ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಭಂಗ ತಪ್ಪಿಸಿಕೊಂಡ ಭಾರತ

ನ್ಯೂಜಿಲೆಂಡ್‌ ಎದುರಿನ ಕೊನೆಯ ಟ್ವೆಂಟಿ–20 ಪಂದ್ಯದಲ್ಲಿ ಆತಿಥೇಯರಿಗೆ ಜಯ; ಮಿಂಚಿದ ರಾಜೇಶ್ವರಿ
Last Updated 15 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಅವರ ಉತ್ತಮ ದಾಳಿಯ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧದ ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಭಾರತ ವನಿತೆಯರ ತಂಡ ಗೆಲುವು ದಾಖಲಿಸಿದೆ.

ನ್ಯೂಜಿಲೆಂಡ್ ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಆದ್ದರಿಂದ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಎದುರಿಸಿದ್ದ ಭಾರತ ತಂಡ ಮುಖಭಂಗ ತಪ್ಪಿಸಿಕೊಂಡು 2–1ರಲ್ಲಿ ಸರಣಿ ಮುಗಿಸಿದೆ.

ಟಾಸ್‌ ಗೆದ್ದ ಭಾರತ ತಂಡ ಕಿವೀಸ್‌ ಬಳಗವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ನ್ಯೂಜಿಲೆಂಡ್‌ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 126ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿತು.

ಸೂಸಿ ಬೇಟ್ಸ್‌ (34)  ನ್ಯೂಜಿಲೆಂಡ್‌ ತಂಡದ ಪರ ಹೆಚ್ಚು ರನ್‌ ಗಳಿಸಿದರು. ಹಿಂದಿನ ಎರಡು ಪಂದ್ಯಗಳಲ್ಲಿ ಭಾರತದ ಬೌಲರ್‌ಗಳಿಗೆ ಸವಾಲು ಎನಿಸಿದ್ದ ರಾಚೆಲ್‌ ಪ್ರೀಸ್ಟ್‌ (14), ಸೋಫಿ ಡಿವೈನ್‌ (18) ಬೇಗನೆ ಪೆವಿಲಿಯನ್‌ ಸೇರಿದರು.

ಸುಧಾರಿತ ಫೀಲ್ಡಿಂಗ್‌: ನಾಯಕಿ ಮಿಥಾಲಿ ರಾಜ್‌ ವಿಶ್ರಾಂತಿ ಬಯಸಿದ್ದರಿಂದ ಜೂಲನ್‌ ಗೋಸ್ವಾಮಿ ತಂಡವನ್ನು ಮುನ್ನಡೆಸಿದರು.
ಫೀಲ್ಡಿಂಗ್‌ ಆಯ್ದುಕೊಂಡ ನಾಯಕಿಯ ನಿರ್ಧಾರ ಸಮರ್ಥಿಸುವಂತೆ ಆಡಿದ ವನಿತೆಯರ ಬಳಗ ಟೂರ್ನಿಯಲ್ಲಿ ಮೊದಲ ಬಾರಿಗೆ ಮಿಂಚಿನ ಕ್ಷೇತ್ರರಕ್ಷಣೆ ಮಾಡುವ ಮೂಲಕ ಗಮನ ಸೆಳೆಯಿತು.

18 ರನ್‌ ಗಳಿಸಿ ಭಾರತಕ್ಕೆ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಸೋಫಿ ಡಿವೈನ್‌ ಅವರ ವಿಕೆಟ್‌ ಅನ್ನು ರಾಜೇಶ್ವರಿ ಗಾಯಕ್‌ವಾಡ್‌ ಪಡೆದರು. ಕರ್ನಾಟಕದ ಆಟಗಾರ್ತಿ 4 ಓವರ್‌ ಬೌಲಿಂಗ್‌ ಮಾಡಿ ಕೇವಲ 17 ರನ್‌ ಬಿಟ್ಟುಕೊಟ್ಟರಲ್ಲದೆ 3 ವಿಕೆಟ್ ಪಡೆದು ತಂಡದ ಬೌಲಿಂಗ್‌ ಶಕ್ತಿ ಹೆಚ್ಚಿಸಿದರು.

ಏಕ್ತಾ ಬಿಸ್ಟ್ (2), ಪೂನಮ್‌ ಯಾದವ್‌ (2) ವಿಕೆಟ್‌ ಪಡೆದು ತಂಡಕ್ಕೆ ನೆರವಾದರು. ಕಲ್ಪನಾ ಅವರ ಬದಲು ಸ್ಥಾನ ಪಡೆದಿದ್ದ ವಿಕೆಟ್‌ ಕೀಪರ್‌ ಸುಷ್ಮಾ ವರ್ಮಾ ನಾಲ್ಕು ಸ್ಟಂಪ್ಡ್‌ ವಿಕೆಟ್‌ ಪಡೆಯುವ ಮೂಲಕ ಗಮನ ಸೆಳೆದರು.

ಸುಲಭ ಗುರಿ ಬೆನ್ನಟ್ಟುವಲ್ಲಿ ಭಾರತ ತಂಡಕ್ಕೆ ಕರ್ನಾಟಕದ ವಿ.ಆರ್‌ ವನಿತಾ ನೆರವಾದರು. ಆರಂಭದಲ್ಲೇ ಸ್ಪೃತಿ ಮಂದನಾ (0) ಪೆವಿಲಿಯನ್‌ ಸೇರಿದ ಬಳಿಕ ಜವಾಬ್ದಾರಿಯಿಂದ ಆಡಿದ ಅವರು ಲತಿಕಾ ಕುಮಾರಿ (15) ಅವರೊಂದಿಗೆ 45 ರನ್‌ಗಳ ಉತ್ತಮ ಜತೆಯಾಟ ಆಡಿದರು.

ಕರ್ನಾಟಕದ ವೇದಾ ಕೃಷ್ಣಮೂರ್ತಿ (34) ವೇಗವಾಗಿ ರನ್‌ ಕಲೆಹಾಕಿದರು. ಅನುಜಾ ಪಾಟಿಲ್‌ 22ರನ್‌ ಸೇರಿಸಿದರು. ಆದರೆ ಜೂಲನ್‌ ಗೋಸ್ವಾಮಿ (8)ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು.

ನ್ಯೂಜಿಲೆಂಡ್‌ ತಂಡದ ಆಲ್‌ರೌಂಡ್‌ ಆಟಗಾರ್ತಿ ಲೀ ಕ್ಯಾಸ್ಪರೆಕ್‌ (20ಕ್ಕೆ2), ಸೋಫಿ ಡಿವೈನ್‌ (13ಕ್ಕೆ2) ಉತ್ತಮ ದಾಳಿ ನಡೆಸಿ ಭಾರತ ತಂಡದ ಬೌಲಿಂಗ್ ಶಕ್ತಿಗೆ ಸವಾಲು ಎಸೆದರು. ಆದರೆ ಸುಲಭ ಗುರಿ ಬೆನ್ನಟ್ಟುವಲ್ಲಿ ಭಾರತ ಎಡವಟ್ಟು ಮಾಡಿಕೊಳ್ಳಲಿಲ್ಲ.

‘ಒತ್ತಡದಲ್ಲೂ ನಾವು ಉತ್ತಮವಾಗಿ ಆಡಲು ಸಾಧ್ಯವಾಗಿದ್ದಕ್ಕೆ ಸಂತೋಷವಾಗಿದೆ. ಇದೇ ಮಾದರಿಯಲ್ಲಿ ಟೂರ್ನಿಗಳು ನಡೆಯುತ್ತಿದ್ದರೆ ಉತ್ತಮ ತಂಡ ಕಟ್ಟಲು ಸಾಧ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಿಥಾಲಿ ರಾಜ್‌ ಅಭಿಪ್ರಾಯಪಟ್ಟರು.

‘ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದು ಬೇಸರ ಉಂಟುಮಾಡಿತ್ತು. ಟ್ವೆಂಟಿ–20ಯಲ್ಲಿ ನಾವು ಉತ್ತಮವಾಗಿ ಆಡಿದೆವು. ಆದರೆ ಕೊನೆಯ ಪಂದ್ಯದಲ್ಲಿ ಬೇಗನೆ ವಿಕೆಟ್‌ ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತು. ಭಾರತ ತಂಡದೊಂದಿಗೆ ಆಡಿದ್ದರಿಂದ ಬಹಳಷ್ಟು ಕಲಿಯಲು ಸಾಧ್ಯವಾಯಿತು’ ಎಂದು ಸೋಫಿ ಡಿವೈನ್‌ ಅಭಿಪ್ರಾಯಪಟ್ಟಿದ್ದಾರೆ.

ಸ್ಕೋರ್‌ಕಾರ್ಡ್‌
ನ್ಯೂಜಿಲೆಂಡ್‌ 8 ಕ್ಕೆ 126   (20 ಓವರ್‌ಗಳಲ್ಲಿ)

ಸೂಸಿ ಬೇಟ್ಸ್‌ ಸ್ಟಂಪ್ಡ್‌ ಸುಷ್ಮಾ ವರ್ಮಾ ಬಿ ಪೂನಮ್‌ ಯಾದವ್‌  34
ರಾಚೆಲ್‌ ಪ್ರೀಸ್ಟ್‌ ಸ್ಟಂಪ್ಡ್‌ ಸುಷ್ಮಾ ವರ್ಮಾ ಬಿ ಏಕ್ತಾ ಬಿಸ್ಟ್‌  14
ಸೋಫಿ ಡಿವೈನ್‌ ಸಿ ಏಕ್ತಾ ಬಿಸ್ಟ್‌ ಬಿ ರಾಜೇಶ್ವರಿ ಗಾಯಕವಾಡ್‌  18
ನತಾಲಿ ಡ್ಯೂಡ್‌ ಸ್ಟಂಪ್ಡ್‌ ಸುಷ್ಮಾ ವರ್ಮಾ ಬಿ ರಾಜೇಶ್ವರಿ ಗಾಯಕವಾಡ್‌  14
ಆ್ಯನ್‌ ಸತರ್ತ್‌ವಾಲ್ಟ್‌ ಸಿ ಲತಿಕಾ ಕುಮಾರಿ ಬಿ ಪೂನಮ್‌ ಯಾದವ್‌  03
ಕೇಟ್‌ ಪೆರ್ಕಿನ್ಸ್‌ ಸ್ಟಂಪ್ಡ್‌ ಸುಷ್ಮಾ ವರ್ಮಾ ಬಿ ಏಕ್ತಾ ಬಿಸ್ಟ್‌  06‌
ಲೀ ಕ್ಯಾಸ್ಪರೆಕ್‌ ರನೌಟ್‌/ಅನುಜಾ ಪಾಟಿಲ್‌   06
ಮ್ಯಾಡಿ ಗ್ರೀನ್‌ ಸಿ ಹರ್ಮನ್‌ ಪ್ರೀತ್‌ ಕೌರ್‌ ಬಿ ರಾಜೇಶ್ವರಿ ಗಾಯಕವಾಡ್‌  10
ಕೇಟ್‌ ಬ್ರಾಡ್‌ಮೋರ್‌ ಔಟಾಗದೆ  15
ಹನ್ನಾ ರೋ ಔಟಾಗದೆ  02
ಇತರೆ: (ವೈಡ್‌ 2, ನೋ ಬಾಲ್‌ 2)  04
ವಿಕೆಟ್ ಪತನ:  1–26 (ಪ್ರೀಸ್ಟ್‌; 2.1), 2–59 (ಡಿವೈನ್‌; 5.3), 3–76 (ಬೇಟ್ಸ್‌; 8.1), 4–84 (ಸತರ್ತ್‌ವಾಲ್ಟ್‌; 10.1), 5–89 (ನತಾಲಿ;11.1), 6–95 (ಕ್ಯಾಸ್ಪರೆಕ್‌ 12.3), 7–100 (ಪೆರ್ಕಿನ್ಸ್‌; 14.3), 8–116 (ಗ್ರೀನ್‌;18.1).
ಬೌಲಿಂಗ್‌ ವಿವರ: ಜೂಲನ್‌ ಗೋಸ್ವಾಮಿ 1–0–15–0, ಹರ್ಮನ್‌ಪ್ರೀತ್‌ ಕೌರ್‌ 3–0–33–0, ಏಕ್ತಾ ಬಿಸ್ಟ್‌ 4–0–23–2, ರಾಜೇಶ್ವರಿ ಗಾಯಕವಾಡ್‌ 4–017–3, ಪೂನಮ್‌ ಯಾದವ್‌ 4–0–16–2, ಅನುಜಾ ಪಾಟಿಲ್‌ 4–0–22–0.

ಭಾರತ  7ಕ್ಕೆ 128  (19 ಓವರ್‌ಗಳಲ್ಲಿ)
ವಿ.ಆರ್‌ ವನಿತಾ ಬಿ ಕೇಟ್‌ ಬ್ರಾಡ್‌ಮೋರ್‌  28
ಸ್ಪೃತಿ ಮಂದನಾ ಸ್ಟಂಪ್ಡ್‌ ರಾಚೆಲ್‌ ಪ್ರೀಸ್ಟ್‌ ಬಿ ಮೋರ್ನಾ ನಿಯೆಲ್‌ಸನ್‌  0
ಲತಿಕಾ ಕುಮಾರಿ ಸಿ ಹನ್ನಾ ರೋ ಬಿ ಲೀ ಕ್ಯಾಸ್ಪರೆಕ್‌  15
ಹರ್ಮನ್‌ಪ್ರೀತ್‌ ಕೌರ್‌ ಸಿ ಸೋಫಿ ಡಿವೈನ್‌ ಬಿ ಕೇಟ್‌ ಬ್ರಾಡ್‌ಮೋರ್‌  04
ವೇದಾ ಕೃಷ್ಣಮೂರ್ತಿ ಬಿ ಸೋಫಿ ಡಿವೈನ್‌  34
ಅನುಜಾ ಪಾಟಿಲ್‌ ಸಿ ಆ್ಯನ್‌ ಸತರ್ತ್‌ವಾಲ್ಟ್‌ ಬಿ ಸೋಫಿ ಡಿವೈನ್‌  22
ಜೂಲನ್‌ ಗೋಸ್ವಾಮಿ ಸ್ಟಂಪ್ಡ್‌ ರಾಚೆಲ್ ಪ್ರೀಸ್ಟ್‌ ಬಿ ಲೀ ಕ್ಯಾಸ್ಪರೆಕ್‌  08
ಸುಷ್ಮಾ ವರ್ಮಾ ಔಟಾಗದೆ 0 5
ಏಕ್ತಾ ಬಿಸ್ಟ್‌ ಔಟಾಗದೆ  02
ಇತರೆ:   (ಲೆಗ್‌ ಬೈ 7, ವೈಡ್‌ 3)  10
ವಿಕೆಟ್‌ ಪತನ:  1–5 (ಮಂದನಾ; 0.5), 2–50 (ಕುಮಾರಿ; 6.5), 3–50 (ವನಿತಾ; 7.2), 4–73 (ಕೌರ್‌; 9.6), 5–100 (ಕೃಷ್ಣಮೂರ್ತಿ; 13.2), 6–120 (ಗೋಸ್ವಾಮಿ; 16.6), 7–120 (ಪಾಟಿಲ್‌; 17.2).
ಬೌಲಿಂಗ್‌ ವಿವರ: ಮೋರ್ನಾ ನಿಯೆಲ್‌ಸನ್‌ 3–0–25–1, ಹನ್ನಾ ರೋ 1–0–7–0, ಸೋಫಿ ಡಿವೈನ್‌ 4–0–13–2, ಲೀ ಕ್ಯಾಸ್ಪರೆಕ್‌ 4–0–20–2, ಸೂಸಿ ಬೇಟ್ಸ್‌ 4–0–31–0, ಕೇಟ್ ಬ್ರಾಡ್‌ಮೋರ್‌ 3–0–25–2.
ಫಲಿತಾಂಶ:  ಭಾರತಕ್ಕೆ 3 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT