ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಶವಕ್ಕೆಚಿತಾಗ್ನಿ ಕೊಡುವ ವಸುಂಧರಾ

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಂದು ಸ್ಮಶಾನದಲ್ಲಿ ಶವಸಂಸ್ಕಾರ ನಡೆಯುತ್ತಿದ್ದಾಗ ಕಾಲು ನೋವಿನಿಂದ ಬಳಲುತ್ತಿದ್ದ ನನ್ನ ಸಂಬಂಧಿಯೊಬ್ಬಳು ಗೋರಿಯೊಂದರ ಮೇಲೆ ಹಾಯಾಗಿ ಕುಳಿತು ಕಾಲು ನೀಡಿಕೊಂಡಳು. ನನಗೂ ಕೂಡ ‘ಇಲ್ಲೇ ಕುಳಿತುಕೊ. ಇದಕ್ಕಿಂತ ಹೆಚ್ಚು ಶಾಂತವಾದ ಜಾಗ ಬೇರೊಂದಿಲ್ಲ. ಕೊನೆಗೆ ಎಲ್ಲರಿಗೂ ಶಾಂತಿ ಇಲ್ಲಿಯೇ ಸಿಗುವುದು’ ಎಂದು ಹೇಳಿದಾಗ ಅನುಮಾನಿಸುತ್ತಲೇ ನಾನು ಕುಳಿತೆ. ಆ ಕ್ಷಣ ಅವಳ ಮಾತಿನಲ್ಲಿದ್ದ ನಿರಾಳತೆ ನನ್ನ ಕೈ ಹಿಡಿಯಿತು. ಆಮೇಲೆ ಒಬ್ಬೊಬ್ಬರಾಗಿ ಹೆಣ್ಣುಮಕ್ಕಳು ಬಂದು ನಮ್ಮ ಅಕ್ಕ ಪಕ್ಕ ಕುಳಿತುಕೊಂಡರು.

ಸ್ಮಶಾನ ಎಂದರೆ ಅದೇನೋ ನಿಗೂಢತೆ, ಭಯ ಹುಟ್ಟಿಸುವ ಮನಃಸ್ಥಿತಿಗೆ ಒಡ್ಡಿರುವ ನಮ್ಮ ಸಮಾಜದಲ್ಲಿ ಇಂದಿಗೂ ಸ್ಮಶಾನದ ಬಗ್ಗೆ ವಿಪರೀತ ಭಾವನೆಗಳಿವೆ. ಶವದಹನ, ಶವಸಂಸ್ಕಾರ ಮೊದಲಾದ ಕೆಲಸಗಳಲ್ಲಿ ಹೆಣ್ಣುಮಕ್ಕಳು ಪಾಲ್ಗೊಳ್ಳುವುದು ನಮ್ಮ ದೇಶದಲ್ಲಿ ಬಹಳ ಅಪರೂಪ. ಪಾಲಕರ ಚಿತೆಗೆ ಮುಖಾಗ್ನಿ ಕೊಡುವ ಸಂದರ್ಭದಲ್ಲಿ ಗಂಡುಮಕ್ಕಳಿಗೇ ಪ್ರಾಧಾನ್ಯತೆ. ಗಂಡುಮಕ್ಕಳಿಲ್ಲದ ಪಾಲಕರ ಕೆಲವು ಹೆಣ್ಣುಮಕ್ಕಳು ಇತ್ತೀಚೆಗೆ ಅದನ್ನು ಮಾಡುತ್ತಿದ್ದಾರೆ. ಆದರೆ ಹಾಸನದ ಚನ್ನರಾಯಪಟ್ಟಣದ ಗಾಂಧಿ ವೃದ್ಧಾಶ್ರಮದಲ್ಲಿ ಮೇಲ್ವಿಚಾರಕಿಯಾಗಿರುವ ವಸುಂಧರಾ ದೇವಿ ತನಗೆ ಯಾವ ಸಂಬಂಧವೂ ಇರದ, ಆಶ್ರಮದಲ್ಲಿ ಕೊನೆಯುಸಿರೆಳೆಯುವ ಮಹಿಳೆಯರಿಗೆ ಮುಖಾಗ್ನಿ ಕೊಡುವ ಕಾರ್ಯವನ್ನು ಕಳೆದ 3–4 ವರ್ಷಗಳಿಂದ ಮಾಡುತ್ತಿದ್ದಾರೆ.

ಮಮತಾಮಯಿ

ಚನ್ನರಾಯಪಟ್ಟಣ ಸಮೀಪದ ಪಡುವನಹಳ್ಳಿ ವಸುಂಧರಾ ಅವರ ಊರು. ಪತಿ ಹಾಗೂ ಇಬ್ಬರು ಗಂಡುಮಕ್ಕಳ ಸಂಸಾರ. ಸಂಸಾರ ನಿಭಾಯಿಸಲು ಕೆಲಸದ ಅಗತ್ಯವಿದ್ದಿದ್ದರಿಂದ ನಾಲ್ಕು ವರ್ಷಗಳ ಹಿಂದೆ ಗಾಂಧಿ ವೃದ್ಧಾಶ್ರಮದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿನ ವೃದ್ಧರು ಎಲ್ಲರೂ ನಿರ್ಗತಿಕರಲ್ಲ. ಅವರಿಗೆ ಮಕ್ಕಳು, ಮೊಮ್ಮಕ್ಕಳು, ಬಂಧು-ಬಾಂಧವರೆಲ್ಲರೂ ಇದ್ದಾರೆ. ಆದರೆ ಮುಪ್ಪಿನ ಕಾಲದಲ್ಲಿ ಅನಾರೋಗ್ಯಗಳ ಕಾರಣ ಮಕ್ಕಳಿಗೆ ಹೊರೆ ಎನಿಸಿದ್ದಾರೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದಲೂ ಕೆಲವರು ನರಳುತ್ತಿದ್ದಾರೆ. ಅವರ ದೇಖರೇಖೆಗೆ ಅವರ ಮಕ್ಕಳೇ ಬರುತ್ತಿಲ್ಲ. ಕೊನೆಗೆ ಅವರ ಕಾಯಿಲೆಗಳ ಔಷಧಗಳಿಗೆ ಅವಶ್ಯವಾಗುವಷ್ಟು ಹಣವನ್ನೂ ನೀಡುವುದಿಲ್ಲ. ಆ ಖರ್ಚು– ವೆಚ್ಚವನ್ನೆಲ್ಲ ಆಶ್ರಮದ ಮುಖ್ಯಸ್ಥರೇ ನೋಡಿಕೊಳ್ಳುತ್ತಾರೆ. ಅನಾರೋಗ್ಯ, ಒಂಟಿತನ, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಇಲ್ಲಿಯ ಹಿರಿಯ ಜೀವಗಳಿಗೆ ಬೇಕಾಗಿರುವುದು ಮಮತೆ, ಮಮಕಾರ. ಅದನ್ನು ತುಂಬಿ ಕೊಡುವವರು ಈ ಆಶ್ರಮದ ಎಲ್ಲ ಸಿಬ್ಬಂದಿಗಳು.

ಎಲ್ಲ ವೃದ್ಧರಿಗೂ ವಸುಂಧರಾ ದೇವಿ ಎಂದರೆ ತಮ್ಮ ತಾಯಿ ಎಂಬ ಭಾವನೆ. ತಾಯಿಯ ಅಂತಃಕರಣದಿಂದ ಅವರನ್ನೆಲ್ಲ ಪೊರೆಯುವ ವಸುಂಧರಾ ದೇವಿ ಸದಾ ಹಸನ್ಮುಖಿ. ಕಾಯಿಲೆಗಳಿಗೆ ಔಷಧವನ್ನು ನೀಡಬಹುದು. ಊಟ ಮಾಡಿಸಬಹುದು. ಅಪರಾತ್ರಿಯಲ್ಲಿ ಕಾಯಿಲೆ ಉಲ್ಬಣಿಸಿದಾಗ ಆಸ್ಪತ್ರೆಗಳಿಗೂ ಅವರನ್ನು ಕರೆದುಕೊಂಡು ಹೋಗಬಹುದು. ಇದ್ಯಾವುದೂ ವಸುಂಧರಾಗೆ ಕಷ್ಟ ಎನ್ನಿಸುವುದಿಲ್ಲ. ಆದರೆ ವೃದ್ಧರ ಅಂತ್ಯಕಾಲದಲ್ಲಿ ಅವರನ್ನು ನೋಡಲೂ ಬರದ ಮಕ್ಕಳ ಬಗ್ಗೆ ಅವರಿಗೆ ಅಪಾರ ನೋವಾಗುತ್ತದೆ. ವೃದ್ಧರ ಸಾವಾದರೂ ಶವವನ್ನು ತೆಗೆದುಕೊಳ್ಳಲೂ ಕೆಲವು ಮಕ್ಕಳು, ಸಂಬಂಧಿಗಳು ಬರುವುದಿಲ್ಲ ಎಂದು ಹೇಳುವಾಗ ವಸುಂಧರಾ ಹನಿಗಣ್ಣಾಗುತ್ತಾರೆ.

ಅನಾಥ ಬಂಧು

ಒಮ್ಮೆ ಒಬ್ಬ ವೃದ್ಧೆ ಆಶ್ರಮದಲ್ಲಿ ಕೊನೆಯುಸಿರೆಳೆದಾಗ ಅವಳ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂದು ಅವರಿಗೆ ದಿಕ್ಕೇ ತೋಚಲಿಲ್ಲ. ಅವರು ಆಶ್ರಮದ ಮುಖ್ಯಸ್ಥರನ್ನು ಕೇಳಿದಾಗ ಅವರು ‘ನೀನೇ ಮಾಡಿಬಿಡು’ ಎಂದರಂತೆ. ಈ ಬಗ್ಗೆ ತಮ್ಮ ಪತಿಯ ಬಳಿ ಹೇಳಿದಾಗ ಅವರ ಪತಿ ‘ಒಳ್ಳೆಯ ಕೆಲಸ ಮಾಡುವ ಅವಕಾಶ ನಿನಗೆ ಸಿಕ್ಕಿದೆ. ಮಾಡಿಬಿಡು. ಹೆದರಬೇಡ’ ಎಂದಿದ್ದಾರೆ. ಅಂದು ಮೊದಲ ಬಾರಿ ವಸುಂಧರಾ ಶವಸಂಸ್ಕಾರ ಮಾಡಿದರು. ಮೊದಲಿಗೆ ಹೇಳಲಾಗದ ಭಯ, ಸಂಕಟ. ಆದರೆ ಅಗ್ನಿ ಸ್ಪರ್ಶ ಮಾಡಿದಾಗ ಅವ್ಯಕ್ತ ಸಮಾಧಾನ. ಅಂದಿನಿಂದ ಇಲ್ಲಿಯವರೆಗೆ ನಾಲ್ಕು ಸಂಸ್ಕಾರಗಳನ್ನು ಅವರು ಮಾಡಿದ್ದಾರೆ. ಪ್ರತಿ ಬಾರಿಯೂ ತನ್ನ ತಾಯಿಯನ್ನು ಕಳೆದುಕೊಂಡಂತೆ ದುಃಖಿಸುತ್ತಲೇ ಶವಸಂಸ್ಕಾರ ಮಾಡುತ್ತಾರೆ. ಅವರನ್ನು ನೆನೆದು ಈಗಲೂ ದುಃಖಿಸುತ್ತಾರೆ. ಆಶ್ರಮದಲ್ಲಿ ಒಬ್ಬ ಅನಾಥ ಮುಸ್ಲಿಂ ಮಹಿಳೆಯ ಸಂಸ್ಕಾರವನ್ನು ತಮಗೆ ತಿಳಿದ ಹಿಂದೂ ವಿಧಿವಿಧಾನದಂತೆ ನೆರವೇರಿಸಿದ್ದಾರೆ.

ವಸುಂಧರಾ ಅವರ ವೈಶಿಷ್ಟ್ಯ ಇರುವುದು ಅವರು ಮಾಡುವ ಶವಸಂಸ್ಕಾರದಿಂದ ಮಾತ್ರವಲ್ಲ. ತಮ್ಮವರಿಗೇ ಬೇಡವಾದ ಹಿರಿಯ ಜೀವಗಳನ್ನು ಮಕ್ಕಳಂತೆ ಪೋಷಿಸಿ, ಅವರ ಆಪದ್ಬಾಂಧವಳಾಗಿ ಸದಾ ಅವರ ನೆರಳಾಗಿದ್ದು, ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಕೊನೆಗೆ ಅವರ ಅಂತಿಮ ಯಾತ್ರೆಯಲ್ಲೂ ಅವರೊಂದಿಗೆ ಏಕಾಂಗಿಯಾಗಿ ನಿಂತು ತನ್ನದಲ್ಲದ ಕರ್ತವ್ಯ ನಿಷ್ಠೆಯನ್ನು ಮೆರೆಯುವುದರ ಮೂಲಕ ವಸುಂಧರಾ ತಮಗೆ ತಾವೇ ಸಾಟಿಯಾಗುತ್ತಾರೆ.

ಮಹಿಳೆಯರ ಸಾಧನೆ, ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಮಹಿಳಾ ಆರ್ಥಿಕ ಸಬಲತೆ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ, ಎಲ್ಲ ಕಾರ್ಯಕ್ಷೇತ್ರಗಳಲ್ಲಿ ಮಹಿಳೆ ಎಂದೆಲ್ಲ ಕನವರಿಸುವವರ ನಡುವೆಯೇ ವೃದ್ಧಾಶ್ರಮದಲ್ಲಿ ಅಸಹಾಯಕ ಮಹಿಳೆಯರು ನಿಟ್ಟುಸಿರು ಬಿಡುತ್ತ ಜೀವನ ಸಾಗಿಸುತ್ತಾರೆ. ಅವರನ್ನು ಆ ಸ್ಥಿತಿಗೆ ತಂದವರೂ ಮಹಿಳೆಯರೇ ಎಂಬುದನ್ನು ನಾವು ಮರೆಯಬಾರದು. ಅಂತಹವರ ನಡುವೆ ವಸುಂಧರಾ ದೇವಿ ಅವರಂತಹ ಅಪರೂಪದ ಮಹಿಳೆ ಮುಖ್ಯರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT