ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್‌–ಬ್ಲ್ಯೂ ಹೋರಾಟ: ಯಾರಿಗೆ ಜಯ?

ಮೈಸೂರಿನಲ್ಲಿ ಇಂದಿನಿಂದ ಮಹಿಳೆಯರ ಚಾಲೆಂಜರ್‌ ಏಕದಿನ ಕ್ರಿಕೆಟ್‌ ಟೂರ್ನಿ
Last Updated 13 ಜೂನ್ 2015, 19:40 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಮತ್ತೆ ಕ್ರಿಕೆಟ್‌ನ ಸದ್ದು ಶುರುವಾಗಿದೆ. ಇಷ್ಟು ದಿನ ಪುರುಷರ ಆಟದ ಸೊಬಗನ್ನು ಕಣ್ತುಂಬಿಕೊಂಡಿದ್ದ ಕ್ರೀಡಾಭಿಮಾನಿಗಳಿಗೆ ಇನ್ನು ನಾಲ್ಕು ದಿನ ಮಹಿಳಾ ಕ್ರಿಕೆಟ್‌ ಸುಗ್ಗಿ. ಭಾರತ ಮಹಿಳಾ ತಂಡದಲ್ಲಿ ಸ್ಥಾನ ಗಿಟ್ಟಿಸಲು ಪ್ರಮುಖ ವೇದಿಕೆ ಎನಿಸಿರುವ ಚಾಲೆಂಜರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಗೆ ಭಾನುವಾರ ಚಾಲನೆ ಲಭಿಸಲಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ (ಗಂಗೋತ್ರಿ ಗ್ಲೇಡ್ಸ್‌) ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಡಿಯಾ ಬ್ಲ್ಯೂ ಹಾಗೂ ಇಂಡಿಯಾ ರೆಡ್‌ ತಂಡಗಳು ಮುಖಾಮುಖಿಯಾಗಲಿವೆ. ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೆ ಭಾರತ ತಂಡ ಆಯ್ಕೆ ಮಾಡಲು ಈ ಟೂರ್ನಿ ಮಾನದಂಡವಾಗಿದೆ.

ರೆಡ್‌ ಹಾಗೂ ಬ್ಲ್ಯೂ ತಂಡಗಳ ಆಟಗಾರ್ತಿಯರು ಕೋಚ್‌ ಹಾಗೂ ಫಿಸಿಯೊಗಳ ಮಾರ್ಗದರ್ಶನದಲ್ಲಿ ಶನಿವಾರ ಕಠಿಣ ಅಭ್ಯಾಸ ನಡೆಸಿದರು. ಮೊದಲು ದೈಹಿಕ ಕಸರತ್ತು ನಡೆಸಿದ ಇವರು ಬಳಿಕ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ತಾಲೀಮು ನಡೆಸಿದರು.

ಬ್ಲ್ಯೂ ತಂಡವನ್ನು ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ ಮುನ್ನಡೆಸಲಿದ್ದಾರೆ. ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ವೇದಾ ಕೃಷ್ಣಮೂರ್ತಿ ಹಾಗೂ ರಕ್ಷಿತಾ ಕೆ. ಕಾಳೇಗೌಡ ಇದ್ದಾರೆ. ರಕ್ಷಿತಾ ಅವರು ಮೈಸೂರಿನ ಆಟಗಾರ್ತಿ.

ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ ಇಂಡಿಯಾ ರೆಡ್‌ ತಂಡದ ಸಾರಥ್ಯ ವಹಿಸಿದ್ದಾರೆ. ಈ ತಂಡದಲ್ಲಿ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್‌ ಸ್ಥಾನ ಪಡೆದಿದ್ದಾರೆ. ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್‌ ಹಾಗೂ ಜೂಲನ್‌ ಗೋಸ್ವಾಮಿ ಅವರು ಗಾಯದ ಸಮಸ್ಯೆ ಕಾರಣ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಹಾಗಾಗಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಯುವ ಆಟಗಾರ್ತಿಯರಿಗೆ ಇದೊಂದು ಉತ್ತಮ ಅವಕಾಶ.

ಮಳೆಯ ಭಯ: ಟೂರ್ನಿಗೆ ಮಳೆ ಅಡ್ಡಿಯಾಗುವ ಆತಂಕವಿದೆ. ಶನಿವಾರ ಸಂಜೆ ಕೂಡ ಮಳೆಯಾಗಿದೆ. ‘ಕ್ರೀಡಾಂಗಣದಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇದೆ. ಜೊತೆಗೆ ಒಂದು ಸೂಪರ್‌ ಸಾಪರ್‌ ಯಂತ್ರ ಇದೆ. ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣವನ್ನು ಆಟಕ್ಕೆ ಸಜ್ಜುಗೊಳಿಸಬಹುದು’ ಎಂದು ಪಿಚ್‌ ಕ್ಯೂರೇಟರ್‌ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರೀನ್‌ ತಂಡದಲ್ಲಿ ಪುಷ್ಪಾ: ದೇವಿಕಾ ವೈದ್ಯ ಸಾರಥ್ಯದ ಇಂಡಿಯಾ ಗ್ರೀನ್ (19 ವರ್ಷದೊಳಗಿನವರು) ತಂಡದ ಆಟಗಾರ್ತಿಯರು ಮೈಸೂರಿಗೆ ಬಂದಿಳಿ ದಿದ್ದಾರೆ. ಈ ತಂಡದವರು ಸೋಮವಾರ ತಮ್ಮ ಮೊದಲ ಪಂದ್ಯ ಆಡಲಿದ್ದಾರೆ. ಈ ತಂಡದಲ್ಲಿ ಹುಬ್ಬಳ್ಳಿಯ ಪುಷ್ಪಾ ಕಿರೇಸೂರ್‌ ಹಾಗೂ ಬೆಂಗಳೂರಿನ ದಿವ್ಯಾ ಜ್ಞಾನಾನಂದ ಇದ್ದಾರೆ.
*
ಸಹಜವಾಗಿ ವೇಗದ ಬೌಲರ್‌ಗಳಿಗೆ ನೆರವು ನೀಡುವ ಪಿಚ್‌ ಇದು. ಅಂತರವಲಯ ಟೂರ್ನಿ ನಡೆದ ಕಾರಣ ಪಿಚ್‌ನಲ್ಲಿ ಈಗ ಹಸಿರು ಕಡಿಮೆ ಇದ್ದು, ಸ್ಪಿನ್ನರ್‌ಗಳಿಗೂ ನೆರವು ನೀಡಲಿದೆ.
–ಚಂದ್ರಶೇಖರ್‌,
ಪಿಚ್ ಕ್ಯೂರೇಟರ್‌
*

ತಂಡಗಳು ಇಂತಿವೆ
ಇಂಡಿಯಾ ರೆಡ್: ಸ್ಮೃತಿ ಮಂದಾನಾ (ನಾಯಕಿ), ಶಿಖಾ ಪಾಂಡೆ, ಪೂನಮ್ ರಾವುತ್, ಲತಿಕಾ ಕುಮಾರಿ, ಸ್ನೇಹಾ ಮೋರೆ, ಮಧುಸ್ಮಿತಾ ಬೆಹೆರಾ, ಆರ್. ಕಲ್ಪನಾ, ಸ್ನೇಹಾ ರಾಣಾ, ಎಸ್. ಮೇಘನಾ, ಸ್ನೇಹಲ್ ಪ್ರಧಾನ್, ಎಸ್‌. ಶುಭಲಕ್ಷ್ಮೀ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಪೂನಮ್ ಯಾದವ್.

ಇಂಡಿಯಾ ಬ್ಲೂ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಎಂ.ಡಿ. ತಿರುಷಕಾಮಿನಿ, ಪರಮಿತಾ ರಾಯ್, ವೇದಾ ಕೃಷ್ಣಮೂರ್ತಿ, ಸಾರಿಕಾ ಕೊಹ್ಲಿ, ರಕ್ಷಿತಾ ಕೆ. ಕಾಳೇಗೌಡ, ಸುಷ್ಮಾ ವರ್ಮ, ಅನುಜಾ ಪಾಟೀಲ, ನಿರಂಜನಾ ನಾಗರಾಜನ್, ಅನನ್ಯಾ ಉಪೇಂದ್ರನ್, ಕವಿತಾ ಪಾಟೀಲ, ಏಕತಾ ಬಿಸ್ತ್‌ ಹಾಗೂ ಪ್ರೀತಿ ಬೋಸ್.

ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT