ಕುರಿತೂ ಕೋರ್ಟ್ ಗಮನಕ್ಕೆ ತಂದೆ. ಇದನ್ನು ಮಾನ್ಯ ಮಾಡಿದ ಹೈಕೋರ್ಟ್, 2013ರಲ್ಲಿ ಸೆಷನ್ಸ್‌ ಕೋರ್ಟ್‌ ಆದೇಶ ರದ್ದು ಮಾಡಿ, ಚಿದಂಬರ ಅವರಿಗೆ ₹ 25 ಸಾವಿರ ದಂಡ ವಿಧಿಸಿತು.

ವಕೀಲರು, ನೋಟರಿ, ಸುನಂದಾ, ಶಾರದಾ ಹಾಗೂ ಇತರರಿಗೆ ಮಾತ್ರವಲ್ಲದೆ ಕೋರ್ಟ್‌ಗೂ ಮೋಸ ಮಾಡಲು ನೋಡಿದ್ದ ಚಿದಂಬರ,  ಏಳು ವರ್ಷಗಳ ಶಿಕ್ಷೆಯಿಂದ ಹೇಗೋ ತಪ್ಪಿಸಿಕೊಂಡರು ನಿಜ. ಆದರೆ ಸುಖಾಸುಮ್ಮನೆ 1998ರಿಂದ 2013ರವರೆಗೆ ಅಲೆದಾಡಿ, ನಡುವೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಯಾವುದೇ ಕಕ್ಷಿದಾರರ ಪರವಾಗಿ ವಕಾಲತ್ತು ವಹಿಸುವಾಗ ವಕೀಲರು ಎಷ್ಟೆಲ್ಲಾ ಜಾಗರೂಕರಾಗಿರಬೇಕು ಎಂಬ ಪಾಠವನ್ನೂ ಇದು ಕಲಿಸುತ್ತದೆ.
ಲೇಖಕ ಹೈಕೋರ್ಟ್‌ ವಕೀಲ
(ಮುಂದಿನ ವಾರ: ಕೊಲೆ ಆರೋಪಿಗಳಿಗೆ ನೆರವಾಯ್ತು ನಟನ ಸಾವು!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT