ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ಸೂರ್ಯಕುಮಾರ್‌ಗೆ ನಿಯಮಬಾಹಿರ ‘ನೆರವು’: ಟಿಮ್ ಡೇವಿಡ್, ಪೊಲ್ಲಾರ್ಡ್‌ಗೆ ದಂಡ

Published 20 ಏಪ್ರಿಲ್ 2024, 15:31 IST
Last Updated 20 ಏಪ್ರಿಲ್ 2024, 15:31 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಕಿಂಗ್ಸ್ ವಿರುದ್ಧ ಮುಲ್ಲನಪುರದಲ್ಲಿ ಏ. 18ರಂದು ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್‌ ಅವರಿಗೆ ಐಪಿಎಲ್‌ ನೀತಿ ನಿಯಮಗಳಿಗೆ (ಕೋಡ್‌ ಆಫ್ ಕಂಡಕ್ಟ್‌) ವಿರುದ್ಧವಾಗಿ ‘ನೆರವು’ ನೀಡಿದ ಮುಂಬೈ ಇಂಡಿಯನ್ಸ್‌ ಆಟಗಾರ ಟಿಮ್‌ ಡೇವಿಡ್‌ ಮತ್ತು ಬ್ಯಾಟಿಂಗ್‌ ಕೋಚ್‌ ಕೀರನ್‌ ಪೊಲ್ಲಾರ್ಡ್‌ ಅವರಿಗೆ ಅವರವರ ಪಂದ್ಯ ಸಂಭಾವನೆಯ ಶೇ 20ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.

ಬ್ಯಾಟರ್‌ಗೆ ರಿವ್ಯೂ (ಮರುಪರಿಶೀಲನೆ) ಕೇಳುವಂತೆ ಡಗ್‌ಔಟ್‌ನಿಂದ ಒತ್ತಾಯಿಸುತ್ತಿದ್ದ ದೃಶ್ಯಾವಳಿಯ ವಿಡಿಯೊ ತುಣುಕು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ಅರ್ಷದೀಪ್ ಸಿಂಗ್ ಮಾಡಿದ್ದ ಪಂದ್ಯದ 15ನೇ ಓವರ್‌ನ ಮೊದಲ ಎಸೆತ ಆಫ್‌ ಸ್ಟಂಪ್‌ನಿಂದ ಸಾಕಷ್ಟು ಆಚೆ ಹೋಗಿತ್ತು. ಸೂರ್ಯ ಹೊಡೆಯಲು ಯತ್ನಿಸಿದರೂ ಚೆಂಡು ಅವರಿಗೆ ಬ್ಯಾಟಿಗೆ ಎಟುಕಿರಲಿಲ್ಲ. ಆದರೆ ಆನ್‌ಫೀಲ್ಡ್‌ ಅಂಪೈರ್‌ ಅದನ್ನು ‘ಸಕ್ರಮ’ ಎಸೆತವೆಂದು ಭಾವಿಸಿ ವೈಡ್‌ ಘೋಷಿಸಿರಲಿಲ್ಲ. ಮುಂಬೈ ಹೆಡ್‌ ಕೋಚ್‌ ಮಾರ್ಕ್‌ ಬೌಚರ್‌ ಇದನ್ನು ಸೂರ್ಯಕುಮಾರ್‌ಗೆ ಇದು ವೈಡ್‌ ಎಂದು ಸಜ್ಞೆ ಮಾಡಿದ್ದರು. ಇದಕ್ಕೆ ರಿವ್ಯೂ ಪಡೆಯುವಂತೆ ಟಿಮ್‌ ಡೇವಿಡ್‌ ಮತ್ತು ಪೊಲ್ಲಾರ್ಡ್‌ ಅವರು ಸೂರ್ಯಕುಮಾರ್‌ಗೆ ಒತ್ತಾಯಿಸಿದ್ದು ವಿಡಿಯೊದಲ್ಲಿ ಸೆರೆಯಾಗಿತ್ತು. ನಿಯಮಗಳ ಪ್ರಕಾರ ಹೀಗೆ ಮಾಡುವಂತಿಲ್ಲ.

ಇವರಿಬ್ಬರು ಐಪಿಎಲ್‌ ನೀತಿಸಂಹಿತೆಯ ವಿಧಿ 2.20 ಉಲ್ಲಂಘಿಸಿದ್ದಾರೆ ಎಂದು ಐಪಿಎಲ್‌ ಪ್ರಕಟಣೆ ತಿಳಿಸಿದೆ. ಇಬ್ಬರೂ ತಪ್ಪು ಒಪ್ಪಿಕೊಂಡಿದ್ದಾರೆ. ಇಂಥ ಉಲ್ಲಂಘನೆ ಲೆವೆಲ್‌ ಒನ್‌ಗೆ ಸಂಬಂಧಿಸಿದಲ್ಲಿ ಮ್ಯಾಚ್‌ ರೆಫ್ರಿ ತೀರ್ಮಾನ ಅಂತಿಮವಾಗಿರುತ್ತದೆ ಮತ್ತು ಅದಕ್ಕೆ ತಪ್ಪು ಮಾಡಿದ ಆಟಗಾರ ಬದ್ಧರಾಗಿರಬೇಕಾಗುತ್ತದೆ.

ಸೂರ್ಯಕುಮಾರ್‌ ಆ ಪಂದ್ಯದಲ್ಲಿ 47 ಎಸೆತಗಳಲ್ಲಿ 67 ರನ್ ಹೊಡೆದಿದ್ದರು. ಪಂದ್ಯದಲ್ಲಿ ಮುಂಬೈ ರೋಚಕ ಜಯಗಳಿಸಿತ್ತು.

ಋತುರಾಜ್‌, ರಾಹುಲ್‌ಗೆ ₹12 ಲಕ್ಷ ದಂಡ

ಲಖನೌ (ಪಿಟಿಐ): ಶುಕ್ರವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ಲಖನೌ ಸೂಪರ್‌ ಜೈಂಟ್ಸ್‌ ನಾಯಕ ಕೆ.ಎಲ್‌.ರಾಹುಲ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಋತುರಾಜ್ ಗಾಯಕವಾಡ್‌ ಅವರಿಗೆ ತಲಾ ₹12 ಲಕ್ಷ ದಂಡ ವಿಧಿಸಲಾಗಿದೆ.

ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ತಂಡ ಎಂಟು ವಿಕೆಟ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಿತ್ತು. ಇಬ್ಬರೂ ಮೊದಲ ಸಲ ಈ ತಪ್ಪು (ನಿಧಾನಗತಿಯ ಓವರ್‌) ಮಾಡಿದ್ದರಿಂದ ನಿಯಮಗಳ ಅಡಿ ₹12 ಲಕ್ಷ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT