ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸ್ಥಿತಿ ಹೇಳುವ ಮಾತು

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ಲಿಪಿಬದ್ಧ ವಾಕ್ಯವೊಂದನ್ನು ಓದಿದಾಗ ನಮಗೆ ಉಂಟಾಗುವ ಅರ್ಥದ ಬೋಧೆ ಮುಖ್ಯವಾಗಿ ಎರಡು ವಿಷಯಗಳನ್ನು ಅವಲಂಬಿಸಿರುತ್ತದೆ. ಒಂದು, ವಾಕ್ಯರಚನೆಯ ವಿಧಾನ ಮತ್ತೊಂದು, ಆ ವಾಕ್ಯರಚನೆ ಸೂಚಿಸುತ್ತಿರುವ ಸ್ವರವಿನ್ಯಾಸ ಅಥವಾ ಅದನ್ನು ಓದುವಾಗ ಓದುಗ ಕಲ್ಪಿಸಿಕೊಳ್ಳುವ ಸ್ವರ ವಿನ್ಯಾಸ. ಕಳೆದ ಕಂತಿನಲ್ಲಿ ಹೇಳಿದಂತೆ, ಒಂದೇ ವಾಕ್ಯ ಪದಗಳ ವೈವಿಧ್ಯಮಯ ಸ್ವರ ವಿನ್ಯಾಸದಿಂದ ವಿವಿಧ ಅರ್ಥಗಳನ್ನು ನೀಡಲು ಸಮರ್ಥವಾಗಿರುತ್ತದೆ.

ವೇದಮಂತ್ರಗಳಲ್ಲಿ ಮೂರು ಸ್ವರಗಳನ್ನು ಉಪಯೋಗಿಸಿಯೇ ಪದಗಳ ಅರ್ಥವನ್ನೂ ನಿರ್ದೇಶಿಸಲಾಗಿದೆ ಎನ್ನುವುದು ಭಾರತೀಯ ಸಂಸ್ಕೃತಿಯ ಒಂದು ರೋಚಕವಾದ ಸಂಗತಿ. ಈ ಸಂದರ್ಭದಲ್ಲಿ ಪ್ರಸಿದ್ಧವಾಗಿರುವ ವೈದಿಕ ಆಖ್ಯಾನವೊಂದನ್ನು ನೆನಪಿಸಿಕೊಳ್ಳಬಹುದು. ಬ್ರಹ್ಮಪುತ್ರನಾದ ತ್ವಷ್ಟೃ(ವಿಶ್ವಕರ್ಮ)ವಿನ ಮಗ ವಿಶ್ವರೂಪನನ್ನು ಇಂದ್ರ ವಧಿಸಿದುದರಿಂದ ಕೋಪಗೊಂಡ ತ್ವಷ್ಟೃ ಯಜ್ಞವೊಂದನ್ನು ಕಲ್ಪಿಸಿ ಅದರಿಂದಾಗಿ ಇಂದ್ರನನ್ನು ಗೆಲ್ಲಬಲ್ಲ ಶಕ್ತಿಯೊಂದನ್ನು ನಿರ್ಮಿಸುತ್ತಾನೆ. ಅವನೇ ವೃತ್ರ.

ಆದರೆ, ತ್ವಷ್ಟೃವಿನ ಸಂಕಲ್ಪವನ್ನು ಅರಿತಿದ್ದ ದೇವಗಣ ಸರಸ್ವತಿಯ ಸಹಾಯದಿಂದ ಯಜ್ಞಮಾಡುವ ಸಂದರ್ಭದಲ್ಲಿಯೇ ಅವನ ಮಂತ್ರದ ಸ್ವರೋಚ್ಚಾರಣೆಯಲ್ಲಿ ವ್ಯತ್ಯಾಸವುಂಟುಮಾಡಿ ‘ಇಂದ್ರಶತ್ರೋಽ ವರ್ಧಸ್ವ’ ಎನ್ನುವ ವಾಕ್ಯದಲ್ಲಿ ‘ಇಂದ್ರನಿಗೆ ಯಾರು ಶತ್ರುವೋ’ ಎನ್ನುವ ಅರ್ಥ ಬರುವ ಬದಲು ‘ಇಂದ್ರನು ಯಾರಿಗೆ ಶತ್ರುವೋ ಅಂಥವನು ಹುಟ್ಟಿಬರಲಿ’ ಎಂಬ ಅರ್ಥಬರುವಂತೆ ಮಾಡಿ, ಇಂದ್ರನಿಗೆ ಮೇಲುಗೈಯಾಗುವಂತೆ ನೋಡಿಕೊಳ್ಳುತ್ತಾರೆ ಎನ್ನುವುದು ಕಥೆ.

ಇಂದ್ರಶತ್ರುಃ  ಎನ್ನುವಲ್ಲಿ ಇಂ, ದ್ರ್ರ, ಮತ್ತು ಶ ಗಳನ್ನು ಅನುದಾತ್ತವಾಗಿ ಹೇಳಿದರೆ, ತತ್ಪುರುಷ ಸಮಾಸವಾಗಿ ಇಂದ್ರನನ್ನು ಕೊಲ್ಲುವವನು ಎಂದಾಗುತ್ತದೆ. ಆದರೆ, ಇದನ್ನೇ,  ಎಂದು ದ್ರ ಎನ್ನುವುದನ್ನು ಮಾತ್ರ ಏರುಸ್ವರದಲ್ಲಿ ಹೇಳಿದರೆ ಇಂದ್ರನು ಯಾರಿಗೆ ಶತ್ರುವೋ ಎಂಬರ್ಥ ಬರುವಂತೆ ಬಹುವ್ರೀಹಿ ಸಮಾಸವಾಗುತ್ತದೆ ಎಂದು ವಿವರಣೆಯನ್ನು ನೀಡಲಾಗಿದೆ. ಹೀಗೆಯೇ ಎಂದರೆ ನಾಮಪದವೂ ಎಂದರೆ ವಿಶೇಷಣವೂ ಆಗುತ್ತದೆ ಎಂದು ಶಿಕ್ಷಾಶಾಸ್ತ್ರಗಳು ಹೇಳುತ್ತವೆ. ಇದು ಪುರಾತನ ಕಾಲದ ಸ್ವರ ವಿನ್ಯಾಸದ ವೈಶಿಷ್ಟ್ಯ.

ಸಮಾಧಾನದ ಸಂಗತಿಯೆಂದರೆ, ಕನ್ನಡದಲ್ಲಿ ಮಾತನಾಡುವಾಗ ಇಷ್ಟು ಸೂಕ್ಷ್ಮತರವಾದ ಸ್ವರವಿನ್ಯಾಸವನ್ನು ಮಾಡುವ ರೂಢಿಯಿಲ್ಲ. ಮೇಲಿನ ಉದಾಹರಣೆಗಳಿಂದ ನಾವು ಗಮನಿಸಬೇಕಾದ ವಿಷಯವೆಂದರೆ ನಮ್ಮ ಆಡುಮಾತಿನಲ್ಲಿ ನಮ್ಮ ಧ್ವನಿಯ ಏರಿಳಿತಗಳನ್ನು ಸರಿಯಾಗಿ ವಿನ್ಯಾಸ ಮಾಡದೆ ಹೋದರೆ ಅನರ್ಥ, ಅಪಾರ್ಥಗಳು ಉಂಟಾಗಬಹುದು. ಸದ್ಯಕ್ಕೆ, ನಮ್ಮ ಮಾತಿನಲ್ಲಿ ನಾವು ಸ್ವರ ಮತ್ತು ವಿರಾಮ (pause)ಗಳನ್ನು ಬಳಸಿ ಅರ್ಥವನ್ನು ಮತ್ತು ಧ್ವನಿಯನ್ನು ಪುಷ್ಟೀಕರಿಸುತ್ತಿದ್ದೇವೆ.

ಒಂದು ಸಣ್ಣ ಉದಾಹರಣೆಯನ್ನು ಗಮನಿಸಿ. ‘ಕರಿಯ ಕಂಬಳೀನ ತೊಗೊಂಡು ಬಾ’ - ಇದೊಂದು ಸಾಧಾರಣವಾದ ವಾಕ್ಯ  ಲಿಪಿಬದ್ಧವಾದಂತೆಯೇ ಮಾತನಾಡಲು ಪ್ರಯತ್ನಿಸುವಾಗ, ’ಕರಿಯ ಕಂಬಳೀನ’ ಎನ್ನುವುದನ್ನು ಒಂದು ವಾಕ್ಯಾಂಶವಾಗಿ ಗ್ರಹಿಸಿ, ಕೂಡಿಸಿ ಹೇಳಿದರೆ, ಕಂಬಳಿ ಕಪ್ಪಾಗಿದೆ, ಅದನ್ನು ತಾ ಎಂದು ಹೇಳಲಾಗುತ್ತಿದೆ ಎನ್ನುವ ಅರ್ಥ ಸ್ಫುರಿಸುತ್ತದೆ. ‘ಕರಿಯ, ಕಂಬಳೀನ ತೊಗೊಂಡು ಬಾ’ - ಎಂದು ‘ಕರಿಯ’ ಪದದ ನಂತರ ಒಂದು ಸಣ್ಣ ವಿರಾಮವನ್ನು ಅಳವಡಿಸಿದರೆ, ‘ಕರಿಯ’ ಎನ್ನುವುದು ಒಬ್ಬ ವ್ಯಕ್ತಿಯನ್ನು ಸೂಚಿಸಿದಂತಾಗುತ್ತದೆಯಲ್ಲವೇ? ಆನುಕೂಲ್ಯದ ದೃಷ್ಟಿಯಿಂದ ಉಚ್ಚಾರಣೆಯನ್ನು ‘ಕರೀಕಂಬಳಿ’ ಎಂದಾಗಿಸಿಕೊಂಡು ಕಂಬಳಿಯನ್ನು ಸೂಚಿಸುತ್ತೇವೆ. ‘ಕರಿಯ’ ಎಂದು ಬಿಡಿಸಿ ಹೇಳಿ ವಿರಾಮವನ್ನು ಅಳವಡಿಸುವುದರಿಂದ ವ್ಯಕ್ತಿಯನ್ನು ಸೂಚಿಸುತ್ತೇವೆ.

ಭಾಷೆಯ ಮೂಲಕ ವ್ಯಕ್ತಪಡಿಸಲಾಗುವ ಭಾವತೀವ್ರತೆಗಳ ಮಾಧುರ್ಯ (ನಾದ) ಸ್ವರೂಪ (elodic pattern) ಸಮಾನ ಪ್ರಾದೇಶಿಕತೆಯಲ್ಲಿ ಸಾಮ್ಯತೆಗಳನ್ನು ಹೊಂದಿರುತ್ತದೆ ಎನ್ನುವುದು ಇವಾನ್ ಫೊನ್ಯಾಗಿ ಮತ್ತು ಕ್ಲಾರಾ ಮ್ಯಾಗ್‌ಡಿಕ್ಸ್ ಅವರ ಕಾಣ್ಕೆ (van Fonagy and Klara Magdics, Emotional Patterns in Intonation and Music’, Intonation.ed.Dight Bolinger, Ringwood Victoria, Penguin, 1972, pp.286–-312). ಈ ಪ್ರಯೋಗದಲ್ಲಿ ಅವರು ಹಂಗೆರಿಯನ್, ಜರ್ಮನ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳ ಮಾತಿನ ಶ್ರುತಿಗಳ ಬಾಹ್ಯ ಆಕಾರಗಳ (pitch contours) ಸಾಮ್ಯ-ವೈರುಧ್ಯಗಳನ್ನು ಅಭ್ಯಾಸಮಾಡಿ, ಹತ್ತು ವಿವಿಧ ಭಾವಗಳ ಮಾಧುರ್ಯ ಮಾದರಿಗಳನ್ನು (melodic patterns) ನಿರ್ಧರಿಸಿದ್ದಾರೆ.

ಇವುಗಳನ್ನು ಸಂಗೀತದ ಭಾವಗರ್ಭಿತ ಚಲನೆ (musical gesture) ಗಳಿಗೆ ಸಮನ್ವಯ ಮಾಡಿದ್ದಾರೆ. ಉದಾಹರಣೆಗೆ;
ಸಂತೋಷ: ವಿಸ್ತೃತವಾದ ಶ್ರುತಿಸ್ಥಾಯಿ, ಲಯಬದ್ಧವಲ್ಲದ ಸ್ಥಳಗಳಲ್ಲಿನ ಅಕ್ಷರಗಳ ಮೇಲಿನ ಒತ್ತು (ಘಾತ), ವೇಗವಾಗಿ ಮೇಲೇಳುವ ಸ್ವರ ತಕ್ಷಣವೇ ಸ್ವಲ್ಪ ಕೆಳಗಿಳಿಯುವ ಗುಣ.

ಮಾರ್ದವ: ನುಡಿಯ ಅಂತ್ಯದಲ್ಲಿ ಸ್ವಲ್ಪ ಕೆಳಗಿಳಿಯುವ ತಾರಸ್ಥಾಯಿಯ ಶ್ರುತಿ, ಅನುನಾಸಿಕ, ಓಷ್ಠ್ಯ ವರ್ಣಗಳು.
ಕೋಪ: ನುಡಿಯ ಪ್ರಾರಂಭದಲ್ಲಿ ಧ್ವನಿಯ ದೊಡ್ಡ ನೆಗೆತ, ಅಸಮರ್ಪಕ ಉಚ್ಚಾರಣೆ
ಆಶ್ಚರ್ಯ: ನುಡಿಯ ಪ್ರಾರಂಭದಲ್ಲಿ ಘಾತ, ಮೇಲೆ-ಕೆಳಗೆ ಓಲಾಡುವ ನಾದ, ನಿಯಂತ್ರಿಯ ಲಯ ಮತ್ತು ಉಸಿರು ಸಹಿತವಾದ ಉಚ್ಚಾರಣೆ - ಇತ್ಯಾದಿ.

ಜೊಹಾನ್ ಸಂಡ್‌ಬರ್ಗ್, ವ್ಯಕ್ತಿಯೊಬ್ಬನ ಭಾವನಾತ್ಮಕ ಸ್ಥಿತಿಯನ್ನು ಗುರುತಿಸಲು ಅವನ ಭಾಷೆಯನ್ನಾಗಲೀ ಅಥವಾ ಸಂಸ್ಕೃತಿಯನ್ನಾಗಲೀ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿಲ್ಲ; ವ್ಯಕ್ತಿಯ ಭಾವನೆಯನ್ನು ಉಸಿರಾಟದ ರೀತಿ, ಶಬ್ದದ ಶಕ್ತಿ, ಸ್ಥಾಯಿ ಇವುಗಳನ್ನು ಗಮನಿಸಿಯೇ ತಿಳಿಯಬಹುದು ಎನ್ನುತ್ತಾರೆ (Johan Sundberg, ‘Speech, Song and Emotions’, ‘Music, Mind and Brian’ Ed.Manfred Clynes, New York, Plenum Press, 1982, p.138.),  ಅವರು ಪಟ್ಟಿ ಮಾಡುವ ಭಾವ ಸ್ಥಿತಿಗಳಲ್ಲಿನ ಮಾತಿನ ಗುಣಗಳು ಹೀಗಿರುತ್ತವೆ:

1. ಕೋಪ: ತಟಸ್ಥ ನುಡಿಯ ಸಾಮಾನ್ಯ ಮಟ್ಟಕ್ಕಿಂತಲೂ ಸುಮಾರು ಅರ್ಧ ಸಪ್ತಕದಷ್ಟು ಹೆಚ್ಚಿನ ಸ್ಥಾಯಿ. ಕೆಲವು ವರ್ಣಗಳು ಅತಿ ಹೆಚ್ಚಿನ ಘಾತದೊಂದಿಗೆ ಉಚ್ಚರಿಸಲ್ಪಡುತ್ತವೆ. ಉಚ್ಚಾರಣೆ ಅತಿ ವಿಶಿಷ್ಟವಾಗಿರುತ್ತದೆ.
2. ಭಯ: ಕೋಪದ ಸ್ಥಿತಿಗೆ ಹೋಲಿಸಿದರೆ ಕಡಿಮೆ ಎನ್ನಬಹುದಾದ ಸ್ಥಾಯಿ; ಇದ್ದಕ್ಕಿದ್ದಂತೆ ಏರುವ, ಅಸ್ತವ್ಯಸ್ತ ಧ್ವನಿ; ತಟಸ್ಥ ಸ್ಥಿತಿಗಿಂತ ಹೆಚ್ಚು ನಿಷ್ಕೃಷ್ಟವಾದ ಉಚ್ಚಾರಣೆ.
3. ದುಃಖ: ಧ್ವನಿಯಲ್ಲಿನ ಅತಿ ಕಡಿಮೆ ಏರಿಳಿತ, ಸ್ವರ, ವ್ಯಂಜನ, ನಿಶ್ಶಬ್ದಗಳು ದೀರ್ಘವಾಗಿರುತ್ತವೆ; ನಿಧಾನವಾದ ಉಚ್ಚಾರಣೆ; ಕರ್ಕಶ ಛಾಯೆಯ ಧ್ವನಿ; ಕಂಪನಯುಕ್ತ ಅಸ್ತವ್ಯಸ್ತ ಧ್ವನಿ, ನುಡಿಯ ಅಂತ್ಯದಲ್ಲಿ ಏಕತಾನವಾಗಿ ಇಳಿಯುವ ಸ್ಥಾಯಿ.
4. ತಟಸ್ಥ: ಮೇಲೆ ಹೇಳಿದ ಎಲ್ಲ ಸ್ಥಿತಿಗಳಿಗಿಂತ ಸಾಮಾನ್ಯವಾಗಿ ವೇಗವಾಗಿರುವ ಮಾತು. ಸ್ಪಷ್ಟ ಸ್ವರಗಳು ಹಾಗೂ ಆಗೀಗ ಸ್ವಲ್ಪಮಟ್ಟಿಗಿನ ಅಸ್ಪಷ್ಟವಾದ ವ್ಯಂಜನಗಳ ಉಚ್ಚಾರಣೆ; ಕಂಠದ ಮೇಲಿನ ಉತ್ತಮ ಪ್ರಭುತ್ವ..

ಈ ವಿವರಣೆಗಳನ್ನು ಓದಿದ ಮೇಲೆ ನಾವು ಮಾತನಾಡುವಾಗಲೆಲ್ಲ ಕೇವಲ ಮಾತನಾಡುತ್ತಿದ್ದೇವೆಯೇ ಅಥವಾ ನಮ್ಮ ಭಾವಸ್ಥಿತಿಗೆ ಅನುಗುಣವಾಗಿ ವೈವಿಧ್ಯಮಯ ಸ್ವರ ವಿನ್ಯಾಸಗಳನ್ನು ಮಾಡುತ್ತಿದ್ದೇವೆಯೇ ಎನ್ನುವುದನ್ನು ಒಮ್ಮೆ ಯೋಚಿಸುವಂತಾಗುತ್ತದೆ. ಇಲ್ಲಿನ ವಿವರಣೆಗಳನ್ನು ನಮ್ಮ ನಿತ್ಯದ ಮಾತನಾಡುವ ರೂಢಿಯೊಂದಿಗೆ ಹೊಂದಿಸಿ ನೋಡಿಕೊಂಡಾಗ ಮಾತು, ಕೇವಲ ಸದ್ದು ಅಥವಾ ಉಚ್ಚಾರಣೆಯಷ್ಟೇ ಅಲ್ಲದೆ, ನಮ್ಮ ಭಾವಸ್ಥಿತಿಗಳ ಪ್ರದರ್ಶನವೂ ಹೌದು ಎನ್ನುವುದು ಮನದಟ್ಟಾಗುತ್ತದೆ.

ಇದನ್ನೇ ಸ್ವಲ್ಪ ಉತ್ಪ್ರೇಕ್ಷಿತವಾಗಿಸಿದರೆ ನಮ್ಮ ಮಾತು ನಾಟಕೀಯವಾಗಿದೆ ಎಂದು ಇತರರು ಭಾವಿಸುವಂತಾಗುತ್ತದೆ.  ನಾಟಕವೆಂದರೆ ಸಹಜತೆಯನ್ನು ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವ ಮೂಲಕ ಯಶಸ್ವಿಯಾಗಿ ಸಂದೇಶದ ಸಂವಹನ ಮಾಡುವ ಕಲೆ. ಮಾತು ವಾಚಿಕಾಭಿನಯ.

ಜನರು ಮಾತನಾಡುವ ವಿವಿಧ ಸ್ವರ ವಿನ್ಯಾಸಗಳನ್ನು ಹಿಡಿದು, ಸಂದರ್ಭದೊಂದಿಗೆ ಸಮನ್ವಯಗೊಳಿಸಿ ಅವರ ಸ್ವಭಾವಗಳನ್ನು ನಿರ್ದಿಷ್ಟವಾಗಿ ಹೆಸರಿಸುವ ಪ್ರಯತ್ನಗಳನ್ನು ನಾವೆಲ್ಲ ಮಾಡುತ್ತಲೇ ಇರುತ್ತೇವೆ. ‘ನಿಷ್ಠುರವಾದಿ’, ‘ನರಿಬುದ್ಧಿಯವನು’, ‘ಒರಟ’, ‘ಬಿನ್ನಾಣಗಿತ್ತಿ’, ‘ಜಗಳಗಂಟ’, ‘ಸಾಧುಸ್ವಭಾವದವನು’, ‘ಪುಕ್ಕಲ’, ‘ನೀತಿವಂತ’, ‘ಸ್ನೇಹಜೀವಿ’ ಇತ್ಯಾದಿ, ಇತ್ಯಾದಿ. ಭಾಷೆ ಒಂದೇ ಆದರೂ, ಮಾತಿನಲ್ಲಿನ ಸ್ವರವಿನ್ಯಾಸದಿಂದ ಆಯಾ ವ್ಯಕ್ತಿಯ ಸಹಜ ವ್ಯಕ್ತಿತ್ವದ ಒಂದು ಪಾರ್ಶ್ವನೋಟ ಲಭ್ಯವಾಗುವುದಂತೂ ಸತ್ಯ.

ಮುಂದಿನ ವಾರ: (ಧ್ವನಿಯ ಯೋಗಕ್ಷೇಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT