ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿದಂಬರ’ ರಹಸ್ಯವಾಗಿ ಉಳಿದ ಕೊಲೆ!

ಕಟಕಟೆ–9
Last Updated 2 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಚಿದಂಬರ ಶೆಟ್ಟಿ... 80–90ರ ದಶಕದ ಪ್ರಖ್ಯಾತ ಚಿತ್ರ ನಿರ್ಮಾಪಕ. ಮರಣ ಮೃದಂಗಂ, ಗೋಲ್‌ಮಾಲ್‌ ರಾಧಾಕೃಷ್ಣ, ಜ್ವಾಲಾದಂಥ ಹಲವಾರು ಖ್ಯಾತ ಚಿತ್ರಗಳನ್ನು  ನಿರ್ಮಿಸಿ ಮನೆ ಮಾತಾಗಿದ್ದ ಅವರೊಂದು ದಿನ ಅನಾಥ ಶವವಾಗಿ ಬಿಟ್ಟರು.

ಅವರ ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತು. ಆರೋಪಿಗಳ ಬೆನ್ನಟ್ಟಿ ಹೋದ ಪೊಲೀಸರು ಸಾಂದರ್ಭಿಕ ಸಾಕ್ಷ್ಯಾಧಾರ ಸಂಗ್ರಹಿಸುವಲ್ಲಿ, ಸಾಕ್ಷಿದಾರರ ಹೇಳಿಕೆ ಪಡೆಯುವಲ್ಲಿ ಸಾಕಷ್ಟು ಶ್ರಮಿಸಿದರು. ಆದರೆ ಅಂತಿಮವಾಗಿ ಆದದ್ದೇನು...? ಈ ಎಲ್ಲಾ ಸಾಕ್ಷ್ಯಾಧಾರಗಳು ಆರೋಪಿಗಳನ್ನು ಅಪರಾಧಿಯನ್ನಾಗಿಸಿ ಜೈಲಿಗೆ ತಳ್ಳಿದವೇ ಎಂಬುದು ಇಲ್ಲಿರುವ ಕುತೂಹಲಕರ ಪ್ರಶ್ನೆ.
***
ಅದು 1997ರ ಮಾರ್ಚ್‌ 13. ಚಿತ್ರ ನಿರ್ಮಾಪಕ ರವಿಕುಮಾರ್‌ ಅವರು ಕಾಣೆಯಾಗಿರುವುದಾಗಿ ದೂರಿ ಅವರ ಮಗ ನಾಗಪ್ಪ ಪೊಲೀಸರಲ್ಲಿ ಅತ್ತ ದೂರು ದಾಖಲು ಮಾಡಿದ್ದರೆ, ಇತ್ತ ತಮ್ಮ ಪತಿ ಕಾಣೆಯಾಗಿರುವುದಾಗಿ ಚಿದಂಬರ ಶೆಟ್ಟಿ ಅವರ ಪತ್ನಿ ಉಷಾ ದೂರು ದಾಖಲಿಸಿದರು. ಇಬ್ಬರಿಗಾಗಿ ಪೊಲೀಸರು ಶೋಧನಾ ಕಾರ್ಯಾಚರಣೆಯಲ್ಲಿ ತೊಡಗಿದರು.

ರವಿಕುಮಾರ್‌ ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದರೆ, ಚಿದಂಬರ ಶೆಟ್ಟಿ ಪೊಲೀಸರಿಗೆ ಸಿಕ್ಕಿದ್ದು ಶವವಾಗಿ! ಪ್ರಖ್ಯಾತ ನಿರ್ಮಾಪಕರೊಬ್ಬರ ಸಾವಿನ ಸುದ್ದಿ ಕ್ಷಣ ಮಾತ್ರದಲ್ಲಿ ಎಲ್ಲೆಡೆ ಪ್ರಚಾರವಾಗಿ ರಾಜ್ಯದಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿತು. ಅಪರಾಧಿಗಳನ್ನು ಶೀಘ್ರದಲ್ಲಿ ಕಂಡುಹಿಡಿಯುವಂತೆ ಪೊಲೀಸರ ಮೇಲೆ ಒತ್ತಡ ಹೆಚ್ಚಿತು. ತನಿಖೆಯ ಉಸ್ತುವಾರಿಯನ್ನು ಸರ್ಕಾರ ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಿತು.

ತನಿಖೆ ನಡೆಸಿದ ಪೊಲೀಸರಿಗೆ ಕಂಡುಬಂದದ್ದು ಇಷ್ಟು: (ಈ ಪ್ರಕರಣದ ಆರೋಪಿಗಳಾದ) ಮೋಹನ್‌, ಬಿ.ಎ.ಸುರೇಶ್‌, ಗೋಪಿನಾಥ ಹಾಗೂ ಇತರ ಮೂವರು ಚಿದಂಬರ ಶೆಟ್ಟಿ ಹಾಗೂ ರವಿಕುಮಾರ್‌ ಅವರಿಗೆ ಚಿತ್ರ ನಿರ್ಮಾಣಕ್ಕಾಗಿ ಹಣದ ನೆರವು ನೀಡುತ್ತಿದ್ದರು. ಆದರೆ ಇವರಿಬ್ಬರು ಸರಿಯಾಗಿ ಹಣ ವಾಪಸ್‌ ಮಾಡುತ್ತಿರಲಿಲ್ಲ. ಇದರಿಂದಾಗಿ ರವಿಕುಮಾರ್‌ ಹಾಗೂ ಶೆಟ್ಟಿ ಅವರ ಮೇಲೆ ವಿಪರೀತ ಸಿಟ್ಟಿಗೆದ್ದಿದ್ದ ಎಲ್ಲಾ ಆರೋಪಿಗಳು ಹೇಗಾದರೂ ಮಾಡಿ ದುಡ್ಡು ವಾಪಸ್‌ ಪಡೆಯಲು ನಿರ್ಧರಿಸಿದ್ದರು.

ಸೂಕ್ತ ಸಮಯಕ್ಕಾಗಿ ಎಲ್ಲಾ ಆರೋಪಿಗಳು ಕಾಯುತ್ತಿದ್ದರು. 1997ರ ಮಾರ್ಚ್‌ 13ರಂದು ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ರವಿಕುಮಾರ್‌ ಅವರ ಮನೆಗೆ ಹೋಗಿ ಅವರನ್ನು ಮನೆಯೊಳಗಿನಿಂದ ಎಳೆದು ತಂದರು. ಗ್ಯಾರೇಜ್‌ ಒಂದಕ್ಕೆ ಅವರನ್ನು ಕರೆದುಕೊಂಡು ಹೋಗಿ ಅಲ್ಲಿ ತೀವ್ರವಾಗಿ ಹಲ್ಲೆ ನಡೆಸಿದರು. ಹಣ ವಾಪಸು ಮಾಡುವಂತೆ ಒತ್ತಾಯಿಸಿದರು. ರವಿಕುಮಾರ್‌ ಹಣ ಹಿಂದಿರುಗಿಸಲು ವಿಫಲರಾದ ಕಾರಣ, ಆರೋಪಿಗಳ ಹಲ್ಲೆ ಮುಂದುವರಿಯಿತು.

ಅಲ್ಲಿಂದ ಆರೋಪಿಗಳು ರವಿಕುಮಾರ್‌ ಸಹಿತವಾಗಿ ನೇರವಾಗಿ ಬಂದದ್ದು ಚಿದಂಬರ ಶೆಟ್ಟಿ ಅವರ ಮನೆಗೆ. ಮನೆಯಿಂದ ಹೊರಕ್ಕೆ ಹೋಗಿದ್ದ ಶೆಟ್ಟಿ ಅವರು ಬರುವವರೆಗೆ ಕಾದ ಆರೋಪಿಗಳು ಅವರು ಬಂದ ಮೇಲೆ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋದರು. ಇಬ್ಬರನ್ನೂ ಕಾರಿನಲ್ಲಿ ಕರೆದುಕೊಂಡು ಹೋದ ಆರೋಪಿಗಳು ಹಣ ವಾಪಸ್‌ ಮಾಡುವಂತೆ ಇಬ್ಬರಿಗೂ ಒತ್ತಾಯಿಸಿದರು.

ರವಿಕುಮಾರ್‌ ಆಗಲಿ, ಶೆಟ್ಟಿಯವರಾಗಲಿ ಹಣ ವಾಪಸ್‌ ಮಾಡುವ ಕುರಿತು ಯಾವುದೇ ಮಾತು ಆಡಲಿಲ್ಲ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಇಬ್ಬರನ್ನೂ ಚೆನ್ನಾಗಿ ಥಳಿಸಿದರು. ಈ ರೀತಿಯಾಗಿ ಹಲ್ಲೆ ನಡೆದದ್ದು ಒಂದೇ ಸ್ಥಳದಲ್ಲಿ ಅಲ್ಲ. ಬದಲಿಗೆ ಕಾರಿನಲ್ಲಿಯೇ ಅನೇಕ ಕಡೆ ಇಬ್ಬರನ್ನೂ ಸುತ್ತಾಡಿಸಿದ ಆರೋಪಿಗಳು ಹಣ ವಾಪಸ್‌ ನೀಡುವಂತೆ ಪೀಡಿಸುತ್ತಲೇ ಬಂದರು. ಆದರೆ ಇಬ್ಬರೂ ಹಣ ನೀಡುವುದಿಲ್ಲ ಎಂದು ತಿಳಿದಾಗ ಹಲ್ಲೆಯ ಸ್ವರೂಪ ತೀವ್ರವಾಯಿತು.

ಚಿದಂಬರ ಶೆಟ್ಟಿಯವರು ಗಂಭೀರವಾಗಿ ಗಾಯಗೊಂಡು ನಿತ್ರಾಣವಾಗಿ ಬಿದ್ದಾಗ ಗಾಬರಿಗೊಂಡ ಆರೋಪಿಗಳು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ಪರಿಯ ಗಾಯವಾಗಿದ್ದು ಹೇಗೆ ಎಂದು ಅಲ್ಲಿರುವ ವೈದ್ಯೆ ಡಾ. ವಿಶಾಲಾಕ್ಷಿ ಪ್ರಶ್ನಿಸಿದಾಗ ಆರೋಪಿಗಳು, ‘ಅಪಘಾತವೊಂದರಲ್ಲಿ ಈ ರೀತಿಯಾಗಿದೆ. ದಯವಿಟ್ಟು ಚಿಕಿತ್ಸೆ ನೀಡಿ’ ಎಂದು ಕೋರಿಕೊಂಡರು. ವೈದ್ಯೆ, ಚಿದಂಬರ ಶೆಟ್ಟಿ ಅವರನ್ನು ಪರೀಕ್ಷೆ ಮಾಡಲು ಮುಂದಾದಾಗ, ಅವರು ಆಗಲೇ ಸತ್ತಿರುವುದು ತಿಳಿಯಿತು.

ಶವವನ್ನು ಏನು ಮಾಡಬೇಕೆಂದು ತಿಳಿಯದ ಆರೋಪಿಗಳು, ಕಾರಿನಲ್ಲಿ ಅದನ್ನು ತಂದರು. ತಾವೇ ಕೊಲೆ ಮಾಡಿರುವ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣದಿಂದ ಶವವನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸಮೀಪ ಎಸೆದು ಪರಾರಿಯಾದರು...

ಈ ರೀತಿಯಾಗಿ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸುಮಾರು 50 ಸಾಕ್ಷಿದಾರರ ವಿಚಾರಣೆ ನಡೆಸಿದರು.  ಅವರ ಕೈಗೆ ಸಿಕ್ಕಿದ್ದು ಆರು ಮಂದಿ ಆರೋಪಿಗಳು. ಎಲ್ಲರ ವಿರುದ್ಧ ಆರೋಪಪಟ್ಟಿ ತಯಾರಿಸಿ ಕೋರ್ಟ್‌ಗೆ ಸಲ್ಲಿಸಿದರು. ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ಆದರೆ ಈ ಆರೋಪಿಗಳೇ ಕೊಲೆ ಮಾಡಿದ್ದಾರೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಯಿತು.

ಆದ್ದರಿಂದ 2000ನೇ ಇಸವಿಯಲ್ಲಿ ಎಲ್ಲ ಆರೋಪಿಗಳೂ ಖುಲಾಸೆಗೊಂಡರು. ಈ ಖುಲಾಸೆ ಆದೇಶ ರದ್ದು ಮಾಡಿ, ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಕೋರಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

ಪ್ರಕರಣವು ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂತು. ತಾವು ಕಲೆ ಹಾಕಿದ ಎಲ್ಲಾ ಸಾಕ್ಷ್ಯಾಧಾರಗಳನ್ನೂ ಹೈಕೋರ್ಟ್‌ ಮುಂದಿಟ್ಟ ಪ್ರಾಸಿಕ್ಯೂಷನ್‌ ಪರ ವಕೀಲರು ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಕೋರಿದರು. ಕೆಲ ಆರೋಪಿಗಳ ಪರ ನಾನು ವಕಾಲತ್ತು ವಹಿಸಿದ್ದೆ. ಸೆಷನ್ಸ್‌ ಕೋರ್ಟ್‌ನಲ್ಲಿ ನಡೆದ ಸಂಪೂರ್ಣ ವಿಚಾರಣೆಯ ಕುರಿತು ದಾಖಲೆ ಅವಲೋಕಿಸಿದ ಹಾಗೂ ನಮ್ಮ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಿಗೆ ಆರೋಪಿಗಳನ್ನು ಬಿಡುಗಡೆ ಮಾಡದೆಯೇ ಬೇರೆ ದಾರಿ ಇರಲಿಲ್ಲ. ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿದ್ದ ಸೆಷನ್ಸ್‌ ಕೋರ್ಟ್‌ ಆದೇಶವನ್ನು ಅವರು ಎತ್ತಿ ಹಿಡಿದರು. ಪ್ರಾಸಿಕ್ಯೂಷನ್‌ ವಿಫಲವಾಯಿತು.  ಏಕೆ...?

ಇದಕ್ಕೆ ಕಾರಣ ಎಂದರೆ ಬಹುತೇಕ ಎಲ್ಲ ಸಾಕ್ಷಿದಾರರೂ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷಿಗಳಾಗಿ ಪರಿಣಮಿಸಿದ್ದು. ಪ್ರಮುಖ ಸಾಕ್ಷಿದಾರ ಎನಿಸಿಕೊಂಡಿದ್ದ ರವಿಕುಮಾರ್‌ ಕೋರ್ಟ್‌ಗೆ ಸಂಪೂರ್ಣ ಮಾಹಿತಿ ನೀಡಲಿಲ್ಲ. ತಾವಿಬ್ಬರೂ ಆರೋಪಿಗಳಿಂದ ಹಣ ಪಡೆದುಕೊಂಡಿದ್ದು, ಅದನ್ನು ಹಿಂದುರಿಗಿಸಲಿಲ್ಲ ಎಂಬುದನ್ನು ಒಪ್ಪಿಕೊಂಡರು ಬಿಟ್ಟರೆ ಮತ್ತೇನನ್ನೂ ಅವರು ಹೇಳಲಿಲ್ಲ.  ಫಾರ್ಮ್‌ ಹೌಸ್‌ ಒಂದರಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದರು. ಆದರೆ ಫಾರ್ಮ್‌ ಹೌಸ್‌ನ ಮಾಲೀಕ ಘಟನೆ ನಡೆದ ದಿನ ತಾವು ಊರಿನಲ್ಲಿ ಇರಲಿಲ್ಲ ಎಂದು ಕೋರ್ಟ್‌ಗೆ ಹೇಳಿದರು.

ಚಿದಂಬರ ಶೆಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದ ಡಾ. ವಿಶಾಲಾಕ್ಷಿ ಅವರು ಕೂಡ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದರು. ಘಟನೆ ನಡೆದ ದಿನ ತಮ್ಮ ಆಸ್ಪತ್ರೆಗೆ ಆರೋಪಿಗಳು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಕರೆತಂದ ವಿಷಯವನ್ನು ಅವರು ತಿಳಿಸಿದರೇ ವಿನಾ ಆ ಗಾಯಾಳನ್ನು ಕರೆತಂದಿದ್ದ ವ್ಯಕ್ತಿಗಳನ್ನು  (ಆರೋಪಿಗಳನ್ನು) ತಾವು ಗುರುತಿಸುವುದು ಕಷ್ಟ ಎಂದುಬಿಟ್ಟರು. ಇವರು ಕೂಡ ಪ್ರತಿಕೂಲ ಸಾಕ್ಷಿದಾರರು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ನಿಮ್ಹಾನ್ಸ್‌ ಆವರಣದಲ್ಲಿ ಶವ ನೋಡಿದ್ದ ಅಲ್ಲಿಯ ಭದ್ರತಾ ಸಿಬ್ಬಂದಿ, ‘ಶವ ನೋಡಿದ ತಕ್ಷಣ ನಾನು ಪೊಲೀಸರಿಗೆ ದೂರು ನೀಡಿದೆ ಅಷ್ಟೆ. ಆದರೆ ಕೊಲೆ ನಡೆದದ್ದು ನೋಡಲಿಲ್ಲ’ ಎಂದರು. ಹೀಗೆ ಸಾಕ್ಷಿದಾರರೆಂದು ಪ್ರಾಸಿಕ್ಯೂಷನ್‌ ಕರೆತಂದ ಬಹುತೇಕ ಮಂದಿ ಕೋರ್ಟ್‌ಗೆ ಸರಿಯಾದ ಮಾಹಿತಿ ನೀಡಲಿಲ್ಲ.

ಕೊನೆಗೆ ಉಳಿದದ್ದು ಚಿದಂಬರ ಶೆಟ್ಟಿ ಅವರ ಪತ್ನಿ ಉಷಾ. ಇಡೀ ಪ್ರಕರಣದಲ್ಲಿ ಇವರು ಪ್ರಮುಖ ಸಾಕ್ಷಿದಾರರಾಗಿದ್ದರು. ಪ್ರಾಸಿಕ್ಯೂಷನ್‌ಗೆ ‘ಜೀವ’ ಬರಲು ಇವರ ಸಾಕ್ಷ್ಯ ಬಹಳ ಮುಖ್ಯವಾಗಿತ್ತು. ಆದರೆ ಅವರು ನೀಡಿದ ಹೇಳಿಕೆ ಆರೋಪಿ ಪರ ವಕೀಲರಾದ ನಮ್ಮ ವಾದಕ್ಕೆ ಇನ್ನಷ್ಟು ‘ಜೀವ’ ತುಂಬಿತು! ‘1997ರ ಮಾರ್ಚ್‌ 13ರಂದು ಮಧ್ಯಾಹ್ನ ಸುಮಾರು ನಾಲ್ಕು ಗಂಟೆ ಹೊತ್ತಿಗೆ ಈ ಆರೋಪಿಗಳು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದರು. ಆರು ಗಂಟೆ ಸುಮಾರಿಗೆ ಪತಿ ವಾಪಸ್‌ ಮನೆಗೆ ಬಂದರು. 6.30ಕ್ಕೆ ಪುನಃ ವಾಪಸ್‌ ಹೋದವರು ರಾತ್ರಿ ಒಂಬತ್ತು ಗಂಟೆಯಾದರೂ ಮನೆಗೆ ಬರಲಿಲ್ಲ. ಆದ್ದರಿಂದ ಆತಂಕಗೊಂಡ ನಾನು ಪತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದೆ’ ಎಂಬುದಾಗಿ ಉಷಾ ಹೇಳಿಕೆ ನೀಡಿದ್ದರು.

ಸೆಷನ್ಸ್‌ ಕೋರ್ಟ್‌ ಆದೇಶದಲ್ಲಿ ಉಲ್ಲೇಖಿತ ಈ ಹೇಳಿಕೆಗಳನ್ನು ಗಮನಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳು, ‘ನಾಲ್ಕು ಗಂಟೆಗೆ ಆರೋಪಿಗಳು ಮನೆಗೆ ಬಂದಾಗ ಉಷಾ ಅವರಿಗೆ ಆರೋಪಿಗಳೆಲ್ಲ ಸೇರಿ ತಮ್ಮ ಪತಿಯ ಕೊಲೆಗೆ ಸಂಚು ರೂಪಿಸಿದ್ದರು ಎಂದು ಅನಿಸಿರಲಿಲ್ಲ. ಆದರೆ ರಾತ್ರಿ ಒಂಬತ್ತು ಗಂಟೆಗೆ ಏಕಾಏಕಿ ಅನ್ನಿಸಿದ್ದು ಏಕೆ? ಕೇವಲ ಐದು ಗಂಟೆಯ ಅವಧಿಯಲ್ಲಿ ಆರೋಪಿಗಳ ಮೇಲೆ ಅನುಮಾನ ಬಂದದ್ದೇಕೆ ಎಂಬ ಸಂದೇಹ ಹುಟ್ಟುತ್ತದೆ.

ಅಷ್ಟೇ ಅಲ್ಲದೆ, ಉಷಾ ಅವರೇ ಹೇಳಿರುವ ಪ್ರಕಾರ 4 ಗಂಟೆಗೆ ಹೋದ ಪತಿ 6 ಗಂಟೆಗೆ ವಾಪಸ್‌ ಆಗಿದ್ದರು. ನಂತರ ಪುನಃ ಮನೆಯಿಂದ ಹೋಗಿದ್ದರು. ಇದರ ಅರ್ಥ ಕೊನೆಯದಾಗಿ ಅವರು ಹೋದಾಗ ಆರೋಪಿಗಳು ಜೊತೆಯಲ್ಲಿ ಇರಲಿಲ್ಲ ಎಂದಾಯಿತು. ಇದನ್ನೆಲ್ಲ ಗಮನಿಸಿದರೆ ಪ್ರಾಸಿಕ್ಯೂಷನ್‌ ಹೇಳಿರುವುದು ಕಟ್ಟುಕಥೆ ರೂಪದಲ್ಲಿ ಇದೆ. ಚಿದಂಬರ ಶೆಟ್ಟಿ ಅವರ ಜೊತೆ ರವಿಕುಮಾರ್‌ ಅವರನ್ನೂ ಅಪಹರಣ ಮಾಡಿದರು ಎನ್ನುವುದು ಪೊಲೀಸರ ವಾದ. ಆದರೆ ರವಿಕುಮಾರ್‌ ಈ ಬಗ್ಗೆ ಏನೂ ಹೇಳುತ್ತಿಲ್ಲ.

ಶೆಟ್ಟಿಯವರು 6.30ಕ್ಕೆ ಮನೆಗೆ ಮರಳಿದ್ದು ಹೌದೇ ಆಗಿದ್ದರೆ ಅವರ ಕೊಲೆ ಮುಂಚೆಯೇ ನಡೆದಿರಲು ಹೇಗೆ ಸಾಧ್ಯ?’ ಎಂದ ನ್ಯಾಯಮೂರ್ತಿಗಳು, ಇಷ್ಟೆಲ್ಲಾ ಸಂದೇಹಗಳು ಇರುವಾಗ ಆರೋಪಿಗಳೇ ಅಪರಾಧಿಗಳು ಎನ್ನುವ ಪ್ರಾಸಿಕ್ಯೂಷನ್‌ ವಾದದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಡಿದ್ದ ತನಿಖೆಯ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ಕೊಲೆ ನಡೆದಾಗಿನಿಂದ ತನಿಖಾಧಿಕಾರಿಗಳು ಅವರ ಕೆಲಸವನ್ನು ಕಾಲಕಾಲಕ್ಕೆ ಚೆನ್ನಾಗಿ ನಿರ್ವಹಿಸಿದ್ದಾರೆ. ಕೊಲೆ ನಡೆದ ಸ್ಥಳದ ಪಂಚನಾಮೆ  ನಡೆಸುವುದು, ಅಲ್ಲಿರುವವರ ಹೇಳಿಕೆ ಪಡೆದುಕೊಳ್ಳುವುದು, ಘಟನೆ ನಡೆದ ಸ್ಥಳಕ್ಕೆ ಆಗಾಗ್ಗೆ ಹೋಗುವುದು, ಶವದ ಮರಣೋತ್ತರ ಪರೀಕ್ಷೆ ನಡೆಸುವುದು, ಶವ ಸಿಕ್ಕ ಜಾಗದ ಸರ್ವೆ ನಂಬರ್‌ಗಳನ್ನು ಕಲೆ ಹಾಕುವುದು, ವಶಪಡಿಸಿಕೊಂಡ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವುದು, ಆರೋಪಪಟ್ಟಿ ಸಲ್ಲಿಸುವುದು... ಹೀಗೆ ಎಲ್ಲವನ್ನೂ ಚಾಚೂತಪ್ಪದೆ ಪಾಲಿಸಿದ್ದಾರೆ.

ಆದರೆ ಆರೋಪಿಗಳೇ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ದೃಢವಾಗಿರುವ ಸಾಕ್ಷ್ಯಾಧಾರಗಳನ್ನು ಮಾತ್ರ ಕಲೆ ಹಾಕಿಲ್ಲ’ ಎಂದು ತೀರ್ಪಿನಲ್ಲಿ  ಉಲ್ಲೇಖಿಸಿದೆ. ತನಿಖಾಧಿಕಾರಿಗಳು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ ನಿಜ. ಆದರೆ ಅದನ್ನು ಒಂದಕ್ಕೊಂದು ಜೋಡಿಸುವ ಹಂತದಲ್ಲಿ ನಡುನಡುವೆ ಕೊಂಡಿಯನ್ನು ತಪ್ಪಿಬಿಟ್ಟಿದ್ದಾರೆ. ಇಡೀ ಪ್ರಕರಣದ ಪ್ರಮುಖ ಘಟ್ಟ ಎನಿಸಿದ್ದ ಆ ‘ನಾಲ್ಕು ಗಂಟೆ’ಗಳ ಅವಧಿಯ ವಿವರಣೆ ಕೂಡ ಶೆಟ್ಟಿ ಅವರ ಪತ್ನಿಯ ಹೇಳಿಕೆಯಿಂದ ವಿಫಲವಾಗಿದೆ.

ಇಷ್ಟೆಲ್ಲಾ ಆಗಿರುವಾಗ ಆರೋಪಿಗಳೇ ಕೊಲೆ ಮಾಡಿದ್ದಾರೆ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಒಪ್ಪಿಕೊಳ್ಳುವಲ್ಲಿ ಅರ್ಥವೇ ಇಲ್ಲ ಎಂದ ನ್ಯಾಯಮೂರ್ತಿಗಳು ಸೆಷನ್ಸ್‌ ಕೋರ್ಟ್‌ ಆದೇಶವನ್ನು 2007ರ ಡಿಸೆಂಬರ್‌ನಲ್ಲಿ ಎತ್ತಿಹಿಡಿದರು. ಮತ್ತೊಮ್ಮೆ ಆರೋಪಿಗಳಿಗೆ ಜಯವಾಯಿತು.

ಹಲವು ಪ್ರಕರಣಗಳಂತೆ ಇಲ್ಲಿಯೂ ಪ್ರಾಸಿಕ್ಯೂಷನ್‌ ಸಾಕ್ಷ್ಯಾಧಾರಗಳನ್ನು ಹುಡುಕುವಲ್ಲಿ ವಿಫಲವಾಯಿತು. ಚಿದಂಬರ ಶೆಟ್ಟಿ ಅವರ ಪತ್ನಿಯವರ ಗೊಂದಲಮಯ ಹೇಳಿಕೆ, ಬಹುತೇಕ ಎಲ್ಲ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿದಾರರಾಗಿದ್ದು... ಹೀಗೆ ಇವೆಲ್ಲವುಗಳಿಂದಾಗಿ ಆರೋಪಿಗಳು ಖುಲಾಸೆಗೊಂಡರು.

ಚಿದಂಬರ ಶೆಟ್ಟಿ ಅವರು ಸತ್ತಿದ್ದಂತೂ ನಿಜ. ಅದು ಅಸಹಜ ಸಾವು ಕೂಡ ಹೌದು ಎನ್ನುವುದು ಮೇಲ್ನೋಟಕ್ಕೆ ಕಾಣುವಂತಿತ್ತು. ಆದರೆ ಆ ಸಾವು ಮಾತ್ರ ಚಿದಂಬರ ರಹಸ್ಯವಾಗಿಯೇ ಉಳಿದುಬಿಟ್ಟಿತು!

(ಮುಂದಿನ ವಾರ: ಕೋರ್ಟ್‌ ಒಳಗೆ ಅವನಲ್ಲ, ಇವನು...!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT