ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಬೋ ವಿಮಾನಕ್ಕೆ ಸ್ಫೂರ್ತಿ‘ಜೇನುನೊಣ’

Last Updated 12 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪ್ರಕೃತಿಯ ಸಾಂಗತ್ಯವಿಲ್ಲದೆ ಮನುಷ್ಯನ ಬದುಕು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಸದಾ  ಹೊಸತನಕ್ಕೆ, ಹೊಸ ಅರ್ಥಕ್ಕೆ ತೆರೆದುಕೊಳ್ಳುವ ಪ್ರಕೃತಿ, ಮಾನವನ ಹೊಸ ಚಿಂತನೆ, ಆವಿಷ್ಕಾರಗಳಿಗೂ ಸ್ಫೂರ್ತಿ, ಪ್ರೇರಣೆ.
‘ಲಘು ರೋಬೊ ವಿಮಾನ’ ಸೃಷ್ಟಿಗೂ ಜೇನುನೊಣವೊಂದು ಸ್ಫೂರ್ತಿಯಾಗಿರುವುದು ಈ ಮಾತನ್ನು ಮತ್ತಷ್ಟು ಪುಷ್ಟೀಕರಿಸಿದಂತಾಗಿದೆ.

ವಿಷನ್ ಸೆಂಟರ್ ಮತ್ತು ಕ್ವೀನ್ಸ್ ಲ್ಯಾಂಡ್ ಬ್ರೈನ್ ರಿಸರ್ಚ್ ಸಂಸ್ಥೆಯ ತಂತ್ರಜ್ಞರ ತಂಡ ಈ ‘ಲಘು ರೋಬೊ ವಿಮಾನ’ವನ್ನು ರೂಪಿಸಿದೆ. ಭಾರತ ಮೂಲದ ತಂತ್ರಜ್ಞರೊಬ್ಬರು ಸಹ ಈ ತಂಡದಲ್ಲಿದ್ದಾರೆ ಎಂಬುದು ಉಲ್ಲೇಖನೀಯ ಅಂಶ.

ಜೇನುನೊಣ ಯಾವುದೇ ಸ್ಥಳದಲ್ಲೇ ಆದರೂ ಬಹಳ ನಿಖರವಾಗಿ ಹಾಗೂ ಸುರಕ್ಷಿತವಾಗಿ ಇಳಿದು ನಿಲ್ಲುವಂತಹ ತಂತ್ರವನ್ನೇ ಆಧರಿಸಿ ಅತಿ ಕಡಿಮೆ ವೆಚ್ಚದಲ್ಲಿ ಲಘು ರೋಬೊ ವಿಮಾನ ಸಿದ್ಧಪಡಿಸಿದೆ ತಂತ್ರಜ್ಞರ ತಂಡ. ಈ ರೋಬೊ ವಿಮಾನವು ಜೇನುನೊಣದಂತೆಯೇ ಯಾವುದೇ ಸ್ಥಳದಲ್ಲಾದರೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡುವ ಸಾಮರ್ಥ್ಯ ಹೊಂದಿದೆ.

ಜೇನುನೊಣ, ತಾನು ತಲುಪಬೇಕಾದ ಸ್ಥಳದ ಅಂತರ ಮತ್ತು ಹಾರಾಟದ ವೇಗವನ್ನು ಗಮನಿಸದೇ ನಿರ್ದಿಷ್ಟ ಸ್ಥಳದ ಹತ್ತಿರಕ್ಕೆ ಬಂದಾಗ ಹೇಗೆ ತನ್ನ ವೇಗವನ್ನು ನಿಯಂತ್ರಿಸಿಕೊಂಡು ರೆಕ್ಕೆಗಳನ್ನು ಮಡಿಚಿ ಇಳಿಯುತ್ತದೆಯೋ ಅದೇ ತಂತ್ರದ ಆಧಾರದ ಮೇಲೆಯೇ ತಂತ್ರಜ್ಞರ ತಂಡ ಈ ರೋಬೊ ವಿಮಾನದ ಹಾರಾಟ ಮತ್ತು ನಿಲುಗಡೆ ಚಟುವಟಿಕೆಯನ್ನೂ ವಿನ್ಯಾಸಗೊಳಿಸಿದ್ದಾರೆ.

ಗಗನದಲ್ಲಿ ಹಾರಾಡುವ ಎಲ್ಲ ವಾಹನಗಳಿಗೂ  ಸುರಕ್ಷಿತವಾಗಿ ಭೂಸ್ಪರ್ಶ ಮಾಡುವುದೇ ಬಹುದೊಡ್ಡ ಸವಾಲಾಗಿದೆ.  ಕೆಳಕ್ಕಿಳಿದು ಚಕ್ರವನ್ನು ನಿಗದಿತ ನಿಲ್ದಾಣ ಸ್ಥಳದಲ್ಲಿ ಊರಬೇಕೆಂದರೆ ಹಾರಾಟದ ವೇಗವನ್ನು ಶೂನ್ಯದ ಸಮೀಪಕ್ಕೆ ನಿಯಂತ್ರಿಸುವ ಅವಶ್ಯಕತೆ ಇದೆ. ಇದು ಲಘು ರೋಬೊ ವಿಮಾನದಿಂದ ಸುಲಭ ಸಾಧ್ಯವಾಗಲಿದೆ ಎನ್ನುತ್ತಾರೆ ಸಂಸ್ತೆಯ ಪ್ರೊ. ಮಂಡ್ಯಂ ಶ್ರೀನಿವಾಸನ್ ಅವರು.

ಮಾನವನ ಎರಡು ಕಣ್ಣುಗಳ ನಡುವೆ 65 ಮಿಲಿಮೀಟರುಗಳಷ್ಟು ಅಂತರ ಇದೆ. ಹಾಗಾಗಿಯೇ ಒಂದು ವಸ್ತುವಿನ ವಿವಿಧ ಆಯಾಮವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಆದರೆ ಕೀಟಗಳ ಕಣ್ಣುಗಳು ತುಂಬಾ ಹತ್ತಿರದಲ್ಲಿ ಇರುವುದರಿಂದ ಅವುಗಳಿಗೆ ವಸ್ತುಗಳ ವಿವಿಧ ಆಯಾಮವನ್ನು ಗ್ರಹಿಸಲು ಸಾಧ್ಯವಿಲ್ಲ.

ಹೀಗಾಗಿ ಕೀಟಗಳು ಹೂವು, ಗಿಡ-ಬಳ್ಳಿಗಳ ಮೇಲೆ ಇಳಿಯುವುದಕ್ಕೂ  ಮುನ್ನ ಅದರ ಚಿತ್ರವನ್ನು ಕಣ್ಣುಗಳಿಂದ ಅಂದಾಜು ಮಾಡಿಕೊಳ್ಳುತ್ತವೆ. ಆ ಚಿತ್ರವನ್ನೇ ಸ್ಥಿರವಾಗಿಟ್ಟುಕೊಂಡು ಅಂತರಕ್ಕೆ ತಕ್ಕಂತೆಯೇ ತಮ್ಮ ವೇಗವನ್ನು ಕ್ಷಿಪ್ರಗತಿಯಲ್ಲಿ ತಗ್ಗಿಸುತ್ತವೆ ಎಂದು ಅವರು ಜೇನುನೊಣದ ಹಾರಾಟ ಮತ್ತು ನಿಲುಗಡೆ ಪ್ರಕ್ರಿಯೆಯ ಅಧ್ಯಯನ ಕುರಿತು ವಿವರಿಸುತ್ತಾರೆ.
ಪ್ರಯೋಗದ ಮೂಲಕ ಇವೇ ಅಂಶಗಳನ್ನು ತಂತ್ರಜ್ಞರು ನಿಖರವಾಗಿ ತಿಳಿದುಕೊಂಡಿದ್ದಾರೆ.

ಒಂದು ಡಿಸ್ಕನ್ನು ಲಂಬವಾಗಿ ಇಟ್ಟು, ಅದರ ಕಿರಿದಾದ ಜಾಗದ ಮೇಲೆ ಜೇನುನೊಣಗಳು ಕೂರುವಂತೆ ಆಕರ್ಷಿಸಲಾಯಿತು. ಅವು ಹಾರಾಟದ ಜಾಗದಿಂದ ಡಿಸ್ಕ್‌ಗೆ ಇರುವ ಅಂತರವನ್ನು ಕಣ್ಣಿನಿಂದ ಅಳೆದುಕೊಳ್ಳುವುದು, ಅಂತರಕ್ಕೆ ತಕ್ಕಂತೆ ರೆಕ್ಕೆ ಬಡಿಯುವ ವೇಗ ತಗ್ಗಿಸುವುದು, ಡಿಸ್ಕ್ ಮೇಲೆ ಆರೂ ಕಾಲುಗಳನ್ನು ಊರುವ ಪ್ರತಿ ಹಂತವನ್ನೂ ಹೈ ಸ್ಪೀಡ್ ವಿಡಿಯೊ ಕ್ಯಾಮೆರಾದಿಂದ ಚಿತ್ರೀಕರಿಸಲಾಯಿತು. ಬಳಿಕ ಆ ಡಿಸ್ಕಿಗೆ ಮೋಟರ್ ಅಳವಡಿಸಿ, ವಿವಿಧ ವೇಗದಲ್ಲಿ  ಸುತ್ತುವಂತೆ ಮಾಡಲಾಯಿತು. ಆಗ ಡಿಸ್ಕ್‌ ತಿರುಗುವ ವೇಗದ ನಿಖರತೆ ಗ್ರಹಿಸಲಾಗದೆ ಜೇನುನೊಣಗಳು, ಕೆಳಕ್ಕಿಳಿಯುವಾಗ ಅದಕ್ಕೆ ಡಿಕ್ಕಿ ಹೊಡೆಯುತ್ತಿದ್ದವು.

ಹೀಗೆ ಹಲವು ಹಂತಗಳಲ್ಲಿ ನಡೆಸಲಾದ ಈ ಪ್ರಯೋಗದಿಂದಾಗಿ ಜೇನುನೊಣಗಳು ನೆಲಕ್ಕೆ ಇಳಿಯುವಾಗ ಕಾಲೂರಬೇಕಾದ ಜಾಗ ಎಷ್ಟು ಅಂತರದಲ್ಲಿದೆ ಎಂಬದುನ್ನು ಹೇಗೆ ಗ್ರಹಿಸುತ್ತವೆ ಮತ್ತು ಆ ಗ್ರಹಿಕೆಯನ್ನು ಹೇಗೆ ಸ್ಥಿರವಾಗಿಟ್ಟುಕೊಳ್ಳುತ್ತವೆ ಎಂಬ ಅಂಶ ಗಮನಕ್ಕೆ ಬಂದಿತು ಎನ್ನುತ್ತದೆ ತಂತ್ರಜ್ಞರ ತಂಡ.

ಇದನ್ನೇ ಆಧಾರವಾಗಿಟ್ಟುಕೊಂಡು ತಯಾರಿಸಿರುವ ಲಘುವಾದ ರೋಬೊ ವಿಮಾನದ ವಿನ್ಯಾಸಕ್ಕೆ ಬಹಳ ಕಡಿಮೆ ವೆಚ್ಚವಾಗಿದೆ. ಹೀಗಾಗಿ ಇದಕ್ಕೆ ಮನ್ನಣೆ ಸಿಗಬಹುದು ಎನ್ನುವುದು ಪ್ರೊ. ಮಂಡ್ಯಂ ಶ್ರೀನಿವಾಸನ್ ಅವರ ವಿಶ್ವಾಸದ ನುಡಿ.ಒಟ್ಟಿನಲ್ಲಿ ಮನುಷ್ಯನ ಪ್ರತಿ ಆವಿಷ್ಕಾರದ ಹಿಂದೆ ಪ್ರಕೃತಿಯ ನೇರ ಅಥವಾ ಪರೋಕ್ಷ ಪ್ರಭಾವ ಇದ್ದೇ ಇರುತ್ತದೆ ಎಂಬುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT