ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನ ಕಲಿಕೆ ಕಾರಣಗಳ ಶೋಧನೆಯಲ್ಲಿ...

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕೆಲವೊಮ್ಮೆ ಭಾಷಾ ಸಮಸ್ಯೆ, ಕ್ಲಿಷ್ಟ ವಿಷಯಗಳಿಂದಾಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ನಂತರ ವಿದ್ಯಾರ್ಥಿಗಳು ಹಿಂದುಳಿದು ಬಿಡುತ್ತಾರೆ. ಅಂಥವರನ್ನು ಗುರುತಿಸಿ, ತರಬೇತಿ ನೀಡಿ, ಸಾಮಾನ್ಯರ ಸಾಲಿಗೆ ತರುವುದು ಹೇಗೆ ಎಂಬ ಜಿಜ್ಞಾಸೆ, ಪ್ರಧ್ಯಾಪನ ವೃತ್ತಿಗೆ ಸೇರಿದಾಗ ಹುಟ್ಟುಕೊಂಡಿತ್ತು.

ಅದಕ್ಕಾಗಿಯೇ ನಾನು  ಮತ್ತು ನನ್ನ ಸಹೋದ್ಯೋಗಿಗಳು ಸೇರಿ ಸಂಶೋಧನಾ ವಿನ್ಯಾಸ ರಚಿಸಿ ಕಾರ್ಯ ಪೃವತ್ತರಾದೆವು. ಮೊದಲನೆಯ ಎಂ.ಬಿ.ಬಿಎಸ್‌. ವಿದ್ಯಾರ್ಥಿಗಳಲ್ಲಿ ನಡೆದ  ಪರೀಕ್ಷೆಯಲ್ಲಿ ಅತೀ ಕಡಿಮೆ ಗುಣಗಳನ್ನು  ಪಡೆದ ೪೦ ವಿದ್ಯಾರ್ಥಿಗಳನ್ನು ವಿಶೇಷ ತರಬೇತಿಗಾಗಿ ಆಯ್ಕೆ ಮಾಡಲಾಯಿತು.

ಅವರನ್ನು ನಿಧಾನ ಕಲಿಕೆಯ ವಿದ್ಯಾರ್ಥಿಗಳೆಂದು ಗುರಿತಿಸಲಾಯಿತು. ಅವರೊಡನೆ ಮೂರು ಸಲ ಸಮಾಲೋಚನೆಗೆ ಒಳಪಡಿಸಿದೆವು. ವೈಯಕ್ತಿಕವಾಗಿ ವಿಚಾರಿಸಲಾಗಿ ಕೆಲ ವಿಷಯಗಳು ಬೆಳೆಕಿಗೆ ಬಂದವು:

೧. ವೈದ್ಯಕೀಯ ವಿಷಯಗಳಲ್ಲಿ ಆಸಕ್ತಿ ಹುಟ್ಟುವುದೇ ಕಠಿಣವಾಗಿತ್ತು.
೨. ಗಮನವಿಟ್ಟು ಉಪನ್ಯಾಸ ಕೇಳುವುದು, ಅರ್ಥೈಸಿಕೊಳ್ಳುವುದು, ಗ್ರಹಿಸುವುದು ಕಷ್ಟವಾಗುತ್ತಿತ್ತು.
೩. ಇಂಗ್ಲಿಷ್‌ ಭಾಷೆಯ ತೊಡಕು
೪. ಸ್ಮರಣ ಶಕ್ತಿ ಕಡಿಮೆ ಎಂಬ ಭ್ರಮೆ
೫. ವಿಷಯ ಪ್ರಸ್ತುತ ಪಡಿಸುವಿಕೆಯಲ್ಲಿ ದೌರ್ಬಲ್ಯ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು   ವಿಶೇಷ  ವರ್ಗಗಳ ಉಪನ್ಯಾಸ- ಹಾಗೂ ತರಬೇತಿಯ ವಿನ್ಯಾಸ ರಚಿಸಿದೆವು. ಪೂರ್ಣ ಕಾರ್ಯಕ್ರಮ -ತರಬೇತಿ ವೇಳಾ ಪತ್ರಿಕೆಯನ್ನು ಸಿದ್ಧಪಡಿಸಲಾಯಿತು. ಆಗಲೇ ಪ್ರಥಮ ಆಂತರಿಕ ಪರೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶ ಪಟ್ಟಿಯಲ್ಲಿ ಅತೀ ಕಡಿಮೆ ಅಂಕಗಳನ್ನು ಪಡೆದ ೪೦ ವಿದ್ಯಾರ್ಥಿಗಳನ್ನು ವಿಶೇಷ ತರಬೇತಿಗಾಗಿ ಆಯ್ಕೆ ಮಾಡಲಾಯಿತು.

ನಡೆಸಿದ ಪರೀಕ್ಷೆಯಲ್ಲಿ ಕೆಲವರು ಪಾಸಾಗುವ ಅಂಚಿನಲ್ಲಿ ಇದ್ದರು. ಕೆಲವರು ಸಾಧಾರಣ, ಇನ್ನು ಕೆಲವರು ಕಲಿಕೆಯಲ್ಲಿ ದುರ್ಬಲರಾಗಿದ್ದರು. ಇವರೆಲ್ಲರನ್ನೂ ಮೊದಲು ವರ್ಗೀಕರಣ ಮಾಡಲಾಯಿತು. ವೈದ್ಯಕೀಯ ಪದಗಳ ಪರಿಚಯ, ಸರಳ- ವೈದ್ಯಕೀಯ ವಾಕ್ಯ ಗಳನ್ನು ಬರೆಯುವ ಸೂತ್ರಗಳನ್ನು ಹೇಳಿಕೊಡಲಾಯಿತು, ವಿದ್ಯಾರ್ಥಿಗಳು ಪದೇ-ಪದೆ ಮಾಡುವ ಲೋಪ ದೋಷಗಳನ್ನು ಸರಿಪಡಿಸುವ ವಿಷಯ ಮನದಟ್ಟು ಮಾಡಿಕೊಡಲಾಯಿತು.

ದಿನವೂ ತರಬೇತಿ ವರ್ಗದ ನಂತರ ಮನೆಪಾಠದ ಕೆಲಸ ನೀಡಲಾಗುತ್ತಿತ್ತು. ನಿತ್ಯವೂ ಅವುಗಳ ಮೌಲ್ಯ ಮಾಪನ ಮಾಡಿ ಮರಳಿ ನೀಡಲಾಗುತ್ತಿತ್ತು. ಆಗಾಗ ಮೌಖಿಕ ಪರೀಕ್ಷೆ ನಡೆಸಿ ಓದಿನ ಪ್ರಗತಿಯ ಸಮೀಕ್ಷೆ ಕೈಗೊಂಡೆವು.

ವಿದ್ಯಾರ್ಥಿಗಳು ಈ ಹಂತದಲ್ಲಿ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದರು. ದಿನಾಲೂ ಸಾಯಂಕಾಲ ೫ ರಿಂದ ೬:೩೦ ರ ವರೆಗೆ  ತರಬೇತಿ ವರ್ಗಗಳನ್ನು ನಡೆಸಲಾಗುತ್ತಿತ್ತು. ೬೦ ದಿನಗಳ ನಂತರ ತರಬೇತಿಯ ನಂತರ ಭೋಧನಾ ವಿನ್ಯಾಸಕ್ಕೆ ಕೆಲ ವಿಶಿಷ್ಟ ಕಾರ್ಯಕ್ರಮಗಳನ್ನು ಅಳವಡಿಸಲಾಯಿತು.

ಇದು ಮತ್ತೆ ಒಂದು ತಿಂಗಳು ಮುಂದುವರೆಸಲಾಯಿತು. ೪೦ ವಿದ್ಯಾರ್ಥಿಗಳನ್ನು  ೮ ಜನರ ಒಂದೊಂದು ತಂಡದಂತೆ -೫ ತಂಡಗಳನ್ನು ರಚಿಸಿ -ಪ್ರತಿ ತಂಡವನ್ನು ಒಬ್ಬ ಅನಭವಿ ಪ್ರಾಧ್ಯಾಪಕರ ಉಸ್ತುವಾರಿಗೆ ನೀಡಲಾಯಿತು.

ಅಳವಡಿಸಿದ ಕಾರ್ಯಕ್ರಮಗಳು
ಉತ್ತರ ಪತ್ರಿಕೆಯಲ್ಲಿ ಮೂರು ತೆರೆನಾದ ಪ್ರಶ್ನೆಗಳ ದೀರ್ಘಪ್ರಶ್ನೆ- ಸಂಕ್ಷಿಪ್ತ ಟಿಪ್ಪಣಿ- ಚಿಕ್ಕ ಉತ್ತರ ಹೇಗೆ ಸಮಯ ನಿರ್ವಹಣೆ ಕಲೆಯ ತರಬೇತಿ ನೀಡಲಾಯಿತು.  ಪ್ರಮುಖ ಅಂಶಗಳನ್ನು ಕ್ರಮ ಬದ್ಧವಾಗಿ ಹೇಗೆ ಬರೆಯಬೇಕೆಂದು ತೋರಿಸಿ ಕೊಡಲಾಯಿತು.

ಸಮಯದ ಅಲ್ಪ ಅವಧಿಯಲ್ಲಿ ಅತೀ ಹೆಚ್ಚಿನ ಕ್ರಮಾಂಕ ಗಳಿಸುವ ಕೌಶಲ್ಯವನ್ನು ಹೇಳಿಕೊಡಲಾಯಿತು.  ಮೌಖಿಕ ಪರೀಕ್ಷೆಯಲ್ಲಿ ಬರುವ ಅಡೆ ತಡೆಗಳನ್ನು  ನಿವಾರಿಸಿಕೊಳ್ಳುವ ಕುರಿತು ಉಪನ್ಯಾಸ ನೀಡಲಾಯಿತು. 

ಸಾಕಷ್ಟು ಸಮಯವನ್ನು ’ಗುಂಪು’ ಚರ್ಚೆಗೆ ಬಳಸಲಾಯಿತು. ಮನೋಒತ್ತಡ-ಆತಂಕ ಭಯ ನಿವಾರಿಸುವ ಉಪಾಯಗಳನ್ನು ಹೇಳಲಾಯಿತು. ಮೌಖಿಕ ಪರಿಕ್ಷೆಯಲ್ಲಿ ವರ್ತನೆ- ಶಿಷ್ಟಾಚಾರ ಮನದಟ್ಟು ಮಾಡಿಸಲಾಯಿತು ಉತ್ತರ ಪತ್ರಿಕೆಗಳನ್ನು ನೀಡಿ ಕೆಲವು ಸಂಕ್ಷಿಪ್ತ ಉತ್ತರಗಳನ್ನು ಬರೆಯಲು ಕೇಳಲಾಯಿತು.

ಪ್ರತಿ ಪ್ರಶ್ನೆಗೆ ೧೨ ನಿಮಿಷ  ಅವಧಿ ನೀಡಲಾಯಿತು. ಮಾದರಿ ಉತ್ತರಗಳನ್ನು ’ಪ್ರೊಜೆಕ್ಟರ್‌’ನಲ್ಲಿ ಪ್ರದರ್ಶಿಸಿ.   ತಾವೇ ಮೌಲ್ಯಮಾಪನ ಮಾಡಿಕೊಳ್ಳಲು ತಿಳಿಸಲಾಯಿತು. ನಂತರ ಚರ್ಚೆಯಲ್ಲಿ ವಿದ್ಯಾರ್ಥಿಗಳು ಬರೆದ ಉತ್ತರಗಳನ್ನು ಸರಿ ಪಡಿಸಲಾಯಿತು.
ಈ ತೆರೆನಾದ ಯೋಜನೆಗಳ ಮುನ್ನ-ಆಯ್ದ ವಿಷಯ ತಯಾರಿ ಕುರಿತು ಮುಂಚಿತ ಸೂಚಿಸಲಾಗುತ್ತಿತ್ತು.

ಉತ್ತರ ಪತ್ರಿಕೆಯಲ್ಲಿ ಉತ್ತರದೊಡನೆ ಸೂಕ್ತ ಚಿತ್ರ ಬರೆಯಲು ಸ್ಲೈಡ್‌ ಶೋಗಳನ್ನು ಬಳಸಲಾಯಿತು. ಈ ಪ್ರಯೋಗ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೆರಳಿಸಿತು. ಅದರಿಂದ  ಉತ್ತರದ ಗಾತ್ರ ಕಡಿಮೆಯಾಗುವದಲ್ಲದೆ,  ಆಕರ್ಷಣೀಯವಾಗುವುದು ಮನವರಿಕೆಯಾಯಿತು. ನಾನಾ ವಿಧವಾದ -ಅಂಕಣ ಚಿತ್ರ- ಉದಹರಿಸುವ ಚಿತ್ರ-ಗಳ ಮಹತ್ವವನ್ನು ಹೇಳಲಾಯಿತು.

ಈ ಎಲ್ಲ ಕಾರ್ಯಗಳನ್ನು ವಿದ್ಯಾರ್ಥಿಗಳು ಮುಕ್ತ ಮನದಿಂದ ಸ್ವೀಕರಿಸಿ ಅನುಷ್ಠಾನಕ್ಕೆ ತಂದರು. ತರಬೇತಿ ನಂತರ ಎಲ್ಲ ಅಂಕಿ-ಅಂಶಗಳನ್ನು ಕಲೆ ಹಾಕಿ ಸಂಖ್ಯಾಶಾಸ್ತ್ರದ ಅನ್ವಯ ವಿಶ್ಲೇಷಿಸಲಾಯಿತು.ಫಲಿತಾಂಶವೆಂದರೆ, ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಭಾಷೆ ಸಲೀಸಾಗಬೇಕು. ಚಿತ್ರಗಳ ಮೂಲಕ ಬೇಗ ಗ್ರಹಿಸುತ್ತಾರೆ. ಉಪನ್ಯಾಸಗಳಿಗಿಂತಲೂ ಬೇಗ ಸ್ಲೈಡ್‌ ಶೋ, ಪೂರಕ ಚಿತ್ರ ಮಾಹಿತಿಗಳನ್ನು ನೆನಪಿನಲ್ಲಿಡಬಲ್ಲರು.

ಕಲಿಕಾ ಪದ್ಧತಿಯನ್ನು ವಿದ್ಯಾರ್ಥಿಗಳ ಸಾಮರ್ಥ್ಯಾನುಸಾರ ಬದಲಿಸಿಕೊಂಡರೆ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಬಹುದು ಎಂಬುದು ಸಾಬೀತಾಯಿತು. ಈ ಸಂಶೋಧನಾ ಪ್ರಬಂಧವನ್ನು  ವೈದ್ಯಕೀಯ ರಾಷ್ರೀಯ ಸಮ್ಮೇಳನದಲ್ಲಿ ಮಂಡಿಸಲಾಗಿ ವೈದ್ಯಕೀಯ ಶಿಕ್ಷಣ ತಜ್ಞರ ಮೆಚ್ಚುಗೆ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT