ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಬದಲಾವಣೆಯ ತಂಗಾಳಿ

Last Updated 30 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಹೊರ ಜಗತ್ತಿನ ದೃಷ್ಟಿಯಲ್ಲಿ ನಿಗೂಢ ಹಾಗೂ ಕಟ್ಟಾ ಸಂಪ್ರದಾಯವಾದಿ ಕಮ್ಯುನಿಸ್ಟ್ ರಾಷ್ಟ್ರವಾಗಿ ಉಳಿದಿರುವ ಚೀನಾದಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಸಂಪ್ರದಾಯವಾದಿ ಉದಾರವಾದಿ ನಾಯಕ ಕ್ಸಿ ಜಿನ್‌ಪಿಂಗ್ ಹಾಗೂ ತಂಡ ಬಲಾಢ್ಯ ರಾಷ್ಟ್ರದ ಸಾರಥ್ಯ ವಹಿಸಿಕೊಳ್ಳುತ್ತಲೇ ವಿಶ್ವದ ಕುತೂಹಲಭರಿತ ದೃಷ್ಟಿ ಚೀನಾದತ್ತ ನೆಟ್ಟಿದೆ. ಹೊಸ ನಾಯಕತ್ವದ `ಬದಲಾವಣೆ' ಮತ್ತು `ಮುಕ್ತ ಆರ್ಥಿಕ ನೀತಿ' ಘೋಷಣೆಗಳು ಕೆಂಪು ಕ್ರಾಂತಿಯ ನೆಲದಲ್ಲಿ ಹೊಸ ಯುಗದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಚೀನಾದಂತೆಯೇ ಅದರ ನೂತನ ಸಾರಥಿ ಕ್ಸಿ ಅವರದ್ದೂ ನಿಗೂಢ ವ್ಯಕ್ತಿತ್ವ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವವರೆಗೂ ಹೊರ ಪ್ರಪಂಚಕ್ಕೆ ಪರಿಚಯ ಇರದ ವ್ಯಕ್ತಿ. ತವರು ನಾಡಿನಲ್ಲಿಯೂ ಅವರನ್ನು ಬಲ್ಲವರು ಕಡಿಮೆ. ಚೀನಿಯರಿಗೆ ಜಿನ್‌ಪಿಂಗ್ ಹೆಸರು, ಅವರ ಚಿಂತನೆ, ನಿಲುವುಗಳ ಪರಿಚಯವಿದ್ದಷ್ಟು ಮುಖ ಚಿರಪರಿಚಿತವಾಗಿರಲಿಲ್ಲ. ಇಲ್ಲಿಯವರೆಗೂ ಜನರು ಅವರನ್ನು ಗುರುತಿಸುತ್ತಿದ್ದದ್ದು ಪ್ರಭಾವಶಾಲಿ ನಾಯಕರಾಗಿದ್ದ ಅವರ ತಂದೆಯ ಹೆಸರಿನಿಂದ. ಇಲ್ಲವೇ ಜನಪ್ರಿಯ ಗಾಯಕಿಯಾಗಿರುವ ಪತ್ನಿಯ ಹೆಸರಿನಿಂದ! ಜಿನ್‌ಪಿಂಗ್ ತಂದೆ ಕಮ್ಯುನಿಸ್ಟ್ ಪಕ್ಷದ ಉನ್ನತ ಸ್ಥಾನದಲ್ಲಿದ್ದವರು. ಚೀನಾದ ನಾಯಕ ಮಾವೊ ಝೆಡಾಂಗ್ ಅವರ ಪರಮಾಪ್ತರಾಗಿದ್ದವರು. 

ಪ್ರಚಾರದಿಂದ ಸದಾ ದೂರ ಉಳಿದ ಅವರು ತೀರಾ ಇತ್ತೀಚಿನವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ವಿರಳ. ಜನಸಾಮಾನ್ಯರ ನಡುವೆ ಬೆಳೆದು ಬಂದರೂ ಇತರರಂತೆ ಜನಪ್ರಿಯತೆಯ ಉತ್ತುಂಗ ಶಿಖರ ತಲುಪಿದ ನಾಯಕರಾಗಲಿಲ್ಲ. ಹಾಗಂತ ನೇಪಥ್ಯಕ್ಕೆ ಸರಿದು, ಮರೆತು ಹೋಗಿರಲಿಲ್ಲ. ತೆರೆಯ ಮರೆಯಲ್ಲಿದ್ದುಕೊಂಡೇ ತ್ರಿವಿಕ್ರಮನಾಗಿ ಬೆಳೆದರು.

ಏಕಕಾಲದಲ್ಲಿ ರಾಷ್ಟ್ರ, ಪಕ್ಷ ಹಾಗೂ ಸೇನೆಯ ಮುಖ್ಯಸ್ಥರಾಗುವುದರೊಂದಿಗೆ ಚೀನಾದ ಅತ್ಯಂತ ಪ್ರಭಾವಶಾಲಿ ಹಾಗೂ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಅವರಿಗೆ ಅನಿರೀಕ್ಷಿತವಾಗಿ ಒಲಿದು ಬಂದ ಹುದ್ದೆ ಅಲ್ಲ. ಸರ್ವಶಕ್ತ ನಾಯಕರಾಗಿ ಬೆಳೆದ ಬಂದ ಹಾದಿ ಸುಗಮವಾಗಿರಲಿಲ್ಲ. ಕ್ರಮಿಸಬೇಕಾದ ಹಾದಿಯೂ ಸುಲಭವಿಲ್ಲ. 

59 ವರ್ಷದ ಕ್ಸಿ ವ್ಯಕ್ತಿತ್ವವೇ ಹಾಗೆ. ಹಲವು ಅಚ್ಚರಿಗಳ ಸಮಾಗಮ. ಸಂಪ್ರದಾಯವಾದಿ ಕಮ್ಯುನಿಸ್ಟ್ ಆದರೂ ಸದಾ ಸುಧಾರಣೆಯ ತುಡಿತ. ಇದರಿಂದಾಗಿಯೇ ಅವರು `ಸಂಪ್ರದಾಯವಾದಿ ಸುಧಾರಕ' ಎಂದು ಪಕ್ಷದಲ್ಲಿ ಪರಿಚಿತ. ಪ್ರಭಾವಿ ರಾಜಕೀಯ ಮತ್ತು ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ಹಲವಾರು ವರ್ಷ ಚೀನಾದ ಕುಗ್ರಾಮಗಳಲ್ಲಿ ಅಜ್ಞಾತವಾಗಿ ಬಡವರ ಮಧ್ಯೆ ಕಳೆದಿದ್ದಾರೆ. ಅವರ ಬದುಕು, ಬವಣೆಯನ್ನು ಕಣ್ಣಾರೆ ಕಂಡಿದ್ದಾರೆ.

ಹು ಜಿಂಟಾವೊ ಅವರಿಂದ ಅಧಿಕಾರ ವಹಿಸಿಕೊಳ್ಳುವ ಮೊದಲು ಚೀನಾದ ಉದ್ದಗಲಗಳನ್ನು ಸುತ್ತಿದ್ದಾರೆ. ಚೀನಾದ ಅತ್ಯಂತ ಪ್ರಭಾವಶಾಲಿ ಹಾಗೂ ಅತ್ಯುನ್ನತ ಅಧಿಕಾರ ಕೇಂದ್ರಗಳಾದ ಸೇನೆ, ಸರ್ಕಾರ ಮತ್ತು ಚೀನಾ ಕಮ್ಯುನಿಸ್ಟ್ ಪಕ್ಷ ಹೀಗೆ ಈ ಮೂರೂ ಕ್ಸಿ ಹಿಡಿತದಲ್ಲಿವೆ. ಈ ಅಧಿಕಾರವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲದ ವಿಷಯ. ಉದಾರವಾದದ ನಿಲುವಿನಿಂದಾಗಿ ಸಂಪ್ರದಾಯವಾದಿ ಮಾವೊವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಅವರು ಅಜಾತಶತ್ರು ಏನಲ್ಲ.

ಅಧ್ಯಕ್ಷೀಯ ಚುನಾವಣೆ ಅವರ ನಿಜವಾದ ಶಕ್ತಿ, ಸಾಮರ್ಥ್ಯವನ್ನು ಸಾಬೀತುಪಡಿಸಿದೆ. 2,956 ಸದಸ್ಯರ ಪೈಕಿ ಒಬ್ಬ ಸದಸ್ಯ ಮಾತ್ರ ಕ್ಸಿ ವಿರುದ್ಧ ಮತ ಚಲಾಯಿಸಿದರೆ, ಉಳಿದ ಮೂವರು ಮತದಾನದಿಂದ ದೂರ ಉಳಿದರು. ಚೀನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ `ಬಹುಪಕ್ಷೀಯ ಪಾಶ್ಚಾತ್ಯ ಪ್ರಜಾಪ್ರಭುತ್ವ ಮಾದರಿಗಿಂತ ಸಮಾಜವಾದ ವ್ಯವಸ್ಥೆ ಉತ್ತಮ' ಎಂದು ಘೋಷಿಸುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದರು. ದೇಶದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮ ಸ್ಥಿತಿಯಲ್ಲಿರದ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ಅವರು ಸಹಜವಾಗಿ ರಾಷ್ಟ್ರದ ಅರ್ಥ ವ್ಯವಸ್ಥೆಯನ್ನು ಹಳಿಗೆ ತರುವ ಕುರಿತು ಮಾತನಾಡಿದ್ದಾರೆ. ಮುಕ್ತ ಆರ್ಥಿಕ ನೀತಿ ಅಳವಡಿಸಿಕೊಳ್ಳುವತ್ತ ಆಸಕ್ತಿ ತೋರಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಹೊಸ ಅಧ್ಯಕ್ಷರು ಹೆಚ್ಚಿನ ಆಸಕ್ತಿ ತೋರದಿದ್ದರೂ ಸರ್ಕಾರದ ನೀತಿ, ನಿಲುವುಗಳನ್ನು ಟೀಕಿಸಲು ಮತ್ತು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಮುಕ್ತ ಅವಕಾಶ ನೀಡಲಾಗಿದೆ. ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಭವಿಷ್ಯದ ಚೀನಾ ಹೇಗಿರುತ್ತದೆ ಎಂಬ ಸ್ಪಷ್ಟ ಸುಳಿವನ್ನೂ ನೀಡಿದ್ದಾರೆ. ಸೇನೆ ಮತ್ತು ಅಧಿಕಾರಿಗಳಿಗೆ ಸರ್ಕಾರಕ್ಕೆ ವಿಧೇಯರಾಗಿರುವಂತೆ ತಾಕೀತು ಮಾಡಿರುವುದು ಸರ್ವಾಧಿಕಾರಿ ಧೋರಣೆ ಧ್ವನಿಸುತ್ತದೆ ಎನ್ನುವುದು ಪತ್ರಕರ್ತ ಲೀ ವೀಡಾಂಗ್ ಆಕ್ಷೇಪ.

ಸಂಪ್ರದಾಯವಾದಿ ರಾಜಕೀಯ ಸುಧಾರಣೆಯನ್ನು ನಿರಾಕರಿಸಿದರೂ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. ದಕ್ಷ ಸರ್ಕಾರ ಮತ್ತು ಪರಿಶುದ್ಧ ನಾಯಕತ್ವ' ಇದು ಹೊಸ ನಾಯಕತ್ವದ ಧ್ಯೇಯ. ಚೀನಾವನ್ನು ವಿಶ್ವದ ಶ್ರೇಷ್ಠ ಸೇನಾ ಮತ್ತು ಆರ್ಥಿಕ ಶಕ್ತಿಗಳ ಸಾಲಿನಲ್ಲಿ ನಿಲ್ಲಿಸಲು ಪುನರುತ್ಥಾನದ ಅಗತ್ಯವಿದೆ. ಅದಕ್ಕೆ ಆರ್ಥಿಕ ಶಿಸ್ತು ಮರಳಿ ತರಬೇಕಿದೆ. ಬಲಿಷ್ಠ ಮತ್ತು ಅಷ್ಟೇ ವಿಧೇಯ ಸೇನೆಯಿಂದ ಮಾತ್ರ ಇದು ಸಾಧ್ಯ ಎಂದು ಚೀನಿಯರಲ್ಲಿ ಹೊಸ ಕನಸುಗಳನ್ನು ಬಿತ್ತಿದ್ದಾರೆ.

ಹಿಂದಿನ ಅಧ್ಯಕ್ಷ ಹು ಜಿಂಟಾವೋ ಅವರಿಗೆ ಹೋಲಿಸಿದರೆ ಜಿನ್‌ಪಿಂಗ್ ಸಾರ್ವಜನಿಕರ ಮತ್ತು ಮಾಧ್ಯಮಗಳ ವಿಮರ್ಶೆ ಮತ್ತು ಲೇವಡಿಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ ಎಂಬ ಮಾತನ್ನು ಇತ್ತೀಚೆಗೆ ನಡೆದ ಘಟನೆ ರುಜುವಾತು ಪಡಿಸಿತು. ಸಾವಿರಾರು ಸಂಖ್ಯೆಯಲ್ಲಿ ಮೃತಪಟ್ಟ ಹಂದಿಗಳು ನದಿಯಲ್ಲಿ ತೇಲಿಬಂದಾಗ ಮಾಧ್ಯಮಗಳು ಜಿನ್‌ಪಿಂಗ್ ಅವರ  `ಜಲ ಮಾಲಿನ್ಯ' ತಡೆಯುವ ಕುರಿತಾದ ಹೇಳಿಕೆಯನ್ನು ಹೋಲಿಸಿ ವ್ಯಂಗ್ಯವಾಗಿ ಬರೆದಿದ್ದವು. ಇದಕ್ಕೆ ಜಿನ್‌ಪಿಂಗ್ ಕೋಪಗೊಳ್ಳಲಿಲ್ಲ.

`ರಾಜಕೀಯದಲ್ಲಿ ಹೆಚ್ಚು ಎಡಕ್ಕೆ ಮತ್ತು ಆರ್ಥಿಕ ನೀತಿಯಲ್ಲಿ ಬಲಕ್ಕೆ ವಾಲುವುದನ್ನು ಅವರು ಕಲಿಯಬೇಕಿದೆ. ಇಲ್ಲದಿದ್ದರೆ ಅವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲಾರರು' ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸೇನೆಯ ಮುಖ್ಯಸ್ಥರಾಗಲು ಹು ಜಿಂಟಾವೊ ಎರಡು ವರ್ಷ ಕಾಯಬೇಕಾಯಿತು. ಆ ವಿಷಯದಲ್ಲಿ ಜಿನ್‌ಪಿಂಗ್ ಅವರಿಗಿಂತ ಅದೃಷ್ಟವಂತ. ಸೇನೆ, ಪಕ್ಷ ಮತ್ತು ಅಧ್ಯಕ್ಷ ಅಧಿಕಾರ ಅವರ ಬಳಿಯೇ ಇವೆ.

ಹೊಸ ಉಪಾಧ್ಯಕ್ಷ ಲೀ ಯುವಾಂಚೌ ಕೂಡ ಆಗರ್ಭ ಶ್ರೀಮಂತರಾದರೂ ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಪ್ರೇರಿತರಾದವರು. ಅವರ ತಂದೆಯೂ ಕಮ್ಯುನಿಸ್ಟ್ ಪಕ್ಷದ ಪ್ರಭಾವಿ ನಾಯಕರಾಗಿದ್ದವರು. ಪಾಲಿಟ್‌ಬ್ಯುರೋದ ಸ್ಥಾಯಿ ಸಮಿತಿಯ ಏಳು ಉನ್ನತ ಸ್ಥಾನಗಳಲ್ಲಿ ಲೀ ಸ್ಥಾನ ಪಡೆಯುತ್ತಾರೆ ಎಂದು ನಂಬಲಾಗಿತ್ತು. ಆ ನಿರೀಕ್ಷೆ ಹುಸಿಯಾದರೂ ಉಪಾಧ್ಯಕ್ಷರಾಗುವ ಮೂಲಕ ಜಿನ್‌ಪಿಂಗ್ ನಂತರದ ಎರಡನೇ ಪ್ರಭಾವಿ ಸ್ಥಾನ ಅಲಂಕರಿಸಿದ್ದಾರೆ.

ಪ್ರಧಾನಿ ವೆನ್ ಜಿಯಾಬೊ ಅವರಿಂದ ತೆರವಾದ ಹುದ್ದೆಗೆ ಆಯ್ಕೆಯಾಗಿರುವ ಲೀ ಕೆಕಿಯಾಂಗ್ ಕೂಡಾ ಅಷ್ಟೇ ಸಾಮರ್ಥ್ಯ ಹೊಂದಿರುವ ನಾಯಕ. ಜಿನ್‌ಪಿಂಗ್, ಲೀ ಯುವಾಂಚೌ ಮತ್ತು ಕೆಕಿಯಾಂಗ್ ಅವರಂತಹ ಸಮರ್ಥ ಕಾಮ್ರೇಡ್‌ಗಳ ತಂಡ ಚೀನಾವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಸೂಚನೆ ನೀಡಿದೆ. ಅದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂದು ಕಾಯ್ದು ನೋಡಬೇಕು.

ಹೊಸ ನಾಯಕರು ಪಠಿಸುತ್ತಿರುವ ಬದಲಾವಣೆಯ ಮಂತ್ರ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೂಡಿರಬಹುದು. ಪ್ರಶ್ನಾತೀತವೂ ಹೌದು. ಈ ಹೊರೆಯನ್ನು ನವ ನಾಯಕತ್ವ ಎಷ್ಟು ದಿನ ಹೆಗಲ ಮೇಲೆ ಹೊತ್ತು ಸಾಗುತ್ತಾರೆ ಎನ್ನುವುದು ಗೊತ್ತಿಲ್ಲ. ಈ ಮುಂಚಿನ ಆಡಳಿತಾವಧಿಯಲ್ಲಿ ಸಾಕಷ್ಟು ಹಣ ಕೊಳ್ಳೆ ಹೊಡೆದವರು ಇಂದಿನ ವ್ಯವಸ್ಥೆಯ ಭಾಗವಾಗಿ ಆಯಕಟ್ಟಿನ ಜಾಗದಲ್ಲಿದ್ದಾರೆ. ಅದಕ್ಕಾಗಿಯೇ ಇರಬೇಕು ಅಧಿಕಾರ ವಹಿಸಿಕೊಂಡ ದಿನವೇ ಜಿನ್‌ಪಿಂಗ್ ಭ್ರಷ್ಟಾಚಾರದ ಬಗ್ಗೆ ಕಿಡಿಕಾರಿದ್ದು. ಭ್ರಷ್ಟರ ಕಿವಿ ಹಿಂಡಿದರು.

ಸಂಪ್ರದಾಯವಾದಿಗಳಾಗಿರಲಿ ಅಥವಾ ಸುಧಾರಣಾವಾದಿಗಳಾಗಿರಲಿ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನ ನಡೆಸಿದಲ್ಲಿ, ಸ್ಥಾಪಿತ ಹಿತಾಸಕ್ತಿಗಳು ಸರ್ಕಾರವನ್ನೇ ಬುಡಮೇಲು ಮಾಡುವ ಮಟ್ಟಿಗೆ ಹೋಗುವ ಸಾಧ್ಯತೆಗಳಿವೆ. ಸಂಪುಟ ಪುನರ್‌ರಚನೆ ಈ ಮೊದಲೇ ಪಕ್ಷದ ಆಣತಿಯಂತೆ ಮುಗಿದಿದೆ. ಅದರಲ್ಲಿ ಹೊಸ ಮುಖಗಳಿಗೆ ಅವಕಾಶ ಇಲ್ಲ. ರಾಷ್ಟ್ರೀಯ ಅಭಿವೃದ್ಧಿ ಮತ್ತು ಸುಧಾರಣಾ ಆಯೋಗದ ಅಧಿಕಾರ ಬದಲಾವಣೆಗೆ ಅಡ್ಡಿಯಾಗಲಿದೆ.

ತಜ್ಞರ ಸಲಹೆ ಮೇರೆಗೆ ದೇಶದ ಆರ್ಥಿಕ ನೀತಿಗಳ ಜತೆಗೆ ಸಾಮಾಜಿಕ ನೀತಿಗಳನ್ನು ಪುನರ್ ರೂಪಿಸುವ ನೀಲನಕ್ಷೆ ಸಿದ್ಧಪಡಿಸುವ ಕೆಲಸ ಸದ್ದಿಲ್ಲದೆ ನಡೆದಿದೆ. ಈ ವರ್ಷದ ಕೊನೆಗೆ ಅದನ್ನು ಪಕ್ಷದ ವೇದಿಕೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಪಕ್ಷದ ಮೂಲ ಉದ್ದೇಶ, ನೀತಿಗಳನ್ನು ದಾಟುವ ಧೈರ್ಯವನ್ನು ಈ ಮೂವರೂ ಮಾಡಲಾರರು. ಪಕ್ಷದ ಸೀಮಿತ ಚೌಕಟ್ಟಿನಲ್ಲಿಯೇ ಹೊಸ ಬದಲಾವಣೆ ತರುವ ಕನಸು ಕಾಣುತ್ತಿದ್ದಾರೆ. ಶಕ್ತಿಶಾಲಿ ಚೀನಾ ನಿರ್ಮಾಣಕ್ಕೆ ಅಧಿಕಾರವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಈ ಮೂವರ ಯಶಸ್ಸು ಮತ್ತು ಚೀನಾದ ಭವಿಷ್ಯ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT