ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CSK vs LSG | ಲಖನೌ ವಿರುದ್ಧ ಪಂದ್ಯ ಇಂದು: ಚೆನ್ನೈಗೆ ಸೇಡಿನ ತವಕ

Published 23 ಏಪ್ರಿಲ್ 2024, 0:02 IST
Last Updated 23 ಏಪ್ರಿಲ್ 2024, 0:02 IST
ಅಕ್ಷರ ಗಾತ್ರ

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್ ತಂಡ, ಈಗ ದ್ವಿತೀಯಾರ್ಧಕ್ಕೆ ಕಾಲಿಟ್ಟಿರುವ ಐಪಿಎಲ್‌ ಟೂರ್ನಿಯಲ್ಲಿ ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಈ ಹಿಂದಿನ ಸುತ್ತಿನಲ್ಲಿ ಎದುರಾಗಿದ್ದ ಸೋಲಿಗೆ ಆತಿಥೇಯ ತಂಡ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದೆ.

ಎರಡೂ ತಂಡಗಳು ಅಂಕಪಟ್ಟಿಯ ಮಧ್ಯ ಭಾಗದಲ್ಲಿದ್ದು, ಗೆಲುವಿನೊಡನೆ ಬಡ್ತಿಯ ತವಕದಲ್ಲಿವೆ. ಕಳೆದ ವಾರ ಏಕನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದಾಗ, ಕಪ್ತಾನ ಕೆ.ಎಲ್‌.ರಾಹುಲ್ ಮತ್ತು ವಿಕೆಟ್‌ ಕೀಪರ್ ಕ್ವಿಂಟನ್‌ ಡಿಕಾಕ್‌ ಅವರ ಶತಕದ ಜೊತೆಯಾಟದ ನೆರವಿನಿಂದ ಲಖನೌ ತಂಡ ತವರಿನಲ್ಲಿ ಋತುರಾಜ್ ಗಾಯಕವಾಡ ಬಳಗವನ್ನು ಸೋಲಿಸಿತ್ತು.

ಹೊರಗೆ ಸೋಲು ಅನುಭವಿಸಿರುವ ಚೆನ್ನೈ, ತವರಿನಲ್ಲಿ ನಡೆಯಲಿರುವ ತನ್ನ ಮುಂದಿನ ಮೂರು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಸ್ಥಾನ ಖಾತರಿಪಡಿಸಿಕೊಳ್ಳುವ ಲೆಕ್ಕಾಚಾರ ಹೊಂದಿದೆ.

ಸಿಎಸ್‌ಕೆ ಪರ ಋತುರಾಜ್ ಮತ್ತು ಶಿವಂ ದುಬೆ ಉತ್ತಮ ಲಯದಲ್ಲಿದ್ದು ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ ಎಲ್‌ಎಸ್‌ಜಿ ಎದುರು ಕಳೆದ ಪಂದ್ಯದಲ್ಲಿ ವಿಫಲರಾದ ಕಾರಣ ತಂಡ ಉತ್ತಮ ಆರಂಭ ಪಡೆಯಲು ಆಗಿರಲಿಲ್ಲ. ಆರಂಭದಲ್ಲಿ ಕೆಲವು ಉತ್ತಮ ಇನಿಂಗ್ಸ್‌ ಆಡಿದ್ದ ರಚಿನ್ ರವೀಂದ್ರ ನಂತರ ವಿಫಲರಾಗಿರುವುದು ಕಳವಳ ಮೂಡಿಸಿದೆ. ಚೆನ್ನೈ ತಂಡವು ರಹಾನೆ ಅವರನ್ನು ಓಪನಿಂಗ್‌ಗೆ ಕಳುಹಿಸಿದ್ದು, ಗಾಯಕವಾಡ ಮೂರನೇ ಕ್ರಮಾಂಕದಲ್ಲಿ ಆಡಿದ್ದರು.

ಆ ಪಂದ್ಯದಲ್ಲಿ ಜಡೇಜ ತಾಳ್ಮೆಯ ಅರ್ಧ ಶತಕ ಗಳಿಸಿದ್ದು, ಧೋನಿ ಮತ್ತು ಮೊಯಿನ್ ಅವರ ಕಡೆಗಳಿಗೆಯ ಬೀಸಾಟದಿಂದ ಚೆನ್ನೈ ತಂಡಕ್ಕೆ ಸಾಧಾರಣ ಮೊತ್ತ ತಲುಪಲು ಸಾಧ್ಯವಾಗಿತ್ತು.

ಚೆನ್ನೈ ಬೌಲಿಂಗ್ ಪಡೆ ಸಾಧಾರಣ ಪ್ರದರ್ಶನ ನೀಡಿತ್ತು. ಯುವ ಬೌಲರ್ ಮಥೀಶ ಪಥಿರಾಣ ಮಾತ್ರ ಪರಿಣಾಮಕಾರಿ ಆಗುತ್ತಿದ್ದಾರೆ. ಇತರ ವೇಗಿಗಳಾದ ದೀಪಕ್ ಚಾಹರ್‌, ತುಷಾರ್‌ ದೇಶಪಾಂಡೆ, ಮುಸ್ತಫಿಝುರ್ ರಹಮಾನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಈ ಹಿಂದಿನ ಮುಖಾಮುಖಿ ವೇಳೆ ರಾಹುಲ್ ಮತ್ತು ಡಿಕಾಕ್ ಅವರನ್ನು ನಿಯಂತ್ರಿಸಲು ಇವರಿಗೆ ಆಗಿರಲಿಲ್ಲ. ಪ್ರಮುಖ ಸ್ಪಿನ್ನರ್ ಜಡೇಜ ಸಹ ಪರಿಣಾಮಕಾರಿ ಆಗಿರಲಿಲ್ಲ.

ಅಗ್ರ ಆಟಗಾರರು ಸ್ಥಿರ ಪ್ರದರ್ಶನ ನೀಡದಿರುವುದು ಲಖನೌ ತಂಡದ ದೌರ್ಬಲ್ಯ. ಆದರೆ ರಾಹುಲ್‌, ಕ್ವಿಂಟನ್‌, ಪೂರನ್‌, ಸ್ಟೊಯಿನಿಸ್‌ ಅವರು ಸ್ಫೋಟಕ ಆಟವಾಡಬಲ್ಲ ಸಮರ್ಥರೇ ಎಂಬುದು ಈ ಹಿಂದಿನ ಕೆಲ ಪಂದ್ಯಗಳಲ್ಲಿ ಸಾಬೀತಾಗಿದೆ. ಹೊಟ್ಟೆನೋವಿನಿಂದ ಕೆಲವು ಪಂದ್ಯ ಕಳೆದುಕೊಂಡಿದ್ದ ಯುವ ವೇಗಿ ಮಯಂಕ್ ಯಾದವ್‌ ಈ ಪಂದ್ಯಕ್ಕೆ ಹಿಂತಿರುವ ವಿಶ್ವಾಸವನ್ನು ಲಖನೌ ಹೊಂದಿದೆ. ಮೊಹ್ಸಿನ್‌ ಖಾನ್‌, ಯಶ್‌ ಠಾಕೂರ್‌ ತಂಡದ ಪ್ರಮುಖ ವೇಗಿಗಳು. ಸ್ಪಿನ್‌ ವಿಭಾಗದ ಯಶಸ್ಸು ಕೃಣಾಲ್ ಪಾಂಡ್ಯ ಮತ್ತು ರವಿ ಬಿಷ್ಣೋಯಿ ಅವರನ್ನು ಅವಲಂಬಿಸಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ ಮತ್ತು ಜಿಯೊ ಸಿನಿಮಾ ಆ್ಯಪ್.

ಮುಖಾಮುಖಿ:

ಆಡಿದ ಪಂದ್ಯಗಳು 4

ಲಖನೌ ಗೆಲುವು 2

ಚೆನ್ನೈ ಗೆಲುವು 1

ಫಲಿತಾಂಶವಿಲ್ಲ 1

ಎಂ.ಎಸ್‌.ಧೋನಿ
ಎಎಫ್‌ಪಿ ಚಿತ್ರ
ಎಂ.ಎಸ್‌.ಧೋನಿ ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT