ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌ ಎದುರು ಭಾರತ ನೆಚ್ಚಿನ ತಂಡ

ಕಬಡ್ಡಿ: ಕೊರಿಯ, ಇರಾನ್‌ ಸಮಬಲದ ಪೈಪೋಟಿ ನಿರೀಕ್ಷೆ
Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌:  ಭಾರತ ತಂಡ ವಿಶ್ವಕಪ್‌ ಕಬಡ್ಡಿಯ ಫೈನಲ್‌ ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ. ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ಎದುರು ಆತಿಥೇಯ ತಂಡಕ್ಕೆ ಗೆಲುವು ನಿರೀಕ್ಷಿತ.

ಪ್ರೊ ಕಬಡ್ಡಿ ಸೇರಿದಂತೆ ಹತ್ತು ಹಲವು ಟೂರ್ನಿಗಳಲ್ಲಿ ನಿರಂತರವಾಗಿ ಆಡುತ್ತಿರುವ ಭಾರತ ತಂಡದಲ್ಲಿರುವ ಆಟಗಾರರು ಲೀಗ್‌ನಲ್ಲಿ ಆಡಿದ ಪಂದ್ಯಗಳಲ್ಲಿ ರೈಡಿಂಗ್‌, ರಕ್ಷಣಾ ತಂತ್ರಗಳಲ್ಲಿ ತಾನು ಎಲ್ಲರಿಗಿಂತ ಪ್ರಬಲ ಎಂದು ಈಗಾಗಲೇ ಸಾಬೀತು ಪಡಿಸಿದ್ದಾರೆ. ಇದೇ ಮೊದಲ ಸಲ ವಿಶ್ವಕಪ್‌ ಸೆಮಿಫೈನಲ್‌ ತಲುಪಿರುವ ಥಾಯ್ಲೆಂಡ್‌ ತಂಡದ ಆಟಗಾರರು ಎಲ್ಲಾ ವಿಭಾಗಗಳಲ್ಲೂ ಈಗಾಗಲೇ ಅತ್ಯುತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಭಾರತದ ಅನುಭವಿ ‘ಎತ್ತರ’ದ ಆಟಗಾರರ ಎದುರು ಗೆಲ್ಲುವುದು ಸುಲಭ ಸಾಧ್ಯವಲ್ಲ.

ಥಾಯ್ಲೆಂಡ್‌ ತಂಡದಲ್ಲಿರುವ ಕೊಮ್ಸಾನ್‌ ತೊಂಗಾನ್‌ ಅತ್ಯುತ್ತಮ ಆಟಗಾರ. ಆತನನ್ನು ಲೀಗ್‌ ಪಂದ್ಯದಲ್ಲಿ ಜಪಾನ್‌ ಆಟಗಾರರು ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರೂ, ಹತ್ತು ಪಾಯಿಂಟ್ಸ್‌ ಗಳಿಸಿ ಥಾಯ್ಲೆಂಡ್‌ ಸೆಮಿಫೈನಲ್‌ ಪ್ರವೇಶಿಸಲು ಮುಖ್ಯ ರೂವಾರಿಯಾದರು. ಶುಕ್ರವಾರ ನಡೆಯಲಿರುವ ನಾಲ್ಕರ ಘಟ್ಟದಲ್ಲಿ ತೊಂಗಾನ್‌ನನ್ನು ನಿಯಂತ್ರಿಸುವಲ್ಲಿ ಭಾರತ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಗುರುವಾರ ಪತ್ರಕರ್ತರ ಜತೆ ಮಾತನಾಡಿದ ಆತಿಥೇಯ ತಂಡದ ನಾಯಕ ಅನೂಪ್‌ ಕುಮಾರ್‌ ‘ಇಲ್ಲಿ ಯಾರು ಪ್ರಬಲ ಅಥವಾ ದುರ್ಬಲ ಎನ್ನುವುದು ಪ್ರಶ್ನೆಯೇ ಅಲ್ಲ. ಏಕೆಂದರೆ ಬಲಶಾಲಿಗಳಾಗಿರುವವರು ಮಾತ್ರ ಸೆಮಿಫೈನಲ್‌ ತಲುಪುವುದು ತಾನೆ. ಹೀಗಾಗಿ ನಾವು ತಪ್ಪುಗಳನ್ನು ಮಾಡದಿದ್ದರಾಯ್ತು. ಗೆದ್ದೇ ಗೆಲ್ಲುತ್ತೇವೆ’ ಎಂದರು.

ಈ ಕೂಟದ ಮೊದಲ ಪಂದ್ಯದಲ್ಲಿಯೇ ಕೊರಿಯ ಎದುರು ಸೋತ ಬಗ್ಗೆ ಹೇಳಿದ ಅವರು ‘ಕೊನೆಯ ಕ್ಷಣಗಳಲ್ಲಿ ಎಸಗಿದ ತಪ್ಪುಗಳಿಗೆ ನಾವು ಸೋಲಿನಂತಹ ದಂಡ ತೆತ್ತಿದ್ದೇವೆ. ನಂತರದ ಪಂದ್ಯಗಳಲ್ಲಿ ನಮ್ಮ ದೌರ್ಬಲ್ಯವೇನೆಂದು ಅರಿತುಕೊಂಡು ಅದನ್ನು ಸುಧಾರಿಸಿಕೊಂಡಿದ್ದೇವೆ. ಈ ಕೂಟದಲ್ಲಿ ನಮ್ಮದೇ ಪ್ರಬಲ ತಂಡ. ಅಜಯ ಠಾಕೂರ್‌, ಸುರೇಂದರ್‌ ನಡ ಸೇರಿದಂತೆ ಎಲ್ಲರೂ ಒಬ್ಬರಿಗಿಂತ ಒಬ್ಬರು ಅತ್ಯುತ್ತಮ ಆಟಗಾರರು. ತಪ್ಪುಗಳನ್ನು ಎಸಗದಿದ್ದರೆ, ಗೆಲುವು ನಮ್ಮದೇ’ ಎಂದರು.

ಥಾಯ್ಲೆಂಡ್‌ ತಂಡದ ನಾಯಕ ಕೊಮ್ಸಾನ್‌ ಮಾತನಾಡಿ ‘ಜಪಾನ್‌ ಅತ್ಯುತ್ತಮ ತಂಡ. ಅವರ ಮೇಲೆ ಗೆದ್ದಿರುವುದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.  ಕಬಡ್ಡಿ ಲೋಕದ ತಾರೆಯಂತಿರುವ ಭಾರತ ತಂಡದ ವಿರುದ್ಧ ಆಡುವುದೇ ನಮಗೆ ಹೆಮ್ಮೆ ತಂದಿದೆ. ಸಹಜವಾಗಿಯೇ ಗೆಲ್ಲುವ ಗುರಿ ನಮಗಿದ್ದೇ ಇದೆ’ ಎಂದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಇರಾನ್‌ ಆಟಗಾರರು ಕೊರಿಯ ತಂಡದ ವಿರುದ್ಧ ಆಡಲಿದ್ದಾರೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಫೈನಲ್‌ ತಲುಪಿ ಕೇವಲ 2 ಪಾಯಿಂಟ್‌ಗಳಿಂದ ಚಿನ್ನ ಕಳೆದುಕೊಂಡಿರುವ ಇರಾನ್ ಇದೀಗ ಇಲ್ಲಿ ಗೆಲ್ಲಲು ಸಜ್ಜಾಗಿ ನಿಂತಿದೆ. ಇರಾನ್‌ ನಾಯಕ ಮೆರಾಜ್‌ ಷೇಕ್‌ ಮಾತನಾಡಿ ‘ನಾವು ಈಗಾಗಲೇ ಬಹಳಷ್ಟು ಕಬಡ್ಡಿ ಆಡಿದ್ದೇವೆ. ಹೊಸ ತಂತ್ರಗಳನ್ನು ಅಳವಡಿಸಿಕೊಂಡಿದ್ದೇವೆ.

ಕೊರಿಯವನ್ನು ಎದುರಿಸಲು ಪಡಿಪಾಟಲು ಪಡುವ ಅಗತ್ಯವೇ ಇಲ್ಲ’ ಎಂದಿದ್ದಾರೆ. ಹಿಂದಿನ ಪಂದ್ಯಗಳಲ್ಲಿ ಅತ್ಯಂತ ಹೊಂದಾಣಿಕೆಯ ಆಟದ ಮೂಲಕ ಎದುರಾಳಿಯನ್ನು ದಂಗುಬಡಿಸಿದ್ದ ಕೊರಿಯ ತಂಡ ಇರಾನ್‌ ಆಟಗಾರರಿಗೆ ಸುಲಭದ ತುತ್ತಂತೂ ಅಲ್ಲ.

ಕೊರಿಯ ತಂಡದ ನಾಯಕ ಡೊಂಗ್‌ ಜು ಹೊಂಗ್‌ ಪತ್ರಕರ್ತರ ಜತೆ ಮಾತನಾಡಿ ‘ಇರಾನ್‌ ತಂಡವನ್ನು ಮಣಿಸುವ ಆತ್ಮವಿಶ್ವಾಸ ನಮಗಿದೆ. ಇರಾನ್‌ ಪ್ರಬಲ ತಂಡ ಎನ್ನುವುದು ನಮಗೆ ಗೊತ್ತು. ಅವರನ್ನು ಅದೇಗೆ ಎದುರಿಸಬೇಕೆಂಬ ಬಗ್ಗೆ ತಂತ್ರಗಳನ್ನು ಈಗಾಗಲೇ ಮಾಡಿಕೊಂಡಿದ್ದೇವೆ. ನಾವಂತೂ ಗೆದ್ದೇ ಗೆಲ್ಲುತ್ತೇವೆ’ ಎಂದಿದ್ದಾರೆ.

ಸೆಮಿಫೈನಲ್‌ ಪಂದ್ಯಗಳು
ಭಾರತ–ಥಾಯ್ಲೆಂಡ್‌
ಆರಂಭ: ರಾತ್ರಿ 8
ದಕ್ಷಿಣ ಕೊರಿಯ–ಇರಾನ್‌
ಆರಂಭ: ರಾತ್ರಿ 9
ಸ್ಥಳ: ಟ್ರಾನ್ಸ್‌ಸ್ಟೇಡಿಯಾ, ಅಹಮದಾಬಾದ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT