ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಚಿಕೆ ಸ್ವಭಾವದ ಫ್ರೆಂಚ್‌ ಕಾದಂಬರಿಕಾರ ಪ್ಯಾಟ್ರಿಕ್‌ ಮೊಡಿಯಾನೊ

ವ್ಯಕ್ತಿ
Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೆಲವು ಸಲ ಆಗುವುದೇ ಹೀಗೆ. ಎಲ್ಲೋ ಮಳೆ ಆಗುತ್ತಿರುತ್ತದೆ, ಎಲ್ಲೋ ಸಸಿ ಚಿಗುರುತ್ತಿರುತ್ತದೆ, ನಮ್ಮ ಕಣ್ಣಿಗೆ ಅದು ಬೀಳುವುದೇ ಇಲ್ಲ, ಬಿದ್ದರೂ ಬಹಳ ತಡವಾಗಿರುತ್ತದೆ. ನೊಬೆಲ್‌ ಪ್ರಶಸ್ತಿ ಸುತ್ತ ಏನೇ ವ್ಯಾಖ್ಯಾನಗಳಿರಬಹುದು. ಅದು ಈಗಲೂ ಹಲವು ಜನ ಅಪರಿಚಿತ ಸಾಧಕರನ್ನು ಜಗತ್ತಿನ ಮುಂದೆ ತಂದು ನೋಡಿ ಎಂದು ನಿಲ್ಲಿಸಿಬಿಡುತ್ತದೆ. ಈ ಸಲದ ಸಾಹಿತ್ಯ ನೊಬೆಲ್‌ ಪಡೆದ ಪ್ಯಾಟ್ರಿಕ್‌ ಮೊಡಿಯಾನೊ ಕೂಡ ಅಂಥ ಸಾಹಿತಿ.

ಸಾಹಿತ್ಯ ನೊಬೆಲ್‌ ಬಹುಮಾನಕ್ಕೆ ಆಯ್ಕೆ ಆಗಿರುವಿರಿ ಎಂದು ತಿಳಿಸಲು ಆ ಸಂಸ್ಥೆಯಿಂದ ಫೋನ್‌ ಕರೆ ಬಂದಾಗ ಅವರು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಸಾರ್ವಜನಿಕವಾಗಿ ಮಾತನಾಡಲು, ಕಾಣಿಸಿಕೊಳ್ಳಲು ಬಹಳ ಸಂಕೋಚ ಪಡುವ ಸ್ವಭಾವದ ಪ್ಯಾಟ್ರಿಕ್‌ ಬಹಳ ಚುಟುಕಾಗಿ ತಮಗಾದ ಸಂತೋಷ ವ್ಯಕ್ತಪಡಿಸಿದರು. ‘ಇದನ್ನು ನಂಬಲು ತುಸು ಕಷ್ಟವಾಗುತ್ತಿದೆ’ ಎನ್ನುವುದು ಅವರ ಮೊದಲ ಪ್ರತಿಕ್ರಿಯೆಯಾಗಿತ್ತು. ಅವರ ಪುಸ್ತಕಗಳು ಸುಮಾರು ಮೂವತ್ತು ಭಾಷೆಗಳಿಗೆ ಅನುವಾದವಾಗಿವೆ.

ಈ ಬಾರಿಯ ಆಯ್ಕೆ ಸಮಿತಿಗೆ ಸವಾಲಾಗುವಂಥ ಹೆಸರುಗಳೇ ಇದ್ದವು. ಜಪಾನಿನ ಹರುಕಿ ಮುರಾಕಮಿ ಹಾಗೂ ಕೆನ್ಯಾದ ಗೂಗಿ ವಾ ಥಿಯಾಂಗೊ ಅವರ ಹೆಸರುಗಳು ಪಕ್ಕಕ್ಕೆ ಸರಿದು ಈ ಬಾರಿ ಸಾಹಿತ್ಯ ನೊಬೆಲ್‌ ಪ್ಯಾಟ್ರಿಕ್‌ ಮೊಡಿಯಾನೊ ಅವರಿಗೆ ಒಲಿದಿದೆ. 69 ವಸಂತಗಳನ್ನು ಕಳೆದಿರುವ ಪ್ಯಾಟ್ರಿಕ್‌ ಮೊಡಿಯಾನೊ ಫ್ರೆಂಚ್‌ ಲೇಖಕ. ಕಾದಂಬರಿ, ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ಹಿಟ್ಲರನ ನಾಜಿ ಪಡೆ ಫ್ರಾನ್ಸಿನ ಮೇಲೆ ನಡೆಸಿದ ದಾಳಿ ಪ್ಯಾಟ್ರಿಕ್‌ ಅವರ ಮೇಲೆ ಬಹಳ ಪ್ರಭಾವ ಮಾಡಿದೆ. ಅವರ ಬಹುಪಾಲು ಕೃತಿಗಳು ನಾಜಿ ವಿಷಯವನ್ನೇ ಕುರಿತಂಥವು.

ಒಂದು ಕಾಲದ ಪ್ಯಾರಿಸ್‌ನ ರಸ್ತೆ, ಮನೆ, ಹೋಟೆಲ್‌ಗಳು ಅವರ ಸೃಜನಶೀಲ ಕೃತಿಗಳ ಮೂಲಕ ಓದುಗರ ನೆನಪಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಈ ಹಿಂದೆ ಸಾಹಿತ್ಯಕ್ಕೆ ನೊಬೆಲ್‌ ಗೌರವ ಗಳಿಸಿದ ಫ್ರೆಂಚ್‌ ಲೇಖಕರಾದ ಆಂದ್ರೆ ಜಿದ್, ಆಲ್ಬರ್ಟ್‌ ಕಾಮು, ಜೀನ್‌ ಪಾಲ್‌ ಸಾರ್ತ್ರೆ ಇವರ ಸಾಲಿಗೆ ಈಗ ಪ್ಯಾಟ್ರಿಕ್‌  ಅವರ ಹೆಸರೂ ಸೇರಿದೆ.

ಒಂದು ವಿಚಿತ್ರವೆಂದರೆ ಭಾರತದಲ್ಲೂ ಬಹುತೇಕ ಜನರಿಗೆ ಅವರ ಹೆಸರು ಅಪರಿಚಿತ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ಪ್ಯಾಟ್ರಿಕ್‌ ಅವರು ಫ್ರೆಂಚ್‌ನಲ್ಲಿ ಬರೆದಿರುವುದು ಹಾಗೂ ಅವರು ರಚಿಸಿರುವ ಬಹುಪಾಲು ಪುಸ್ತಕಗಳೂ ಇಂಗ್ಲಿಷ್‌ಗೆ ಅನುವಾದವಾಗದಿರುವುದು.
ನೊಬೆಲ್‌ ಸಮಿತಿಯು ಪ್ಯಾಟ್ರಿಕ್‌ ಅವರನ್ನು 19ನೇ ಶತಮಾನದ ಸುಪ್ರಸಿದ್ಧ ಫ್ರೆಂಚ್‌ ಕಾದಂಬರಿಕಾರ, ವಿಮರ್ಶಕ ಮಾರ್ಸೆಲ್‌ ಫ್ರೌಸ್ಟ್‌ ಅವರಿಗೆ ಹೋಲಿಸುವುದರ ಮೂಲಕ ಅವರಿಗೆ ದೊಡ್ಡ ಗೌರವ ನೀಡಿದೆ.

ಪ್ಯಾಟ್ರಿಕ್‌ ಅವರ ಬರಹಗಳು ಓದಲು ಉದ್ದ ಇರುವುದಿಲ್ಲ. ಬಹಳ ಚುರುಕಾಗಿ ಮತ್ತು ಚುಟುಕಾಗಿ 130–150 ಪುಟಗಳಲ್ಲಿ ಹೇಳಬೇಕಾದ್ದನ್ನು ಹೇಳುವುದು ಅವರ ವಿಶೇಷ ಗುಣ. ಅವರು ಬರೆಯುವುದು ಬಹಳ ನೇರವಾಗಿರುತ್ತದೆ, ಮೇಲ್ನೋಟಕ್ಕೆ ಸರಳ ಎನ್ನುವಂತೆ ಇರುತ್ತದೆ. ಮತ್ತೆ ಮತ್ತೆ ಓದಿದಾಗ ಅವರ ಬರಹದ ಆಳ ಓದುಗನನ್ನು ಸೆಳೆಯುತ್ತದೆ. ಪ್ಯಾಟ್ರಿಕ್‌ ಅವರು ಬಹಳ ಶ್ರಮ ಹಾಕಿ ಸರಳವಾಗಿ ಬರೆಯುವುದನ್ನು ಕಲಿತಿದ್ದಾರೆ.

ಜರ್ಮನಿಯು ಫ್ರಾನ್ಸ್‌ ದೇಶದ ಮೇಲೆ ದಾಳಿ ಮಾಡಿದಾಗ ನಡೆದ ಸಂಗತಿಗಳು ಪ್ಯಾಟ್ರಿಕ್‌ ಅವರನ್ನು ಮತ್ತೆ ಮತ್ತೆ ಕಾಡುವ ಸಂಗತಿ. ಅವರೇ ಹೇಳುವಂತೆ ಈ ವಸ್ತುವನ್ನು ಅವರು ಹುಡುಕಿಕೊಂಡು ಹೋಗಿ ಮರಳಿ ಸೃಷ್ಟಿ ಸುತ್ತಲೇ ಇದ್ದಾರೆ. ಫ್ರೆಂಚ್‌ನಲ್ಲಿ ಪ್ಯಾಟ್ರಿಕ್‌  ಸುಮಾರು ನಲವತ್ತು ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಅವರಿಗೆ ಬಹಳ ಹೆಸರು ತಂದು ಕೊಟ್ಟಿರುವ ಕೆಲವು ಪುಸ್ತಕಗಳೆಂದರೆ: ‘ಮಿಸ್ಸಿಂಗ್‌ ಪರ್ಸನ್‌’, ‘ಎ ಟ್ರೇಸ್‌ ಆಫ್‌ ಮಲೈಸ್‌’, ‘ಹನಿಮೂನ್‌’.

ಬರಹಗಾರರಾಗಿ ಅವರು ತಮ್ಮ ಕನಸನ್ನು ಒಂದು ಕಡೆ ಹೀಗೆ ಹೇಳಿಕೊಂಡಿದ್ದಾರೆ : ‘ನನಗೆ ದೀರ್ಘ ಕಾಲದಿಂದ ಮರಳಿ ಮರಳಿ ಒಂದು ಕನಸು ಬೀಳುತ್ತಿದೆ: ನನಗೆ ಬರೆಯಲು ಏನೂ ಉಳಿದಿಲ್ಲ ಎಂಬ ಕನಸು. ಬರೆಯಲು ಏನೂ ಇಲ್ಲವೆಂಬ ನನಗೆ ನಾನು ಎಲ್ಲದರಿಂದ ಮುಕ್ತನಾಗಿರುವಂತೆ ಕನಸು ಬೀಳುತ್ತದೆ. ಆದರೆ ನಾನು ಇನ್ನೂ ಬಿಡುಗಡೆಯಾಗಿಲ್ಲ’. ಅವರ ಕಾದಂಬರಿಗಳ ಪೈಕಿ ‘ರಿಂಗ್‌ ಆಫ್‌ ರೋಡ್ಸ್‌ : ಎ ನಾವೆಲ್‌’, ‘ವಿಲ್ಲ ಟ್ರಿಟೈಸ್‌’, ‘ಎ ಟ್ರೇಸ್‌ ಆಫ್‌ ಮಲೈಸ್‌’, ‘ಹನಿಮೂನ್‌’ ಮುಂತಾದವು ಇಂಗ್ಲಿಷ್‌ಗೆ ಅನುವಾದವಾಗಿವೆ.

ಅವರು ಅನೇಕ ಸ್ವಾರಸ್ಯಕರವಾದ ವಿಷಯಗಳ ಬೆನ್ನು ಹತ್ತಬಲ್ಲರು. ಅವರ ಕಾದಂಬರಿಗಳು ಪತ್ತೇದಾರಿ ಎಂದು ಹೇಳಲು ಆಗದಿದ್ದರೂ ಅವರು ಪತ್ತೇದಾರಿ ಬರಹದ ತಂತ್ರವನ್ನು ಬಳಸಿಕೊಂಡಿದ್ದಾರೆ. ‘ಮಿಸ್ಸಿಂಗ್‌ ಪರ್ಸನ್‌’ ಕಾದಂಬರಿಯಲ್ಲಿ ಸ್ವತಃ ಬಲವಂತದ ಮರೆವಿಗೆ ತುತ್ತಾದ ಪತ್ತೇದಾರ ತಾನು ಯಾರು ಎಂದು ಹುಡುಕುತ್ತಿರುತ್ತಾನೆ! ಓದುಗರೊಡನೆ ಆಟ ಆಡುವುದನ್ನು ಪ್ಯಾಟ್ರಿಕ್‌ ಬಹಳ ಇಷ್ಟ ಪಡುತ್ತಾರೆ. ಅವರ ಬೇರೆ ಬೇರೆ ಕಾದಂಬರಿಗಳ ಐದು ಪಾತ್ರಗಳು ಹೊಂದಿರುವ ದೂರವಾಣಿ ಸಂಖ್ಯೆ ಒಂದೇ ಆಗಿದೆ.

ಮತ್ತೊಬ್ಬ ಫ್ರೆಂಚ್‌ ಲೇಖಕ ರೇಮಂಡ್‌ ಮೂಲಕ ಅವರು ಗಾಲಿಮಾರ್ಡ್‌ ಪ್ರಕಾಶನ ಸಂಸ್ಥೆಯ ಸಂಪರ್ಕಕ್ಕೆ ಬಂದರು. ಪ್ಯಾಟ್ರಿಕ್‌ ಕೃತಿಗಳನ್ನು ಈ ಸಂಸ್ಥೆ ಪ್ರಕಟಿಸಿದ್ದು ಅವರ ಬದುಕಿನ ದೊಡ್ಡ ತಿರುವು. ಹುಡುಕಾಟ, ಅಸ್ಮಿತೆ, ನೆನಪು ಎಲ್ಲವೂ ಬೆರೆತುಹೋಗುವಂತೆ ಬರೆಯುವ ಪ್ಯಾಟ್ರಿಕ್‌ ಕಳೆದು ಹೋದ ಕಾಲವೊಂದರ ಬದುಕನ್ನು ತಮ್ಮದೇ ವಿಶಿಷ್ಟ ನೋಟದಲ್ಲಿ ಹಿಡಿದಿಡುವುದರಲ್ಲಿ ಪ್ರಸಿದ್ಧರು.
ಈ ಭಾರಿ ಮೊತ್ತದ ಪ್ರಶಸ್ತಿ (₨6.6 ಕೋಟಿ) ಅವರನ್ನು ಉಬ್ಬಿಸಿದಂತಿಲ್ಲ.

ಅವರನ್ನು ಈಗ ಕಾಡುತ್ತಿರುವ ಸಮಸ್ಯೆ ಬೇರೆಯೇ ಇದೆ. ಅಷ್ಟು ದೊಡ್ಡ ಫ್ರೆಂಚ್‌ ಲೇಖಕ ಕಾಮು ಜತೆ ತಮ್ಮನ್ನು ಇನ್ನು ಜನ ಹೋಲಿಸುತ್ತಾರಲ್ಲಾ ಎಂಬುದು ಪ್ಯಾಟ್ರಿಕ್‌ ಅವರ ಚಿಂತೆ. ಇವರ ತಂದೆ ಆಲ್ಬರ್ಟ್‌ ಯೆಹೂದಿ, ಹಾಗೂ ತಾಯಿ ಲೂಯಿಸ್ ವೃತ್ತಿಯಲ್ಲಿ ನಟಿ. ಅವರ ಮನೆತನ ಒಂದು ರೀತಿ ಬಹಳ ಸಂಕೀರ್ಣವಾದದ್ದು. ಯುದ್ಧ ಮುಗಿದ ಬಳಿಕ ಪ್ಯಾಟ್ರಿಕ್‌ಗೆ ಅವರ ತಂದೆಯನ್ನು ಎಲ್ಲಿ ಸಮಾಧಿ ಮಾಡಿದರು ಎಂಬುದೂ ತಿಳಿಯಲಿಲ್ಲ. ನಾಜಿಗಳಿಂದ ಗಾಸಿಗೊಂಡ ಬಾಲ್ಯವೇ ಪ್ಯಾಟ್ರಿಕ್‌ ಅವರನ್ನು 2014ರ ಸಾಹಿತ್ಯದ ನೊಬೆಲ್‌ಗೆ ಆಯ್ಕೆಯಾಗುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT