ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡದಲ್ಲಿ ಭಾರತ ತಂಡ

ನ್ಯೂಜಿಲೆಂಡ್‌ ಎದುರಿನ ಕೊನೆಯ ಟ್ವೆಂಟಿ–20 ಪಂದ್ಯ
Last Updated 14 ಜುಲೈ 2015, 19:53 IST
ಅಕ್ಷರ ಗಾತ್ರ

ಬೆಂಗಳೂರು: ಈಗಾಗಲೇ ಸರಣಿ ಹಿನ್ನಡೆ ಅನುಭವಿಸಿರುವ ಭಾರತ ವನಿತೆಯರ ತಂಡ ಬುಧವಾರ ನಡೆಯಲಿರುವ ಅಂತಿಮ ಹಾಗೂ ಕೊನೆಯ ಟ್ವೆಂಟಿ–20 ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ನ್ಯೂಜಿಲೆಂಡ್‌ ಎದುರಿನ ಟ್ವೆಂಟಿ–20 ಸರಣಿಯಲ್ಲಿ 2–0ರಲ್ಲಿ ಹಿನ್ನಡೆ ಹೊಂದಿರುವ ಭಾರತ ತಂಡ ಅಂತಿಮ ಪಂದ್ಯದಲ್ಲಿ ಗೆದ್ದು ಮುಖಭಂಗ ತಪ್ಪಿಸಿಕೊಳ್ಳುವ ಗುರಿ ಇಟ್ಟುಕೊಂಡು ಕಣಕ್ಕಿಳಿಯಲಿದೆ.

ಆತಿಥೇಯ ತಂಡಕ್ಕೆ ಉತ್ತಮ ಆರಂಭ ದೊರೆಯುತ್ತಿಲ್ಲ. ಹಿಂದಿನ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್‌ (01), ಲತಿಕಾ ಕುಮಾರಿ (4) ವೈಫಲ್ಯ ಅನುಭವಿಸಿದ್ದಾರೆ.

ಕರ್ನಾಟಕದ ವಿ.ಆರ್‌. ವನಿತಾ (41), ವೇದಾ ಕೃಷ್ಣಮೂರ್ತಿ (29) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (30) ಚೇತರಿಕೆಯ ಆಟ ಆಡಬಲ್ಲರು. ಆದರೆ ವೇಗವಾಗಿ ರನ್‌ ಕಲೆಹಾಕಲು ಸಾಧ್ಯವಾಗುತ್ತಿಲ್ಲ.

ಆರಂಭದಲ್ಲೇ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕುವ ಭಾರತ ತಂಡಕ್ಕೆ ಕೊನೆಯ ಓವರ್‌ಗಳಲ್ಲೂ ರನ್‌ ಹೊಳೆ ಹರಿಸಲು ಸಾಧ್ಯವಾಗುತ್ತಿಲ್ಲ.

ಭಾರತ ಆರಂಭದಿಂದಲೂ ಚುರುಕಿನ ಫೀಲ್ಡಿಂಗ್‌ ಕೊರತೆ ಎದುರಿಸುತ್ತಿದೆ. ಕ್ಯಾಚ್‌ಗಳನ್ನು ಕೈಚೆಲ್ಲಿ ಕಿವೀಸ್‌ ಆಟಗಾರರಿಗೆ ಜೀವದಾನ ನೀಡುತ್ತಿರುವುದು ಪ್ರಮುಖ ತೊಡಕಾಗಿದೆ. ಬೌಂಡರಿಗಳನ್ನು ಬಿಟ್ಟುಕೊಡುವುದರಿಂದ ತಂಡದ ಬೌಲಿಂಗ್‌ ಶಕ್ತಿಯ ಮೇಲೆ ಪೆಟ್ಟು ಬೀಳುತ್ತಿದೆ.

ಬೌಲಿಂಗ್‌ನಲ್ಲೂ ಲೇನ್‌ ಮತ್ತು ಲೆನ್ತ್‌ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಆಟಗಾರರು ಫಿಟೆನೆಸ್‌ ಸಮಸ್ಯೆ ಎದುರಿಸುತ್ತಿರುವುದೇ ಇದಕ್ಕೆ ಕಾರಣ. ಜೂಲನ್‌ ಗೋಸ್ವಾಮಿ, ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಅವರನ್ನು ಹೊರತುಪಡಿಸಿದರೆ ಸ್ಥಿರವಾಗಿ ಆಡಲು ಬೌಲರ್‌ಗಳು ವಿಫಲರಾಗಿದ್ದಾರೆ.

ಏಕದಿನ ಪಂದ್ಯದಲ್ಲಿದ್ದ ಆಟಗಾರರನ್ನು ಕೈಬಿಟ್ಟು ಕೆಲವು ಮಹತ್ವದ ಬದಲಾವಣೆ ಮಾಡಲಾಗಿತ್ತು. ಇದು ತಂಡದ ಮೇಲೆ ಪರಿಣಾಮ ಬೀರಿದೆ. ಯುವ ಆಟಗಾರ್ತಿಯರಲ್ಲಿ ನ್ಯೂಜಿಲೆಂಡ್‌ ದಾಳಿ ಎದುರಿಸುವ ನೈಪುಣ್ಯತೆ ಕಾಣುತ್ತಿಲ್ಲ.

ಕ್ಲೀನ್‌ ಸ್ವೀಪ್‌ ಮೇಲೆ ಕಿವೀಸ್‌ ಕಣ್ಣು: ಈಗಾಗಲೇ ಸರಣಿ ಕೈವಶ ಮಾಡಿಕೊಂಡಿರುವ ನ್ಯೂಜಿಲೆಂಡ್‌ ವನಿತೆಯರು ಒತ್ತಡ ಮುಕ್ತರಾಗಿದ್ದಾರೆ. ಆದ್ದರಿಂದ ಅವರಿಗೆ ಕ್ಲೀನ್‌ ಸ್ವೀಪ್‌ ಸಾಧನೆ ಕಷ್ಟವೇನಲ್ಲ. ಭಾರತದ ಯುವ ಆಟಗಾರ್ತಿಯರ ದೌರ್ಬಲ್ಯಗಳನ್ನು ಬಳಸಿಕೊಳ್ಳಲು ಕಿವೀಸ್‌ ಆಟಗಾರ್ತಿಯರು ಸಜ್ಜಾಗಿದ್ದಾರೆ.

ಪ್ರವಾಸಿ ತಂಡ ಟ್ವೆಂಟಿ–20 ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮವಾಗಿ ಆಡಿದೆ. ವೇಗವಾಗಿ ರನ್‌ ಕಲೆಹಾಕಲು ಒತ್ತು ನೀಡುತ್ತಿದೆ.

ನಾಯಕಿ ಸೂಸಿ ಬೇಟ್ಸ್‌ ವೈಫಲ್ಯ ಹೊಂದಿದ್ದರೂ, ಸೋಫಿ ಡಿವೈನ್‌ ಮೊದಲ ಪಂದ್ಯದಲ್ಲಿ ಹಾಗೂ ರಾಚೆಲ್‌ ಪ್ರೀಸ್ಟ್‌ ಹಿಂದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಇವರು ಕಿವೀಸ್ ತಂಡದ ಪ್ರಮುಖ ಬ್ಯಾಟಿಂಗ್‌ ಶಕ್ತಿ ಎನಿಸಿದ್ದಾರೆ.

ಬೌಲಿಂಗ್‌ನಲ್ಲಿ ಲೀ ಕ್ಯಾಸ್ಪರೆಕ್‌, ಕೇಟ್ ಬ್ರಾಡ್‌ಮೋರ್‌ ಭಾರತವನ್ನು ಒತ್ತಡಕ್ಕೆ ಸಿಕ್ಕಿಸುವ ಸಾಮರ್ಥ್ಯ ಹೊಂದಿದ್ದಾರೆ.
ಎರಡೂ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್‌ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಇದು ಕಿವೀಸ್‌ ತಂಡಕ್ಕೆ ವರದಾನವಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಫಿ ಡಿವೈನ್‌ ಕೂಡ ಒಪ್ಪಿಕೊಂಡಿದ್ದರು.

ಅಂತಿಮ ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದರೆ ಬದಲಾವಣೆಯ ಮೂಲಕ ಉತ್ತಮ ಆಟ ಆಡುವ ಭರವಸೆ ಹೊಂದಿದೆ.
ನ್ಯೂಜಿಲೆಂಡ್‌ ತಂಡ ಕೂಡ ಫೀಲ್ಡಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅಷ್ಟೇನು ಪರಿಣಾಮಕಾರಿಯಾಗಿ ಆಡಿಲ್ಲ.

ಈ ದೌರ್ಬಲ್ಯಗಳನ್ನು ಬಳಸಿಕೊಂಡು ಭಾರತ ತಂಡ ಅಂತಿಮ ಪಂದ್ಯದಲ್ಲಿ ಮುಖಭಂಗ ತಪ್ಪಿಸಿಕೊಳ್ಳುವುದೇ ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT