ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | 6 ಓವರ್‌ಗೆ 125 ರನ್; ಪವರ್ ಪ್ಲೇ ಗಳಿಕೆಯಲ್ಲಿ ರೈಸರ್ಸ್ ದಾಖಲೆ

Published 20 ಏಪ್ರಿಲ್ 2024, 16:01 IST
Last Updated 20 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಐಪಿಎಲ್‌ ಟಿ20 ಪಂದ್ಯದಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಸನ್‌ರೈಸರ್ಸ್‌ ಹೈದಾರಾಬಾದ್‌ ತಂಡದ ಬ್ಯಾಟರ್‌ಗಳು, ಚುಟುಕು ಮಾದರಿಯಲ್ಲಿ ಹಲವು ದಾಖಲೆಗಳನ್ನು ಬರೆದರು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೈಸರ್ಸ್‌ ಪರ ಆರಂಭಿಕ ಟ್ರಾವಿಸ್‌ ಹೆಡ್‌ ಹಾಗೂ ಅಭಿಷೇಕ್ ಶರ್ಮಾ ಬಿರುಸಾಗಿ ರನ್‌ ಗಳಿಸಿದರು. ಅಬ್ಬರದ ಬ್ಯಾಟಿಂಗ್‌ ನಡೆಸಿದ ಈ ಜೋಡಿ, ಮೊದಲ 6 ಓವರ್‌ ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 125 ರನ್‌ ಕಲೆಹಾಕಿತು. ಇದರೊಂದಿಗೆ ಐಪಿಎಲ್‌ ಪಂದ್ಯವೊಂದರ ಮೊದಲ ಐದು ಓವರ್‌ಗಳಲ್ಲೇ 'ಶತಕ' ಬಾರಿಸಿದ ಮೊದಲ ತಂಡ ಹಾಗೂ ಪವರ್‌ ಪ್ಲೇ ಅವಧಿಯಲ್ಲಿ ಅತಿ ಹೆಚ್ಚು ರನ್‌ ಚಚ್ಚಿದ ತಂಡ ಎಂಬ ದಾಖಲೆಗಳನ್ನು ಬರೆದುಕೊಂಡಿತು.

ಆದರೆ, ಈ ದಾಖಲೆಗಳು ನಿರ್ಮಾಣವಾದ ಬಳಿಕ ಹೆಡ್‌–ಶರ್ಮಾ, ಹೆಚ್ಚು ಹೊತ್ತು ಜೊತೆಯಾಗಿ ಆಡಲಿಲ್ಲ. 7ನೇ ಓವರ್‌ನಲ್ಲಿ ಬೌಲಿಂಗ್‌ ಮಾಡಲು ಬಂದ ಕುಲದೀಪ್‌ ಯಾದವ್‌, ಮೊದಲ ಎಸೆತದಲ್ಲಿ ಸಿಕ್ಸರ್‌ ಬಾರಿಸಿಕೊಂಡರೂ, ನಂತರದ ಎಸೆತದಲ್ಲಿ ಶರ್ಮಾ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಬರೀ 12 ಎಸೆತಗಳಲ್ಲೇ 46 ರನ್‌ ಗಳಿಸಿದ್ದ ಅವರ ಸ್ಫೋಟಕ ಇನಿಂಗ್ಸ್‌ಗೆ ತೆರೆ ಬಿದ್ದಿತು. ನಂತರ ಬಂದ ಏಡನ್‌ ಮಾರ್ಕ್ರಂ (1) ಸಹ ಅದೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು.

32 ಎಸೆತಗಳಲ್ಲಿ 89 ರನ್‌ ಗಳಿಸಿದ್ದ ಹೆಡ್‌ ಹಾಗೂ ಆಗಷ್ಟೇ ರಟ್ಟೆ ಆರಳಿಸುತ್ತಿದ್ದ ಹೆನ್ರಿಚ್‌ ಕ್ಲಾಸೆನ್‌ (8 ಎಸೆತಗಳಲ್ಲಿ 15 ರನ್‌) ರೈಸರ್ಸ್‌ ಮೊತ್ತ 9.1 ಓವರ್‌ಗಳಲ್ಲೇ 154 ರನ್ ಆಗಿದ್ದಾಗ ಬೆನ್ನು ಬೆನ್ನಿಗೆ ವಿಕೆಟ್ ಒಪ್ಪಿಸಿದರು.

ಅದಾದ ಬಳಿಕ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿದ್ದಿತು. ಆದರೂ, ಐಪಿಎಲ್‌ ಪಂದ್ಯವೊಂದರ ಮೊದಲ 10 ಓವರ್‌ಗಳಲ್ಲಿ ಗರಿಷ್ಠ ರನ್‌ ಕಲೆಹಾಕಿದ ತನ್ನದೇ ದಾಖಲೆಯನ್ನು ರೈಸರ್ಸ್‌ ಉತ್ತಮಪಡಿಸಿಕೊಂಡಿತು. ಇದೇ ಟೂರ್ನಿಯಲ್ಲಿ ತಾನಾಡಿದ 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ 148 ರನ್‌ ಗಳಿಸಿ ಸಾಧನೆ ಮಾಡಿತ್ತು.

ಕೊನೆಯಲ್ಲಿ ಅಬ್ಬರಿಸಿದ ಶಹಬಾಜ್‌ ಅಹಮದ್‌ (29 ಎಸೆತ, 59 ರನ್) ಚೊಚ್ಚಲ ಅರ್ಧಶತಕದ ಸಂಭ್ರಮ ಆಚರಿಸಿದರು.

ಒಟ್ಟಾರೆಯಾಗಿ ನಿಗಿದಿತ ಓವರ್‌ಗಳ ಅಂತ್ಯಕ್ಕೆ ರೈಸರ್ಸ್‌ ಪಡೆಯ ಮೊತ್ತ 7 ವಿಕೆಟ್‌ಗೆ 266 ರನ್ ಆಗಿದೆ. ಇದರೊಂದಿಗೆ ಒಂದೇ ಟೂರ್ನಿಯಲ್ಲಿ ಮೂರನೇ ಸಲ 260ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಪ್ಯಾಟ್‌ ಕಮಿನ್ಸ್‌ ಬಳಗ ನಿರ್ಮಿಸಿದೆ.

ಡೆಲ್ಲಿ ಪರ ಕುಲದೀಪ್‌ ಯಾದವ್‌ 4 ಓವರ್‌ಗಳಲ್ಲಿ 55 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಪಡೆದರು. ಅಕ್ಷರ್‌ ಪಟೇಲ್‌ ಹಾಗೂ ಮುಕೇಶ್‌ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಅಕ್ಷರ್‌ ಪಟೇಲ್‌ (4 ಓವರ್‌ 29 ರನ್‌) ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು 10ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು.

ಪವರ್‌ ಪ್ಲೇನಲ್ಲಿ ಗರಿಷ್ಠ ರನ್ ಗಳಿಸಿದ ಹೆಡ್‌
ಐಪಿಎಲ್‌ ಪಂದ್ಯವೊಂದರಲ್ಲಿ ಮೊದಲ ಆರು ಓವರ್‌ ಮುಗಿಯುವುದರೊಳಗೆ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ಕೀರ್ತಿ ಹೆಡ್ ಅವರದ್ದಾಯಿತು. ಅವರು 26 ಎಸೆತಗಳನ್ನು ಎದುರಿಸಿ 82 ರನ್‌ ಬಾರಿಸಿದರು. ಈ ಹಿಂದೆ ಈ ದಾಖಲೆ ಡೇವಿಡ್‌ ವಾರ್ನರ್‌ ಹೆಸರಿನಲ್ಲಿತ್ತು.

ವಾರ್ನರ್‌, 2019ರಲ್ಲಿ ಕೋಲ್ಕತ್ತ ವಿರುದ್ಧ 25 ಎಸೆತಗಳಲಿ 65 ರನ್ ಗಳಿಸಿಕೊಂಡಿದ್ದರು.

ಈ ಇಬ್ಬರೇ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲೂ ಇದ್ದಾರೆ. ಹೆಡ್‌ ಇದೇ ವರ್ಷ ಮುಂಬೈ ಇಂಡಿಯನ್ಸ್‌ ವಿರುದ್ಧ 20 ಎಸೆತಗಳಲ್ಲಿ 59 ರನ್‌ ಹಾಗೂ ವಾರ್ನರ್‌ 2015ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 23 ಎಸೆತಗಳಲ್ಲಿ 59 ರನ್‌ ರನ್‌ ಗಳಿಸಿದ್ದರು.

ವೇಗವಾಗಿ 100 ರನ್‌ ಗಳಿಸಿದ ತಂಡಗಳು
* ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (2024): 5 ಓವರ್‌
* ಪಂಜಾಬ್‌ ಕಿಂಗ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌‌ (2014): 6 ಓವರ್‌
* ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಕೋಲ್ಕತ್ತ ನೈಟ್‌ರೈಡರ್ಸ್‌ (2017): 6 ಓವರ್‌
* ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ (2015): 6.5 ಓವರ್‌
* ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (2024): 7 ಓವರ್

ವೇಗವಾಗಿ 200 ರನ್‌ ಗಳಿಸಿದ ತಂಡಗಳು
* ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (2016):14.1 ಓವರ್‌
* ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (2024): 14.4 ಓವರ್
* ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (2024): 14.5 ಓವರ್‌
* ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್‌ (2024): 14.6 ಓವರ್
* ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕೋಲ್ಕತ್ತ ನೈಟ್‌ರೈಡರ್ಸ್‌ (2017): 15.2 ಓವರ್‌

ಕಡಿಮೆ ಓವರ್‌ಗಳಲ್ಲಿ ಅರ್ಧಶತಕ
* ಯಶಸ್ವಿ ಜೈಸ್ವಾಲ್‌: ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ 2.5 ಓವರ್‌ಗಳಲ್ಲಿ ಅರ್ಧಶತಕ (2023)
ಕೆ.ಎಲ್‌.ರಾಹುಲ್‌: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 2.5 ಓವರ್‌ಗಳಲ್ಲಿ ಅರ್ಧಶತಕ (2018)
* ಟ್ರಾವಿಸ್‌ ಹೆಡ್‌: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 3 ಓವರ್‌ಗಳಲ್ಲಿ ಅರ್ಧಶತಕ (2024)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT