ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯ ಹಾದಿಯಲ್ಲಿ ಯೂಕಿ ಭಾಂಬ್ರಿ

Last Updated 23 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾ ಓಪನ್‌ ಜೂನಿಯರ್ ಚಾಂಪಿಯನ್‌ಷಿಪ್ ಗೆದ್ದುಕೊಳ್ಳುವ ಮೂಲಕ 2009ರಲ್ಲಿ ಭಾರತ ಟೆನಿಸ್‌ ಕ್ರೀಡೆಯಲ್ಲಿ ಮೊದಲ ಬಾರಿಗೆ ಗುರುತರ ಹೆಜ್ಜೆ ಮೂಡಿಸಿದ್ದ ಯೂಕಿ ಭಾಂಬ್ರಿ ಇತ್ತೀಚಿನ ದಿನಗಳಲ್ಲಿ ಭರವಸೆಯ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೂನಿಯರ್‌ ವಿಭಾಗದಲ್ಲಿ ಅಗ್ರ ರ‍್ಯಾಂಕಿಂಗ್‌ ಸ್ಥಾನಕ್ಕೆ ಏರಿದ್ದ ಯೂಕಿ ಆಸ್ಟ್ರೇಲಿಯಾ ಓಪನ್ ಜೂನಿಯರ್‌ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಸಿಂಗಲ್ಸ್‌ನಲ್ಲಿ ಗ್ರ್ಯಾಂಡ್‌ ಸ್ಲಾಮ್‌ ಜಯಿಸಿದ ಭಾರತದ ನಾಲ್ಕನೇ ಆಟಗಾರ ಎಂಬ ಶ್ರೇಯ ಅವರ ಹೆಸರಿನಲ್ಲಿದೆ.

2014ರಲ್ಲಿ ನಡೆದ ಹಲವು ಟೂರ್ನಿಗಳಲ್ಲಿ ಮೇಲಿಂದ ಮೇಲೆ ಹಿನ್ನಡೆ ಅನುಭವಿಸಿದ ಭಾರತದ ಆಟಗಾರ 2015ರ ಮಹತ್ವದ ಟೂರ್ನಿಗಳಲ್ಲಿ ಪರಿಣಾಮಕಾರಿಯಾಗಿ ಆಡಿದ್ದಾರೆ. 2015ರಲ್ಲಿ ಯೂಕಿ ಭಾಂಭ್ರಿ ಟೆನಿಸ್‌ ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸಾಧನೆಗಳಿಗೆ ಕಾರಣರಾಗಿದ್ದಾರೆ ಈ ಮೂಲಕ ಮತ್ತೆ ಭರವಸೆಯ ಹಾದಿಗೆ ಮರಳಿದ್ದಾರೆ.

ಈ ಖುತುವಿನ ಆರಂಭದಲ್ಲಿ  ಉಜ್ಬೆಕಿಸ್ತಾನದಲ್ಲಿ ನಡೆದ ಎಟಿಪಿ ಚಾಲೆಂಜರ್ಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಪೇನ್‌ನ ಆ್ಯಡ್ರಿಯಲ್ ಮೆನೆನ್‌ಡೆಜ್‌ ಅವರೊಂದಿಗೆ ಪ್ರಶಸ್ತಿ ಜಯಿಸಿದ್ದರು. ಸಮರಕಂಡ ಚಾಲೆಂಜರ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಯೂಕಿ ಭಾಂಬ್ರಿ 158ನೇ ರ‍್ಯಾಂಕಿಂಗ್‌ ಸ್ಥಾನಕ್ಕೆ ಜಿಗಿಯುವ ಮೂಲಕ ಭಾರತ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದರು. ಈ ಟೂರ್ನಿಯ ಫೈನಲ್‌ನಲ್ಲಿ 82ನೇ ಸ್ಥಾನದಲ್ಲಿರುವ ರಷ್ಯಾದ ತೆಮುರಾಜ್‌ ಗಬಾಸ್ವಿಲಿ ಎದುರು ಸೋಲು ಕಂಡರು.

ಉಜ್ಬೆಕಿಸ್ತಾನದಲ್ಲಿ ಮೇ ತಿಂಗಳಿನಲ್ಲಿ ನಡೆದ ಎಟಿಎಫ್‌ ಫ್ಯೂಚರ್ಸ್‌ ಟೂರ್ನಿಯ  ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದು ಫ್ರೆಂಚ್‌ ಓಪನ್ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡರು. ಬಳಿಕ ಆಸ್ಟ್ರೇಲಿಯಾ ಓಪನ್‌ನ ಮೊದಲ ಸುತ್ತಿಗೆ ಲಗ್ಗೆಯಿಟ್ಟು ಬ್ರಿಟನ್‌ನ ಆ್ಯಂಡಿ ಮರ್ರೆಯೊಂದಿಗೆ ಆಡಿದ್ದರು. ವೇಗದ ಸರ್ವ್‌ ಮತ್ತು ಆಕರ್ಷಕ ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿದ್ದ ಮರ್ರೆಗೆ ಆಶ್ಚರ್ಯ ಉಂಟು ಮಾಡುವ ರೀತಿಯಲ್ಲಿ ಆಡಿದ್ದರು.

ಆಗ ಯೂಕಿ ಭಾಂಬ್ರಿ  317ನೇ ಸ್ಥಾನದಲ್ಲಿದ್ದರು. ಪಂದ್ಯದಲ್ಲಿ ಭಾರತದ ಆಟಗಾರನಿಗೆ ಸೋಲು ಎದುರಾಗಿದ್ದರೂ, ಉತ್ತಮ ಪೈಪೋಟಿ ನೀಡಿ ಮರ್ರೆ ಅವರಿಂದ ಹೊಗಳಿಕೆಯನ್ನೂ ಗಿಟ್ಟಿಸಿಕೊಂಡಿದ್ದರು. ಯೂಕಿ ಭಾಂಬ್ರಿ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೋಡಿ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಎಟಿಪಿ ಚಾಲೆಂಜರ್ಸ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿತ್ತು. ಸೆಮಿಫೈನಲ್‌ನಲ್ಲಿ ಸ್ಥಳೀಯ ಜೋಡಿಗೆ ಆಘಾತ ನೀಡಿ ರನ್ನರ್ಸ್ ಅಪ್‌ ಆಗುವಲ್ಲಿ ಯಶಸ್ವಿಯಾಗಿದ್ದರು.

ಫ್ರೆಂಚ್‌ ಓಪನ್‌ನಲ್ಲಿ ಭಾರತದ ಪ್ರಮುಖ ಆಟಗಾರರಾದ ಸೋಮದೇವ್‌ ದೇವವರ್ಮನ್‌ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಆದರೆ ಯೂಕಿ ಭಾಂಬ್ರಿ ಎರಡನೇ ಸುತ್ತು ಪ್ರವೇಶಿಸುವ ಮೂಲಕ ಭಾರತ ಟೆನಿಸ್‌ ಕ್ರೀಡೆಯಲ್ಲಿ ಹೊಸ ಭರವಸೆಯ ಹೆಜ್ಜೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT