ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ಗೆ ವಿರಾಮ ಅಗತ್ಯ: ಮೈಕೆಲ್‌ ಕ್ಲಾರ್ಕ್

ವಿಶ್ರಾಂತಿ ಪಡೆದರೆ ಟಿ20 ವಿಶ್ವಕಪ್‌ಗೆ ತಾಜಾತನದಿಂದ ಆಡಲು ಸಾಧ್ಯ: ಕ್ಲಾರ್ಕ್
Published 7 ಮೇ 2024, 12:38 IST
Last Updated 7 ಮೇ 2024, 12:38 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ‘ರೋಹಿತ್‌ ಶರ್ಮಾ ದಣಿದಿದ್ದು, ಟಿ20 ವಿಶ್ವಕಪ್‌ಗೆ ಮೊದಲು ಫ್ರೆಷ್‌ ಆಗಿರಲು ಅವರಿಗೆ ಆಟದಿಂದ ವಿರಾಮದ ಅಗತ್ಯವಿದೆ’ ಎಂದು ಆಸ್ಟ್ರೇಲಿಯಾ ತಂಡದ ಮೈಕೆಲ್‌ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವನ್ನು ಮುನ್ನಡೆಸಲಿರುವ 37 ವರ್ಷ ವಯಸ್ಸಿನ ರೋಹಿತ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಳೆದ ಐದು ಇನಿಂಗ್ಸ್‌ಗಳಲ್ಲಿ ನಾಲ್ಕರಲ್ಲಿ ಒಂದು ಅಂಕಿ ಮೊತ್ತಕ್ಕೆ ನಿರ್ಗಮಿಸಿದ್ದಾರೆ.

ರೋಹಿತ್‌ ತಮ್ಮ ಪ್ರದರ್ಶನದ ಬಗ್ಗೆ ಸ್ವವಿಮರ್ಶೆ ಮಾಡಬಲ್ಲರು. ಲೀಗ್‌ನಲ್ಲಿ ಉತ್ತಮ ಆರಂಭ ಮಾಡಿದ್ದ ಅವರಿಗೆ ಈಗ  ನಿರಾಶೆಯಾಗುವುದರಲ್ಲಿ ಅನುಮಾನವಿಲ್ಲ. ಅವರಿಗೆ ಸುಸ್ತಾಗಿರುವ ಸಾಧ್ಯತೆಯೂ ಇದೆ’ ಎಂದು ಕ್ಲಾರ್ಕ್ ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

‘ಸ್ವಲ್ಪ ವಿರಾಮ ತೆಗೆದುಕೊಂಡರೆ ಅದು ಅದ್ಭುತ ಪರಿಣಾಮ ಬೀರುತ್ತದೆ. ಭಾರತ ತಂಡದ ನಾಯಕನಾಗಿದ್ದು, ಮುಂಬೈ ಇಂಡಿಯನ್ಸ್‌ ತಂಡಕ್ಕೆ ಪ್ರಮುಖ ಆಟಗಾರನಾಗಿ ವಿರಾಮ ಸಿಗುವುದು ಕಷ್ಟ. ಆದರೆ ಅವರು ಲಯ ಕಂಡುಕೊಳ್ಳಬೇಕಿದೆ’ ಎಂದು ಕ್ಲಾರ್ಕ್ ಹೇಳಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಇಂಪ್ಯಾಕ್ಟ್‌ ಸಬ್‌ ಆಗಿ ಆಡಿದ್ದು, ಭಾರತ ತಂಡದಲ್ಲಿ ಕಳವಳಕ್ಕೆ ಕಾರಣವಾಗಿತ್ತು. ಆದರೆ ಮೂರು ದಿನಗಳ ನಂತರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಪೂರ್ಣ ಪಂದ್ಯ ಆಡಿದ್ದರು.

ಹಾರ್ದಿಕ್‌ಗೆ ಮೆಚ್ಚುಗೆ: ಇದೇ ವೇಳೆ ಕ್ಲಾರ್ಕ್ ಅವರು ಭಾರತ ತಂಡದ ಉಪನಾಯಕ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸನ್‌ರೈಸರ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಪಾಂಡ್ಯ 31 ರನ್ನಿಗೆ 3 ವಿಕೆಟ್‌ ಪಡೆದಿದ್ದರು.

‘ಕಳೆದ ಕೆಲವು ಪಂದ್ಯಗಳಲ್ಲಿ ಅವರು ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಬೌಲಿಂಗ್‌ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಆಲ್‌ರೌಂಡರ್‌ ಆಟಗಾರನಿಗೆ ಒಂದು ವಿಭಾಗದಲ್ಲಿ ಯಶಸ್ಸು ಸಿಕ್ಕಿದರೆ ಅದು ಅವನ ಆತ್ಮವಿಶ್ವಾಸ ಹೆಚ್ಚಿಸುತ್ತದೆ’ ಎಂದರು. ಹಾರ್ದಿಕ್‌ ತಮ್ಮ ಅಸ್ತ್ರವಾದ ಬೌನ್ಸರ್‌ಗಳನ್ನೂ ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ ಎಂದು ಕ್ಲಾರ್ಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT