ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ–ಕುವೈತ್‌ ಪಂದ್ಯ ಡ್ರಾ

ಸ್ಯಾಫ್ ಫುಟ್‌ಬಾಲ್‌: ಮಿಂಚಿದ ಚೆಟ್ರಿ, ಮುಳುವಾದ ‘ಉಡುಗೊರೆ ಗೋಲು’
Published 28 ಜೂನ್ 2023, 11:31 IST
Last Updated 28 ಜೂನ್ 2023, 11:31 IST
ಅಕ್ಷರ ಗಾತ್ರ

ಬೆಂಗಳೂರು: ಇಂಜುರಿ ಅವಧಿಯಲ್ಲಿ ಕುವೈತ್‌ ತಂಡಕ್ಕೆ ‘ಉಡುಗೊರೆ’ ಗೋಲು ಕೊಟ್ಟ ಭಾರತ ತಂಡ, ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕೊನೆಯ ಲೀಗ್‌ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತು.

ಕಂಠೀರವ ಕ್ರೀಡಾಂಗದಲ್ಲಿ ಮಂಗಳವಾರ ನಡೆದ ಪಂದ್ಯ 1–1 ಗೋಲಿನ ಸಮಬಲದಲ್ಲಿ ಕೊನೆಗೊಂಡಿತು. ಆಕ್ರಮಣ ಮತ್ತು ಪ್ರತ್ಯಾಕ್ರಮಣದಿಂದ ರೋಚಕತೆಯ ಉತ್ತುಂಗವನ್ನೇರಿದ್ದ ಪಂದ್ಯದಲ್ಲಿ ನಾಯಕ ಸುನಿಲ್‌ ಚೆಟ್ರಿ ಅವರು (45+2) ಭಾರತಕ್ಕೆ ಮುನ್ನಡೆ ತಂದಿತ್ತರು. 

ಪಂದ್ಯ ಕೊನೆಗೊಳ್ಳಲು ಕೆಲವೇ ನಿಮಿಷಗಳು ಇದ್ದಾಗ (90+2) ಕುವೈತ್‌ ತಂಡದ ಅಬ್ದುಲ್ಲಾ ಅಲ್‌ ಬಲೂಶಿ ಅವರ ಗೋಲು ಶ್ರಮವನ್ನು ಭಾರತದ ಡಿಫೆಂಡರ್‌ ಅನ್ವರ್‌ ಅಲಿ ತಡೆಯಲು ಮುಂದಾದರು. ಅದರೆ ಚೆಂಡು ಅವರ ಕಾಲಿಗೆ ತಾಗಿ ಗುರಿ ಸೇರಿತು.

ಭಾರತ ಮತ್ತು ಕುವೈತ್‌ ‘ಎ’ ಗುಂಪಿನಲ್ಲಿ ತಲಾ ಏಳು ಪಾಯಿಂಟ್ಸ್‌ ಸಂಗ್ರಹಿಸಿದವು. ಉತ್ತಮ ಗೋಲು ವ್ಯತ್ಯಾಸದಲ್ಲಿ ಕುವೈತ್‌ ಅ‌ಗ್ರಸ್ಥಾನ ಪಡೆದರೆ, ಚೆಟ್ರಿ ಬಳಗ ಎರಡನೇ ಸ್ಥಾನ ಗಳಿಸಿತು.

ಪ್ರಬಲ ಪೈಪೋಟಿ: ಜಿದ್ದಾಜಿದ್ದಿನ ಸೆಣಸಾಟ ನಡೆದ ಪಂದ್ಯದ ಮೊದಲ 15 ನಿಮಿಷಗಳಲ್ಲಿ ಎರಡೂ ತಂಡಗಳಿಂದ ಗೋಲು ಗಳಿಸುವ ಉತ್ತಮ ಪ್ರಯತ್ನ ಕಂಡುಬರಲಿಲ್ಲ. 

ಕುವೈತ್‌ಗೆ ಗೋಲು ಗಳಿಸುವ ಮೊದಲ ಅವಕಾಶ ಲಭಿಸಿದ್ದು 20ನೇ ನಿಮಿಷದಲ್ಲಿ. ಆದರೆ ಶಬೇಬ್ ಅಲ್ ಖಾಲಿದಿ ಒದ್ದ ಚೆಂಡು ಗೋಲ್ ಪೋಸ್ಟ್‌ ಮೇಲಿಂದ ಹೊರಕ್ಕೆ ಹೋಯಿತು. 

25ನೇ ನಿಮಿಷದಲ್ಲಿ ಕುವೈತ್‌ನ ಮೊಹಮ್ಮದ್‌ ಅಬ್ದುಲ್ಲಾ ಚೆಂಡು ಗುರಿ ಸೇರಿಸಿದರೂ, ರೆಫರಿ ಗೋಲು ಮಾನ್ಯ ಮಾಡಲಿಲ್ಲ. ಆ ಗೋಲಿಗೂ ಮುನ್ನ ಕುವೈತ್‌ ಆಟಗಾರ ಫೌಲ್‌ ಮಾಡಿದ್ದು ಅದಕ್ಕೆ ಕಾರಣ. ಕುವೈತ್‌ ಆಟಗಾರರು ರೆಫರಿ ಜತೆ ವಾಗ್ವಾದ ನಡೆಸಿದರು.

35ನೇ ನಿಮಿಷದಲ್ಲಿ ಅನಿರುದ್ಧ್‌ ಥಾಪಾ, ಕಾರ್ನರ್ ಕಿಕ್‌ನಲ್ಲಿ ಒದ್ದ ಚೆಂಡನ್ನು ಗುರಿ ಸೇರಿಸಲು ಭಾರತದ ಮುನ್ನಡೆ ಆಟಗಾರರು ವಿಫಲರಾದರು. ಚೆಂಡು ಅಲ್ಪ ದೂರದಿಂದ ಹೊರಕ್ಕೆ ಹೋಯುತು. 

ಮೊದಲ ಅವಧಿ ಗೋಲುರಹಿತವಾಗಿ ಕೊನೆಗೊಳ್ಳಲಿದೆ ಎನ್ನುವಷ್ಟರಲ್ಲಿ ಭಾರತ ಮುನ್ನಡೆ ಗಳಿಸಿತು. ಥಾಪಾ ಅವರ ಕಾರ್ನರ್‌ ಕಿಕ್‌ನಲ್ಲಿ ದೊರೆತ ಚೆಂಡನ್ನು ಚೆಟ್ರಿ, ಚಾಣಾಕ್ಷ ರೀತಿಯಲ್ಲಿ ಗುರಿ ತಲುಪಿಸಿದರು. 

ಎರಡನೇ ಅವಧಿಯಲ್ಲೂ ತುರುಸಿನ ಹೋರಾಟ ಮುಂದುವರಿಯಿತು. 56ನೇ ನಮಿಷದಲ್ಲಿ ಕುವೈತ್‌ಗೆ ದೊರೆತ ಫ್ರೀಕಿಕ್‌ ಅವಕಾಶದಲ್ಲಿ ಶಬೈಬ್ ಅವರು ಬಿರುಸಿನಿಂದ ಒದ್ಡ ಚೆಂಡನ್ನು ಭಾರತ ತಂಡದ ಗೋಲ್‌ಕೀಪರ್‌ ಅಮರಿಂದರ್ ಸಿಂಗ್‌ ಮೇಲಕ್ಕೆ ನೆಗೆದು ಹೊರಕ್ಕಟ್ಟಿ ಅಪಾಯ ದೂರ ಮಾಡಿದರು. 

ಬದಲಿ ಆಟಗಾರನಾಗಿ ಕಣಕ್ಕಿಳಿದ ಸಹಲ್‌ ಅಬ್ದುಲ್‌ ಸಮದ್‌, 70ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶವನ್ನು ಹಾಳುಮಾಡಿಕೊಂಡರು. ಅವರು ಗೋಲ್‌ಪೋಸ್ಟ್‌ನತ್ತ ಒದ್ದ ಚೆಂಡನ್ನು ಎದುರಾಳಿ ಡಿಫೆಂಡರ್‌ ತಡೆದರು. ಭಾರತ ತಂಡ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸುವ ಹಲವು ಅವಕಾಶಗಳನ್ನು ಸೃಷ್ಟಿಸಿದರೂ ಹೊಂದಾಣಿಕೆಯ ಕೊರತೆಯಿಂದ ಚೆಂಡನ್ನು ಗುರಿ ತಲುಪಿಸಲು ಆಗಲಿಲ್ಲ. 

ಭಾರತದ ಗೆಲುವು ಖಚಿತವಾಯಿತು ಎನ್ನುವಷ್ಟರಲ್ಲಿ ‘ಉಡುಗೊರೆ ಗೋಲಿ’ನ ಮೂಲಕ ಕುವೈತ್‌ ಡ್ರಾ ಸಾಧಿಸಿತು.

ಜಟಾಪಟಿ: ಪಂದ್ಯದುದ್ದಕ್ಕೂ ಕಾವೇರಿದ ವಾತಾವರಣ ಕಂಡುಬಂತು. ಹಲವು ಸಲ ಆಟಗಾರರು ಜಟಾಪಟಿ ನಡೆಸಿದರು. 88ನೇ ನಿಮಿಷದಲ್ಲಿ ನೂಕಾಟ, ತಳ್ಳಾಟ ನಡೆಯಿತು. ಭಾರತದ ರಹೀಂ ಅಲಿ ಮತ್ತು ಕುವೈತ್‌ನ ಹಮದ್‌ ಅಲ್‌ ಖಲಾಫ್‌ ಅವರಿಗೆ ರೆಡ್‌ ಕಾರ್ಡ್‌ ತೋರಿಸಲಾಯಿತು.

ಸ್ಟಿಮ್ಯಾಚ್‌ಗೆ ಮತ್ತೆ ರೆಡ್‌ ಕಾರ್ಡ್‌

ಭಾರತ ತಂಡದ ಕೋಚ್‌ ಇಗೋರ್‌ ಸ್ಟಿಮ್ಯಾಚ್‌ ಮತ್ತೆ ರೆಡ್‌ಕಾರ್ಡ್‌ ಪಡೆದರು. ಎದುರಾಳಿ ಆಟಗಾರ ಥ್ರೋ ಇನ್‌ ಮಾಡುವಾಗ ಅಡ್ಡಿಪಡಿಸಿದ್ದಕ್ಕೆ ಆರಂಭದಲ್ಲಿ ಹಳದಿ ಕಾರ್ಡ್‌ ಪಡೆದರು. ಆ ಬಳಿಕ ಸಹಾಯಕ ರೆಫರಿ ಜತೆ ಪದೇ ಪದೇ ವಾಗ್ವಾದ ನಡೆಸಿದ ಅವರನ್ನು ಹೊರಕ್ಕೆ ಕಳುಹಿಸಲಾಯಿತು. ಅನಂತರ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಸ್ಟಿಮ್ಯಾಚ್‌, ಮೊದಲ ಪಂದ್ಯದಲ್ಲೂ ರೆಡ್‌ ಕಾರ್ಡ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT