ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್ ಫುಟ್‌ಬಾಲ್‌: ಲೆಬನಾನ್‌ ತಂಡವನ್ನು ಮಣಿಸಿದ ಚೆಟ್ರಿ ಬಳಗ ಫೈನಲ್‌ಗೆ ಲಗ್ಗೆ

ಪೆನಾಲ್ಟಿ ಶೂಟೌಟ್‌ನಲ್ಲಿ ಲೆಬನಾನ್‌ ವಿರುದ್ಧ ಜಯ
Published 1 ಜುಲೈ 2023, 18:33 IST
Last Updated 1 ಜುಲೈ 2023, 18:33 IST
ಅಕ್ಷರ ಗಾತ್ರ

ಬೆಂಗಳೂರು: ಪೆನಾಲ್ಟಿ ಶೂಟೌಟ್‌ನಲ್ಲಿ ಲೆಬನಾನ್‌ ತಂಡವನ್ನು 4–2 ರಲ್ಲಿ ಮಣಿಸಿದ ಭಾರತ ತಂಡ, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಫೈನಲ್ ಪ್ರವೇಶಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸೇರಿದ್ದ ಸುಮಾರು 20 ಸಾವಿರ ಪ್ರೇಕ್ಷಕರನ್ನು ಮೈನವಿರೇಳಿಸುವಂತೆ ಮಾಡಿದ ಆತಿಥೇಯ ತಂಡ, ದಾಖಲೆಯ 13ನೇ ಬಾರಿ ಪ್ರಶಸ್ತಿ ಸುತ್ತು ತಲುಪಿದೆ. 

ನಿಗದಿತ ಹಾಗೂ ಹೆಚ್ಚುವರಿ ಅವಧಿಯ ಆಟದಲ್ಲಿ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್‌ ಮೊರೆಹೋಗಲಾಯಿತು. ಭಾರತ ತಂಡದ ಪರ ನಾಯಕ ಸುನಿಲ್ ಚೆಟ್ರಿ, ಅನ್ವರ್‌ ಅಲಿ, ಮಹೇಶ್‌ ಸಿಂಗ್‌ ಮತ್ತು ಉದಾಂತ ಸಿಂಗ್‌ ಅವರು ಶೂಟೌಟ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಲೆಬನಾನ್‌ ತಂಡದ ಪರ ಹಸನ್‌ ಮತೂಕ್‌ ಅವರ ಮೊದಲ ಕಿಕ್ಅನ್ನು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಎಡಕ್ಕೆ ನೆಗೆದು ತಡೆದರು. ಎರಡು ಮತ್ತು ಮೂರನೇ ಕಿಕ್‌ಗಳಲ್ಲಿ ಗೋಲುಗಳು ಬಂದವು. ಖಲೀಲ್‌ ಬದೆರ್‌ ಅವರ ನಾಲ್ಕನೇ ಕಿಕ್‌ನಲ್ಲಿ ಚೆಂಡು ಗೋಲ್‌ಪೋಸ್ಟ್‌ ಮೇಲಿಂದ ಹೊರಕ್ಕೆ ಹೋಗುತ್ತಿದ್ದಂತೆಯೇ, ಭಾರತದ ಆಟಗಾರರು ಸಂಭ್ರಮಿಸಿದರು. ಪ್ರೇಕ್ಷಕರು ಕುಣಿದು, ಗೆಲುವಿನ ಕೇಕೆ ಹಾಕಿದರು. 

ಇದಕ್ಕೂ ಮುನ್ನ ನಿಗದಿತ ಹಾಗೂ ಹೆಚ್ಚುವರಿ ಅವಧಿಯಲ್ಲಿ ಚೆಟ್ರಿ ಬಳಗ, ದೈಹಿಕವಾಗಿ ತಮಗಿಂತ ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದ ಲೆಬನಾನ್ ತಂಡದ ಆಕ್ರಮಣಕಾರಿ ಆಟವನ್ನು ತಂತ್ರಗಾರಿಕೆ ಮೂಲಕ ಬದಿಗೊತ್ತುವಲ್ಲಿ ಯಶಸ್ವಿಯಾಗಿತ್ತು.

ಜುಲೈ 4 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಕುವೈತ್‌ ವಿರುದ್ಧ ಪೈಪೋಟಿ ನಡೆಸಲಿದೆ. ದಿನದ ಮೊದಲ ಸೆಮಿಫೈನಲ್‌ನಲ್ಲಿ ಕುವೈತ್ 1-0 ಗೋಲಿನಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.

ಪ್ರಬಲ ಪೈಪೋಟಿ: ಮೊದಲ 90 ನಿಮಿಷಗಳ ಆಟದಲ್ಲಿ ತುರುಸಿನ ಪೈಪೋಟಿ ನಡೆಯಿತು. ಆರಂಭಿಕ 10 ನಿಮಿಷಗಳಲ್ಲಿ ಭಾರತದ ಗೋಲು ಆವರಣದತ್ತ ಬೆನ್ನುಬೆನ್ನಿಗೆ ಚೆಂಡು ಕೊಂಡೊಯ್ದ ಲೆಬನಾನ್ ತಂಡ ಒತ್ತಡ ಹೇರಿತು. ಆದರೆ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ, ಪ್ರತ್ಯಾಕ್ರಮಣ ನಡೆಸಿತು. 

41 ನೇ ನಿಮಿಷದಲ್ಲಿ ಲೆಬನಾನ್‌ ತಂಡದ ನಾಯಕ ಹಸನ್ ಮತೂಕ್ ಅವರು ಫ್ರೀ ಕಿಕ್‌ನಲ್ಲಿ ರಭಸವಾಗಿ ಒದ್ದ ಚೆಂಡನ್ನು, ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮೇಲಕ್ಕೆ ನೆಗೆದು ಅಮೋಘವಾಗಿ ಹೊರಕ್ಕಟ್ಟಿದರು.

ಆಕ್ರಮಣ ಮತ್ತು ಮರು ಆಕ್ರಮಣದಿಂದಾಗಿ ಎರಡನೇ ಅವಧಿಯ ಆಟ ರೋಚಕತೆಯಿಂದ ಕೂಡಿತ್ತಾದರೂ, ಗೋಲು ಮಾತ್ರ ಬರಲಿಲ್ಲ. 

ಹೆಚ್ಚುವರಿ ಅವಧಿಯ ಆರಂಭದಲ್ಲಿ ಚೆಟ್ರಿ ಎರಡು ಅತ್ಯುತ್ತಮ ಪ್ರಯತ್ನ ನಡೆಸಿದರು. 94ನೇ ನಿಮಿಷದಲ್ಲಿ ಅವರು ಒದ್ದ ಚೆಂಡನ್ನು ಲೆಬನಾನ್‌ ಗೋಲ್‌ಕೀಪರ್‌ ಮೆಹ್ದಿ ಖಲೀಲ್ ತಡೆದರು. 96ನೇ ನಿಮಿಷದಲ್ಲಿ ಉದಾಂತ ಸಿಂಗ್‌ ಅವರ ಕ್ರಾಸ್‌ನಲ್ಲಿ ಲಭಿಸಿದ ಚೆಂಡನ್ನು ಚೆಟ್ರಿ ಗುರಿಯತ್ತ ಒದ್ದರೂ, ಕ್ರಾಸ್‌ಬಾರ್‌ ಅಲ್ಪ ಮೇಲಿಂದ ಹೋಯಿತು.

120 ನಿಮಿಷಗಳ ಬಳಿಕವೂ ಉಭಯ ತಂಡಗಳು ಪಟ್ಟುಬಿಡದ ಕಾರಣ, ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಿತು.   

13ನೇ ಬಾರಿ ಫೈನಲ್‌ ಪ್ರವೇಶ 

ಭಾರತ ತಂಡ ಸ್ಯಾಫ್ ಚಾಂಪಿಯನ್‌ಷಿಪ್‌ನಲ್ಲಿ 13 ನೇ ಬಾರಿ ಫೈನಲ್ ಪ್ರವೇಶಿಸಿದೆ. ಒಟ್ಟಾರೆಯಾಗಿ ಇದು 14ನೇ ಟೂರ್ನಿ ಆಗಿದ್ದು, ಒಮ್ಮೆ ಮಾತ್ರ ಪ್ರಶಸ್ತಿ ಸುತ್ತು ತಲುಪಲು ವಿಫಲವಾಗಿತ್ತು. 1995 ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಭಾರತ ತಂಡ 8 ಬಾರಿ ಚಾಂಪಿಯನ್ ಹಾಗೂ 4 ಸಲ ರನ್ನರ್ಸ್ ಆಪ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT