ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಗರ್ಭಿಣಿಯರಲ್ಲಿ ಮಧುಮೇಹ: ಪಾರಾಗೋದು ಹೇಗೆ?

Published 15 ಜುಲೈ 2023, 1:04 IST
Last Updated 15 ಜುಲೈ 2023, 1:04 IST
ಅಕ್ಷರ ಗಾತ್ರ

ನನಗೆ 28 ವರ್ಷ, ಮದುವೆ ಆಗಿ ಒಂದು ವರ್ಷ ಆಗಿದೆ. ಗರ್ಭಿಣಿಯಾದ ಮೇಲೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿಸಿದರು. ಮಗು ಹುಟ್ಟಿ 3 ದಿನಕ್ಕೆ ತೀರಿ ಹೋಯಿತು. ಮುಂದೆ ಈ ರೀತಿ ಆಗದೇ ಇರುವುದಕ್ಕೆ ಪರಿಹಾರ ತಿಳಿಸಿ

ಹೆಸರು, ಊರು ತಿಳಿಸಿಲ್ಲ.

ಉತ್ತರ: ಗರ್ಭಿಣಿಯಾದ ಮೇಲೆ ಸಕ್ಕರೆಕಾಯಿಲೆ ಬಂದಿತೆಂದರೆ ಅದು ಗರ್ಭಧಾರಣೆಯ ಮಧುಮೇಹ (ಜಿ.ಡಿ.ಎಂ-ಗೆಸ್ಟೇಷನಲ್ ಡಯಾಬಿಟಿಸ್ ಮೆಲ್ಲಿಟಸ್). ಇದು ಗರ್ಭಿಣಿಯರಲ್ಲಿ ಅತಿಯಾಗಿ (ಶೇ 4ರಿಂದ 41ರವರೆಗೂ) ಹೆಚ್ಚುತ್ತಿರುವ ಸಮಸ್ಯೆ. ನೀವು, ಮಧುಮೇಹ ನಿಯಂತ್ರಣವಿಲ್ಲದೆ ಮಗು ದೊಡ್ಡದಾಗಿ ಬೆಳೆದಿತ್ತೇ (ಮ್ಯಾಕ್ರೋಸೋಮಿಯಾ)? ಅಥವಾ ಮಗುವಿಗೇನಾದರೂ ಜನ್ಮಜಾತ ಹೃದ್ರೋಗದ ತೊಂದರೆ ಇತ್ತೇ? ಎಂದು ನೀವು ತಿಳಿಸಿಲ್ಲ. ನವಜಾತ ಶಿಶುವಿಗೆ ಗ್ಲೂಕೋಸ್‌ ಮಟ್ಟ ಕಡಿಮೆಯಾಗಿ ತೀರಿಹೋಯಿತೋ ಎಂದೂ ಗೊತ್ತಿಲ್ಲ. ಇರಲಿ ನಿಮಗೆ ಆ ಶೋಕವನ್ನು ಸಹಿಸುವ ಸಾಮರ್ಥ್ಯ ಬರಲಿ. ಆದರೆ ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳಿ.

ಗರ್ಭಧಾರಣೆಗೆ ಮೊದಲೇ ಕೆಲವರಲ್ಲಿ ಮಧುಮೇಹ ಇರಬಹುದು. ಇನ್ನು ಕೆಲವರಲ್ಲಿ ಗರ್ಭಿಣಿಯಾದ ಮೇಲೆ ಮಧುಮೇಹ ಬಂದಿರಬಹುದು. ಎರಡರಿಂದಲೂ ತಾಯಿ ಹಾಗೂ ಮಗುವಿಗೆ ಅಪಾಯ ಇದ್ದೇ ಇದೆ. ಗರ್ಭ ಧರಿಸಿದ ಮೇಲೆ ಹಲವಾರು ಶಾರೀರಿಕ ಬದಲಾವಣೆಗಳಾಗುತ್ತವೆ. ಪ್ಲಾಸೆಂಟಾದಿಂದ ಉತ್ಪಾದನೆಯಾಗುವ ಹಾರ್ಮೋನುಗಳು ಇನ್ಸುಲಿನ್ ಪ್ರತಿರೋಧಕತೆಯನ್ನು ಉಂಟುಮಾಡಿ ಗ್ಲೂಕೋಸ್‌ ಮಟ್ಟ ಹೆಚ್ಚಿಸುತ್ತದೆ. ಕೊಬ್ಬಿನ ವಿಭಜನೆಯಿಂದ ಗ್ಲೂಕೋಸ್‌ ಪರಿವರ್ತನೆಯಾಗುವಿಕೆಯು ಹೆಚ್ಚಾಗುತ್ತದೆ.

ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮತ್ತು ಅಧಿಕ ತೂಕ ಹೊಂದಿರುವವರಲ್ಲಿ ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಈ ಮುಂಚೆ 4 ಕೆ.ಜಿಗೂ ಅಧಿಕ ತೂಕದ ಮಗುವನ್ನು ಹಡೆದಿದ್ದಲ್ಲಿ, ಗರ್ಭಿಣಿಯಾಗಿ ಆರು ತಿಂಗಳೊಳಗೆ ಅಧಿಕತೂಕ ಗಳಿಸಿದವರಲ್ಲಿ, ಅವಳಿ ಮಕ್ಕಳು ಗರ್ಭದಲ್ಲಿದ್ದಾಗ, ಪದೇ ಪದೇ ಮೂತ್ರಸೋಂಕು, ಯೋನಿಸೋಂಕು ಆಗುತ್ತಿರುವವರಲ್ಲಿ, ಅತಿಯಾಗಿ ತಿನ್ನುವುದು, ಕಡಿಮೆ ದೈಹಿಕ ಶ್ರಮ ಅನುಸರಿಸುವವರಲ್ಲಿ ಮಧುಮೇಹ ಬರುವ ಸಾಧ್ಯತೆ ಇರುತ್ತದೆ.

ಜಿ.ಡಿ.ಎಂ ನಿಯಂತ್ರಣದಲ್ಲಿ ಇಲ್ಲದಿದ್ದರೆ ತಾಯಿ ಹಾಗೂ ಮಗು ಇಬ್ಬರಿಗೂ ಅಪಾಯವಿದೆ. ತಾಯಂದಿರಲ್ಲಿ ಮೂತ್ರಾಂಗವ್ಯೂಹದ ಸೋಂಕಾಗುವ ಸಂಭವ ಹೆಚ್ಚುತ್ತದೆ. ಯೋನಿಯಲ್ಲಿ ಕ್ಯಾಂಡಿಡಾ ಸೋಂಕು ಕೂಡ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಗರ್ಭಿಣಿಯರ ಏರು ರಕ್ತದೊತ್ತಡ, ಪ್ರಿಎಕ್ಲಾಂಪ್ಸಿಯಾದ ಸಂಭವನೀಯತೆ ಹೆಚ್ಚು. ಅಕಾಲಿಕ ಹೆರಿಗೆ ಉಂಟಾಗಬಹುದು. ಇದ್ದಕ್ಕಿದ್ದಂತೆ ಮಗು ಹೊಟ್ಟೆಯೊಳಗೆ ಸತ್ತುಹೋಗಬಹುದು. ಜಿ.ಡಿ.ಎಂ ನಿಯಂತ್ರಣದಲ್ಲಿಲ್ಲದಿದ್ದರೆ ಮಗುವಿನಲ್ಲಿ ಹೆಚ್ಚು ಕೊಬ್ಬುಶೇಖರಣೆಯಾಗಿ ಮಗುವು 4 ಕೆ.ಜಿಗೂ ಹೆಚ್ಚು ದಪ್ಪನಾಗಿ ಬೆಳೆದು ಸಿಸೇರಿಯನ್‌ ಹೆರಿಗೆಯಾಗುವ ಸಂಭವವಿರುತ್ತದೆ. ಗರ್ಭಧಾರಣೆ ವೇಳೆ ಮಧುಮೇಹ ಇದ್ದವರಿಗೆ ಮುಂದೆ ಟೈಪ್–2 ಮಧುಮೇಹ ಬರುವ ಸಾಧ್ಯತೆ ಶೇ60ರಷ್ಟಿರುತ್ತದೆ. ಮುಕ್ಕಾಲುಪಾಲು ಮಹಿಳೆಯರಲ್ಲಿ ಹೃದಯದ ರಕ್ತನಾಳಗಳ ತೊಂದರೆಯೂ ಕಾಣಿಸಿಕೊಳ್ಳಬಹುದು.

ಇವೆಲ್ಲಾ ತೊಂದರೆಯಾಗದಂತೆ ಮುಂಜಾಗ್ರತೆಯಾಗಿ ಗರ್ಭಧರಿಸುವ 6 ವಾರಗಳ ಮೊದಲೇ ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ. ಗರ್ಭಧರಿಸಿದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 75 ಗ್ರಾಂ ಗ್ಲೂಕೋಸ್‌ ಕೊಟ್ಟು ಓರಲ್ ಗ್ಲೂಕೋಸ್‌ ಟಾಲರೆನ್ಸ್ ಟೆಸ್ಟ್ ಮಾಡಿಸುತ್ತಾರೆ. ಇದರಿಂದ ಮತ್ತೆ ಜಿ.ಡಿ.ಎಂ ಬರುವ ಸಾಧ್ಯತೆ ಇದೆಯೋ ಇಲ್ಲವೋ ಗೊತ್ತಾಗುತ್ತದೆ.

ಗರ್ಭಿಣಿಯರಲ್ಲಿ ಮೊದಲ ಮೂರು ತಿಂಗಳಲ್ಲಿ ಭ್ರೂಣದ ಅಂಗಾಂಗಗಳು ರೂಪುಗೊಳ್ಳುವಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರಬೇಕು. ಇಲ್ಲದಿದ್ದರೆ ಮಗುವಿನಲ್ಲಿ ಜನ್ಮಜಾತ ಹೃದಯ ನ್ಯೂನತೆಗಳು, ನ್ಯೂರಲ್‌ಟ್ಯೂಬ್ ದೋಷಗಳು ಉಂಟಾಗಬಹುದು.  ನಿಯಮಿತ  ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಆಹಾರ ಪಥ್ಯ ಮಾಡಬೇಕು. ನವಮಾಸಗಳಲ್ಲಿ ರಕ್ತದಲ್ಲಿ ಗ್ಲೂಕೋಸ್‌ ಮಟ್ಟ ಸರಿಯಾಗಿರುವಂತೆ ಕಾಯ್ದುಕೊಳ್ಳಬೇಕು. ಹಸಿರುಸೊಪ್ಪು ತರಕಾರಿಗಳು ಸೇರಿದಂತೆ ಹೆಚ್ಚು ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ನಿತ್ಯ ಕನಿಷ್ಠ 35 ರಿಂದ 40 ನಿಮಿಷ ವಾಕಿಂಗ್ ಮಾಡುವುದು, ಕೆಲವು ಕೈ-ಕಾಲುಗಳನ್ನು ಅಲುಗಾಡಿಸುವಂತಹ ಸೂಕ್ಷ್ಮ ವ್ಯಾಯಾಮಗಳು, ತಜ್ಞರ ಸಲಹೆಯಮೇರೆಗೆ ನಿಯಮಿತ ಯೋಗಾಭ್ಯಾಸ, ಪ್ರಾಣಾಯಾಮಗಳನ್ನು ಮಾಡಬಹುದು. ದೇಹದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿಲ್ಲದಿದ್ದರೆ ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ಸೂಚಿಸಬಹುದು. ಹೀಗೆ ಎಲ್ಲ ರೀತಿಯ ಕಾಳಜಿ ವಹಿಸಿದ್ದಲ್ಲಿ ಆರೋಗ್ಯವಂತ ಮಗುವನ್ನು ಪಡೆಯಬಹುದು. ಭರವಸೆಯಿಂದಿರಿ.

ಸ್ಪಂದನ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT