ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸ್ಕ್ವಾಷ್‌ ತಾರೆ ಜೋಷ್ನಾ

Last Updated 6 ಡಿಸೆಂಬರ್ 2015, 19:56 IST
ಅಕ್ಷರ ಗಾತ್ರ

ದಶಕದ ಹಿಂದೆ ಸ್ಕ್ವಾಷ್‌ ಕ್ರೀಡೆ ಭಾರತದಲ್ಲಿ ಅಷ್ಟೇನು ಜನಪ್ರಿಯವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ಪಳ್ಳಿಕಲ್‌ ಅವರ ಎತ್ತರದ ಸಾಧನೆಯಿಂದ ಈ ಕ್ರೀಡೆಯ ವಿಶ್ವ ನಕ್ಷೆಯಲ್ಲಿ ಭಾರತದ ಹೆಸರು ಮುಂಚೂಣಿಗೆ ಬಂದಿದೆ.

ಜೋಷ್ನಾ ಚಿಣ್ಣಪ್ಪ ಅವರು ಚೆನ್ನೈಯಲ್ಲಿಯೇ ಹುಟ್ಟಿ ಬೆಳೆದವರು. ಇವರ ತಂದೆ ದಶಕಗಳ ಹಿಂದೆ ಕೊಡಗಿನಿಂದ ಚೆನ್ನೈಗೆ ಹೋಗಿ ನೆಲೆಸಿದ್ದರು. ಹೆತ್ತವರ ಪ್ರೋತ್ಸಾಹದಿಂದ ಎಳವೆಯಲ್ಲಿಯೇ ಸ್ಕ್ವಾಷ್‌ ಅಭ್ಯಾಸ ನಡೆಸಿದ್ದ ಜೋಷ್ನಾ ತಮ್ಮ 17ನೇ ವಯಸ್ಸಿನಲ್ಲೇ  (2003ರಲ್ಲಿ) ಬ್ರಿಟಿಷ್‌ ಸ್ಕ್ವಾಷ್‌ ಟೂರ್ನಿ ಜಯಿಸಿದ ಮೊದಲ ಭಾರತೀಯಳು ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇಲ್ಲಿಂದ ಮುಂದೆ ಅವರು ಈ ಕ್ರೀಡೆಯಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ ಇಂದು ಭಾರತದ ಅಗ್ರಶ್ರೇಯಾಂಕದ ಆಟಗಾರ್ತಿಯಾಗಿ ಬೆಳೆದಿದ್ದಾರೆ.

ನವೆಂಬರ್‌ ತಿಂಗಳಿನಲ್ಲಿ ದೋಹಾದಲ್ಲಿ ನಡೆದಿದ್ದ  ಕತಾರ್‌ ಕ್ಲಾಸಿಕ್‌ ಸ್ಕ್ವಾಷ್‌ ಟೂರ್ನಿಯಲ್ಲಿ ಜೋಷ್ನಾ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಈಜಿಪ್ಟ್‌ನ ರಾನೀಮ್‌ ಅಲ್‌ ವೆಲಿಲಿ ಅವರಿಗೆ ಆಘಾತ ನೀಡಿ ಜಗತ್ತಿನ ಗಮನ ಸೆಳೆದರು. ಈ ಆಟದಿಂದ ಅವರ ವೃತ್ತಿ ಜೀವನದ ದಿಕ್ಕೇ ಬದಲಾಯಿತು. ಸ್ಕ್ವಾಷ್‌ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಏರಿದರು. ಭಾರತದ ಸ್ಪರ್ಧಿಗಳ ಪೈಕಿ ಗರಿಷ್ಠ ರ್‍ಯಾಂಕಿಂಗ್‌ ಹೊಂದಿರುವ ಆಟಗಾರ್ತಿ ಎಂಬ ಶ್ರೇಯ ಒಲಿಸಿಕೊಂಡರು.

ಈ ಮೊದಲು ಸ್ಕ್ವಾಷ್‌ ಕ್ರೀಡೆಯಲ್ಲಿ ಅದರಲ್ಲೂ ಮಹಿಳೆಯರ ವಿಭಾಗದಲ್ಲಿ ದೀಪಿಕಾ ಪಳ್ಳಿಕಲ್‌ ಅವರ ಹೆಸರೇ ಹೆಚ್ಚು ಕೇಳಿ ಬರುತ್ತಿತ್ತು. ದೀಪಿಕಾ ಹಾಗೂ ಜೋಷ್ನಾ ಈ ಕ್ರೀಡೆಯಲ್ಲಿ ಭಾರತದ ಹೆಸರನ್ನು ಮುಂಚೂಣಿಗೆ ತಂದ ಆಟಗಾರ್ತಿಯರಾಗಿದ್ದಾರೆ. ದೀಪಿಕಾ ಭಾರತದ ಅತ್ತುತ್ತಮ ರ್‍ಯಾಂಕಿಂಗ್‌ ಹೊಂದಿದ್ದ ಆಟಗಾರ್ತಿ ಎನಿಸಿದ್ದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅವರು ಎರಡು ಸ್ಥಾನ ಕುಸಿತ ಕಂಡು 14ನೇ ಸ್ಥಾನದಿಂದ 16ಕ್ಕೆ ಹಿಂಬಡ್ತಿ ಹೊಂದಿದ್ದಾರೆ.

2004ರಲ್ಲಿ ಜೋಷ್ನಾ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಬಳಿಕ 2014ರಲ್ಲಿ ಗ್ಲಾಸ್ಗೊ ನಗರದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೀಪಿಕಾ ಪಳ್ಳಿಕಲ್‌ ಅವರೊಂದಿಗೆ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಕಾಮನ್‌ವೆಲ್ತ್‌ನಲ್ಲಿ ಸ್ಕ್ವಾಷ್‌ ಕ್ರೀಡೆಯಲ್ಲಿ ಭಾರತಕ್ಕೆ ಒಲಿದ ಮೊದಲ ಪ್ರಶಸ್ತಿ ಇದಾಗಿದೆ.

ಸ್ಕ್ವಾಷ್‌ ಕ್ರೀಡೆ ಹುಟ್ಟಿದ್ದು...
ರಬ್ಬರ್‌ ಚೆಂಡನ್ನು ರಾಕೆಟ್‌ನಿಂದ ಗೋಡೆಗೆ ಹೊಡೆಯುವ ಕ್ರೀಡೆ ಸ್ಕ್ವಾಷ್‌. ಇದು 16ನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಹುಟ್ಟಿಕೊಂಡಿತು. ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಮಾತ್ರ ಆಡುತ್ತಿದ್ದ ಈ ಕ್ರೀಡೆ 19ನೇ ಶತಮಾನದಲ್ಲಿ ಇಂಗ್ಲೆಂಡ್‌ನ ಆಚೆಯೂ ಹಲವು ಯೂರೋಪಿಯನ್‌ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತವಾಯಿತು. ಶಾಲಾ ಕಾಲೇಜುಗಳಲ್ಲಿ, ಕ್ಲಬ್‌ಗಳಲ್ಲಿ ಜನಪ್ರಿಯತೆ ಪಡೆದುಕೊಂಡಿತು.

ಬಳಿಕ ಅಮೆರಿಕದಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯವಾಯಿತು. ಬಿಡುವಿನ ಸಮಯದಲ್ಲಿ ಗೋಡೆಗೆ ಹೊಡೆಯುವ ಕ್ರೀಡೆಯನ್ನು ಆಡುವ ಮೂಲಕ ಮಕ್ಕಳು ಮನರಂಜನೆ ಪಡೆಯುತ್ತಿದ್ದರು. ಆದರೆ ಇದು ವೃತ್ತಿಪರ ಕ್ರೀಡೆಯಾಗಿ ಬೆಳೆಯುವಲ್ಲಿ ಸಾಕಷ್ಟು ಸಮಯ ತೆಗೆದುಕೊಂಡಿದೆ. 1998ರಲ್ಲಿ ಸ್ಕ್ವಾಷ್‌ ಕ್ರೀಡೆಯನ್ನು ಕಾಮನ್‌ವೆಲ್ತ್‌ ಮತ್ತು ಏಷ್ಯಾ ಕ್ರೀಡಾಕೂಟಗಳಲ್ಲಿ ಸೇರ್ಪಡೆ ಮಾಡಲಾಯಿತು. ಆದರೆ ಒಲಿಂಪಿಕ್ಸ್‌ಗೆ ಸ್ಕ್ವಾಷ್‌ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತೀವ್ರವಾದ ಪ್ರಯತ್ನಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT