ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್‌ ಭರವಸೆ ದೀಪಾ ಕರ್ಮಾಕರ್‌...

Last Updated 9 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಏಷ್ಯಾ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು  ಭಾರತದ ಪದಕದ ಖಾತೆ ತೆರೆದ ದೀಪಾ ಕರ್ಮಾಕರ್‌ ಮಹಿಳೆಯರ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಆಟಗಾರ್ತಿ ಹಾಗೂ ಮಹಿಳಾ ವಿಭಾಗದಲ್ಲಿ ಮೊದಲಿಗಳು ಎಂಬ ಹೆಗ್ಗಳಿಕೆ ಇವರದು.

ತ್ರಿಪುರಾದ ಅಗರ್ತಲಾದಲ್ಲಿ 1993ರಲ್ಲಿ ಹುಟ್ಟಿದ ದೀಪಾ ಅವರು  ಪಡುನೋವಾ ವಾಲ್ಟ್‌ನಂತಹ ಕಷ್ಟದ ಜಿಮ್ನಾಸ್ಟಿಕ್ಸ್‌ ವಿಭಾಗದಲ್ಲಿ ಸ್ಪರ್ಧಿಸಿ ಯಶಸ್ಸು ಗಳಿಸಿದ ಮೊದಲ ಭಾರತೀಯ ಮಹಿಳೆ.

ಏಷ್ಯಾ ಜಿಮ್ನಾಸ್ಟಿಕ್ಸ್‌ ವಾಲ್ಟ್‌ ಸ್ಪರ್ಧೆಯಲ್ಲಿ ದೀಪಾ 14,725 ಪಾಯಿಂಟ್ಸ್ ಕಲೆ ಹಾಕಿ ಮೂರನೇಯ ಸ್ಥಾನ ಪಡೆದಿದ್ದರು. ಭಾರತದ ಆಶಿಶ್‌ ಕುಮಾರ್‌ ಇದೇ ವಿಭಾಗದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಪದಕ ಗೆದ್ದು ಜಿಮ್ನಾಸ್ಟಿಕ್ಸ್‌ ಬಗ್ಗೆ ಭಾರತೀಯರಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದರು.

ಏಷ್ಯಾದ ಜಿಮ್ನಾಸ್ಟಿಕ್ಸ್‌ನಲ್ಲಿ ಚೀನಾ, ಜಪಾನ್‌ ಪ್ರಬಲ ಶಕ್ತಿಗಳಾಗಿವೆ. ಭಾರತ ಇದೀಗ ಅಂಬೆಗಾಲಿಡುತ್ತಿದೆ. ಏಷ್ಯಾ ಜಿಮ್ನಾಸ್ಟಿಕ್ಸ್‌ನಲ್ಲಿ  ಚೀನಾದ ಯಾನ್‌ ವಾಂಗ್‌ 14,988 ಪಾಯಿಂಟ್ಸ್‌ ಗಳಿಸಿ ಚಿನ್ನ ಗೆದ್ದರೆ, ಜಪಾನ್‌ನ ಮಿಯಾಕಾವ 14,812 ಪಾಯಿಂಟ್ಸ್‌ಗಳಿಂದ ಬೆಳ್ಳಿ ಗೆದ್ದರು. ಕೋಚ್‌ ವಿಶ್ವೇಶ್ವರ ನಂದಿ ಅವರ ಮಾರ್ಗದರ್ಶನದಲ್ಲಿ ದೀಪಾ ಅಭ್ಯಾಸ ಮಾಡುತ್ತಿದ್ದಾರೆ.

35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇವರು ಐದು ಚಿನ್ನ ಗೆದ್ದು ಮೊದಲ ಬಾರಿಗೆ ಜಿಮ್ನಾಸ್ಟಿಕ್ಸ್‌ನಲ್ಲಿ ಗಮನ ಸೆಳೆದರು. ಈ ಟೂರ್ನಿಯಲ್ಲಿ ಅವರು ಪ್ಲೋರ್‌, ವಾಲ್ಟ್‌, ಆಲ್‌ರೌಂಡ್‌, ಬ್ಯಾಲೆನ್ಸ್ ಬೀಮ್‌, ಅನ್‌ಈವನ್‌ ಬಾರ್ಸ್‌ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದರು.

2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಇವರಿಗೆ ಒಲಿಂಪಿಕ್ಸ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಪದಕ ಗೆಲ್ಲುವ ಹೆಗ್ಗುರಿ ಇದೆ.

ಏನಿದು ವಾಲ್ಟ್‌...
ವಾಲ್ಟ್‌ ಅಂದರೆ ನೆಗೆಯುವುದು, ಛಾವಣಿಯ ಎತ್ತರಕ್ಕೆ ಚಿಮ್ಮುವುದು. ಜಿಮ್ನಾಸ್ಟಿಕ್ಸ್‌ ನಲ್ಲಿ ವಾಲ್ಟ್‌ ಕೂಡ ಒಂದು ಪ್ರಮುಖ ವಿಭಾಗ.  ಭಾರತದ ದೀಪಾ ಕರ್ಮಾಕರ್‌ ಇದೇ ವಿಭಾಗದಲ್ಲಿ ವಿಶೇಷವಾಗಿ ಅಭ್ಯಾಸ ಮಾಡಿ ದ್ದಾರೆ. ಒಲಿಂಪಿಕ್ಸ್‌ನಲ್ಲಿ ಆರಂಭದಲ್ಲಿ ವಾಲ್ಟ್‌ ಸೇರ್ಪಡೆಗೊಂಡಾಗ ಪುರುಷ ಸ್ಪರ್ಧಿಗಳು ಮಾತ್ರ ಭಾಗವಹಿಸುತ್ತಿದ್ದರು. ನಂತರದಲ್ಲಿ ಮಹಿಳೆ ಯರೂ ಇದನ್ನು ಕರಗತ ಮಾಡಿಕೊಂಡಿದ್ದಾರೆ.

ಇದು ಅಪಾಯದ ಕ್ರೀಡೆ ಎಂದೇ ಹೆಸರು ಮಾಡಿದೆ. 1988ರಲ್ಲಿ ಅಮೆರಿಕದ ಜುಲಿಸ್ಸಾ ಗೊಮೆಜ್‌ ವಾಲ್ಟ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧಿಸುವಾಗಲೇ ಗಾಯಗೊಂಡು ಸಾವನ್ನಪ್ಪಿದ್ದರು. ಇದಾದ ನಂತರವೂ ಕೆಲವು ಸಾವುನೋವುಗಳು ವರದಿಯಾಗಿವೆ. 2000ನೇ ಇಸವಿಯ ಬಳಿಕ ವಾಲ್ಟ್‌ನಲ್ಲಿ ಕೆಲವು ಬದಲಾವಣೆ ಮಾಡಲಾಯಿತು.  2001ರ ವಿಶ್ವ ಆರ್ಟಿಸ್ಟಿಕ್‌್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ‘ವಾಲ್ಟಿಂಗ್‌ ಟೇಬಲ್‌’ ಬಳಕೆಗೆ ಬಂದಿತು. ಇದು ಇಂದಿಗೂ ಬದಲಾದ ರೂಪಗಳಲ್ಲಿ ಬಳಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT