ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಭರವಸೆ ಮಾಣಿಕಾ ಬಾತ್ರಾ

ಟೇಬಲ್‌ ಟೆನಿಸ್‌
Last Updated 17 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಭಾರತದ ಮಟ್ಟಿಗೆ ಮಹಿಳೆಯರ ಟೇಬಲ್‌ ಟೆನಿಸ್‌ನಲ್ಲಿ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಮಾಣಿಕಾ ಬಾತ್ರಾ. ದೆಹಲಿಯ ಈ ಆಟಗಾರ್ತಿ ಹೋದ ವಾರ ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್‌ ಅರ್ಹತಾ ಟೂರ್ನಿಯಲ್ಲಿ ಪದಕ ಗೆಲ್ಲುವ ಮೂಲಕ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡು ಹೊಸ ಭರವಸೆ ಮೂಡಿಸಿದ್ದಾರೆ.

ಮಾಣಿಕಾ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪೂಜಾ ಸಹಸ್ರಬುದ್ಧೆ ಎದುರು ಸೋಲು ಕಂಡರೂ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಶಾಮಿನಿ ಹಾಗೂ ಮೌಮಾ ದಾಸ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.  ಮಾಣಿಕಾ ಅವರೊಂದಿಗೆ ಸೌಮ್ಯಜಿತ್‌ ಘೋಷ್‌ ಕೂಡ ಒಲಿಂಪಿಕ್ ಅರ್ಹತೆ ಸಾಧಿಸಿದ್ದಾರೆ.

20 ವರ್ಷದ ಮಾಣಿಕಾ ತನ್ನ ಐದನೇ ವಯಸ್ಸಿನಲ್ಲೇ ಟೇಬಲ್‌ ಟೆನಿಸ್‌ ಆಡಲು ಪ್ರಾರಂಭಿಸಿದ್ದರು. ‘ನಾನು ಹುಟ್ಟುವುದಕ್ಕಿಂತ ಮೊದಲೇ ನನ್ನ ಅಕ್ಕ ಟೇಬಲ್ ಟೆನಿಸ್‌ ಆಟದಲ್ಲಿ ಪಳಗಿದ್ದಳು. ಅವಳೇ ನನಗೆ ಸ್ಫೂರ್ತಿ’ ಎಂದು ಬಾತ್ರಾ ಇತ್ತೀಚೆಗೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಚಿಲಿ ಓಪನ್‌ ಐಟಿಟಿಎಫ್‌ ಟೂರ್ನಿಯ 21 ವರ್ಷದೊಳಗಿನವರ ವಿಭಾಗದಲ್ಲಿ ಮಾಣಿಕಾ ಬೆಳ್ಳಿ ಗೆದ್ದುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಮಾಣಿಕಾ ತಮಗಿಂತ ಮೇಲಿನ ರ‍್ಯಾಂಕಿಂಗ್‌ ಸ್ಥಾನದಲ್ಲಿರುವ (ವಿಶ್ವ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನ) ಜಪಾನ್‌ನ ಕೌಸುಮಿ ಇಶಿಕಾವಾ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದ್ದು ಹೆಚ್ಚು ಸುದ್ದಿಯಾಗಿತ್ತು.

ಫೈನಲ್‌ನಲ್ಲಿ ಜಪಾನ್‌ನ ಮೊರಿಜೊನೊ ಮಿಸಾಕಿ ಎದುರು ನಿರಾಸೆ ಕಂಡಿದ್ದರು. 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಮಾಣಿಕಾ 2016ರ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಹಾಗೂ ಎರಡು ಕಂಚು ಗೆದ್ದು ಗಮನ ಸೆಳೆದರು.

ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ 12ನೇ ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದುಕೊಂಡಿದ್ದು ಇವರ ಅಮೋಘ ಸಾಧನೆಯಾಗಿದೆ. ಇದೀಗ ಮಾಣಿಕಾ ಒಲಿಂಪಿಕ್‌ ಅರ್ಹತೆ ಸಾಧಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. 18 ವರ್ಷದೊಳಗಿನವರ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಬಾತ್ರಾ 37ನೇ ಸ್ಥಾನದಲ್ಲಿದ್ದಾರೆ. 21 ವರ್ಷದೊಳಗಿನವರ ವಿಭಾಗದಲ್ಲಿ 77ನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವ ಜೂನಿಯರ್‌ ರ‍್ಯಾಂಕಿಂಗ್‌ನಲ್ಲಿ ಮಾಣಿಕಾ 100ರೊಳಗಿನ ಸ್ಥಾನ ಪಡೆದ ಏಕೈಕ ಭಾರತದ ಆಟಗಾರ್ತಿ ಎನಿಸಿದ್ದಾರೆ. ಜೂನಿಯರ್‌ ವಿಭಾಗದಲ್ಲಿ ಅವರು  ತಮ್ಮ ಅಮೋಘ ಸಾಮರ್ಥ್ಯದ ಆಟದ ಮೂಲಕ ಅಮೆರಿಕ ಓಪನ್‌, ಸ್ಪೇನ್‌ ಹಾಗೂ ಫ್ರೆಂಚ್ ಜೂನಿಯರ್ ಓಪನ್‌ಗಳಲ್ಲಿ ಫೈನಲ್‌ ತಲುಪಿದ್ದರು.

ಇತ್ತೀಚೆಗೆ ನಡೆದ ಏಷ್ಯನ್‌ ಜೂನಿಯರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಮಾಣಿಕಾ ಅವರ ಉತ್ತಮ ಆಟದಿಂದಾಗಿ ಭಾರತ ತಂಡ ಐದನೇ ಸ್ಥಾನ ಪಡೆದುಕೊಂಡಿತ್ತು. ನವೆಂಬರ್‌ನಲ್ಲಿ ಬಹರೇನ್‌ನಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ನಡೆಯಲಿದ್ದು ಇಲ್ಲಿ ಮಾಣಿಕಾ ಭಾರತಕ್ಕೆ ಪದಕ ತಂದುಕೊಡುವ ಭರವಸೆ ಹೊಂದಿದ್ದಾರೆ.

‘ನಾನು ಒಮ್ಮೆ ಒಲಿಂಪಿಕ್ಸ್‌ ಅರ್ಹತೆ ಪಡೆದುಕೊಂಡರೆ ಖಂಡಿತವಾಗಿಯೂ ಪದಕ ಗೆದ್ದುಕೊಂಡೇ ಬರುತ್ತೇನೆ’ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಶ್ವಾಸದಿಂದ ಹೇಳಿಕೊಂಡಿದ್ದ  ಬಾತ್ರಾ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ವಿಭಾಗದಲ್ಲಿ ಭಾರತದ ಪ್ರಮುಖ ಭರವಸೆ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT