ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ-ಉತ್ತರ

Last Updated 27 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

–ವಿಜಯ್ ಆರ್.ಎನ್.ಆರ್
ಇ ಮತ್ತು ಇ ವಿಷಯದಲ್ಲಿ ನಾನು ಡಿಪ್ಲೊಮಾ ಮಾಡುತ್ತಿದ್ದೇನೆ. ಮುಂದೆ ಯಾವ  ಕೋರ್ಸ್‌ಗೆ ಸೇರಬಹುದು? ಯಾವುದಕ್ಕೆ ಸೇರಿದರೆ ಉತ್ತಮ?


ಇ ಮತ್ತು ಇ ಡಿಪ್ಲೊಮಾ ನಂತರ ಇದೇ ವಿಷಯದಲ್ಲಿ ಬಿ.ಇ. ಪದವಿಯ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದು. ಇದಕ್ಕೆ ಡಿಪ್ಲೊಮಾ ಪರೀಕ್ಷೆಯಲ್ಲಿ ಪಡೆದ ಅಂಕಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಆಧಾರವಾಗಿರುತ್ತವೆ. ಹೆಚ್ಚಿನ ವಿವರಗಳನ್ನು ಈ ಪ್ರಾಧಿಕಾರದ ಅಂತರ್ಜಾಲದಲ್ಲಿ ಪಡೆಯಬಹುದು.

ಮಂಜುನಾಥ ಆರ್., ಕುಣಿಗಲ್
ನಾನು ಟೂಲ್ ಮತ್ತು ಡೈ ಮೇಕಿಂಗ್ ವಿಭಾಗದಲ್ಲಿ ಡಿಪ್ಲೊಮಾ  ಮಾಡಿದ್ದೇನೆ.  ಪ್ರೆಸ್ ಟೂಲ್ ನಿರ್ವಹಣೆಯಲ್ಲಿ ಒಂದು ವರ್ಷದ ಅನುಭವವೂ ಇದೆ. ಆದರೆ ಕಳೆದ ಆರು ತಿಂಗಳಿನಿಂದ ಯಾವುದೇ ಉದ್ಯೋಗ ದೊರೆಯುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.


ವಿದ್ಯಾಭ್ಯಾಸದ ನಂತರ ಉದ್ಯೋಗ ಸಿಗುವುದು ಆ ಕ್ಷೇತ್ರದಲ್ಲಿನ ಬೇಡಿಕೆಗೆ  ತಕ್ಕಂತೆ ಇರುತ್ತದೆ. ಆದ್ದರಿಂದ ಇಂತಿಷ್ಟೇ ಅವಧಿಯಲ್ಲಿ ಉದ್ಯೋಗ ದೊರೆಯುವ ಖಚಿತತೆ ಇರುವುದಿಲ್ಲ. ಅವಕಾಶ ಬರುವ ತನಕ ಕಾಯ­ಬೇಕು. ಜೊತೆಗೆ, ಸಂಬಂಧಿಸಿದ ವಿಷಯದಲ್ಲಿ ಸೂಕ್ತ ಅರೆಕಾಲಿಕ ಕೋರ್ಸ್‌ ಮಾಡಬಹುದು.

-ಚಂದ್ರಶೇಖರ್ ಟಿ.
ನಾನು 2005ರಲ್ಲಿ ಐ.ಟಿ.ಐ. ಮುಗಿಸಿದೆ. ನಂತರ ಪವರ್ ಎಲೆಕ್ಟ್ರಾನಿಕ್‌್ಸನಲ್ಲಿ ಡಿಪ್ಲೊಮಾ ಮುಗಿಸಿದೆ. ನಂತರ ಅದೇ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣದ ಮೂಲಕ ಪಿ.ಜಿ. ಕೂಡ ಮಾಡಿದೆ. ನನಗೆ ಈಗ ಬಿ.ಇ. ಮಾಡಬೇಕು ಎನಿಸುತ್ತಿದೆ. ಇದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ?  

ಡಿಪ್ಲೊಮಾ ನಂತರ ಬಿ.ಇ. ಎರಡನೇ ವರ್ಷಕ್ಕೆ ಪ್ರವೇಶಾವಕಾಶ ಇರುತ್ತದೆ. ಇದಕ್ಕೆ ಡಿಪ್ಲೊಮಾದಲ್ಲಿನ ಅಂಕಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಆಧಾರವಾಗಿರುತ್ತವೆ. ಹೆಚ್ಚಿನ ವಿವರಗಳನ್ನು ಈ ಪ್ರಾಧಿಕಾರದ ಅಂತರ್ಜಾಲದಲ್ಲಿ ಪಡೆಯಬಹುದು.

-ಮಂಜುನಾಥ ರೇವಣ್ಣನವರ್
ನಾನು 2009ರಲ್ಲಿ ಬಿ.ಎಸ್ಸಿ. ಮುಗಿಸಿ ಡಿಸೆಂಬರ್‌ 2010ರಲ್ಲಿ ಬಿ.ಇಡಿ. ಮುಗಿಸಿದೆ. ಇದರ ಜೊತೆಗೆ 2010-– 11ನೇ ಶೈಕ್ಷಣಿಕ ವರ್ಷದಲ್ಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಕ್‌ಸಟರ್ನಲ್‌ ಆಗಿ ಎಂ.ಎಸ್ಸಿ.ಗೆ ಸೇರಿದೆ. ಈಗ ಎರಡು ವಿಷಯಗಳಲ್ಲಿ ಉತ್ತೀರ್ಣನಾಗಿಲ್ಲ. ಈಗ ಅದನ್ನು ಮಾಡಿಕೊಳ್ಳುತ್ತೇನೆ.
ಇದರ ಜೊತೆಗೆ ಎಂ.ಇಡಿ. ಸೇರಲು ಯೋಚಿಸುತ್ತಿದ್ದೇನೆ. ಮುಂದೆ ಬಿ.ಇಡಿ. ಕಾಲೇಜಿನಲ್ಲಿ ಉಪನ್ಯಾಸಕನಾಗಬೇಕೆಂಬ ಹಂಬಲ ಇದೆ. ಆದರೆ ನನಗೆ ಒಂದೇ ವರ್ಷ ಎರಡು ಪದವಿಗಳು ಲಭಿಸಿರುವುದರಿಂದ ಉದ್ಯೋಗ ದೊರಕುವಲ್ಲಿ ಏನಾದರೂ ತೊಂದರೆಯಾಗುತ್ತದೆಯೇ? 


ಒಂದೇ ವರ್ಷ ಎರಡು ಪದವಿ ಪಡೆದು ಉದ್ಯೋಗ ಅರಸಲು ಯಾವುದೇ ತೊಂದರೆ ಇಲ್ಲ. ಎರಡು ಪದವಿಗಳನ್ನು ಒಟ್ಟಿಗೆ ಪಡೆಯುವ ಅವಕಾಶವನ್ನು ಅನೇಕ ವಿಶ್ವವಿದ್ಯಾಲಯಗಳು ಮಾಡಿವೆ. ಆದ್ದರಿಂದ ನೀವು ಎರಡು ಪದವಿಗಳನ್ನು ಒಟ್ಟಿಗೆ ಪಡೆಯಲು ಮತ್ತು ಅದರ ಅಧಾರದ ಮೇಲೆ ಉದ್ಯೋಗ ಅರಸಲು ಆತಂಕ ಬೇಡ.

–ಭವ್ಯಾ ಎ.ಎಸ್.
ನಾನು 2008ರಲ್ಲಿ ಬಿ.ಇ. ಮುಗಿಸಿದೆ. ನಂತರ ನನಗೆ ಮದುವೆಯಾಯಿತು. ಯಾವುದೇ ರೀತಿಯ ಕಾರ್ಯಾನುಭವ ನನಗಿಲ್ಲ. ಈಗ ಉದ್ಯೋಗಕ್ಕೆ ಸೇರಬೇಕೆಂಬ ಆಸೆ ಇದೆ. ಆದರೆ ಎಲ್ಲರೂ ಅನುಭವವನ್ನು ಕೇಳುತ್ತಿದ್ದಾರೆ. ನನಗೆ ಏನೂ ತೋಚುತ್ತಿಲ್ಲ. ದಯಮಾಡಿ ಸಲಹೆ ಕೊಡಿ. 


ಸಾಮಾನ್ಯವಾಗಿ ಪದವಿ ನಂತರ ಉದ್ಯೋಗ ಅರಸುವಾಗ ಹೆಚ್ಚಿನ ಕಾಲದ ಅಂತರ ಇದ್ದರೆ ಅವರಿಗೆ ಪದವಿಯಲ್ಲಿ ಕಲಿತ ವಿಷಯಗಳು ಬಹಳಷ್ಟು ಮಟ್ಟಿಗೆ ಮರೆತಿರಬಹುದು. ಆದ್ದರಿಂದ ಉದ್ಯೋಗ ಕೊಡುವ ಸಂಸ್ಥೆಗಳು ಇಂತಹವರನ್ನು  ಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ನೀವು ಬಿ.ಇ. ಗಳಿಸಿದ ವಿಷಯದ ಮೇಲೆ, ಲಭ್ಯವಿರುವ ಯಾವುದಾದರೂ ಅರೆಕಾಲಿಕ ಕೋರ್ಸ್‌ ಮಾಡಿ ಅಥವಾ ಸ್ನಾತಕೋತ್ತರ ಪದವಿ ಗಳಿಸಿ ಉದ್ಯೋಗವನ್ನು ಅರಸುವುದು ಸೂಕ್ತ.

ಪ್ರೈಸ್ಲಿನೆ ಕ್ರಿಸ್ಟೀನಾ, ಕಾಂಚನಾ
ನನ್ನ ಮಗಳು ಕೇವಲ ಒಂದೇ ಒಂದು ಪರೀಕ್ಷೆಯಿಂದ ಬಿ.ಸಿ.ಎ. ಮಾಡಬೇಕೆಂದು ಯೋಚಿಸುತ್ತಿದ್ದಾಳೆ. ಸಿ.ಎಂ.ಜೆ. ವಿಶ್ವವಿದ್ಯಾಲಯವು ಈ ರೀತಿ ಪದವಿಯನ್ನು ನೀಡುತ್ತದೆ ಎನ್ನುತ್ತಾರೆ. ಇದು ಸರಿಯೇ? ಮುಂದೆ ಇದರ ಆಧಾರದ ಮೇಲೆ ಎಂ.ಸಿ.ಎ. ಮಾಡಬಹುದೇ? ಅವಳಿಗೆ ಕಂಪ್ಯೂಟರ್ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ. ಉದ್ಯೋಗಕ್ಕಾಗಿ ನಿತ್ಯ 100 ಕಿ.ಮೀ. ದೂರ ಹೋಗಿಬರುತ್ತಾಳೆ. ಕಾಲೇಜಿಗೆ ದಿನಾ ಹೋಗುವುದು ಸಾಧ್ಯವಿಲ್ಲ.   -


ಯಾವುದೇ ಪದವಿಯನ್ನು ನಿರ್ದಿಷ್ಟ ಸಮಯದಲ್ಲೇ ಮಾಡಬೇಕೆಂಬ ನಿಬಂಧನೆ ಇಲ್ಲ. ಆದ್ದರಿಂದ ವಿ.ವಿ. ಅನುದಾನ ಸಂಸ್ಥೆಯ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಬಿ.ಸಿ.ಎ. ಪದವಿ  ಆಧಾರದ ಮೇಲೆ  ಎಂ.ಸಿ.ಎ. ಮಾಡಬಹುದು. ಆದ್ದರಿಂದ ನೀವು ತಿಳಿಸಿರುವ ವಿಶ್ವವಿದ್ಯಾಲಯವು ಇಂತಹ ಮಾನ್ಯತೆ ಪಡೆದಿದ್ದರೆ ಅಲ್ಲಿ ನಿಮ್ಮ ಮಗಳು ಒಂದೇ ಪರೀಕ್ಷೆಯಿಂದ ಬಿ.ಸಿ.ಎ. ಗಳಿಸಿ ಅದರ ಆಧಾರದ ಮೇಲೆ ಎಂ.ಸಿ.ಎ.ಗೆ ಪ್ರವೇಶ ಪಡೆಯಬಹುದು.

– ಲಾರೆನ್ಸ್ ಸಂದೀಪ್ 
ಬಿ.ಇ. ಮುಗಿಸಿದ್ದೇನೆ. ಮುಂದೆ ದೂರಶಿಕ್ಷಣದ ಮೂಲಕ ಮಾಸ್ಟರ್ ಆಫ್ ಸೋಶಿ­ಯಲ್ ವರ್ಕರ್‌ ಮಾಡಬೇಕೆಂದಿದ್ದೇನೆ. ಇದು ಸಾಧ್ಯವೇ, ಸೂಕ್ತವೇ?     
 
     
ದೂರಶಿಕ್ಷಣದ ಮೂಲಕ ಮಾಸ್ಟರ್ ಆಫ್ ಸೋಶಿಯಲ್ ವರ್ಕ್‌ ಅಭ್ಯಾಸ ಮಾಡಬಹುದು. ಇದಕ್ಕೆ ನೀವು ಯಾವುದಾದರೂ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ಮುಕ್ತ ವಿ.ವಿ. ಅಥವಾ ಇಂದಿರಾ ಗಾಂಧಿ ವಿಶ್ವವಿದ್ಯಾಲಯ ಅಥವಾ ಬೇರೆ ಯಾವುದೇ ವಿಶ್ವವಿದ್ಯಾಲಯದ ಪ್ರವೇಶ ಪಡೆದು ಅಭ್ಯಾಸ ಮಾಡಬಹುದು.

–ಉತ್ತಮ್‌ ಗೌಡ
ನಾನು 10ನೇ ತರಗತಿ ನಂತರ ಸಿವಿಲ್ ಡಿಪ್ಲೊಮಾಗೆ ಸೇರಿದೆ. ಈಗ 6ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣನಾಗಿದ್ದೇನೆ. ಮುಂದೆ ಬಿ.ಇ. ಮಾಡಬೇಕೆಂಬ ಹಂಬಲ ಇದೆ. ಆದರೆ ಈ ಒಂದು ವರ್ಷದ ಅವಧಿಯಲ್ಲಿ ನಾನು ಸಿವಿಲ್‌ಗೆ ಪೂರಕವಾದ ಕೋರ್ಸ್‌ಗಳಿಗೆ ಸೇರಬೇಕೆಂದಿದ್ದೇನೆ. ಆ ಬಗ್ಗೆ ಮಾಹಿತಿ ಒದಗಿಸಿ.  
 
            
ಸಿವಿಲ್ ಡಿಪ್ಲೊಮಾ ಜೊತೆಗೆ ಲಭ್ಯವಿರುವ ಪೂರಕ ಕೋರ್ಸ್‌ಗಳ
ಮಾಹಿತಿಯನ್ನು ನಿಮ್ಮ ಅಧ್ಯಾಪಕರಿಂದ ಪಡೆದುಕೊಳ್ಳಿ. ಅದೇ ಕ್ಷೇತ್ರದಲ್ಲಿ ಇರುವ ಅಧ್ಯಾಪಕರು ನಿಮಗೆ ಸೂಕ್ತವಾದ ಸಲಹೆ ನೀಡುವುದು ಒಳ್ಳೆಯದು.

–ಗುಂಡಪ್ಪ ಭೈರಪ್ಪನವರ್
ನನಗೆ ಈಗ 35 ವರ್ಷ. ಗುತ್ತಿಗೆ ಆಧಾರದ ಮೇಲೆ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ವಿಜ್ಞಾನದಲ್ಲಿ ಪಿ.ಯು.ಸಿ. ಮಾಡಿಕೊಂಡಿದ್ದೇನೆ. ಪದವಿ ಪಡೆಯಬೇಕು ಎಂದುಕೊಂಡಿದ್ದೇನೆ. ನನ್ನ ಪತ್ನಿಯೂ ಸಹಾಯಕ ಶಿಕ್ಷಕಿ­ಯಾಗಿ ಕಳೆದ 3 ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಉದ್ಯೋಗಲ್ಲಿದ್ದಾಳೆ. ಅವಳು ಬಡ್ತಿಗಾಗಿ ಬಿ.ಇಡಿ. ಮಾಡಬೇಕೆಂದು ಹಂಬಲಿಸುತ್ತಿದ್ದಾಳೆ. ದೂರಶಿಕ್ಷಣ­ದಲ್ಲಿ ಮಾಡಬಹುದೇ? ಕೆಲವು ವಿಶ್ವವಿದ್ಯಾಲಯಗಳು ಒಂದೇ ಪರೀಕ್ಷೆಗೆ ಪದವಿ ನೀಡುತ್ತೇವೆ ಎಂದು ಹೇಳುವುದು ನಿಜವೇ? ಇದರಿಂದ ಉದ್ಯೋಗದಲ್ಲಿ ಬಡ್ತಿ ಅಥವಾ ಸರ್ಕಾರಿ ಉದ್ಯೋಗದಲ್ಲಿ ಅವಕಾಶಗಳು ಇರುತ್ತವೆಯೇ?


ದೂರಶಿಕ್ಷಣದ ಮೂಲಕ ನೀವು ತಿಳಿಸಿರುವ ಪದವಿಯನ್ನು ಪಡೆಯಬಹುದು. ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪಡೆಯುವ ಪದವಿಗೆ ಸರ್ಕಾರಿ  ಉದ್ಯೋಗ ಪಡೆಯುವುದು ಮತ್ತು ಆ ಉದ್ಯೋಗದಲ್ಲಿ ಬಡ್ತಿ ಪಡೆಯಲು ಯಾವುದೇ ಅಡ್ಡಿ ಇರುವುದಿಲ್ಲ. ಆದ್ದರಿಂದ ಆ ಪದವಿಯನ್ನು ನೀವು ಒಂದೇ ಪರೀಕ್ಷೆಯಲ್ಲಿ ಪಡೆದು, ಅದರ ಆಧಾರದ ಮೇಲೆ ಉದ್ಯೋಗ ಮತ್ತು ಮುಂದೆ ಬರುವ ಬಡ್ತಿಯನ್ನು ಪಡೆಯಲು ಅರ್ಹತೆ ಇರುತ್ತದೆ.

ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, ನಂ. 75, ಎಂ.ಜಿ. ರಸ್ತೆ, ಬೆಂಗಳೂರು– 560 001

ಇ– ಮೇಲ್ ವಿಳಾಸ: shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT