ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | DC vs MI: ಪಂತ್ ಬಳಗಕ್ಕೆ ‘ಪ್ಲೇಆಫ್‌‘ ಮೇಲೆ ಕಣ್ಣು

ಡೆಲ್ಲಿ ಕ್ಯಾಪಿಟಲ್ಸ್–ಮುಂಬೈ ಇಂಡಿಯನ್ಸ್‌ ಮುಖಾಮುಖಿ ಇಂದು; ಸೂರ್ಯ, ಬೂಮ್ರಾ ಮೇಲೆ ನಿರೀಕ್ಷೆ
Published 26 ಏಪ್ರಿಲ್ 2024, 23:53 IST
Last Updated 26 ಏಪ್ರಿಲ್ 2024, 23:53 IST
ಅಕ್ಷರ ಗಾತ್ರ

ನವದೆಹಲಿ: ಅಮೋಘ ಫಾರ್ಮ್‌ನಲ್ಲಿರುವ ರಿಷಭ್ ಪಂತ್ ಅವರ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಿದೆ. 

ಆಡಿರುವ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಗೆದ್ದು, ಐದರಲ್ಲಿ ಸೋತಿರುವ ಡೆಲ್ಲಿ ತಂಡವು ಶನಿವಾರ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ.

ಮೊದಲ ಸುತ್ತಿನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಮುಂಬೈ ತಂಡವು ಜಯಿಸಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಪಂತ್ ಬಳಗ ಸಿದ್ಧವಾಗಿದೆ. ಆದರೆ ಎಂಟನೇ ಸ್ಥಾನದಲ್ಲಿರುವ ಹಾರ್ದಿಕ್ ಬಳಗವೂ ಪ್ಲೇ ಆಫ್‌ಗೆ ಪ್ರವೇಶ ಗಿಟ್ಟಿಸಬೇಕಾದರೆ ಇನ್ನುಳಿದಿರುವ ತನ್ನ ಪಾಲಿನ ಆರು ಪಂದ್ಯಗಳನ್ನು ಜಯಿಸುವ ಒತ್ತಡದಲ್ಲಿದೆ. ಇದರಿಂದಾಗಿ ಈ ಪಂದ್ಯವು ರೋಚಕ ಹಣಾಹಣಿಯಾಗುವ ನಿರೀಕ್ಷೆ ಇದೆ.

ಡೆಲ್ಲಿ ತಂಡವು ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಜಯ ಸಾಧಿಸಿದ್ದು  ಪಾಯಿಂಟ್ ಪಟ್ಟಿಯಲ್ಲಿ ಬಡ್ತಿ ಪಡೆಯಲು ನೆರವಾಗಿದೆ. ಈ ಪಂದ್ಯದಲ್ಲಿಯೂ  ಜಯಿಸಿದರೆ, ಪ್ಲೇ ಆಫ್‌ ನತ್ತ ಸಾಗಲು ತಂಡಕ್ಕೆ ಹೆಚ್ಚಿನ ಬಲ ಬರಲಿದೆ. 

ಇನ್ನೊಂದು ಕಡೆ ಮುಂಬೈ ತಂಡವು ತನ್ನ ಆರಂಭಿಕ ಪಂದ್ಯಗಳ ಸೋತ ನಂತರ ಪುಟಿದೆದ್ದು ಆಡುತ್ತಿದೆ. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಜಸ್‌ಪ್ರೀತ್ ಬೂಮ್ರಾ, ಗೆರಾಲ್ಡ್ ಕೋಜಿ ಅವರಿರುವ ಬೌಲಿಂಗ್ ಪಡೆಯೂ ಉತ್ತಮವಾಗಿದೆ. 

ಡೆಲ್ಲಿ ತಂಡದ ಬ್ಯಾಟಿಂಗ್‌ ಪಡೆಯ ಬಲ ಹೆಚ್ಚಲು ರಿಷಭ್ ಫಾರ್ಮ್‌ಗೆ ಮರಳಿರುವುದು ಕಾರಣ. ಕಳೆದ ಪಂದ್ಯದಲ್ಲಿ ಅವರ ಅಮೋಘ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ತಂಡವು ಜಯಿಸಿತ್ತು. ವಿಕೆಟ್‌ಕೀಪಿಂಗ್‌ನಲ್ಲಿಯೂ ಚುರುಕಾಗಿದ್ದಾರೆ. ರಿಷಭ್ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಮೊದಲ ವಿಕೆಟ್‌ಕೀಪರ್ ಆಗಿ ತೆರಳುವುದು  ಬಹುತೇಕ ಖಚಿತವಾಗಿದೆ. ಜೇಕ್‌ ಫ್ರೆಸರ್ ಮೆಕ್‌ಗುರ್ಕ್, ಅಕ್ಷರ್ ಪಟೇಲ್ ಕೂಡ ಉತ್ತಮ ಲಯದಲ್ಲಿದ್ಧಾರೆ. ಮಧ್ಯಮ ಕ್ರಮಾಂಕದಲ್ಲಿ ಟ್ರಿಸ್ಟನ್ ಸ್ಟಬ್ಸ್‌ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮೂಲಕ ರನ್ ಸೂರೆ ಮಾಡುವ ಸಮರ್ಥರಾಗಿದ್ದಾರೆ. ಪೃಥ್ವಿ ಶಾ ತಮ್ಮ ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡರೆ ಉತ್ತಮ ಆರಂಭ ಸಿಗಬಹುದು. 

ಸ್ಪಿನ್ನರ್ ಕುಲದೀಪ್ ಯಾದವ್, ವೇಗಿ ಮುಕೇಶ್ ಕುಮಾರ್, ಖಲೀಲ್ ಅಹಮದ್ ಮತ್ತು ಅನುಭವಿ ಇಶಾಂತ್ ಶರ್ಮಾ ಅವರಿಗೆ ಮುಂಬೈ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಸವಾಲು ಇದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ರೋಹಿತ್ ಶರ್ಮಾ 
ರೋಹಿತ್ ಶರ್ಮಾ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT