ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಯರ್ ಬುಕ್’ ಆಯ್ಕೆ ದ್ವಂದ್ವ

ಯಶಸ್ಸಿನತ್ತ
Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹೊಂದುತ್ತಿರುವ ವಿದ್ಯಾರ್ಥಿಗಳಲ್ಲಿ ಹೊಸ ವರ್ಷದ ಆಗಮನವೆಂದರೆ ಏನೋ ಉತ್ಸಾಹ. ಏಕೆಂದರೆ ಹೊಸ ವರ್ಷದ ಆಗಮನ ಹೊಸ ಆಸೆಗಳ ಚಿಗುರುವಿಕೆ ಒಂದಡೆಯಾದರೆ ಮಾರುಕಟ್ಟೆಗೆ ಆಗಮಿಸುವ ‘ವರ್ಷದ ಪ್ರಚಲಿತ ಘಟನೆಗಳ’ ಪುಸ್ತಕಗಳ ಮಹಾಪುರ ಇನ್ನೊಂದೆಡೆ.

ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್ ತಿಂಗಳುಗಳಲ್ಲೇ ಹಿಂದಿನ ವರ್ಷ ಜರುಗಿದ ಎಲ್ಲಾ ಘಟನೆಗಳನ್ನು ಕ್ರೋಢೀಕರಿಸಿ ದೊಡ್ಡ-ದೊಡ್ಡ ಹೊತ್ತಿಗೆಯ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡುವ ಪ್ರಕಾಶಕರ ದೊಡ್ಡ ದಂಡು ಇದೆ. ಈ ರೀತಿ ಮಾರುಕಟ್ಟೆಯಲ್ಲಿ ದೊರಕುವ ನೂರಾರು ‘ಇಯರ್ ಬುಕ್’ಗಳಲ್ಲಿ ಯಾವುದು ಒಳ್ಳೆಯದು, ಯಾವುದನ್ನು ಓದಬೇಕು ಎಂಬ ದ್ವಂದ್ವ ಕಾಡುವುದು ಸಹಜ. ಈ ರೀತಿಯ ದ್ವಂದ್ವಗಳನ್ನು ಹೋಗಲಾಡಿಸಲು ಒಂದು ಕಿರು ಪ್ರಯತ್ನವನ್ನು ಈ ಮೂಲಕ ಮಾಡೋಣ.

ಸಾಮಾನ್ಯವಾಗಿ ಯಾವುದೇ ಪ್ರಕಾಶಕರ ಪ್ರಚಲಿತ ಘಟನೆಗಳ ‘ಇಯರ್ ಬುಕ್’ ಅನ್ನು ತೆಗೆದುಕೊಂಡರೂ ಸಾವಿರ ಪುಟಗಳಿಗಿಂತ ಕಡಿಮೆ ಇರುವದಿಲ್ಲ. ಹಾಗಾದರೆ ಈ ರೀತಿಯ ಮಾಹಿತಿಯ ಮಹಾಪೂರದಲ್ಲಿ ನಾವು ಮೀನನ್ನು ಹಿಡಿಯುವದು ಹೇಗೆ ಎಂಬ ಕಲೆಯನ್ನು ಅರಿತುಕೊಳ್ಳಬೇಕು. ಯಾವುದನ್ನು ಓದಬೇಕು ಅನ್ನುವದಕ್ಕಿಂತ ಯಾವುದನ್ನು ಓದಬಾರದು ಎಂಬುದನ್ನು ತಿಳಿದುಕೊಳ್ಳುವುದೇ ಯಶಸ್ವಿ ಅಭ್ಯರ್ಥಿಯ ಗುಟ್ಟು ಎಂದು ಹೇಳಬಹುದು.

ಈ ಲೇಖನದಲ್ಲಿ ಜನವರಿ 2015ರಲ್ಲಿ ಘಟಿಸಿದ ಕೆಲವು ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಯಾವರೀತಿ ಓದಬೇಕು ಹಾಗೂ ನೋಟ್ಸ್‌ ಬರೆಯಬೇಕು ಎಂಬುದನ್ನು ವಿಶ್ಲೇಷಿಸಲಾಗಿದೆ. ನೇರವಾಗಿ ಮೀನನ್ನು ಹಿಡಿದು ತಿನ್ನಲು ಕೊಡುವ ಬದಲಿಗೆ ಮಹಾಪುರದಲ್ಲಿ ಮೀನು ಹಿಡಿಯುವ ಕಲೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬುದನ್ನು ವಿಶ್ಲೇಷಿಸಲಾಗಿದೆ. ಈ ಮುಂದಿನ ಕೆಲವು ಪ್ರಚಲಿತ ಘಟನೆಗಳು ದಿನಪತ್ರಿಕೆಗಳಿಂದ ಆಯ್ದ ಕೆಲವು ಪ್ರಚಲಿತ ಸುದ್ದಿಗಳಾಗಿವೆ.


ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್ ನಿವೃತ್ತಿ: 2009 ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಂಗಳಯಾನ ಮತ್ತು ಮಾನವ ಸಹಿತ ಗಗನ ನೌಕೆಯ ಜಿ.ಎಸ್‌ಎಲ್.ವಿ ಮಾರ್ಕ್‌ 3ಯಶಸ್ಸಿಗೆ ಪಾತ್ರರು. ಕೆ.ರಾಧಾಕೃಷ್ಣನ್ ಅವರು ಕೇರಳದ ತ್ರಿಶ್ಶೂರು ಜಿಲ್ಲೆಯ ಇರಿಂಜಲಕುಡ ಗ್ರಾಮದವರು. ಇವರು 1971ರಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಿಂದ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಇವರಿಗೆ 2014ರಲ್ಲಿ ಪದ್ಮ ಭೂಷಣ ಪ್ರಶಸ್ತಿ ದೊರಕಿದೆ.

ನ್ಯಾಯಾಂಗ ನೇಮಕ ಆಯೋಗಕ್ಕೆ ಅಂಕಿತ: ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಈಗಿರುವ ಕೊಲೆಜಿಯಂ ಬದಲಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NATIONAL JUDICIAL  APPOINTMENTS COMMISSION ) ಜಾರಿಗೆ ತರುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. 99ನೇ ಸಂವಿಧಾನದ ತಿದ್ದುಪಡಿ ಮೂಲಕ  (121 ನೇ ಸಂವಿಧಾನ ತಿದ್ದುಪಡಿ ಕರಡು ವಿಧೇಯಕ) ಈ ಮಸೂದೆಯನ್ನು ಜಾರಿಗೆ ತರಲು ಈ ವರೆಗೆ 16ರಾಜ್ಯಗಳು ಸಮ್ಮತಿ ಸೂಚಿಸಿವೆ.

ಈ ಆಯೋಗವು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನೂಳಗೊಂಡಿದೆ, ಇಬ್ಬರು  ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಹಾಗೂ ಇಬ್ಬರು ಪರಿಣತರನ್ನೂಳಗೊಂಡಿರುತ್ತದೆ. ಈ ಆಯೋಗವು ಸುಂಪ್ರೀಕೋರ್ಟ್‌ ಹಾಗೂ 24 ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಯನ್ನು ಮಾಡುತ್ತದೆ. ಈ ಘಟನೆಗೆ ಪೊರಕವಾಗಿ ಸಂವಿಧಾನದ ತಿದ್ದುಪಡಿ ಹಾಗೂ ಈ ವರೆಗೂ ಜಾರಿಗೆ ತಂದಿರುವ ಪ್ರಮುಖ ಸಂವಿಧಾನದ ತಿದ್ದುಪಡಿ ಕುರಿತು ಆಳವಾದ ಅಧ್ಯಯನ ಅವಶ್ಯಕ.

*22ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಬೆಂಗಳೂರಿನಲ್ಲಿ ನಡೆಯಿತು.

*ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರವಾಗಬೇಕೆಂಬ ಬೇಡಿಕೆಯನ್ನು ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ತಳ್ಳಿಹಾಕಲಾಯಿತು.

ಇದರಿಂದ ಅತೃಪ್ತರಾದ ಪ್ಯಾಲೆಸ್ಟೀನ್ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮೊರೆ ಹೋಗಿದೆ. ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲವು (international criminal court) ನೆದರ್‌ಲೆಂಡ್‌ನ ಹೇಗ್‌ ನಗರದಲ್ಲಿದ್ದು 121 ಸದಸ್ಯ ರಾಷ್ಟ್ರಗಳನ್ನೊಳಗೊಂಡದೆ.

ಈ ಘಟನೆಗೆ ಪೊರಕವಾಗಿ ಇಸ್ರೇಲ್, ಪ್ಯಾಲೆಸ್ಟೇನ್ ರಾಷ್ಟ್ರಗಳ ನಡುವೆ ತಲೆದೂರಿರುವ ಬಿಕ್ಕಟ್ಟು ವೆಸ್ಟ್ ಬ್ಯಾಂಕ್‌, ಗಾಜಾ ಸ್ಟ್ರಿಪ್ ಮುಂತಾದ ವಿವಾದಾತ್ಮಕ ಸ್ಥಳಗಳ ಮಾಹಿತಿ ಹಾಗೂ ಓಸ್ಲೊ ಒಪ್ಪಂದ, ‘ಇಂಟಿಫಿದ’ ಪದಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡುವುದು ಒಳಿತು.

ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: ಆರೂವರೆ ದಶಕಗಳ ಹಿಂದೆ ಅಂದರೆ 15 ಮಾರ್ಚ್ 1950ರಂದು ದೇಶದ ಪ್ರಥಮ ಪ್ರಾಧಾನಿ ಜವಾಹರ್‌ಲಾಲ್ ನೆಹರು ಅವರ ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗ (planning commission) ವನ್ನು ರದ್ದು ಪಡಿಸಿ ಅದರ ಬದಲಾಗಿ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. 11.2.2015 ರಂದು  ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ ( ನ್ಯಾಷನಲ್ ಇನ್‌ಸ್ಟಿಟ್ಯೂಷನ್‌ ಫಾರ್‌ ಟ್ರಾನ್ಸ್‌ರ್ಫಾರ್ಮಿಂಗ್ ಇಂಡಿಯಾ– NITI (Aayog) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು.

ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದ ಮೂರೇ ದಿನದಲ್ಲಿ ಅಜಯ್‌ ಚಿಬ್ಬರ್ ಎಂಬ ತಜ್ಞ  ಸಲ್ಲಿಸಿದ ವರದಿ ಆಧಾರದ ಮೇಲೆ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ನೀತಿ ಆಯೋಗದಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಉಳಿದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗೌರ್ನರ್‌, ಕೇಂದ್ರ ಸಂಪುಟ ದರ್ಜೆಯ ನಾಲ್ವರು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು ಸದಸ್ಯರಾಗಿರುತ್ತಾರೆ.

ಸದಸ್ಯರ ಪೈಕಿ ಕೆಲವರು ಪೂರ್ಣಾವಧಿ ಮತ್ತು ಅಲ್ಪಾವಧಿ ಸದಸ್ಯರು, ಕೇಂದ್ರ ಸಂಪುಟ ಸಚಿವರು ಪದನಿವಿತ್ತ (EX-OFFICIO) ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ ಸದಸ್ಯರಾಗಿರುತ್ತಾರೆ. ಆಯೋಗದಲ್ಲಿ ಉಪಾಧ್ಯಕ್ಷರು ಒಳಗೊಂಡಂತೆ ಕಾರ್ಯ ನಿರ್ವಹಣಾಧಿಕಾರಿ (CEO) ಎಂಬ ಹೊಸ ಹುದ್ದೆ ಸೃಷ್ಟಿಸಿದ್ದಾರೆ.

ನೀತಿ ಆಯೋಗದ ಈಗಿನ ಸದಸ್ಯರು
1. ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ
2. ಉಪಾಧ್ಯಕ್ಷರು: ಅರವಿಂದ ಪನಗರಿಯಾ
3. ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿಂಧುಶ್ರೀ ಕುಲ್ಲಾರ್
4. ಪದನಿಮಿತ್ತ ಸದಸ್ಯರು: ರಾಜನಾಥ ಸಿಂಗ್, ಅರುಣ್‌ ಜೇಟ್ಲಿ. ಸುರೇಶ್ ಪ್ರಭು, ರಾಧಾ ಮೋಹನ ಸಿಂಗ್
5. ಪೂರ್ಣಾವಧಿ ಸದಸ್ಯರು: ವಿವೇಕ್‌ ದೇವರಾಯ್, ವಿ.ಕೆ. ಸಾರಸ್ವತ್
6. ಆಡಳಿತ ಮಂಡಳಿ: ಎಲ್ಲ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‌ಗಳು
*ನೀತಿ ಆಯೋಗದ ವಿಶೇಷ ಆಹ್ವಾನಿತ ಸದಸ್ಯರಾಗಿ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ ಚಂದ ಗೆಹ್ಲೋಟ್ ಆಯ್ಕೆಯಾಗಿದ್ದಾರೆ.

ಯೋಜನಾ ಆಯೋಗ ಹಾಗೂ ನೀತಿ ಆಯೋಗದ ಹೋಲಿಕೆಗಳು
*ನೀತಿ ಆಯೋಗವು ಕೇವಲ ಚಿಂತಕರ ಚಾವಡಿಯಂತೆ ಕೆಲಸ ಮಾಡುತ್ತದೆ. ರಾಜ್ಯಗಳಿಗೆ ಹಣಕಾಸಿನ ಹಂಚಿಕೆ ವಿಷಯವು ಹಣಕಾಸು ಸಚಿವರ ಪರಿಧಿಯಲ್ಲೆ ಇರುತ್ತದೆ. ಆದರೆ ಯೋಜನಾ ಆಯೋಗವು ರಾಜ್ಯಗಳಿಗೆ ನಿಧಿ ಹಂಚಿಕೆ ವಿಷಯದಲ್ಲೂ ಅಧಿಕಾರವನ್ನು ಹೊಂದಿತ್ತು.

*ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಯೋಜನೆ ಆಯೋಗದಲ್ಲಿದ್ದ ಸದಸ್ಯರ ಸಂಖ್ಯೆ  ಕಡಿಮೆ. ಈಗಿನ ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಎರಡು ಆದರೆ ಈ ಹಿಂದಿನ ಯೋಜನಾ ಆಯೋಗದಲ್ಲಿ 8 ಜನ ಪೂರ್ಣಾವಧಿ ಸದಸ್ಯರಿದ್ದರು.

*ನೀತಿ ಆಯೋಗದಲ್ಲಿ ರಾಜ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಯೋಜನಾ ಆಯೋಗದಲ್ಲಿ ರಾಜ್ಯಗಳು ಕೇವಲ ರಾಷ್ಟ್ರೀಯ ಅಭಿವೃದ್ಧಿ ನಿಗಮ (national development council) ದ ಭಾಗವಹಿಸುವುದಕ್ಕೆ  ಮಾತ್ರ ಸೀಮಿತವಾಗಿತ್ತು.

*ನೀತಿ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿರುತ್ತಾರೆ. ಆದರೆ ಯೋಜನಾ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿಲ್ಲ

*ನೀತಿ ಆಯೋಗದಲ್ಲಿ ಹೊಸದಾಗಿ ಸೃಷ್ಟಿಸಲಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನೊಳಗೊಂಡಂತೆ. ಉಪಾಧ್ಯಕ್ಷರು ಐದು ಜನ ಪೂರ್ಣಾವಧಿ ಮತ್ತು ಇಬ್ಬರು ಅಲ್ಪಾವಧಿ ಸದಸ್ಯರು, ನಾಲ್ಕು ಜನ ಕ್ಯಾಬಿನೆಟ್ ದರ್ಜೆಯ ಸಚಿವರು ( ಪದನಿಮಿತ್ತ) ಇರುತ್ತಾರೆ. ಆದರೆ ಯೋಜನಾ ಆಯೋಗವು ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಹಾಗೂ ಕೆಲವು ಪೂರ್ಣಾವಧಿ ಸದಸ್ಯರನ್ನೊಳಗೊಂಡಿತ್ತು.

(ಮುಂದಿನ ವಾರ ಇನ್ನಷ್ಟು ಘಟನೆಗಳು)
ಮಾಹಿತಿಗೆ: drkaginelli@gmail.com

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT