ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೊಡೆನ್ ತೆರೆದಿಟ್ಟ ಪಂಡೋರಾ ಪೆಟ್ಟಿಗೆ

Last Updated 16 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಮತ್ತು ಕೇಂದ್ರದ ಬೇಹುಗಾರಿಕಾ ಸಂಸ್ಥೆ (ಸಿಐಎ) ರಹಸ್ಯವಾಗಿ ಇತರ ರಾಷ್ಟ್ರಗಳಿಗೆ ಸಂಬಂಧಿ­­ಸಿದ, ಜಗತ್ತಿನ ಪ್ರಮುಖ ನಾಯಕರ ಹಾಗೂ ಅಂತರ್ಜಾಲದಲ್ಲಿ ಸಕ್ರಿಯರಾಗಿರುವವರ ಖಾಸಗಿ ಮಾಹಿತಿಗಳನ್ನು ಕದಿಯುತ್ತಿವೆ ಎಂದು ದಾಖಲೆಗಳ ಮೂಲಕ ಬಹಿರಂಗಪಡಿಸಿ ಒಬಾಮ ಆಡಳಿತವನ್ನು ಪೇಚಿಗೆ ಸಿಲುಕಿಸಿರುವ ಎನ್‌ಎಸ್‌ಎಯ ಮಾಜಿ ಗುತ್ತಿಗೆದಾರ, ತಾಂತ್ರಿಕ ನಿಪುಣ ಎಡ್ವರ್ಡ್ ಸ್ನೊಡೆನ್‌‌ ಇತ್ತೀಚೆಗೆ ‘ನ್ಯೂಯಾರ್ಕ್ ಟೈಮ್ಸ್‌’ಗೆ ವಿಸ್ತೃತ ಸಂದರ್ಶನ ನೀಡಿದ್ದಾರೆ.

ಅಂತರ್ಜಾಲದ ಮೂಲಕ ನಡೆಸಲಾದ ಈ ಸಂದರ್ಶನದಲ್ಲಿ, ತಮ್ಮ ಮೇಲೆ ಅಮೆರಿಕ ಸರ್ಕಾರ ಹೊರಿಸಿರುವ ಆರೋಪಗಳು, ತಾವು ಬಹಿರಂಗಗೊ­ಳಿಸಿರುವ ದಾಖಲೆಗಳ ಸುರಕ್ಷತೆ, ಮಾಹಿತಿ ಬಹಿರಂಗಗೊಳಿಸಿದ್ದರಿಂದ ಆಗಿರುವ ಲಾಭ, ಅದರ ಪರಿಣಾಮ ಹಾಗೂ ಎನ್‌ಎಸ್‌ಎ, ಸಿಐಎ ನಡೆಸುತ್ತಿರುವ ಅಕ್ರಮ ಬೇಹುಗಾರಿಕೆ ಕಾರ್ಯಾಚರಣೆ ವಿವರಗಳನ್ನು ಬಹಿರಂಗ ಮಾಡಲು ಕಾರಣವಾದ ಅಂಶಗಳ ಬಗ್ಗೆ ಸ್ನೊಡೆನ್‌ ಬೆಳಕು ಚೆಲ್ಲಿದ್ದಾರೆ.

ದಾಖಲೆಗಳನ್ನು ತಂದಿರಲಿಲ್ಲ: ಜೂನ್‌ ತಿಂಗಳಿನಲ್ಲಿ ರಷ್ಯಾಕ್ಕೆ ಪಲಾಯನ ಮಾಡಿದಾಗ  ತಾವು ಸಂಗ್ರಹಿಸಿದ್ದ ಎನ್‌ಎಸ್‌ಎಯ ರಹಸ್ಯ ದಾಖಲೆಗಳನ್ನು ಜೊತೆಯಲ್ಲಿ ಇಟ್ಟು ಕೊಂಡಿರಲಿಲ್ಲ ಎಂದು ಸ್ನೊಡೆನ್‌‌ ಸ್ಪಷ್ಟಪಡಿಸಿದ್ದಾರೆ. ‘ದಾಖಲೆಗಳು ಸುರಕ್ಷಿತವಾಗಿದ್ದು, ರಷ್ಯಾದ ಬೇಹುಗಾರಿಕಾ ಸಂಸ್ಥೆಗಳಿಗೆ ಅವುಗಳು ಸಿಗಲಾರವು ಎಂಬ ಭರವಸೆಯನ್ನೂ ನೀಡಿದ್ದಾರೆ. ಮಾಸ್ಕೊಗೆ ಬರುವುದಕ್ಕೂ ಮುನ್ನ ಹಾಂಕಾಂಗ್‌­ನಲ್ಲಿ ಭೇಟಿಯಾಗಿದ್ದ ಕೆಲವು ಪತ್ರಕರ್ತರಿಗೆ ನಾನು ಸಂಗ್ರಹಿಸಿದ್ದ ಎಲ್ಲಾ ವರ್ಗೀಕೃತ ರಹಸ್ಯ ದಾಖಲೆಗಳನ್ನು ನೀಡಿದ್ದೇನೆ.

ದಾಖಲೆಗಳ ಪ್ರತಿಯನ್ನು ಇಟ್ಟುಕೊಳ್ಳು­ವುದರಿಂದ ಏನೂ ಲಾಭವಿರಲಿಲ್ಲ. ಹಾಗಾಗಿ ಅವುಗಳನ್ನು ರಷ್ಯಾಕ್ಕೆ ತಂದಿರಲಿಲ್ಲ’ ಎಂದಿದ್ದಾರೆ.
ಹಾಂಕಾಂಗ್‌ನಲ್ಲಿದ್ದಾಗ ಚೀನಾ ಬೇಹುಗಾರರಿಂದ ರಹಸ್ಯ ದಾಖಲೆಗಳನ್ನು ಕಾಪಾಡಲು ಯಶಸ್ವಿ ಯಾಗಿದ್ದಾಗಿಯೂ ಅವರು ಹೇಳಿದ್ದಾರೆ.
‘ನಾನು ಎನ್‌ಎಸ್‌ಎನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಚೀನಾದ ಗುಪ್ತಚರ ಕಾರ್ಯಾ­ಚರಣೆ ಬಗ್ಗೆ ತರಬೇತಿ ಪಡೆದಿದ್ದೆ. ಚೀನಾದ ಬೇಹುಗಾರರ ಚಲನವಲನಗಳನ್ನು ಗುರಿಯಾಗಿಸಿ ಕೊಂಡು ಕೆಲಸವನ್ನೂ ಮಾಡಿದ್ದೆ. ಅಲ್ಲಿನ ಬೇಹುಗಾರರ ಸಾಮರ್ಥ್ಯದ ಬಗ್ಗೆ ಪೂರ್ಣ ಮಾಹಿತಿ ಹೊಂದಿದ್ದರಿಂದ, ರಹಸ್ಯ ದಾಖಲೆಗಳನ್ನು ರಕ್ಷಿಸಲು ನನಗೆ ಸಾಧ್ಯವಾಗಿತ್ತು’ ಎಂದು ಸ್ನೊಡೆನ್‌ ತಿಳಿಸಿದ್ದಾರೆ.

ವಾರ್ಷಿಕ ಸ್ವಯಂ ವೈಯಕ್ತಿಕ ಮೌಲ್ಯಮಾಪನ ಸಂದರ್ಭದಲ್ಲಿ ತಾಂತ್ರಿಕ ದೋಷ ಬೆಳಕಿಗೆ ತಂದ ಎಡ್ವರ್ಡ್ ಸ್ನೊಡೆನ್‌ ಅವರನ್ನು ಅವಮಾನಿಸಿದ ಸಿಐಎ ಅಧಿಕಾರಿಗಳ ವರ್ತನೆ ಅವರನ್ನು ಅಮೆರಿಕದ ದೊಡ್ಡ ಹಗರಣವನ್ನು ಬೆಳಕಿಗೆ ತರಲು ಪ್ರಚೋದಿಸಿತೇ? ಸ್ನೊಡೆನ್‌ ‘ನ್ಯೂಯಾರ್ಕ್ ಟೈಮ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದಲ್ಲಿ ಕುತೂಹಲಕಾರಿ ಕೆಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

‘ಒಂದು ವ್ಯವಸ್ಥೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರೆ ದಕ್ಕುವುದು ಶಿಕ್ಷೆ ಎಂಬುದು ಈ ಘಟನೆಯಿಂದ ನನಗೆ ಮನದಟ್ಟಾಯಿತು. ಈ ಮೊದಲು, ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ಅಧಿಕಾರಿಗಳಿಗೆ ಶಿಕ್ಷೆಯಾಗಿರುವುದು ನನಗೆ ತಿಳಿದಿತ್ತು.

ಗುಪ್ತಚರ ಸಂಸ್ಥೆಯ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ’ ಎಂದಿದ್ದಾರೆ ಅವರು.

-ಜರ್ಮನಿಯ ಬರ್ಲಿನ್‌ನಲ್ಲಿ ಸ್ನೊಡೆನ್‌ ಪರ ಮುಖವಾಡಧಾರಿಗಳಿಂದ ಪ್ರತಿಭಟನಾ ಪ್ರದರ್ಶನ.

ಸ್ನೊಡೆನ್‌ ಬಳಿ ಇರುವ ದಾಖಲೆಗಳು ವಿದೇಶದ ಬೇಹುಗಾರಿಕಾ ಸಂಸ್ಥೆಗಳಿಗೆ ಸಿಗುವ ಸಾಧ್ಯತೆ ಇದೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ಹೇಳಿಕೆ­ಗಳನ್ನು ತಳ್ಳಿ ಹಾಕಿರುವ ಸ್ನೊಡೆನ್‌, ಈ ವಿಚಾರ­ದಲ್ಲಿ ತಾವು ಚೀನಾ ಅಥವಾ ರಷ್ಯಾ ಅಧಿಕಾರಿಗಳಿಗೆ ಸಹಕರಿ­ಸಿಲ್ಲ ಎಂಬುದು ಎನ್‌ಎಸ್‌ಎಗೆ ತಿಳಿದಿದೆ ಎಂದಿದ್ದಾರೆ.

ತಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲದಿರುವು­ದರಿಂದ ರಷ್ಯಾಕ್ಕೆ ಅವುಗಳು ಸಿಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಗುಪ್ತಚರ ಮಾಹಿತಿಗಳ­ನ್ನೊಳ­ಗೊಂಡ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಆರೋಪ ಹೊತ್ತಿರುವ 30 ವರ್ಷದ ಸ್ನೊಡೆನ್‌‌ ವಿರುದ್ಧ ಗೂಢಚರ್ಯೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ನೊಡೆನ್‌ ಮಾಡಿರುವ ಕೆಲಸವನ್ನು ಹಲವರು ಶ್ಲಾಘಿಸಿದ್ದರೆ, ಸರ್ಕಾರಿ ಅಧಿಕಾರಿ­ಗಳು ‘ದೇಶದ್ರೋಹಿ’ ಎಂದು ಕರೆದಿದ್ದಾರೆ.

ಆದರೆ, ಸ್ವತಃ ಸ್ನೊಡೆನ್‌‌ ತಮ್ಮನ್ನು ಸಮರ್ಥಿಸಿ­ಕೊಂಡಿ­ದ್ದಾರೆ. ದೇಶದ ಹಿತಾಸಕ್ತಿ ಕಾಪಾಡುವ ಉದ್ದೇಶ ದಿಂದಲೇ ಎನ್‌ಎಸ್‌ಎಯ ರಹಸ್ಯ ಕಾರ್ಯಾಚರಣೆ ಮಾಹಿತಿಗಳನ್ನು ಬಹಿರಂಗ ಪಡಿಸಿರುವುದಾಗಿ ಹೇಳಿದ್ದಾರೆ. ತಾವು ಬಹಿರಂಗಪಡಿಸಿರುವ ಮಾಹಿತಿ ಗಳು, ‘ಬೇಹುಗಾರಿಕೆಯ ಅಗತ್ಯ’ ಬಗ್ಗೆ ಅತ್ಯಂತ ಅವಶ್ಯವಾಗಿದ್ದ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನೆರವು ನೀಡಿವೆ’ ಎಂದು ಹೇಳಿಕೊಂಡಿದ್ದಾರೆ.

‘ಎನ್‌ಎಸ್‌ಎ ಮತ್ತು ಸಿಐಎಗಳು ನಡೆಸುತ್ತಿರುವ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿದರೆ ಆಗುವ ಅಪಾಯವು ಮಾಹಿತಿ ಬಹಿರಂಗಗೊಂಡಾಗ ಎದುರಾದ ಅಪಾಯಕ್ಕಿಂತ ದೊಡ್ಡದು’ ಎನ್ನುವ ಮೂಲಕ ಸ್ನೊಡೆನ್‌ ತಮ್ಮನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಎನ್‌ಎಸ್‌ಎಯು ತಾನು  ಮಾಡುತ್ತಿರುವ ಕಾರ್ಯದ ಬಗ್ಗೆ ಅಮೆರಿಕದ ಪ್ರಜೆಗಳಿಗೆ ತಿಳಿಸುತ್ತಿಲ್ಲ. ಜನರನ್ನು ಕತ್ತಲೆಯಲ್ಲಿಟ್ಟು ಸರ್ಕಾರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಸ್ನೊಡೆನ್‌, ಇದುವರೆಗೆ ಸೋರಿಕೆಯಾಗಿರುವ ಮಾಹಿತಿಯಿಂದ ಏನು ಹಾನಿಯಾಗಿದೆ ಎಂಬುದನ್ನು ಎನ್‌ಎಸ್‌ಎ ಅಧಿಕಾರಿಗಳು ಹೇಳುತ್ತಿಲ್ಲ. ಸಣ್ಣ ಪುಟ್ಟ ಕಾರಣಗಳನ್ನು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

ಮಾಹಿತಿ ಸೋರಿಕೆಗೆ ಮುಂದಾಗಿದ್ದು: ಸ್ನೊಡೆನ್‌‌ ಪ್ರಕಾರ, ಆರಂಭದಲ್ಲಿ ಅವರಿಗೆ ಎನ್‌ಎಸ್‌ಎ ದಾಖಲೆಗಳನ್ನು ಬಹಿರಂಗಗೊಳಿಸುವ ಉದ್ದೇಶ ಇರಲಿಲ್ಲ. ನಂತರದಲ್ಲಿ ಬೇಹುಗಾರಿಕಾ ಸಂಸ್ಥೆಯ ಒಳಹೊರಗು ಅರ್ಥವಾಗುತ್ತಾ ಹೋದಾಗ ಅಂತಹ ಚಿಂತನೆ ಮನಸ್ಸಿನಲ್ಲಿ ಮೂಡಲಾರಂಭಿಸಿತು. ಜಿನೀವಾದಲ್ಲಿರುವ ಸಿಐಎ ಕೇಂದ್ರದಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರಿಗೆ ಆದ ಅನುಭವಗಳು ಗುಪ್ತಚರ ಸಂಸ್ಥೆಗಳು ಹಾಗೂ ಅದು ನಡೆಸುತ್ತಿರುವ ಕಾರ್ಯಾಚರಣೆಗಳ ಕುರಿತಾಗಿ ಸಂಶಯಗಳನ್ನು ಹುಟ್ಟುಹಾಕಿದವು.
 
೨೦೦೮ ಮತ್ತು ೨೦೦೯ರಲ್ಲಿ ಸ್ನೊಡೆನ್‌ ಜಿನೀವಾದಲ್ಲಿ ದೂರ ಸಂಪರ್ಕ ಸಂವಹನಗಳ ಮಾಹಿತಿ ವ್ಯವಸ್ಥೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಈ ಕಾರ್ಯದ ಜೊತೆಗೆ ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್‌ ನೆಟ್‌ವರ್ಕ್‌ನಿಂದ ಹಿಡಿದು ಹವಾನಿಯಂತ್ರಣ ವ್ಯವಸ್ಥೆಯವರೆಗೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬೇಕಿತ್ತು. ಬಡ್ತಿ ಪಡೆ­ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವಾಗಲೇ,
ಮೇಲಾಧಿ­ಕಾರಿಯೊಬ್ಬರ ನಿರ್ಧಾರವನ್ನು ಪ್ರಶ್ನಿಸಿ ಅಧಿಕಾರಿಯ ಕೆಂಗಣ್ಣಿಗೆ ಗುರಿಯಾದರು.

ಹಲವು ತಿಂಗಳು ಕಳೆದ ಬಳಿಕ, ಅವರು ತಮ್ಮ ವಾರ್ಷಿಕ ಸ್ವಯಂ ವೈಯಕ್ತಿಕ ಮೌಲ್ಯಮಾಪನ ಬರೆಯುತ್ತಿರುವ ಸಂದರ್ಭದಲ್ಲಿ ಸಿಐಎ ಸಿಬ್ಬಂದಿಯ ವೆಬ್‌ ಅಪ್ಲಿಕೇಷನ್‌ಗಳಲ್ಲಿ ನ್ಯೂನತೆಗಳಿರುವುದನ್ನು ಪತ್ತೆಹಚ್ಚಿದರು. ದೋಷಗಳಿದ್ದ ಕಾರಣ ಈ ಸಾಫ್ಟ್‌ವೇರ್‌ ಅನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದಿತ್ತು. ಈ ಬಗ್ಗೆ ಸ್ನೊಡೆನ್‌‌ ತಮ್ಮ ಮೇಲ್ವಿಚಾರಕರನ್ನು ಎಚ್ಚರಿಸಿದರು. ಆದರೆ, ಈ ವಿಚಾರವನ್ನು ಕೈಬಿಟ್ಟು, ಸುಮ್ಮನೆ ಕುಳಿತುಕೊಳ್ಳಲು ಅವರಿಗೆ ಹಿರಿಯ ಮ್ಯಾನೇಜರ್‌ ಸಲಹೆ ಮಾಡಿ­ದರು. ತಾಂತ್ರಿಕ ತಂಡವು ಕೂಡ ಇವರ ಎಚ್ಚರಿಕೆಯನ್ನು ಕಡೆಗಣಿಸಿತು. ಕೊನೆಗೆ ಸಾಫ್ಟ್‌ವೇರ್‌­ನಲ್ಲಿ ದೋಷ ಇರುವುದನ್ನು ಸಾಬೀತು ಪಡಿಸುವಂತೆ ಹಿರಿಯ ಮ್ಯಾನೇಜರ್‌, ಸ್ನೊಡೆನ್ಗೆ ಸವಾಲು ಹಾಕಿದರು.

ತಾಂತ್ರಿಕ ನಿಪುಣರಾಗಿರುವ ಸ್ನೊಡೆನ್‌ ಕೆಲವು ಪಠ್ಯ ಮತ್ತು ಸಂಕೇತಗಳನ್ನು ಬಳಸಿ ತಮ್ಮ ಮೌಲ್ಯಮಾಪನ ದಾಖಲೆಯನ್ನು ಭೇದಿಸುವ ಮೂಲಕ ಆ ಸಾಫ್ಟ್‌ವೇರ್‌ನಲ್ಲಿ ನ್ಯೂನತೆ ಇರುವುದನ್ನು ನಿರೂಪಿಸಿದರು. ಸೂಪರ್‌ವೈಸರ್‌, ದೋಷಗಳನ್ನು ಒಪ್ಪಿಕೊಂಡರೂ ಸವಾಲೊಡ್ಡಿದ್ದ ಹಿರಿಯ ಮ್ಯಾನೇಜರ್‌ ಕೋಪದಿಂದ ಸ್ನೊಡೆನ್‌ ಅವರ ವೈಯಕ್ತಿಕ ಮೌಲ್ಯಮಾಪನ ದಾಖಲೆಯಲ್ಲಿ ಘನತೆಗೆ ಕುಂದುಂಟು ಮಾಡುವಂತಹ ಟಿಪ್ಪಣಿ ಬರೆದರು.

‘ಸಾಫ್ಟ್‌ವೇರ್‌ನಲ್ಲಿರುವ ದೋಷದ ಬಗ್ಗೆ ಸಿಐಎಯನ್ನು ಎಚ್ಚರಿಸಲು ಯತ್ನಿಸಿದ್ದಕ್ಕೆ ನನಗೆ ಶಿಕ್ಷೆ ವಿಧಿಸುವ ಉದ್ದೇಶದಿಂದ ಹಿರಿಯ ಅಧಿಕಾರಿ ಆ ಟಿಪ್ಪಣಿ ಬರೆದಿದ್ದರು. ಇದೊಂದು ಸೇಡಿನ ಕೃತ್ಯ ಎಂದು ಪರಿಗಣಿಸಿ ಸಿಐಎಯ ಇನ್‌ಸ್ಪೆಕ್ಟರ್‌ ಜನರಲ್ (ಐಜಿ) ಅವರಿಗೆ ದೂರು ನೀಡಲು ಚಿಂತನೆ ನಡೆಸಿದ್ದೆ’ ಎಂದು ಸ್ನೊಡೆನ್‌ ಸಂದರ್ಶನದಲ್ಲಿ ಹೇಳಿದ್ದಾರೆ.

ದೂರು ನೀಡಿರುವ ಬಗ್ಗೆಯಾಗಲೀ ಅಥವಾ ಸೂಪರ್‌­ವೈಸರ್‌ ಮಧ್ಯ ಪ್ರವೇಶಿಸಿ ಅದನ್ನು ಇತ್ಯರ್ಥ­ಪಡಿಸಿ­ರುವ ಬಗ್ಗೆಯಾಗಲೀ ಅವರಿಗೆ ನೆನಪಿಲ್ಲ. ಆದರೆ, ಈ ಘಟನೆ ಬಗ್ಗೆ ಸಿಐಎಯ ವಕ್ತಾರರನ್ನು ಪ್ರಶ್ನಿಸಿದಾಗ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಒಂದು ವ್ಯವಸ್ಥೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿ­ದರೆ ದಕ್ಕುವುದು ಶಿಕ್ಷೆ ಎಂಬುದು ಈ ಘಟನೆಯಿಂದ ನನಗೆ ಮನದಟ್ಟಾಯಿತು. ಈ ಮೊದಲು, ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ಅಧಿಕಾರಿಗಳಿಗೆ ಶಿಕ್ಷೆಯಾಗಿರು­ವುದು ನನಗೆ ತಿಳಿದಿತ್ತು. ಗುಪ್ತಚರ ಸಂಸ್ಥೆಯ ಒಳಗೆ ಸಾಕಷ್ಟು ಭಿನ್ನಾಭಿಪ್ರಾಯ­ಗಳಿವೆ. ‘ಅಧಿಕಾರ ಅಥವಾ ಆಜ್ಞೆಗೆ ವಿಧೇಯರಾಗಿರುವ’ ನಿಯಮದಡಿ ಭಯ ಮತ್ತು ದೇಶಭಕ್ತಿಯ ತಪ್ಪು ಭಾವನೆ ಬಿತ್ತಿ ಜನರನ್ನು ದುಡಿಸಲಾಗುತ್ತಿದೆ’ ಎಂದು ಸ್ನೊಡೆನ್‌ ಹೇಳಿದ್ದಾರೆ.

‘ಎನ್‌ಎಸ್‌ಎನಲ್ಲಿ ಕೆಲಸ ಮಾಡಿಕೊಂಡು ಅಲ್ಲಿನ ತಪ್ಪುಗಳನ್ನು ಪ್ರಶ್ನಿಸಿದ್ದರೆ, ನನ್ನ ಯತ್ನಗಳನ್ನು ಶಾಶ್ವತವಾಗಿ ಹತ್ತಿಕ್ಕುತ್ತಿದ್ದರು. ಅಲ್ಲದೇ ನನ್ನ ಹೆಸರಿಗೆ ಮಸಿ ಬಳಿಯುತ್ತಿದ್ದರು, ನನ್ನನ್ನು ಸರ್ವನಾಶ ಮಾಡಲೂ ಅವರು ಹಿಂಜರಿಯುತ್ತಿರಲಿಲ್ಲ. ಅಲ್ಲಿದ್ದುಕೊಂಡು ಆ ಕೆಲಸವನ್ನು ಮಾಡಲೂ ಆಗುತ್ತಿರಲಿಲ್ಲ. ಯಾಕೆಂದರೆ ಎಲ್ಲಾ ತಪ್ಪುಗಳಿಗೆ ಕಾರಣರಾದವರಿಗೇ ನಡೆಯುತ್ತಿರುವ ತಪ್ಪುಗಳ ಬಗ್ಗೆ ವರದಿ ನೀಡಬೇಕಾಗಿತ್ತು’ ಎಂದಿದ್ದಾರೆ.

  ೨೦೦೯ರಲ್ಲಿ ಬುಷ್‌ ಆಡಳಿತದ ಅವಧಿಯಲ್ಲಿ ಎನ್‌­ಎಸ್‌­­ಎಯ ದೂರವಾಣಿ ಕದ್ದಾಲಿಕೆ ಕುರಿತಾಗಿ ಐಜಿ ಅವರು ಸಿದ್ಧಪಡಿಸಿದ್ದ ಅಸಮರ್ಥನೀಯ ವರದಿಯ ಪ್ರತಿ ಪತ್ತೆಯಾದಾಗ ಎನ್‌ಎಸ್‌ಎ, ಸಿಐಎ ನಡೆಸುತ್ತಿರುವ ರಹಸ್ಯ ಕಾರ್ಯಾಚರಣೆ ಕುರಿತ ಮಾಹಿತಿಯನ್ನು ಬಹಿರಂಗ­ಪಡಿಸಲು ಅಂತಿಮ ನಿರ್ಧಾರ ಕೈಗೊಂಡಿದ್ದಾಗಿ ಸ್ನೊಡೆನ್‌ ಹೇಳಿದ್ದಾರೆ.

‘ಜಾರಿಯಲ್ಲಿರುವ ನಿಗಾ ಕಾನೂನುಗಳನ್ನು ಉಲ್ಲಂಘಿಸಿ ಸಿದ್ಧಪಡಿಸಲಾಗಿದ್ದ ಆ ವರದಿ ಓದಿದ ತಕ್ಷಣ ಅದು ಅಕ್ರಮ ಎಂದು ನನಗೆ ತಿಳಿಯಿತು. ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ, ಶಿಕ್ಷೆಗೆ ಹೆದರದೇ  ಕಾನೂನುಗಳನ್ನು ಮುರಿಯುತ್ತಾನೆ ಎಂದಾದರೆ, ರಹಸ್ಯ ಅಧಿಕಾರಗಳು ಅಪಾಯಕಾರಿಯಾಗಬಲ್ಲವು. ಆ ವರದಿ ಓದಿದ ನಂತರ ನನ್ನ ನಿರ್ಧಾರವನ್ನು ಇನ್ನಷ್ಟು ಪಕ್ವಗೊಳಿಸಲು ಸಾಧ್ಯವಾಯಿತು. ಅಂತಹ ವರದಿಗಳನ್ನು ಯಾರಿಗೂ ಓದಲು ಸಾಧ್ಯವಿಲ್ಲ. ನಮ್ಮಲ್ಲಿರುವ ವ್ಯವಸ್ಥೆ­ಗಳಿಗೆ ಇವುಗಳ ಅಗತ್ಯವಾದರೂ ಏನು ಎಂಬುದು ಅರ್ಥವಾಗು­­ವುದಿಲ್ಲ’ ಎಂದು ವಿವರಿಸಿದ್ದಾರೆ.

‘ರಹಸ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವ ನನ್ನ ನಿರ್ಧಾರ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಪರಿಣಾಮ ಬೀರಿದ್ದು, ರಹಸ್ಯ ದಾಖಲೆ­­ಗಳನ್ನು ಪಡೆದಿದ್ದ ಪತ್ರ­ಕರ್ತರು ಹಾಗೂ ಅವರು ಬರೆದಿರುವ ವರದಿಗಳ ಮೇಲೆ ನಾನು ಪ್ರಭಾವ ಬೀರಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT