ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಲಖನೌಗೆ ಸೋಲು; 8ನೇ ಜಯ ದಾಖಲಿಸಿದ ರಾಜಸ್ಥಾನ

Published 27 ಏಪ್ರಿಲ್ 2024, 18:05 IST
Last Updated 27 ಏಪ್ರಿಲ್ 2024, 18:05 IST
ಅಕ್ಷರ ಗಾತ್ರ

ಲಖನೌ: ನಾಯಕ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೇಲ್ ಅವರ ಅಜೇಯ ಜೊತೆಯಾಟದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಜಯಸಾಧಿಸಿತು.

ಏಕನಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಯಕ ರಾಹುಲ್ ಹಾಗೂ ದೀಪಕ್ ಹೂಡಾ ಅವರಿಬ್ಬರ ಅರ್ಧಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಯಲ್ಸ್ ತಂಡ ಆರು ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ ಜಯಿಸಿತು. ತಂಡವು 19 ಓವರ್‌ಗಳಲ್ಲಿ 3 ವಿಕೆಟ್‌ಗೆ 199 ರನ್‌ ಗಳಿಸಿತು. ಪ್ಲೇ ಆಫ್‌ ಪ್ರವೇಶ ಖಚಿತಪಡಿಸಿಕೊಂಡಿತು.

ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಅವರು ಉತ್ತಮ ಆರಂಭ ಒದಗಿಸಿದರು. 18 ಎಸೆತಗಳಲ್ಲಿ 34 ರನ್‌ ಗಳಿಸಿದ ಬಟ್ಲರ್, ಲಖನೌ ಬೌಲರ್‌ಗಳನ್ನು ಕಾಡಿದರು. ಪವರ್ ಪ್ಲೇ ಅವಧಿಯಲ್ಲಿಯೇ ಈ ಇಬ್ಬರ ವಿಕೆಟ್ ಪತನವಾದವು.

ನಂತರ ಬಂದ ನಾಯಕ ಸಂಜು (ಅಜೇಯ 71, 33ಎ) ಹಾಗೂ ಧ್ರುವ್ (ಅಜೇಯ 52, 34ಎ) ಅವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 121 ರನ್‌ ಸೇರಿಸಿದ್ದರಿಂದ ತಂಡ ಜಯಗಳಿಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಲಖನೌ ತಂಡ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ದೀಪಕ್ ಹೂಡಾ ಅವರ ಶತಕದ ಜೊತೆಯಾಟದ ಬಲದಿಂದ ಹೋರಾಟದ ಮೊತ್ತ ಗಳಿಸಿತು. ರಾಹುಲ್ (76; 48ಎ, 4X8, 6X2) ಹಾಗೂ ಹೂಡಾ (50; 31ಎ, 4X7) ಅವರಿಬ್ಬರೂ ಮೂರನೇ ವಿಕೆಟ್ ಜತೆಯಾಟದಲ್ಲಿ 115 ರನ್‌ ಸೇರಿಸಿದರು.

ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟ್ರೆಂಟ್ ಬೌಲ್ಟ್ ಹಾಕಿದ ಮೊದಲ ಓವರ್‌ನ ಮೊದಲೆರಡೂ ಎಸೆತಗಳನ್ನು ಕ್ವಿಂಟನ್ ಡಿ ಕಾಕ್ ಬೌಂಡರಿಗಟ್ಟಿದರು. ಆದರೆ ಮೂರನೇ ಎಸೆತದಲ್ಲಿಯೇ ಕ್ವಿಂಟನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಟ್ರೆಂಟ್ ‘ಮುಯ್ಯಿ’ ತೀರಿಸಿಕೊಂಡರು.

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಇಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಶಾಂತಚಿತ್ತದಿಂದ ನಿಂತಿದ್ದ ರಾಹುಲ್ ಅವರನ್ನು ಸೇರಿಕೊಂಡ ದೀಪಕ್ ಆತಂಕ ದೂರ ಮಾಡಿದರು.

ಪ್ರಸ್ತುತ ಟೂರ್ನಿಯಲ್ಲಿ 9 ಪಂದ್ಯವಾಡಿರುವ ರಾಜಸ್ಥಾನಕ್ಕೆ ಇದು 8ನೇ ಗೆಲುವಾಗಿದೆ. ಇಷ್ಟೇ ಪಂದ್ಯವಾಡಿರುವ ಲಖನೌ, ಐದರಲ್ಲಿ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು

ಲಖನೌ ಸೂಪರ್‌ ಜೈಂಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 (ಕೆ.ಎಲ್. ರಾಹುಲ್ 76, ದೀಪಕ್ ಹೂಡಾ 50, ಆಯುಷ್ ಬದೋನಿ ಔಟಾಗದೆ 18, ಕೃಣಾಲ್ ಪಾಂಡ್ಯ ಔಟಾಗದೆ 15, ಸಂದೀಪ್ ಶರ್ಮಾ 31ಕ್ಕೆ2, ಆವೇಶ್ ಖಾನ್ 42ಕ್ಕೆ1, ಅಶ್ವಿನ್ 39ಕ್ಕೆ1)

ರಾಜಸ್ಥಾನ ರಾಯಲ್ಸ್‌: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 199 (ಸಂಜು ಸ್ಯಾಮ್ಸನ್ ಅಜೇಯ 71, ರಿಯಾನ್ ಪರಾಗ್ ಅಜೇಯ 52, ಮಾರ್ಕಸ್‌ ಸ್ಟೊಯಿನಿಸ್ 3ಕ್ಕೆ1, ಅಮಿತ್ ಮಿಶ್ರ 20ಕ್ಕೆ1)

ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ 7 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಸಂಜು ಸ್ಯಾಮ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT